ಮಂಗಳವಾರ, ಸೆಪ್ಟೆಂಬರ್ 3, 2013

ಎಂ. ಕೆ. ಇಂದಿರಾ

ಎಂ. ಕೆ. ಇಂದಿರಾ (1917-1994)

ಎಂ. ಕೆ ಇಂದಿರಾ ಅವರು ನಮ್ಮ ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ ಎಂಬಷ್ಟು ಪ್ರಸಿದ್ಧರು. ಕೇವಲ ಎರಡನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾದ ಎಂ.ಕೆ. ಇಂದಿರಾ ಅವರು ಸಾಹಿತ್ಯ ಲೋಕದಲ್ಲಿ ಸೃಷ್ಟಿಸಿರುವ ವಿಶಿಷ್ಟ ಕೃತಿಗಳನ್ನು ಓದಿದವರಿಗೆ ಈ ಮಾತು ಖಂಡಿತ ನಿಜ ಎನಿಸುತ್ತದೆ.  ಅವರು ಎಷ್ಟು  ಅಮೂಲ್ಯ  ಬರಹಗಾರ್ತಿ ಎಂದು  ನಿದರ್ಶಿಸಲು  ಫಣಿಯಮ್ಮಕೃತಿ ಒಂದೇ ಸಾಕಾಗುತ್ತದೆ.

ವಿಸ್ಮಯವೆಂದರೆ ಎಂ.ಕೆ ಇಂದಿರಾ ಅವರ  ಪ್ರಥಮ ಕಾದಂಬರಿ ಹೊರಬಂದಿದ್ದೇ ಅವರು ನಲವತ್ತೈದು ವಯಸ್ಸಿನವರಿದ್ದಾಗ.  ತುಂಗಭದ್ರಎಂಬ ಆ ಮೊದಲನೆಯ ಕಾದಂಬರಿಯಲ್ಲೇ ಅವರು ಜನಪ್ರಿಯರಾಗಿಬಿಟ್ಟರು.  ನಂತರದ ಇಪ್ಪತ್ತೆರಡು ವರ್ಷಗಳ  ಬದುಕಿನಲ್ಲಿ ಅವರು 48 ಕಾದಂಬರಿಗಳನ್ನೂ, 15 ಸಣ್ಣಕಥಾ ಸಂಕಲನಗಳನ್ನೂ ಮತ್ತು  ತಮ್ಮ ಆತ್ಮಚರಿತ್ರೆಯನ್ನೂ ಬರೆದರು.  ಅವರು ಬರವಣಿಗೆಯ ಕೃಷಿಯಲ್ಲಿ ಅಪೂರ್ವವೆಂಬಂತೆ ಬಹಳಷ್ಟು ಗಳಿಸಿದರು.  ಆದರೆ ಅವೆಲ್ಲವನ್ನೂ ಬಹುಬೇಗ ಕಳೆದುಕೊಂಡು ಒಂದು ರೀತಿಯಲ್ಲಿ ನಿರ್ಗತಿಕವೆನ್ನುವಂತ ಬದುಕಿನಲ್ಲಿ ಅಸುನೀಗಿದರು.

ಇವೆಲ್ಲವೂ ಅಸಹಜವಾಗಿ ಕಾಣುತ್ತದೆ ಕಾರಣ ಅವರೊಬ್ಬ ಮಹಾನ್ ಮೇಧಾವಿಗಳಾಗಿದ್ದರಿಂದ.  ಉತ್ತಮ ಬರವಣಿಗೆ ಕೃಷಿ ಮಾಡಲು ಯಾವುದೇ ರೀತಿಯ ಹಿನ್ನೆಲೆಯಾಗಲಿ ವ್ಯವಸ್ಥಿತ ತರಬೇತಿಯಾಗಲಿ ಅನಿವಾರ್ಯವೇನಲ್ಲ ಎಂಬುದಕ್ಕೆ ಅವರೊಂದು ವಿಶಿಷ್ಟ ಉದಾಹರಣೆಯಾಗಿ ಈ ಲೋಕದಲ್ಲಿ ಮೂಡಿಹೋದರು.

ಬದುಕಿನತ್ತ ಆಸಕ್ತ ದೃಷ್ಟಿ, ಅತ್ಯಂತ ಪಕ್ವ ಮತ್ತು ಆಳವಾದ ಸ್ಥಳೀಯ ಪ್ರಜ್ಞೆ, ಜನ್ಮಜಾತವಾದ ಹಾಸ್ಯ ಪ್ರಜ್ಞೆ, ಮಾನವೀಯ ದೃಷ್ಟಿಕೋನ, ಈ ನೆಲ ಮತ್ತು ಪರಿಸರದ ಕುರಿತಾದ ಆತ್ಮೀಯ ಅನುಭವ ಮತ್ತು ಇವೆಲ್ಲಕ್ಕೂ ಸರಿದೂಗುವ ಹಾಗಿನ ಸೊಗಸಾದ ನಿರೂಪಣೆಗಳು ಅವರನ್ನು ಮಹಾನ್ ಲೇಖಕಿಯನ್ನಾಗಿ ರೂಪಿಸಿದವು.

1917ರ ವರ್ಷದಲ್ಲಿ ಎಂ.ಕೆ. ಇಂದಿರಾ ಅವರು ಶಿವಮೊಗ್ಗೆಯ ಒಂದು ಪ್ರಾಕೃತಿಕ ಪ್ರಾಕೃತಿಕ ಸೌಂದರ್ಯಗಳಿಂದಾವೃತವಾದ  ಮತ್ತು ಮಾನವ ಸಾಮರ್ಥ್ಯದ ಸವಿ ಸ್ಪರ್ಶಗಳಿಂದ ಕಂಗೊಳಿಸುತ್ತಿದ್ದ ಪ್ಲಾಂಟೇಷನ್ ಗಳಿಂದ ಆವೃತವಾದ ಸುಂದರ ಹಳ್ಳಿಯಲ್ಲಿ ಶ್ರೀಮಂತ ಕೃಷಿಕ ಟಿ. ಸೂರ್ಯನಾರಾಯಣ ರಾವ್ ಮತ್ತು ಬನಶಂಕರಮ್ಮ ದಂಪತಿಗಳಿಗೆ ಜನಿಸಿದರು.  ಅವರ ತಾಯಿ ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಪರಿಣತಿ, ಹೊಲಿಗೆಯಲ್ಲಿ ಪರಿಣತಿಯ ಜೊತೆಗೆ  ಮತ್ತು ನೂರಾರು ಹಾಡುಗಳನ್ನು ಸೊಗಸಾಗಿ ಹಾಡುವುದರಲ್ಲಿ ಸಹಾ ಮಹಾನ್ ಪರಿಣತೆಯಾಗಿದ್ದರು.  ಜೊತೆಗೆ ಉತ್ಕೃಷ್ಟ ಗೃಹಿಣಿ ಕೂಡ.  ಎಂ.ಕೆ ಇಂದಿರಾ ಅವರಿಗೆ ಶಾಲೆಗೆ ಹೋಗಿ ಓದುವ ಸೌಭಾಗ್ಯ ಹೆಚ್ಚು ಸಿಗಲಿಲ್ಲವಾದರೂ ಓದುವ ಹವ್ಯಾಸ ಅವರನ್ನು ಅತೀವವಾಗಿ ಆವರಿಸಿತು.  ಹನ್ನೆರಡನೇ ವಯಸ್ಸಿನಲ್ಲಿ ಅವರಿಗೆ ಎಂ. ಕೃಷ್ಣರಾವ್ ಎಂಬುವರೊಡನೆ ವಿವಾಹವಾಯಿತು.  ಸಾಂಸಾರಿಕ ಜೀವನದಲ್ಲಿ ಅವರಿಗೆ ಹಲವಾರು ಊರುಗಳಲ್ಲಿ ಸುತ್ತುವ ಅವಕಾಶ ಒದಗಿಬಂತು.  ಹದಿನೇಳನೆ ವಯಸ್ಸಿನಲ್ಲಿ ಅವರು ತಾಯಿಯಾದರು.  ಕಾಲಾನುಕ್ರಮದಲ್ಲಿ ಅವರಿಗೆ ಎಂಟು ಮಕ್ಕಳು ಹುಟ್ಟಿದರೂ ಉಳಿದದ್ದು ಮೂರು ಗಂಡು ಮತ್ತು ಒಂದು ಹೆಣ್ಣು ಮಗು.  ಪ್ರಜಾವಾಣಿ ಪತ್ರಿಕೆಯಲ್ಲಿ ಸಂಪಾದಕರಾಗಿ ಪ್ರಸಿದ್ಧರಾದ ಟಿ. ಎಸ್. ರಾಮಚಂದ್ರರಾವ್ ಅವರ ತಮ್ಮ.

ಇಂದಿರಾ ಅವರು ಬರಹಗಾರ್ತಿಯಾದದ್ದು ಆಕಸ್ಮಿಕವಾಗಿ.  ಒಮ್ಮೆ ಅವರು ಅವರ ಕುಟುಂಬವರ್ಗದವರೊಡನೆ ತುಂಗಭದ್ರಾತೀರದಲ್ಲಿ ಕುಳಿತು ಬದುಕಿನ ಹಲವಾರು ಮನನೀಯ ಘಟನೆಗಳನ್ನು ಮೆಲುಕು ಹಾಕುತ್ತಿದ್ದರು.  ಇತರರಿಗೆ ಆಕೆಯಲ್ಲಿ  ಬರಹದ ಸಾಮರ್ಥ್ಯ ಇದೆ ಎಂಬ ಭಾವ ಮೂಡಿದ್ದರೂ ಅವರೇ ಆ ಕೆಲಸಕ್ಕೆ ಕೈ ಹಾಕಿರಲಿಲ್ಲ.  ಅಂದಿನ ಆ ಭೇಟಿಯನಂತರದಲ್ಲಿ ಅವರು ಎರಡು ಕುರುಡು ಅವಳಿಜವಳಿ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು  ತುಂಗಭದ್ರಾಎಂಬ ಕಾದಂಬರಿಯನ್ನು ಬರೆದರು.  ಅವರ ಚಿಕ್ಕಮನ ಮಗನಾದ ಕನ್ನಡದ ಹೆಸರಾಂತ ಬರಹಗಾರ ಮತ್ತು ಆಕಾಶವಾಣಿಯ ಹೆಸರಾಂತ ನಿರ್ದೇಶಕರಾಗಿದ್ದ  ಡಾ. ಹೆಚ್. ಕೆ. ರಂಗನಾಥ್ ಅವರು ಇದನ್ನು ಓದಿ ಮೆಚ್ಚಿ  ಪ್ರಸಿದ್ಧ ಪ್ರಕಾಶಕ ಸಂಸ್ಥೆಯಾದ ಮನೋಹರಗ್ರಂಥ ಮಾಲೆಯ ಜಿ.ಬಿ. ಜೋಷಿ ಅವರಿಗೆ ಅದನ್ನು ಕಳುಹಿಸಿಕೊಟ್ಟರು.  ಹೀಗೆ ಎಂ.ಕೆ ಇಂದಿರಾ ಅವರ ಬರಹ  ಜಿ. ಬಿ. ಜೋಷಿ ಅವರ ಮನೋಹರ ಗ್ರಂಥಮಾಲೆಯ ಸಾರ್ವಕಾಲಿಕ ಸಲಹೆಗಾರರಾದ ಪ್ರೊ. ಕೀರ್ತಿನಾಥ ಕುರ್ತಕೋಟಿ ಅವರ ಕೈ ಸೇರಿತು. 

ಇಂದಿರಾ ಅವರ ಬಳಿ ಮತ್ತೊಂದು ಬರಹದ ಪ್ರತಿ ಕೂಡ ಇರಲಿಲ್ಲ. ಕೀರ್ತಿನಾಥ ಕುರ್ತುಕೋಟಿ ಅವರು ಇದನ್ನು ಓದಿದ್ದರಾದರೂ ತಮ್ಮ ಹಣಕಾಸಿನ ಚೀಲ ಮತ್ತು ಈ ಬರಹದ ಪ್ರತಿ ಎಲ್ಲವನ್ನೂ ಮುಂಬೈನ ಜನಜಂಗುಳಿಯಲ್ಲಿ ಕಳೆದುಕೊಂಡುಬಿಟ್ಟರು.  ಜಿ.ಬಿ. ಜೋಷಿ ಮತ್ತು ಕೀರ್ತಿನಾಥ ಕುರ್ತುಕೋಟಿ ಇಬ್ಬರೂ ಆದ ಪ್ರಮಾದಕ್ಕೆ ಅತೀವ ದುಃಖ ವ್ಯಕ್ತಪಡಿಸಿ ಮತ್ತೊಮ್ಮೆ ಕಾದಂಬರಿಯನ್ನು ತಮ್ಮ ಬಳಿ ಇರಬಹುದಾದ ಯಾವುದಾದರೂ ಖಚ್ಚಾ ಬರಹ ಸಾಮಗ್ರಿಗಳಿಂದ  ಪುನಃ  ನಿರ್ಮಿಸಿಕೊಡಬೇಕೆಂದು  ಎಂ.ಕೆ. ಇಂದಿರಾ ಅವರನ್ನು ಕೇಳಿಕೊಂಡರು.  ಆದರೆ ಅವ್ಯಾವುವೂ ಇಂದಿರಾ ಅವರ ಬಳಿ ಇರಲಿಲ್ಲ. 

ಆದರೆ ಇಂದಿರಾ ಅವರು ಕೆಚ್ಚೆದೆಯಿಂದ ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿ ಹದಿನೈದು ದಿನಗಳೊಳಗಾಗಿ ಪುನಃ ಕಾದಂಬರಿಯನ್ನು ನಿರ್ಮಿಸಿಕೊಟ್ಟರು.  ಕುರ್ತಕೋಟಿಯವರಿಗೆ ಈ ಅಪೂರ್ವ ಸಾಮರ್ಥ್ಯವನ್ನು ನಂಬಲಿಕ್ಕಾಗಲಿಲ್ಲ.  ಎರಡನೇ ಸಲ ಅವರು ಓದಿದ ಈ ಪ್ರತಿ ಮೊದಲಿನದಕ್ಕಿಂತ ಘನವೇತ್ತಾಗಿದೆ ಎಂಬ ಭಾವ ಅವರನ್ನಾವರಿಸಿತು. 

ತುಂಗಭದ್ರಕೃತಿ ಅಪೂರ್ವ ಯಶಸ್ಸನ್ನು ಗಳಿಸಿತು.  ಹದಿನೈದೇ ದಿನಗಳಲ್ಲಿ ಎಂ.ಕೆ ಇಂದಿರಾ ಅವರು ಅಪಾರ ಜನಪ್ರಿಯ ವ್ಯಕ್ತಿಯಾಗಿಬಿಟ್ಟರು.  ಒಂದಾದ ಮೇಲೊಂದರಂತೆ ಅವರ ಲೇಖನಿಯಿಂದ ಕಾದಂಬರಿ - ಕಥೆಗಳು ಹರಿದು ಬಂದವು.  ಹಲವಾರು ಪ್ರಶಸ್ತಿ ಗೌರವಗಳು ಅವರನ್ನು ಹುಡುಕಿ ಬಂದವು.  ಅವರ ತುಂಗಭದ್ರ, ಸದಾನಂದ, ನವರತ್ನ, ಫಣಿಯಮ್ಮ ಈ ನಾಲ್ಕು ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು.   ಕೇವಲ ಎರಡನೇ ತರಗತಿಯವರೆಗೆ  ಓದಿದ ಅವರ ಕೃತಿಗಳು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳಾದವು.  ಅವರ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡವು.  ತೇಜಸ್ವಿನಿ ನಿರಂಜನ ಅವರು ಫಣಿಯಮ್ಮಕಥೆಯನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದರು.  ಈ ಭಾಷಾಂತರಿತ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು.  ಅವರ ಐದು ಕೃತಿಗಳು ಚಲನಚಿತ್ರಗಳಾದವು.  ಫಣಿಯಮ್ಮಚಿತ್ರ ರಾಷ್ಟ್ರ ಪ್ರಶಸ್ತಿಗಳಲ್ಲದೆ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿತು.  ಅವರ ಕಾದಂಬರಿ ಆಧಾರಿತ ಗೆಜ್ಜೆಪೂಜೆಕೂಡಾ ಕನ್ನಡ ಚಿತ್ರರಂಗದಲ್ಲಿ ಒಂದು ಅಮರ ಕೃತಿಯೆಂದು ಪರಿಗಣಿತವಾಗಿದೆ. 

ಒಬ್ಬ ಪಂಡಿತರು ಎಂ.ಕೆ ಇಂದಿರಾ ಅವರ ಬದುಕು ಮತ್ತು ಕೃತಿಗಳ ಕುರಿತ ಅಧ್ಯಯನಾತ್ಮಕ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪಡೆದರು.  ಎಂ.ಕೆ. ಇಂದಿರಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ನಾಡಿನ ಬಹುಶ್ರುತ ವಿದ್ವನ್ಮಣಿಗಳ ಬರಹಗಳನ್ನೊಳಗೊಂಡ ಸಂಭಾವನಾ ಗ್ರಂಥವನ್ನು ಸಹಾ ಅರ್ಪಿಸಲಾಯಿತು.

ಅರವತ್ತು-ಎಪ್ಪತ್ತರ ದಶಕದ ಸಂದರ್ಭದಲ್ಲಿ ದೂರದರ್ಶನದ ಯಾವುದೇ ಚಾನಲ್ಲುಗಳು  ಪ್ರಾರಂಭವಾಗಿಲ್ಲದಿದ್ದ ಆ ದಿನಗಳಲ್ಲಿ ರಸವತ್ತಾದ ಕಥಾನಕಗಳ ಓದು ಗೃಹಿಣಿಯರ ಅತ್ಯಂತ ಜನಪ್ರಿಯ ಹವ್ಯಾಸವಾಗಿತ್ತು.  ಆದರೆ ಎಂ.ಕೆ ಇಂದಿರಾ ಅವರ ಕಥೆಗಳಾದರೋ ವಿಧವೆಯರು, ದೇವದಾಸಿಯರು, ಬಡ ಅಧ್ಯಾಪಕ ವೃತ್ತಿಯವರು ಮುಂತಾದ ಪಾತ್ರಗಳದು.  ಇಂತಹ ಪಾತ್ರಗಳನ್ನು ಜನಸಮುದಾಯದ ಕಣ್ಣಲ್ಲಿ ಸಹ್ಯವೆನಿಸುವಂತೆ ಮಾಡಿದ ಅವರ ಸಾಮರ್ಥ್ಯ ಅಸಾಧಾರಣವಾದದ್ದು. 

ಅವರ ಕಥೆಗಳಲ್ಲಿ ಹಳ್ಳಿಯ ಜೀವನ, ಪ್ಲಾಂಟೇಶನ್ಗಳಲ್ಲಿ ಜನರು ನಡೆಸುವ  ಬದುಕಿನ ರೀತಿ, ಮಧ್ಯಮವರ್ಗದ ಜನಸಮುದಾಯ ನದಿಗಳ ಆಸುಪಾಸಿನಲ್ಲಿ ಬದುಕು ನಡೆಸುವ ಚಿತ್ರಣ, ಬೆಟ್ಟ-ಗುಡ್ಡ- ಕಾಡು ಪ್ರದೆಶಗಳಲ್ಲಿನ ಬದುಕಿನ ಬಗೆಗೆ ಅವರು ನೀಡುವ ನೋಟ ಇವೆಲ್ಲಾ, ಎಲ್ಲಾ ವರ್ಗದ ಎಲ್ಲಾ ವಯೋಮಾನದ ಓದುಗರಿಗೂ ಪ್ರಿಯವೆನಿಸಿದವು.  ಅವರ ಒದೊಂದು ಕೃತಿಯೂ ಹಲವಾರು ಮರುಮುದ್ರಣಗಳನ್ನು ಕಂಡವು. 

ಅಷ್ಟೆಲ್ಲಾ ಜನಪ್ರಿಯತೆ ಗಳಿಸಿದರೂ ಅಷ್ಟೊಂದು ಸಂಪಾದಿಸಿದ್ದರೂ ಅವರ ಅಂತಿಮ ದಿನಗಳ ಬದುಕು ಶೋಚನೀಯ ಸ್ಥಿತಿಯದ್ದಾಗಿತ್ತು.  ಅವರಿಗೆ ಬರೆಯಲಿಕ್ಕೆ ಒಂದು ಕುರ್ಚಿ ಮೇಜಿನ ವ್ಯವಸ್ಥೆ ಕೂಡ ಇರಲಿಲ್ಲ.  ಕೇವಲ 500 ರೂಪಾಯಿಗಳ ಮಾಸಿಕ ಪಿಂಚಣಿಯಲ್ಲಿ ಬದುಕು ಸವೆಸುವ ದಾರುಣ ಸ್ಥಿತಿ ಅವರಿಗೆ ಏರ್ಪಟ್ಟಿತು. 1994ರ ವರ್ಷದಲ್ಲಿ ಅವರು ಮರಣಿಸುವ ಮುಂಚೆ ಕೆಲವು ದಿನಗಳ ಆಸ್ಪತ್ರೆಯಲ್ಲಿನ ಬದುಕೂ ಸೇರಿದಂತೆ  ಅತ್ಯಂತ ಕಠಿಣ ಬದುಕು ಅವರದ್ದಾಗಿತ್ತು.  

ಅವರ ಪ್ರಸಿದ್ಧಿಯ ದಿನಗಳಲ್ಲಿ ಅವರ ಪುಸ್ತಕಗಳಿಗೆ ಕಾದು ನಿಲ್ಲುವ ಬೃಹತ್ ಬಳಗ ಅವರೊಂದಿಗಿತ್ತು.  ಹೀಗೆ ಕನ್ನಡದ ಪ್ರಸಿದ್ಧ ಬರಹಗಾರ್ತಿ ಇಂದಿರಮ್ಮನವರ ಬರಹದ ಬದುಕಿನ ಒಂದು ಯುಗ ಸಮಾಪ್ತಿಯಾಯಿತು. 

(ಆಧಾರ: ಡಾ. ಜ್ಯೋತ್ಸ್ನಾ ಕಾಮತ್ ಅವರ ಇಂಗ್ಲಿಷ್ ಬರಹದಲ್ಲಿನ ಬಹುತೇಕ ಅಂಶಗಳನ್ನು ಈ ಲೇಖನದಲ್ಲಿ ಕನ್ನಡೀಕರಿಸಿಕೊಂಡಿದ್ದೇನೆ).

ಫೋಟೋ ಕೃಪೆ: www.kamat.com

Tag: M. K. Indira

ಕಾಮೆಂಟ್‌ಗಳಿಲ್ಲ: