ಮಂಗಳವಾರ, ಸೆಪ್ಟೆಂಬರ್ 3, 2013

ಸಿ ಹೊನ್ನಪ್ಪ

ಸಿ ಹೊನ್ನಪ್ಪ

ಭಾರತದ ಕಬಡ್ಡಿ ತಂಡದ ನಾಯಕರಾಗಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಸ್ಪರ್ಧೆಗಳಲ್ಲಿ ಕೀರ್ತಿ ತಂದು ಅರ್ಜುನ ಪ್ರಶಸ್ತಿ ವಿಜೇತರಾದ ಸಿ ಹೊನ್ನಪ್ಪ ಅವರು ಮೇ 14, 1973ರಂದು ಜನಿಸಿದರು.

ಆಗಿನ್ನೂ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ಹೊನ್ನಪ್ಪನವರು ಬದುಕಿನಲ್ಲಿ ಮುಂದೆ ಯಾವುದೇ ದಾರಿಗಳು ಕಾಣದೆ ತಮ್ಮ ಅಣ್ಣ ಸಿ ಗೋವಿಂದರಾಜ್ ಅವರು ಆಡುತ್ತಿದ್ದ ಕಬಡ್ಡಿ ಆಟದ ಬಯಲಿಗೆ ಬಂದರು.  ಬೆಂಗಳೂರಿನ ಮಾರುತಿ ಕಬಡ್ಡಿ ಕ್ಲಬ್ಬಿನ ಪುಟಾಣಿ ಅಂಗಣವೇ ಇವರ ಕಾರ್ಯಕ್ಷೇತ್ರವಾಯಿತು.  ಹಲವಾರು ವರ್ಷಗಳು ಉದುರಿದ ಅವರ ಬೆವರ ಹನಿ ವ್ಯರ್ಥವಾಗಲಿಲ್ಲ.  ಹಲವು ಕ್ರೀಡಾಸಕ್ತರ ಗಮನಕ್ಕೆ ಬಂದ ಹೊನ್ನಪ್ಪ 1990ರಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು.

1995ರ ವರ್ಷದಲ್ಲಿ ದಕ್ಷಿಣ ಏಷ್ಯಾದ ಫೆಡೆರೇಷನ್ ಕ್ರೀಡಾಕೋಟದಲ್ಲಿ ರಾಷ್ಟ್ರಕ್ಕಾಗಿ ಪದಾರ್ಪಣ ಮಾಡಿದರು.  ಆ ಸ್ಪರ್ಧೆಯಲ್ಲಿ ಭಾರತವು ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.  ಮುಂದಿನ ವರ್ಷಗಳಲ್ಲಿ ಅವರು ತಂಡದ ಉಪನಾಯಕರಾಗಿ, ನಾಯಕರಾಗಿ ರಾಷ್ಟ್ರದ ಕಬಡ್ಡಿ  ಕಂಡ ಹಲವಾರು ವಿಜಯಗಳಲ್ಲಿ ಪಾಲುದಾರರಾದರು.  ವೃತ್ತಿಯಲ್ಲಿ ವಿಜಯಬ್ಯಾಂಕಿನ ಉದ್ಯೋಗಿಯಾಗಿ ಹಲವು ಏಣಿಯ ಮೆಟ್ಟಲುಗಳನ್ನೇರಿ ಅಧಿಕಾರಿಯಾಗಿದ್ದಾರೆ.

ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಮಟ್ಟದಲ್ಲಿ ರಾಷ್ಟಪತಿಗಳಿಂದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ ಸಿ ಹೊನ್ನಪ್ಪನವರು ಕನ್ನಡನಾಡಿನ  ಅಸಂಖ್ಯಾತ ಕ್ರೀಡಾಭಿಮಾನಿಗಳ ಆದರ್ಶವಾಗಿದ್ದಾರೆ.  ಸಿ ಹೊನ್ನಪ್ಪನವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.

Tag: C. Honnappa

ಕಾಮೆಂಟ್‌ಗಳಿಲ್ಲ: