ಭಾನುವಾರ, ಸೆಪ್ಟೆಂಬರ್ 1, 2013

ಶತಾವಧಾನಿ ಡಾ. ಆರ್ ಗಣೇಶ್


ಶತಾವಧಾನಿ ಡಾ. ಆರ್ ಗಣೇಶ್

ವಿದ್ವಾಂಸ ಡಾ. ಆರ್ ಗಣೇಶ್, ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಕ್ಕಾಗಿ ಪ್ರಸಿದ್ಧರಾಗಿದ್ದಾರೆ.  ವಿದ್ಯೆಗೆ ಅಧಿದೇವತೆ ವಿನಾಯಕ. ಅದೇ ನಾಮಧೇಯದ, ವಿನಾಯಕನ ಸಂಪೂರ್ಣ ಕೃಪಾಶೀರ್ವಾದಗಳನ್ನು ಪಡೆದಿರುವ ಡಾ| ಆರ್. ಗಣೇಶ್ ಅವಧಾನ ಕಲೆಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಇವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ಔನ್ನತ್ಯಕ್ಕೇರಿದೆ.

1980-82ರ ಅವಧಿಯಲ್ಲಿ ಸಾಮಾನ್ಯ ಬುದ್ಧಿಮತ್ತೆಯ ಜನರಿಗೆ ಕಷ್ಟವೆನಿಸುವ ICWA ಕೋರ್ಸಿಗೆ ಸೇರಿ ಆ ಪರೀಕ್ಷೆಗಳಿಗೆ ಒಂದಷ್ಟು ದಂಡಯಾತ್ರೆ ಮಾಡಿ ಬಂದಿದ್ದೆ.  ಒಮ್ಮೆ ಬೆಂಗಳೂರಿನ ಬಸವನ ಗುಡಿಯಲ್ಲಿರುವ ICWA Chapterನವರು ‘ICWA’ ಪರೀಕ್ಷೆಗಳನ್ನು ಪಾಸು ಮಾಡುವುದು ಹೇಗೆ ಎಂಬ ಕಮ್ಮಟ ಏರ್ಪಡಿಸಿದ್ದರು.  ಆ ಕಮ್ಮಟದಲ್ಲಿ ಒಬ್ಬರು ಮಹನೀಯರು ಮನುಷ್ಯನ ಸಾಧ್ಯತೆಗಳಿಗೆ ಎಲ್ಲೆ ಇಲ್ಲ ಎಂದು ಹೇಳುತ್ತಾ ಭಾರತೀಯ ಪರಂಪರೆಯಲ್ಲಿ ಸಂಸ್ಕೃತ ಮತ್ತು ತೆಲುಗಿನಲ್ಲಿ ಪ್ರಚಲಿತವಿರುವ ಅವಧಾನ ಕಲೆಯ ಬಗ್ಗೆ ಒಂದು ಒಳನೋಟ ನೀಡಿದರು.  ಇದು ನನ್ನಲ್ಲಿ ಅವಧಾನದ ಬಗ್ಗೆ ಇನ್ನಿಲ್ಲದ ಆಸಕ್ತಿ ಹುಟ್ಟಿಸಿತ್ತು.  ಆದರೂ ಈ ಬಗ್ಗೆ ಏನೊಂದೂ ಅರಿಯದ ನಾನು ತೆಪ್ಪಗಾಗಿದ್ದೆ.  ಒಮ್ಮೆ ಈ ಅವಧಾನ ಕಲೆಯ ಬಗ್ಗೆ ತರಂಗ ವಾರಪತ್ರಿಕೆಯಲ್ಲಿ ಬಾಲಕೃಷ್ಣ ಪೊಳಲಿ ಅವರು ಲೇಖನವನ್ನೊಂದು ಪ್ರಕಟಿಸಿ ಅದನ್ನು ಕನ್ನಡದಲ್ಲಿ ನಡೆಸುತ್ತಿರುವ ಆರ್. ಗಣೇಶ್ ಅವರ ಬಗ್ಗೆ  ಮಾಹಿತಿ ನೀಡಿದ್ದರು.  ನಂತರದಲ್ಲಿ ಗಣೇಶ್ ಅವರನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ ಹೋಗಿ ಹುಡುಕಾಟ ನಡೆಸಿದ್ದರೂ ನಂತರ ಅವರ ವಿಳಾಸ ದೊರಕಲಿಕ್ಕೆ ಒಂದಷ್ಟು ಸಮಯ ಬೇಕಾಯಿತು.  ಆ ವಿಳಾಸ ಸಿಕ್ಕಿದಾಗ ಆಶ್ಚರ್ಯ ಸಂತೋಷ ಎರಡೂ ಆಯಿತು.  ಕಾರಣ ಅವರು ನಮ್ಮ ಮನೆಯ ಕಾಲ್ನಡಿಗೆಯ ದೂರದಲ್ಲೇ ಇದ್ದರು.  ಅಂದಿನ ದಿನದಲ್ಲಿ ನಾನು ಎಚ್ ಎಮ್ ಟಿ ಕನ್ನಡ ಸಂಪದದ ಕಾರ್ಯದರ್ಶಿಯಾಗಿದ್ದರಿಂದ ಹೇಗಾದರೂ ಗಣೇಶ್ ಅವರಿಂದ ಒಂದು ಕಾರ್ಯಕ್ರಮ ಏರ್ಪಡಿಸಬೇಕು ಎಂದು ಆಸೆಪಟ್ಟೆ.  ಹೀಗೆ ಹಲವು ಬಾರಿ ಅವರ ಮನೆಗೆ ಎಡತಾಕಿ ಗಣೇಶರ ಆಪ್ತತೆಯ ಭಾಗ್ಯಶಾಲಿಯಾದೆ.  ಆದರೆ ಅವರ ಕಾರ್ಯಕ್ರಮ ನಡೆಸುವುದು ನಾನು ಅಂದಿನ ದಿನದಲ್ಲಿ ಆಯೋಜಿಸುತ್ತಿದ್ದ ಸಾಹಿತಿಗಳ ಉಪನ್ಯಾಸ ಕಾರ್ಯಕ್ರಮದಷ್ಟು ಸುಲಭವಾಗಿರಲಿಲ್ಲ ಎಂಬುದನ್ನು ಗಣೇಶ್ ನನಗೆ ಮನದಟ್ಟು ಮಾಡಿಕೊಟ್ಟು, ಅದಕ್ಕಾಗಿ ಬೆಂಗಳೂರಿನಲ್ಲಿ ನಿಡುಮಾಮಿಡಿ ಮಠದಲ್ಲಿ ಏರ್ಪಾಡಾಗಿದ್ದ ಅವರ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು.  ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಮೇಲೆ ಅವರ ಕಾರ್ಯಕ್ರಮ ನಡೆಸಲೇಬೇಕೆಂಬ ಇನ್ನಷ್ಟು ಇಚ್ಛೆ ಆಯಿತು.  ಗಣೇಶರು ಆಯ್ತು ಮಾಡೋಣ.  ಆದರೆ ಎಂಟು ಜನ ಪೃಚ್ಚಕರನ್ನು ಹೊಂದಿಸುವ ಜವಾಬ್ಧಾರಿ ನಿಮ್ಮದು ಎಂದರು.  1993ರ ವರ್ಷದಲ್ಲಿ ಗಣೇಶರಿಂದ ಒಂದು ದಿನಾಂಕ ಪಡೆದು ಆ ದಿನಕ್ಕೆ ಎಂಟು ಪೃಚ್ಚಕರನ್ನು ಒಪ್ಪಿಸಿ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಾಡು ಮಾಡಿದೆವು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹನೀಯರಲ್ಲಿ  ಮಹಾನ್ ವಿದ್ವಾಂಸ ಲಂಕಾ ಕೃಷ್ಣಮೂರ್ತಿ, ಭಾಷಾ ಶಾಸ್ತ್ರಜ್ಞ ಡಾ. ಹೆಚ್. ಎಸ್. ಬಿಳಿಗಿರಿ, ಸಂಸ್ಕೃತ ವಿದ್ವಾಂಸ ಡಾ. ರಂಗನಾಥ್ ಅವರು ಕೂಡ ಇದ್ದರು.  ಅಂದು ತುಂಬಿದ ಎಡಿಎ ಸಭಾಂಗಣದಲ್ಲಿ ನಡೆದ ಆ ಕಾರ್ಯಕ್ರಮ ನನ್ನ ಜೀವಮಾನದಲ್ಲಿ ಅತ್ಯಂತ ಸಂತಸ ಕೊಟ್ಟಂತ ಕ್ಷಣಗಳಲ್ಲಿ ಪ್ರಮುಖವಾದುದು.  ಆ ನಂತರದಲ್ಲಿ ಗಣೇಶರ ಶತಾವಧಾನ ಕಾರ್ಯಕ್ರಮ ಕೂಡ ನೋಡುವ ಭಾಗ್ಯ ನನಗೆ ಒದಗಿತ್ತು.  ಭಾರತೀ ವಿದ್ಯಾಭವನದ ಮತ್ತೂರು ಕೃಷ್ಣಮೂರ್ತಿ, ರಾಮಾನುಜ ಅವರ ಸನ್ನಿಧಾನದಲ್ಲಿ ಆಗಾಗ ಭೇಟಿ ನೀಡುವ ಸೌಭಾಗ್ಯ ಹೊಂದಿದ್ದ ನನಗೆ ಆರ್. ಗಣೇಶರು ಕೂಡ ಅಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ ಅವರನ್ನು ಆಗಾಗ ನೋಡುವ ಸೌಭಾಗ್ಯ ಒದಗಿಬಂದಿತ್ತು. 

ಇದೆಲ್ಲ ನಡೆದು ಸುಮಾರು ಇಪ್ಪತ್ತು ವರ್ಷಗಳು ಕಳೆದಿವೆ.  ಯಾವ ಮಹನೀಯರ ಹುಟ್ಟು ಹಬ್ಬ ಸನಿಹದಲ್ಲಿದೆ ಎಂದು ಹುಡುಕುತ್ತಿದ್ದ ನನಗೆ  ನಮ್ಮ ಆರ್ ಗಣೇಶರ ಹುಟ್ಟು ಹಬ್ಬದ ದಿನ ಡಿಸೆಂಬರ್ 4, 1962 ಎಂದು ತಿಳಿಯಿತು.  ಹೀಗಾಗಿ ಅವರ ಬಗ್ಗೆ ಕನ್ನಡ ಸಂಪದದಲ್ಲಿ ಲೇಖನ ಮೂಡಿಸಬೇಕೆಂಬ ಆಸೆ ಮೂಡಿತು.  ಆದರೆ, ಆರ್ ಗಣೇಶರ ವಿದ್ವತ್ತು ನಮಗೆ ಕೇಳಲು, ನೋಡಲು, ಗೌರವಿಸಲು ಸಾಧ್ಯವೇ ವಿನಃ ಅದರ ಯಥಾವತ್ ರೂಪ ಮೂಡಿಸುವ ಕೆಲಸ ಸುಲಭವಲ್ಲದ  ಕಾರಣ ವೆಬ್ ಅಂತರ್ಜಾಲದಲ್ಲಿ ಗಣೇಶರ ಕುರಿತ ಹಲವು ಬರಹಗಳನ್ನು ಆಶ್ರಯಿಸಿದ್ದೇನೆ.  ಈ ನಿಟ್ಟಿನಲ್ಲಿ ಜೀವನ್ಮುಖಿ ಬ್ಲಾಗ್ ಸ್ಪಾಟ್ ಹಲವು ವಿಷಯಗಳನ್ನು ಆತ್ಮೀಯವಾಗಿ ನೀಡಿರುವುದನ್ನು ನಿಮ್ಮ ಮುಂದೆ ಇಡುತ್ತಿದೇನೆ.  ಜೊತೆಗೆ ವಿಕಿಪೀಡಿಯ ಮಾಹಿತಿಗಳನ್ನು ಸಹಾ ಒಂದಷ್ಟು ಕ್ರೋಡೀಕರಿಸಿ ನಿಮ್ಮ ಮುಂದಿಡುತ್ತಿದ್ದೇನೆ.

ಅಷ್ಟಾವಧಾನದಲ್ಲಿ  ವೇದಿಕೆಯಲ್ಲಿ ಎಂಟು ವಿವಿಧ ಕ್ಷೇತ್ರದ ಪಂಡಿತರು ಆಸೀನರಾಗಿರುತ್ತಾರೆ. ಅವರನ್ನು ಪೃಚ್ಚಕರು (ಪ್ರಶ್ನಕಾರರು) ಎಂದು ಕರೆಯುತ್ತಾರೆ. ಅವರು ಕೇಳುವ ಪ್ರಶ್ನೆಗಳಿಗೆ ಅವಧಾನಿಗಳು ಉತ್ತರಿಸಬೇಕು. ಕಾವ್ಯವಾಚನ, ಆಶುಕವಿತೆ, ನಿಷೇಧಪದ ತ್ಯಜಿಸಿ ಛಂದೋಬದ್ಧ ಕವಿತಾರಚನೆ, ಸಂಖ್ಯಾಶಾಸ್ತ್ರ, ಜೊತೆಗೆ ಅಪ್ರಾಸಂಗಿಕ ಪ್ರಶ್ನೆಗಳ ಮಳೆ ಸುರಿಸುವವರಿಗೆ ಉತ್ತರಿಸುವುದು, ಘಂಟಾವಾದನದ ಲೆಕ್ಕ ಇಟ್ಟುಕೊಳ್ಳುವಿಕೆ, ಜೊತೆಗೆ ಪ್ರೇಕ್ಷಕರಿಂದ ಬರುವ ಸಮಸ್ಯೆ ಬಿಡಿಸುವುದು, ಹೀಗೆ ಅನೇಕ ರೀತಿಯ ಕಸರತ್ತುಗಳನ್ನೂ ಅವಧಾನಿ ಏಕಕಾಲಕ್ಕೆ ನಿರ್ವಹಿಸಬೇಕಾಗುತ್ತದೆ. ಇವೆಲ್ಲವನ್ನೂ ಲೀಲಾಜಾಲವಾಗಿ ನಿರ್ವಹಿಸುವುದು ಅವಧಾನಿಗಳಿಗಿರುವ ಸವಾಲು. ಇವೆಲ್ಲವನ್ನೂ ನಗು ನಗುತ್ತ ಎಲ್ಲರೂ ಬೆರಗಾಗುವಂತೆ ನಿರ್ವಹಿಸುವುದು ಗಣೇಶರ ಸಾಮರ್ಥ್ಯ.

ಐದು ಕೋಣೆಗಳುಳ್ಳ ಐದು ಸಾಲಿನ ಖಾಲಿ ಕೋಷ್ಟಕವೊಂದರಲ್ಲಿ ಎಲ್ಲಿಂದೆಲ್ಲಿಗೆ ಕೂಡಿದರು ಸಮ ಸಂಖ್ಯೆಯ ಉತ್ತರ ಬರುವಂತಹ ಸಂಖ್ಯೆಗಳನ್ನು ಅವಧಾನಿಗಳು ಹೇಳಬೇಕು. ಪೃಚ್ಚಕ ಹೇಳುವ ಸಂಖ್ಯೆಗೆ ಅನುಗುಣವಾಗಿ ಅವಧಾನಿ ಪ್ರತಿ ಮನೆಯ ಸಂಖ್ಯೆಯನ್ನು ಹೇಳಬೇಕು. ಪೃಚ್ಚಕ ಅನುಕ್ರಮವಾಗಿ ಅಂಕೆಗಳನ್ನು ಕೇಳುವುದಿಲ್ಲ. ತನ್ನ ಇಚ್ಚೆಗೆ ಬಂದಂತೆ ನಾಲ್ಕನೇ ಸಾಲಿನ ಮೂರನೇ ಮನೆ ಎಂತಲೋ, ಎರಡನೇ ಸಾಲಿನ ಒಂದನೇ ಮನೆ ಎಂತಲೋ ಕೇಳುತ್ತಾರೆ. ಅವಧಾನಿಗಳ ಹಿಂಭಾಗದಲ್ಲಿ ಹಾಕಲಾದ ಬೋರ್ಡಿನಲ್ಲಿ ಸಂಖ್ಯೆಗಳನ್ನು ದಾಖಲಿಸಲಾಗುತ್ತದೆ. ಅವಧಾನಿಗಳ ಕೈಯ್ಯಲ್ಲಿ ಪೆನ್ನು ಪೇಪರ್ ಯಾವುದೂ ಇರುವುದಿಲ್ಲ. ಉಳಿದ ಪೃಚ್ಚಕರ ಪ್ರಶ್ನೆಗಳಿಗೆ ಅವಧಾನಿಗಳು ಉತ್ತರಿಸುವಾಗ ಅವರ ಏಕಾಗ್ರತೆ ಮುರಿಯುವ ಉದ್ದೇಶದಿಂದಲೇ ಮಧ್ಯಪ್ರವೇಶಿಸಿ ಸಂಖ್ಯೆ ಕೇಳಲಾಗುತ್ತದೆ. ಆದರೂ ವಿಚಲಿತರಾಗದೆ ಅವರು ಸಂಖ್ಯೆ ಹೇಳುತ್ತಾ ಹೋಗುತ್ತಾರೆ. ಕೊನೆಗೆ ಇಚ್ಚೆಗೆ ಬಂದಂತೆ ಕೇಳಲಾದ ಸಂಖ್ಯಾ ಕೋಷ್ಟಕದ ಯಾವ ಮನೆ ಖಾಲಿ ಇದೆ ಎಂದರೆ ಅವಧಾನಿಗಳು ಕೂಡಲೇ ಯಾವ ಸಾಲಿನ ಯಾವ ಮನೆ ಖಾಲಿ ಇದೆ ಎಂದು ತಪಿಲ್ಲದೆ ಹೇಳುತ್ತಾರೆ. ಕೊನೆಗೆ ಸಾಲುಗಳನ್ನು ಅಡ್ಡರೀತಿಯಲ್ಲಿ ಮತ್ತು ನೇರರೀತಿಯಲ್ಲಿ ಹೇಗೆ ಕೂಡಿದರೂ ಬರುವ ಉತ್ತರ ಒಂದೇ ಆಗಿರುತ್ತದೆ.

ಇದಲ್ಲದೆ ನಿಷೇಧ ಪದ ಪ್ರಯೋಗದೊಂದಿಗೆ ಪೃಚ್ಚಕ ಹೇಳುವ ಛಂದಸ್ಸಿನಲ್ಲಿ ಪೃಚ್ಚಕ ನಿಷೇಧಿಸುವ ಅಕ್ಷರಬಳಕೆ ಮಾಡದೆ, ಪೃಚ್ಚಕ ಹೇಳುವ ಭಾಷೆಯಲ್ಲಿ, ಆತನ ಇಚ್ಚೆಯ ವಿಷಯದ ಮೇಲೆ ಕವಿತೆ ರಚನೆ ಮಾಡುವುದು. ಇದು ಬಹಳ ಕ್ಲಿಷ್ಟವೂ ಸಾಮಾನ್ಯರಿಗೆ ಅಸಾಧ್ಯವೂ ಆದ ವರಸೆ. ಇದರಲ್ಲಿಯೂ ಶತಾವಧಾನಿಗಳು ತೆರಪಿಲ್ಲದೆ ಲೀಲಾಜಾಲವಾಗಿ ತಮ್ಮ ಪಾಂಡಿತ್ಯ ತೋರುತ್ತಾರೆ. ಒಮ್ಮೆ ಕಾರ್ಯಕ್ರಮವೊಂದರಲ್ಲಿ ಒಬ್ಬ ಪೃಚ್ಚಕರು ಯೆಡ್ಡಿ, ಸಿದ್ದ, ಕುಮ್ಮಿ, ರೇಣು ಪದ ಬಳಕೆಯೊಂದಿಗೆ ಕಂದಪದ್ಯ ರಚಿಸಿ ಎಂಬಂತಹ  ಸವಾಲೊಡ್ಡಿದ್ದರು. ರೇಣು ಜೊತೆಗೆ ಜಯಲಕ್ಷ್ಮಿಯನ್ನು ಸೇರಿಸಿ ಅವಧಾನಿಗಳು ರಚಿಸಿದ ಆಶು ಕವಿತೆ ಇಲ್ಲಿದೆ ನೋಡಿ:

ಅಪನೀತಿಯಡ್ಡಿಯಾಗಿರೆ
ಉಪಚರಿಸಿದ್ದ ಪ್ರಜಾಪ್ರಭುತ್ವದ ಗತಿಯೇಂ
ಉಪಟಳಮಿರ್ಕುಮ್ಮಿಕಿರೆ
ಕೃಪೆತೋರು ವಿಜಯಲಕ್ಷ್ಮಿ ಪದ ರೇಣುಗಳ್

ಕವಿತಾವಾಚನ ಮಾಡುವಾಕೆ ಸಂಸ್ಕ್ರತ ಅಥವಾ ಹಳೆಗನ್ನಡದ ಯಾವುದೋ ಗ್ರಂಥದ ಒಂದು ಕವಿತೆ ವಾಚನ ಮಾಡುತ್ತಾರೆ. ಅದು ಯಾವ ಗ್ರಂಥ, ಗ್ರಂಥಕರ್ತ ಯಾರು, ಅದರ ಸನ್ನಿವೇಶ, ಛಂದಸ್ಸು, ರಾಗ ಹೀಗೆ ಎಲ್ಲವನ್ನು ಅವಧಾನಿಗಳು ಹೇಳುವುದರ ಜೊತೆಗೆ ಅದಕ್ಕೆ ಪ್ರತಿವಾದಿಯಾಗಿ ಅದೇ ರಾಗ ಮತ್ತು ಛಂದಸ್ಸಿನಲ್ಲಿ ತಮ್ಮ ಆಶು ಕವಿತೆ ಮೂಲಕ ಉತ್ತರ ಕೊಡಬೇಕು. ಸಂಸ್ಕ್ರತ ಮತ್ತು ಹಳೆಕನ್ನಡ ನಡುಗನ್ನಡ, ಹೀಗೆ ಎಲ್ಲವನ್ನು ಅರೆದು ಕುಡಿದು ಕರಗತ ಮಾಡಿಕೊಂಡವರಿಗೆ ಮಾತ್ರ ಇದರಲ್ಲಿ ಜಯಿಸುವುದು ಸಾಧ್ಯ. ಅವಧಾನಿಗಳ ಬಾಯಿಂದ ಕೇಳುಗರ ಅಪೇಕ್ಷೆ ಮೇರೆಗೆ ಆಶು ರೂಪದಲ್ಲಿ ಹಲವು ಸಮಯೋಚಿತ ಪ್ರಸಂಗಗಳ ಮೇಲಿನ ಕವಿತೆಗಳಲ್ಲಿ ಅನುಷ್ಟುಪ್ ಛಂದಸ್ಸು, ಶಾರ್ದೂಲ ವಿಕ್ರೀಡಿತ, ಕಂದ ಪದ್ಯ, ಭಾಮಿನಿ ಷಟ್ಪದಿ ಹೀಗೆ ಎಲ್ಲವೂ ಅಲ್ಲಿ ಸುಲಲಿತವಾಗಿ, ಸರಾಗವಾಗಿ ಹರಿದುಬರುತ್ತದೆ. ಜೊತೆಗೆ ನಡುನಡುವೆ ಅಪ್ರಸಂಗ ಪ್ರಶ್ನಕರ್ತರು ಕೇಳುವ ಅಸಂಗತ ಮತ್ತು ಪ್ರಸ್ತುತ ವಿದ್ಯಮಾನದ ಮೇಲಿನ ಪ್ರಶ್ನೆಗಳಿಗೂ ಅವರು ಉತ್ತರಿಸಬೇಕು. ಕಾರ್ಯಕ್ರಮವೊಂದರಲ್ಲಿ  ಬಂದ ಕೆಲವು ಅಪ್ರಾಸಂಗಿಕ ಪ್ರಶ್ನೆಗಳು ಮತ್ತು ಅವಧಾನಿಗಳು ಅವಕ್ಕೆ ಕೊಟ್ಟ ಉತ್ತರ ಹೀಗಿವೆ:

1. ಪ್ರಶ್ನೆ: ಪಿತ್ರವಾಕ್ಯ ಪರಿಪಾಲಕರಾಗಿ ರಾಮ ಮತ್ತು ಭೀಷ್ಮ ಇವರಿಬ್ಬರ ನಿದರ್ಶನ ನಮ್ಮ ಮುಂದಿದ್ದರೂ, ರಾಮನಿಗೆ ಸಿಕ್ಕ ಮಾನ್ಯತೆ ಭೀಷ್ಮನಿಗೆ ಏಕೆ ಸಿಗಲಿಲ್ಲ ?

ಉತ್ತರ: ರಾಮನಿಗೆ constitutional crisis ಇತ್ತು ಆದರೆ ಭೀಷ್ಮನಿಗೆ ಇದ್ದುದು constipational crisis ಎಂದು ಅವಧಾನಿಗಳು ನಗೆಬುಗ್ಗೆ ಹರಿಸಿದರು. ರಾಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪಿತ್ರವಾಕ್ಯ ಪರಿಪಾಲನೆ ಮಾಡಿದ. ಆದರೆ ಭೀಷ್ಮ ಪಿತೃಕಾಮ ಪರಿಹಾರಕ್ಕಾಗಿ ತಂದೆಗೆ ಮದುವೆ ಮಾಡಿಸಿದ. ಹೀಗೆ ಎಳೆಎಳೆಯಾಗಿ ಇಬ್ಬರ ವ್ಯಕ್ತಿತ್ವ ಮತ್ತು ಅವರು ನಡೆದು ಬಂದ ದಾರಿಯನ್ನು ವಿವರಿಸಿದ್ದು ಅರ್ಥಪೂರ್ಣವಾಗಿತ್ತು.

2. ಅವಧಾನಿಗಳೇ ಕಂಪ್ಯೂಟರ್ ಯುಗದಲ್ಲಿ ಬಳಕೆಯಾಗುವ ERP ಮತ್ತು SAP ಬಗ್ಗೆ ಹೇಳಿ ಎಂದಾಗ ಸಾದ್ಯಂತ ಅದನ್ನು ವಿವರಿಸಿದ ಅವಧಾನಿಗಳು, ತಮಾಷೆಯಾಗಿ SAP ಗೆ "ಸಬ್ ಆದ್ಮಿ ಪರೆಶಾನ್" ಎಂಬ ಹೊಸ ವ್ಯಾಖ್ಯಾನ ಕೂಡ ಕೊಟ್ಟರು.

3. ಪ್ರೇಕ್ಷಕರೊಬ್ಬರು ಪ್ರಸ್ತುತ ಸಂದರ್ಭದಲ್ಲಿ "ಅಷ್ಟ ಅಧ್ವಾನ" ಎಂದರೆ ಏನು? ಎಂದು ಪ್ರಶ್ನೆ ಕೇಳಿದ್ದಕ್ಕೆ ಉತ್ತರವಾಗಿ, ಅವಧಾನಿಗಳು ಯೆಡ್ಡಿ, ರೆಡ್ಡಿ ಬ್ರದರ್ಸ್, ದೇವೇಗೌಡ ಅಂಡ್ ಸನ್ಸ್, ಭಾರದ್ವಾಜ್ ಅಂಡ್ ಕೋ, ಭಿನ್ನಮತೀಯರು, ಸಿದ್ದು ಅಂಡ್ ಕೋ, ಕೇಂದ್ರಸರಕಾರ ಮತ್ತು ಕೊನೆಗೆ ಮತದಾರರಾದ "ನಾವು" ಎಂದಾಗ ಸಭೆಯಲ್ಲಿ ನಗೆಯುಕ್ಕಿತ್ತು.

ಇತ್ತೀಚಿನ ವರ್ಷದಲ್ಲಿ  ಭಾರತಕ್ಕೆ ಒಬಾಮಾ ಭೇಟಿ ಕೊಟ್ಟ ಸಂದರ್ಭದಲ್ಲಿ  ಆಶು ಕವಿತೆ ಮೂಲಕ ಅವರಿಗೆ  ಒಂದು ಸ೦ದೇಶ ಕೊಡಿ ಎಂದು ಕೇಳಿದಾಗ, ಸಂಸ್ಕೃತದಲ್ಲಿ ಅವಧಾನಿಗಳು ಕೊಟ್ಟ ಉತ್ತರ ಹೀಗಿತ್ತು:

ಮುಕ್ತ ಹಟ್ಟ ಮಹಾ ಪಟ್ಟೇ
ಯುಕ್ತೋಸಿಶ್ರುಯತಾಂ ವಚಃ
ಮಮೇಂದು ಭುಕ್ತಯೇ ಸರ್ವಂ
ಜಗತಾಮಸ್ತು ಕರ್ಮತೇ

ತಾತ್ಪರ್ಯ: ಮುಕ್ತ ಮಾರುಕಟ್ಟೆ ಎಂಬ ಪರಿಕಲ್ಪನೆಯನ್ನು ಜಗಕ್ಕೆ ತೋರಿದ ವಿಶ್ವದ ದೊಡ್ಡಣ್ಣ ರಾಷ್ಟ್ರದ ಪ್ರಮುಖನೇ, ಅದರ ಫಲ ಉಣ್ಣುತ್ತಿರುವ (ಹೊರಗುತ್ತಿಗೆಯಂತಹ ಉದ್ಯೋಗಗಳಿಂದ) ನಮ್ಮ ದೇಶದ ಜನರಿಗೆ ತೊಂದರೆಯಾಗುವಂತಹ ಕ್ರಮಕ್ಕೆ ಮುಂದಾಗಬೇಡ, ಮುಕ್ತ ಮಾರುಕಟ್ಟೆಯ ಫಲಗಳು ಜಾಗತಿಕವಾಗಿ ಎಲ್ಲರಿಗೂ ಪ್ರಾಪ್ತವಾಗಲಿ.

ಇನ್ನೊಬ್ಬರು ಹೆಣ್ಣಿನಲ್ಲಿ ಹಲವು ಪ್ರಾಣಿಗಳು ಅಡಕವಿವೆ, ಅದು ಹೇಗೆ ಎಂಬ ಸಮಸ್ಯೆ ಮುಂದಿಟ್ಟರು.  ಅದಕ್ಕೆ ಉತ್ತರಿಸಿದ ಅವಧಾನಿಗಳು, ಮೀನ ಕಣ್ಣು, ಗಜಗಮನ, ಹಂಸ ನಡಿಗೆ, ಸಿಂಹಕಟಿ, ಇದೆಲ್ಲ ಹೆಣ್ಣಿನ ವರ್ಣನೆಗೆ ಬಳಸುವ ಪದಪುಂಜ, ಹೀಗಾಗಿ ಹೆಣ್ಣಿನಲ್ಲಿ ಹಲವು ಪ್ರಾಣಿಗಳು ಅಡಕವಿವೆ, ಹೆಣ್ಣು ಒಂಥರ ಮಿನಿ ಮೃಗಾಲಯ ಇದ್ದಂತೆ ಎಂದದ್ದು ಅವರ ಪ್ರತ್ಯುತ್ಪನ್ನಮತಿಗೆ ಇನ್ನೊಂದು ಸಾಕ್ಷಿ.

ಹೀಗೆ ಜೀವನ್ಮುಖಿ ಬ್ಲಾಗ್ ಸ್ಪಾಟಿನಲ್ಲಿ ಆಸಕ್ತರು ಉತ್ತಮವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.   ನಾನು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆರ್. ಗಣೇಶರು ಮಧ್ಯೆ ಮಧ್ಯೆ ಒಬ್ಬರು ತೊಂದರೆ ಕೊಡಲಿಕ್ಕೆ ಬಾರಿಸುವ ಘಂಟಾನಾದದ ಲೆಖ್ಖವನ್ನೂ ಇಟ್ಟುಕೊಳ್ಳಬೇಕಿತ್ತು.  ಮುರಜ ಬಂಧದಲ್ಲಿ ಅಂದರೆ ಮೃದಂಗ ಆಕಾರದ ಪದ ಬಂಧದಲ್ಲಿ ಹೇಗೆ ಓದಿದರೂ ಒಂದೇ ರೀತಿಯಿಂದ ಓದಬಹುದಾದ ಸೊಗಸಾದ ಪದಬಂಧವನ್ನು ರಚಿಸಿದ್ದು ಈಗಲೂ ನೆನಪಿದೆ. ಕೆಲವು ತಿಂಗಳುಗಳ ಹಿಂದೆ  ಶತಾವಧಾನಿ ಗಣೇಶರು ಮಾಡಿದ ಕನ್ನಡದ ಶತಾವಧಾನ ನೋಡಿದವರು ಖಂಡಿತವಾಗಿ ಇದಕ್ಕಿಂತ ಹೆಚ್ಚಿನದನ್ನು ಅನುಭವಿಸಿದ್ದಾರು.  

ಆರ್ ಗಣೇಶರು ಜನಿಸಿದ್ದು 4ನೆ ಡಿಸೆಂಬರ್ 1962ರಲ್ಲಿ. ಎಂಜಿನಿಯರಿಂಗ್‌ನಿಂದ ಹಿಡಿದು ತತ್ವಶಾಸ್ತ್ರದವರೆಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುವ ಇವರು ಕನ್ನಡದ, ಭಾರತದ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣರೆಂಬುದರಲ್ಲಿ ಸಂಶಯವಿಲ್ಲ. ಯಂತ್ರಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಪದವಿ, ಲೋಹಶಾಸ್ತ್ರ ಹಾಗೂ ವಸ್ತುವಿಜ್ಞಾನದಲ್ಲಿ ತಮ್ಮ ಪಿ.ಎಚ್.ಡಿ. ಪದವಿಯನ್ನು ಪಡೆದು ವೃತ್ತಿಯಿಂದ ಅಧ್ಯಾಪಕರಾಗಿದ್ದ ಇವರು ಅದೃಷ್ಟವಶಾತ್ ಅವಧಾನ ಕಲೆಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ ಅದರ ಪ್ರಚಾರ ಕೈಗೊಂಡದ್ದು ಕನ್ನಡಿಗರ ಸುದೈವ. ಕನ್ನಡದಲ್ಲಿ ಅವಧಾನ ಕಲೆಎಂಬ ತಮ್ಮ ಮಹಾಪ್ರಬಂಧಕ್ಕೆ ಇತ್ತೀಚೆಗಷ್ಟೇ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಆರ್. ಗಣೇಶ್ ಕನ್ನಡ ನಾಡಿನ, ಜನರ ಹೆಮ್ಮೆಯ ಆಸ್ತಿ.

ಇದುವರೆವಿಗೂ 965 ಅಷ್ಟಾವಧಾನಗಳು ಹಾಗೂ  ಆರು  ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್ ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಕೀರ್ತಿ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ. ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಅಲ್ಲದೆ ಲಲಿತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮುಂತಾದುವುಗಳಲ್ಲಿಯೂ ಸಹಾ ಪ್ರಾವೀಣ್ಯವನ್ನು ಪಡೆದಿದ್ದಾರೆ. ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠೀ, ಬಂಗಾಲೀ ಮುಂತಾದುವುಗಳಲ್ಲದೆ ವಿದೇಶೀಯ ಭಾಷೆಗಳಾದ ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಮುಂತಾದ ಒಟ್ಟು 18 ಭಾಷೆಗಳಲ್ಲಿಯೂ ಸಹಾ ಅವರು ಅಪಾರ ಪರಿಣತಿಯನ್ನು ಹೊಂದಿದ್ದಾರೆ.

ಸ್ವತಃ ಉತ್ತಮ ಕವಿಯೂ, ಉಪನ್ಯಾಸಕರೂ, ಚಿಂತಕರೂ ಆಗಿರುವ ಡಾ. ಗಣೇಶ್ ಇದುವರೆವಿಗೂ ನೂರಾರು ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕನ್ನಡ, ಸಂಸ್ಕೃತ ಹಾಗೂ ತೆಲುಗು ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ, ಯಕ್ಷಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅಪೂರ್ವವಾದ ಹಾಗೂ ಆಸಕ್ತಿದಾಯಕವಾದ ವಿಚಾರಗಳನ್ನು ಚರ್ಚಿಸಿದ್ದಾರೆ. ಉತ್ತಮ ಸಂಶೋಧಕರೂ ಆಗಿರುವ ಇವರು ಪ್ರಾಚೀನ ಭಾರತದ ವಾಸ್ತುಶಾಸ್ತ್ರ ಹಾಗೂ ತಂತ್ರಜ್ಞಾನವೂ ಸೇರಿದಂತೆ ವೇದಗಳ ಇತಿಹಾಸ ಮುಂತಾದ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು ಹದಿನಾರು ಕಾವ್ಯಗಳನ್ನೂ ರಚಿಸಿರುವ ಇವರು ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಪೂರೈಸಿದ್ದಾರೆ. ವಿದ್ವಜ್ಜನಗಳಿಂದ, ಅಭಿಮಾನಿಗಳಿಂದ, ಸರ್ಕಾರದಿಂದ ಅನೇಕ ಪ್ರಶಸ್ತಿ ಹಾಗೂ ಬಿರುದುಗಳನ್ನು ಪಡೆದಿರುವ ಇವರು ತಮ್ಮ ಅಮೋಘ ಪಾಂಡಿತ್ಯ, ಅಸಾಧಾರಣ ಚಾತುರ್ಯ, ಸರಳತೆ, ನಿಷ್ಕಪಟತೆ ಹಾಗೂ ಸ್ನೇಹ ಶಾಲೀನ್ಯತೆಯಿಂದ ಪಂಡಿತ-ಪಾಮರ ವರ್ಗಗಳೆರಡರಲ್ಲಿಯೂ, ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ.    ಡಾ. ಆರ್. ಗಣೇಶ್ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ 2010ನೆ ಸಾಲಿನ ಸೇಡಿಯಾಪು ಪ್ರಶಸ್ತಿ ಪಡೆದಿದ್ದಾರೆ.

ಇಂದು ನಮ್ಮ ನಾಡಿನಲ್ಲಿ ಅವರು ರಚಿಸಿರುವ ವಿದ್ವತ್ ಪೂರ್ಣ ಗ್ರಂಥಗಳೂ, ಅವರ ಹಲವು ಪಾಂಡಿತ್ಯ ಪೂರ್ಣ ವ್ಯಾಖ್ಯಾನ, ಉಪನ್ಯಾಸಗಳ ಸಿ.ಡಿ ಗಳು ಸಹಾ ಕನ್ನಡದಲ್ಲಿ ಅಪಾರ ಜನಪ್ರಿಯತೆಗಳಿಸಿವೆ.  ಡಾ. ಎಸ್. ಎಲ್. ಭೈರಪ್ಪನವರ ಇತ್ತೀಚಿನ ಕೃತಿಗಳೆಲ್ಲ ಬೆಳಕು ಕಂಡಿರುವುದು ಗಣೇಶರು ಮಾಡಿದ ಅವಲೋಕನ, ಚರ್ಚೆ, ಅಭಿಪ್ರಾಯಗಳ ಮಂಡನೆಯ ನಂತರವೇ ಎಂಬುದು ಕೂಡ ಅವರು ಎಷ್ಟು ಗೌರವಾನ್ವಿತರು ಎಂಬುದಕ್ಕೆ ಒಂದು ಸಣ್ಣ ನಿದರ್ಶನ.  

'ಕೃತಿ ಭುವನದ ಭಾಗ್ಯದಿಂದಮಕ್ಕುಂ' ಎಂಬ ನೇಮಿಚಂದ್ರನ ನುಡಿಯಂತೆ ಸಮಸ್ತ ಕನ್ನಡಿಗರ ಪುಣ್ಯದ ಫಲವಾಗಿ ಗಣೇಶ್‌ರಂಥ ಅವಧಾನಿಗಳು ಹಾಗೂ ಅವಧಾನಗಳು ನಮಗೆ ಲಭ್ಯವಾಗಿವೆ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ, ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನಕ್ಕಾಗಿ ದುಡಿಯುತ್ತಿರುವ ಕನ್ನಡದ ಸೇವಕರಿಗೆ ಗಣೇಶ್‌ರಂಥ ಅವಧಾನಿಗಳ ಇರುವಿಕೆ ಹಾಗೂ ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸಂದಿರುವ, ಸಲ್ಲಲಿರುವ ಕಾಣಿಕೆ ಆಶಾದೀಪಗಳು. ತಮ್ಮ ವಿಸ್ತೃತ ಪ್ರತಿಭೆಯಿಂದ ಬಹುಶ್ರುತರಾಗಿರುವ ಗಣೇಶರ ಪಾಂಡಿತ್ಯ ಪ್ರತಿಭೆಗೆ ನಮ್ಮ ಸಾಷ್ಟಾಂಗ ನಮನಗಳು.  ನನ್ನಂತಹವನಿಗೆ ಕಿರಿಯರಾದರೂ ಅವರ ಬ್ರಹ್ಮಚರ್ಯ, ತಪಸ್ಸು, ಜ್ಞಾನ, ಸಚ್ಚಾರಿತ್ರ್ಯ ತೇಜಸ್ಸುಗಳಿಂದ ಕೂಡಿದ ಪೂಜ್ಯ ಗಣೇಶರ ವ್ಯಕ್ತಿತ್ವಕ್ಕೆ  ಸಾಷ್ಟಾಂಗ ನಮನ .

ಕೃತಜ್ಞತೆಗಳು: ಜೀವನ್ಮುಖಿ ಬ್ಲಾಗ್ ಮತ್ತು ವಿಕಿಪೀಡಿಯಾ

ಚಿತ್ರಕೃಪೆ: ಅತ್ರೀಬುಕ್.ಕಾಂ

Tag: Shatavadani R. Ganesh

ಕಾಮೆಂಟ್‌ಗಳಿಲ್ಲ: