ಭಾನುವಾರ, ಸೆಪ್ಟೆಂಬರ್ 29, 2013

ಶಂಕರನಾಗ್ ನೆನಪು

ಶಂಕರನಾಗ್ ನೆನಪು

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ, ಏಸೊಂದು ಸೊಗಸಿತ್ತ.
ನಮ್ಮ ಶಂಕರನಿದ್ದಾಗ ಎಷ್ಟೊಂದು ಸೃಜನೆಯಿತ್ತ, ನೆಚ್ಚಿನ ಸಂಕೇತವಿತ್ತ
ಮನೆ ಬೆಳಗೊ ಮಾಲ್ಗುಡಿ ದಿನಗಳಿತ್ತ, ಒಳ್ಳೊಳ್ಳೆಯ ಸಿನಿಮಾಗಳಿತ್ತ,
ಇಂದು ಬರಿ ನೆನಪೋ ಅಣ್ಣ, ಉಳಿದಿಹ ಈ ನಾಗ ನಮ್ಮೆದೆಯರಂಗ ಶಂಕರದೊಳಗ

ನಾನು 1980ರ ದಶಕದಲ್ಲಿ ಕಸ್ತೂರಿಬಾ ರಸ್ತೆಯಲ್ಲಿದ ನಮ್ಮ ಕಚೇರಿಯ ಮುಂದೆ ನನ್ನ ಗೆಳೆಯರೊಡನೆ ಮಾತನಾಡುತ್ತ ನಿಂತಿದ್ದೆ.  ಯಾವುದೋ ಕಾಂತಿಯುತ ಕಂಗಳು ನನ್ನನ್ನು ಸೆಳೆದಂತಾಯ್ತು. ನಮ್ಮಿಬ್ಬರ ನೋಟಗಳೂ ಒಂದೇ ಸಮಯಕ್ಕೆ ಸ್ಪಂದಿಸಿದ ಆ ವೇಳೆಯಲ್ಲಿ ನನಗೆ ಅವರನ್ನು ಕಂಡ ದಿಗ್ಭ್ರಮೆಯಲ್ಲಿರುವಾಗಲೇ ನಗುಮುಖದಿಂದ "ಹಲ್ಲೋ ಚೆನ್ನಾಗಿದ್ದೀರ" ಎಂದು ಎಷ್ಟೋ ವರ್ಷದ ಸ್ನೇಹಿತನಂತೆ ನಗೆ ಬೀರಿದರು.  ಆ ವ್ಯಕ್ತಿ ಮತ್ತ್ಯಾರೂ ಇಲ್ಲ ಶಂಕರನಾಗ್.  ಇದು, ಶಂಕರನಾಗ್ ಅವರ ವ್ಯಕ್ತಿತ್ವಕ್ಕೆ,  ತಮ್ಮ ಇಡೀ ಸುತ್ತಲಿನ ಪ್ರಪಂಚವನ್ನೇ ತಮ್ಮದಾಗಿಸಿಕೊಳ್ಳುವ ಆಯಾಸ್ಕಾಂತಿಕ ಶಕ್ತಿ ಸಾಮರ್ಥ್ಯಗಳು ಸ್ವಾಭಾವಿಕವಾಗಿದ್ದವು ಎಂದು ನನಗೆ ಮೂಡಿ ಬಂದ ಸ್ವಯಂ ಅನುಭವ.

ಆದರೆ ಇದೇ ಮಾಂತ್ರಿಕ 1990ರ  ಸೆಪ್ಟೆಂಬರ್ 30ರಂದು, ಸ್ಕೂಟರಿನಲ್ಲಿ ನಾನು ನನ್ನ ಪತ್ನಿಯೊಂದಿಗೆ ಹೋಗುತ್ತಿದ್ದಾಗ ಅಚಾನಕ್ಕಾಗಿ ಸಂಕೇತ್  ಸ್ಟುಡಿಯೋ ಮುಂದೆ ಬ್ರೇಕ್ ಹಾಕುವಂತೆ ಮಾಡಿಬಿಟ್ಟರು.  ಕಾರಣ ಆಗ ತಾನೇ ಬೋರ್ಡ್ ಮೇಲೆ ಬರೆಯುತ್ತಿದ್ದರು, “ಶಂಕರನಾಗ್ ಅವರು ಇಂದು ಅಪಘಾತದಲ್ಲಿ ನಿಧನರಾಗಿದ್ದಾರೆ". 

ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿಸಿನಿಮಾ ನೋಡಿದಾಗ ಶಂಕರನಾಗ್ ಮತ್ತು ಸುಂದರಕೃಷ್ಣ ಅರಸ್ ಅಚ್ಚಳಿಯದ ಮೋಡಿ ಮಾಡಿ ಬಿಟ್ಟಿದ್ದರು.  ಶಂಕರನಾಗ್ ಅವರಿಗೆ ಆ ಚಿತ್ರದ ಅಭಿನಯ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದ ಶ್ರೇಷ್ಟನಟ ಪಟ್ಟ ಕೊಟ್ಟಿತು.  ನಂತರದಲ್ಲಿ ಅವರ ಹಲವು ಚಿತ್ರಗಳು ಬಂದರೂ ವಿಶೇಷ ಎನಿಸಿದ್ದು ಅವರೇ ನಿರ್ದೇಶಿಸಿದ  ಮಿಂಚಿನ ಓಟಮತ್ತು  ಆಕ್ಸಿಡೆಂಟ್’.  ಈ ಎರಡೂ ಚಿತ್ರಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳ ಸುರಿಮಳೆಯನ್ನು ಗಳಿಸಿದವು.  ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ಹಿಂದಿ ಚಿತ್ರ ಉತ್ಸವ್ದಲ್ಲಿ ಅವರು ಕಾಣಿಸುವ ಕಳ್ಳನ ಪಾತ್ರ ಮನೋಹರವಾಗಿತ್ತು.  ಉಳಿದಂತೆ  ಅವರನ್ನು ನಮ್ಮ ಕನ್ನಡ ನಿರ್ಮಾಪಕರು ಕರಾಟೆ ರಾಜಎಂದು ತೋರಿ  ಉಪಯೋಗಿಸಿದ್ದೇ ಹೆಚ್ಚು.  ಅವುಗಳಲ್ಲಿ ಜನಸಾಮಾನ್ಯರಿಗೆ ಹತ್ತಿರವಾದ ಪಾತ್ರಗಳು ಅಟೋ ರಾಜ’, ‘ಸೀತಾರಾಮುಮತ್ತು ಸಾಂಗ್ಲಿಯಾನಚಿತ್ರಗಳು.  ಆ ಪಾತ್ರಗಳು ಎಷ್ಟು ಪರಿಣಾಮ ಬೀರಿದವೆಂದರೆ ಇಂದೂ ಆಟೋಗಳಲ್ಲಿ ಮೂಡುವ ನಾಯಕರಲ್ಲಿ ಅತೀ ಹೆಚ್ಚಿನ ಸ್ಥಾನ ಶಂಕರನಾಗ್ ಅವರಿಗೇ ಸೇರುತ್ತದೆ. ಅವರು ತಮ್ಮ ಗೀತಾಮತ್ತು ಜನ್ಮ ಜನ್ಮದ ಅನುಬಂಧಚಿತ್ರಗಳ ಮೂಲಕ ಇಳಯರಾಜ ಅವರನ್ನು ಕನ್ನಡ ಸಿನಿಮಾಗಳಿಗೆ ಕರೆತಂದರು.  ಈ ಹಾಡುಗಳು ಜನಮನದಲ್ಲಿ ಚಿರಸ್ಥಾಯಿಯಾಗಿವೆ. ಅಷ್ಟೇ ಅಲ್ಲ, ಇತ್ತೀಚಿನ  ವರ್ಷಗಳಲ್ಲಿ  ಕೂಡಾ ಅಮಿತಾಬ್ ಬಚ್ಚನ್ ನಟಿಸಿದ ಹಿಂದಿ ಚಿತ್ರ ಚೀನಿ ಕಮ್ನಲ್ಲಿ ಇಳಯರಾಜ  ಅವರೇಗೀತಾ ಚಿತ್ರದ ಜೊತೆಯಲಿ, ಜೊತೆ ಜೊತೆಯಲಿಹಾಡಿನ ರಾಗಸಂಯೋಜನೆಯನ್ನು ಮತ್ತೊಮ್ಮೆ ಬಳಸುವಷ್ಟು ಮೋಡಿ ಮಾಡಿದ ಸೃಷ್ಟಿಗಳವು. ಶಂಕರನಾಗ್ ಒಂದು ಮುತ್ತಿನ ಕಥೆಚಿತ್ರದ ಮೂಲಕ ರಾಜಕುಮಾರ್ ಅವರಿಗೆ ಸಹಾ ವಿಶೇಷ ಪಾತ್ರ ನೀಡಿ ಚಿತ್ರ ನಿರ್ದೇಶನ ಮಾಡಿದ್ದರು. 

ಶಂಕರನಾಗ್ ಅವರಿಗೆ ಅವರ ಹೀರೋಪಟ್ಟದ ಬಗ್ಗೆ ಯಾವುದೇ ವ್ಯಾಮೋಹ ಇರಲಿಲ್ಲ.  ಜನಸಾಮಾನ್ಯರ ಮಧ್ಯದಲ್ಲಿ ತಾನೇ ತಾನಾಗಿ ಓಡಿಯಾಡುತ್ತಿದ್ದರು.  ಅಂದರೆ ಕಾಲ ಹರಣ ಮಾಡುತ್ತಿದ್ದರು ಅಂತ ಅರ್ಥವಲ್ಲ.  ಅವರಷ್ಟು ಜೀವನದಲ್ಲಿ ಸಾಧಿಸಿದವರು ತುಂಬಾ ತುಂಬಾ ಕಡಿಮೆ.  ಅವರಿಗೆ ಜೀವನವೆಂಬ ಕ್ಯಾನವಾಸ್ ಎಲ್ಲದಕ್ಕಿಂತ ದೊಡ್ಡದು ಎಂಬ ಜಾಗೃತಿ ಇತ್ತು.

ಶಂಕರನಾಗ್  ನವಂಬರ್ 9,  1954ರ ವರ್ಷ ಹೊನ್ನಾವಾರದ ಬಳಿಯ ಮಲ್ಲಾಪುರದಲ್ಲಿ ಜನಿಸಿದರು. ಅವರು ಚಿತ್ರರಂಗಕ್ಕೆ ಬರುವ ಮುಂಚೆ ಮುಂಬೈನ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ್ದ ಮರಾಠಿ ಚಿತ್ರ ’22 ಜೂನ್ 1897’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.  ಅಂದಿನ ದಿನಗಳಲ್ಲಿ ಪರಿಚಯರಾದ ಅರುಂಧತಿ ಅವರು ಅವರ ಜೀವನ ಜೊತೆಗಾತಿಯಾದರು.  ಈ ದಂಪತಿಗಳು ಸಂಕೇತ್ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. 

ಮುಂದೆ ಶಂಕರನಾಗ್ ತಮ್ಮ ಅಣ್ಣ ಅನಂತನಾಗ್ ಅವರೊಡಗೂಡಿ ಸಂಕೇತ್ರೆಕಾರ್ಡಿಂಗ್ ಸ್ಟುಡಿಯೋ ನಿರ್ವಹಣೆಯ ಜವಾಬ್ಧಾರಿ ಹೊತ್ತು ಕನ್ನಡ ಚಲನಚಿತ್ರಗಳ ಧ್ವನಿಮುದ್ರಣ ಕರ್ನಾಟಕದಲ್ಲೇ ಆಗುವತ್ತ ಪ್ರಮುಖ ಕೆಲಸ ಮಾಡಿದರು.  ಹಲವು ಗೆಳೆಯರು, ಮಹನೀಯರನ್ನು ಪ್ರೆರೇಪಿಸಿ ಕಂಟ್ರಿ ಕ್ಲಬ್ಅನ್ನು ವಿನೂತನ ಮಾದರಿಯಲ್ಲಿ ರೂಪಿಸಿದರು.  ಈ ಮಧ್ಯೆ ಅಂದಿನ ದಿನದಲ್ಲಿ ಸರ್ಕಾರದ  ಏಕಸ್ವಾಮ್ಯದಲ್ಲಿದ್ದ ದೂರದರ್ಶನವು ಖಾಸಗಿ ಸಂಸ್ಥೆಗಳಿಗೂ ಕಾರ್ಯಕ್ರಮ ನಿರ್ಮಾಣ ಮಾಡುವ ಆಹ್ವಾನ ನೀಡಿದಾಗ ಇಡೀ ವಿಶ್ವವೇ ಮೆಚ್ಚುವ ಹಾಗೆ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ನಿರ್ಮಿಸಿ ನಿರ್ದೇಶಿಸಿ ಎಲ್ಲರ ಮನೆ ಮಾತಾದರು.  ಮುಂದೆ ಅದೇ ಸರಣಿಯಲ್ಲಿ ಸ್ವಾಮಿಕೂಡ ಬಂತು.  ಇಂದೂ ಸಹ ಇದುವರೆಗೆ ಎಲ್ಲ ತರದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜನಾಂಗದಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಕೃತಿ ಮಾಲ್ಗುಡಿ ಡೇಸ್ಎಂಬುದು ನಿರ್ವಿವಾದವಾದ ಸಂಗತಿ.

ಆಟೋ ಚಾಲಕ, ಎಳನೀರು ಮಾರುವವ ಹೀಗೆ ವಿವಿಧ ಸ್ಥರದ ಜನರ ಪರಿಚಯ ಕಾರ್ಯಕ್ರಮವನ್ನು ಕನ್ನಡದ ದೂರದರ್ಶನಕ್ಕೆ ಮನಸೆಳೆಯುವಂತೆ ನಿರ್ವಹಿಸಿಕೊಟ್ಟರು.  ಹೀಗೆ ತಮ್ಮ ಜನಪ್ರಿಯತೆ, ಕ್ರಿಯಾಶೀಲ ಚಿಂತನೆ, ನಿರ್ದೇಶನ, ಸಾಮಾನ್ಯರೊಂದಿಗೆ ಸಾಮಾನ್ಯ ಜೀವನ ಇವೆಲ್ಲವನ್ನೂ ಸುಲಲಿತವಾದ ಸಮಪ್ರಜ್ಞೆಯಲ್ಲಿ ಕೊಂಡೊಯ್ದರು.

ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ.  ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ  ಮುಖ್ಯಮಂತ್ರಿ  ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ. 

ಅವರು ಜೋಕುಮಾರ ಸ್ವಾಮಿಯನ್ನು ತೆರೆಗೆ ಅಳವಡಿಸುವ ಕೆಲಸ ಪ್ರಾರಂಭಿಸಿ ಅದರ ಚಿತ್ರಣದ ಸಂಬಂಧದ ಪಯಣದಲ್ಲಿದ್ದಾಗ ಅಪಘಾತವನ್ನೊಂದು ನೆಪಮಾಡಿ, ದೇವರು ಇಂತಹ ಸೃಷ್ಟಿಕರ್ತ ಸ್ವರ್ಗಕ್ಕೆ ಬೇಕು ಎಂದು ಭೂಲೋಕದ ಮೇಲಿನ ಹೊಟ್ಟೆಕಿಚ್ಚಿನಿಂದ ಕರೆದೊಯ್ದು ಬಿಟ್ಟ.  ತಮ್ಮನನ್ನು ಕಳೆದುಕೊಂಡ ಅನಂತನಾಗ್ ರಾಜಕೀಯವೋ, ಚಿತ್ರರಂಗವೋ ಎಂಬ ಸಂದಿಗ್ಧಗಳಲಿ, ಸಿಕ್ಕ ಅವಕಾಶಗಳಿಗೆ ಸೀಮಿತರಾದರು.  ಅರುಂಧತಿ ಅವರೇನೋ ಅವರಿಗೆ ಗೊತ್ತಿರುವ ನಾಟಕ ಕ್ಷೇತ್ರ, ಶಂಕರನಾಗ್ ಜೊತೆಗಿನ ಬದುಕಿನಲ್ಲಿ ಸಂಪಾದಿಸಿದ ಆಂತರ್ಯ ಮುಖೇನ ರಂಗಶಂಕರದ ಕ್ರಿಯಾಶೀಲ ನಿರ್ಮಾಣ, ಮತ್ತು ಅತೀ ಉತ್ತಮವಾದದ್ದಾಗಿದ್ದರೆ ಮಾತ್ರ ಒಪ್ಪುವ ಚಲನಚಿತ್ರಗಳ ಪಾತ್ರಗಳು ಇವುಗಳ ಮೂಲಕ ಗಣನೀಯವಾದದ್ದನ್ನು  ಸಾಧಿಸುತ್ತಿದ್ದಾರೆ.  ನಮ್ಮ ಕನ್ನಡ ಚಿತ್ರರಂಗ, ದೂರದರ್ಶನ ಇವುಗಳೆಲ್ಲ ಶಂಕರನಂತವರಿಲ್ಲದ ಕ್ರಿಯಾಶೂನ್ಯ ಬದುಕನ್ನು ದಿನ ನಿತ್ಯ ಪ್ರತಿಫಲಿಸುತ್ತಿವೆ.  ಕನ್ನಡ ನಾಡು ಶಂಕರನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ.  ಶಂಕರನಂತವರು ಹೆಚ್ಚು ಹೆಚ್ಚಾಗಿ ಈ ನಾಡಿನಲ್ಲುದಯಿಸಲಿ.

ಈ ಮಹಾನ್ ಚೇತನಕ್ಕೆ ಹೃದಯಪೂರ್ವಕ ನಮನ.


Tag: Shankarnag

1 ಕಾಮೆಂಟ್‌:

mudgal venkatesh ಹೇಳಿದರು...

Shankar Naag was a versatile personality. His contribution to Kannada theater is significant. You have covered all the facts. Congrats, Sridharji,