ಸೋಮವಾರ, ಸೆಪ್ಟೆಂಬರ್ 2, 2013

ಗಂಗಾವತಿ ಪ್ರಾಣೇಶ್

ಗಂಗಾವತಿ ಪ್ರಾಣೇಶ್

ಕನ್ನಡದಲ್ಲಿ ಹಾಸ್ಯ ಎಂಬುದು ಕಾಲಾನುಕಾಲದಿಂದ ನಿರಂತರವಾಗಿ ಪ್ರವಹಿಸುತ್ತ ಸಾಗಿದೆ.  ಈ ನಾಡಿನಲ್ಲಿ ರಾ ನರಸಿಂಹಾಚಾರ್ಯರಿಂದ ಮೊದಲ್ಗೊಂಡು  ಬೀಚಿ, ಕೈಲಾಸಂನಾಡಿಗೇರ ಕೃಷ್ಣ ರಾವ್, ರಾಶಿ, ನಾ ಕಸ್ತೂರಿಸುನಂದಮ್ಮ, ಪಾ. ವೆಂ. ಆಚಾರ್ಯ, ಅ.ರಾ. ಮಿತ್ರ, ನರಸಿಂಹ ಮೂರ್ತಿ, ಭುವನೇಶ್ವರಿ ಹೆಗಡೆ  ಹೀಗೆ ಹಾಸ್ಯದ ಹೊನಲು ನಿರಂತರವಾಗಿ ಹರಿಸಿರುವ ಬರಹಗಾರರ ಸುದೀರ್ಘ ಪರಂಪರೆಯೇ ಇದೆ.    ಕಲಾರಂಗದಲ್ಲಿ ಕೂಡಾ ಹಿರಣ್ಣಯ್ಯ, ನರಸಿಂಹ ರಾಜು, ಬಾಲಣ್ಣ, ದ್ವಾರಕೀಶ್, ಜಗ್ಗೇಶ್, ಕೋಮಲ್  ಅವರಿಂದ ಮೊದಲ್ಗೊಂಡು ಕಾಲಾನುಕಾಲದಲ್ಲಿ ಹಲವಾರು ಕಲಾವಿದರು ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳಲ್ಲಿ ತಮ್ಮ ಹಾಸ್ಯ ಅಭಿವ್ಯಕ್ತಿಗೆ ಪ್ರಖ್ಯಾತರಾಗಿದ್ದಾರೆ.

ಕೊರವಂಜಿ, ಅಪರಂಜಿ ಪತ್ರಿಕೆಗಳ ಒಕ್ಕೂಟ ಪ್ರಾರಂಭಿಸಿದ ಹಾಸ್ಯಬ್ರಹ್ಮದ ನಗೆ ಕಾರ್ಯಕ್ರಮಗಳು ನೂರಾರು ನಗೆ ಭಾಷಣಕಾರರನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಹಾಸ್ಯ  ಕಾರ್ಯಕ್ರಮಗಳಿಗೆ ಜನಪ್ರಿಯತೆ ಇರುವುದನ್ನು ಮನಗಂಡ  ಸಾಂಸ್ಕೃತಿಕ ವೇದಿಕೆಗಳು, ದೂರದರ್ಶನ ಮತ್ತು ರೇಡಿಯೋ ಮಾಧ್ಯಮಗಳು   ಹಲವಾರು ಹಾಸ್ಯ ಮಾತುಗಾರರ ಉದಯಕ್ಕೆ ನಾಂದಿ ಹಾಡಿವೆ.  ಈ ಕಾರ್ಯಕ್ರಮಗಳು ಇಂದು ಕನ್ನಡ ನಾಡಲ್ಲದೆ ಕನ್ನಡಿಗರು ನೆಲೆಸಿರುವ ದೇಶ ವಿದೇಶಗಳಿಗೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.  ಈ ಹಿನ್ನೆಲೆಯಲ್ಲಿ ಕನ್ನಡ ನಾಡು ಕಳೆದ ಹಲವಾರು ವರ್ಷಗಳಲ್ಲಿ ಕಂಡುಕೊಂಡಿರುವ ಪ್ರಮುಖ ಪ್ರತಿಭೆಗಳಲ್ಲಿ ಗಂಗಾವತಿ ಪ್ರಾಣೇಶ್ ಪ್ರಮುಖರು.

ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು.  ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು.  ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷಕರಾಗಿದ್ದರು.   ತಾಯಿ ಸತ್ಯವತಿಬಾಯಿ ಅವರಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡ ಪ್ರಾಣೇಶ್ 1982ರಿಂದ ಸಾಹಿತ್ಯದ ರಸಾಸ್ವಾದದಲ್ಲಿ ಮೀಯತೊಡಗಿದರು.   

ಬೀchi ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ  ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994ರಿಂದ ಆರಂಭಿಸಿದರು.  ಹಾಸ್ಯಸಂಜೆಎಂಬ ವಿನೂತನವಾದ ಹಾಸ್ಯಕ್ಕೇ ಮೀಸಲಾದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶರಿಗೆ ಸಲ್ಲುತ್ತದೆ.  ಗುಲ್ಬರ್ಗಾ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮವು ಇಂದು ದೂರದರ್ಶನದ ವಿವಿಧ ವಾಹಿನಿಗಳಿಗೂ ಹಬ್ಬಿದೆ.  ವಿಶ್ವದ ವಿವಿದೆಡೆಗಳಲ್ಲಿರುವ ಸುಮಾರು  400  ಊರುಗಳಲ್ಲಿ ಪ್ರಾಣೇಶರು ನೀಡಿರುವ ಕಾರ್ಯಕ್ರಮಗಳ ಸಂಖ್ಯೆ ಹಲವು ಸಾವಿರಗಳನ್ನು ಮೀರಿವೆ. 

ಕೇವಲ ಭಾಷಣದಲ್ಲಷ್ಟೇ ಅಲ್ಲದೆ ಪ್ರಾಣೇಶರ ಪ್ರಾವಿಣ್ಯತೆ ತಬಲಾ, ಕೊಳಲು, ಸಂಗೀತಗಳಲ್ಲೂ ಚಾಚಿಕೊಂಡಿದೆ.  ಪ್ರಾಣೇಶರ ವೈಶಿಷ್ಟ್ಯವ್ಯೇ ಅರಳು ಹುರಿದಂತೆ ಉತ್ತರ ಕರ್ನಾಟಕದ ಅಚ್ಚ ಕನ್ನಡದಲ್ಲಿ ಹರಿಸುವ ಅವರ ವಾಗ್ಝರಿ.  ಅವರ ಈ ಮಾತುಗಾರಿಕೆ ವಿಶ್ವವ್ಯಾಪಿಯಾಗಿರುವ ಕನ್ನಡಿಗರೆಲ್ಲರಿಗೂ ಬಲುಪ್ರಿಯ.  ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಪೂರ್, ಥೈಲಾಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಮುಂತಾದ ನಗರಗಳಲ್ಲೆಲ್ಲಾ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.

ನಗಿಸುವವನ ನೋವುಗಳುಎಂಬ ಪುಸ್ತಕ ಬರೆದಿರುವ ಪ್ರಾಣೇಶ್ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ.  ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ.  ದೂರದರ್ಶನಕ್ಕಾಗಿನ ಹಲವಾರು ಹಾಸ್ಯ ಪ್ರವಚನಗಳು, ಮಾತಿನ ಮಂಟಪಗಳು, ಚಾವಡಿಗಳು, ಹೊಸ ಹೊಸ ರೀತಿಯಲ್ಲಿನ ಸಾಂಸ್ಕೃತಿಕ ವೇದಿಕೆಗಳು ಮುಂತಾದವೆಲ್ಲಾ ಪ್ರಾಣೇಶರ ಹಾಸ್ಯ ರಸಾಯನವನ್ನು ನಿಂತ ನೀರಾಗಿಸದೆ, ನಿರಂತರ ಲವಲವಿಕೆಯ ನಾದವನ್ನಾಗಿರಿಸಿರುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿವೆ.

ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿ ವಲಯಗಳಿಂದ ಪ್ರಾಣೇಶ್ ಹಲವಾರು ಗೌರವಗಳನ್ನು ಸ್ವೀಕರಿಸಿದ್ದಾರೆ.  ಗಂಗಾವತಿ ಪ್ರಾಣೇಶರ ಈ ಮಹತ್ಸಾದನೆ ನಿರಂತರ ಗಂಗೆಯಾಗಿ ಹರಿಯುತ್ತಿರಲಿ.  ಆವರಿಂದ ಹೆಚ್ಚು ಹೆಚ್ಚು ಅರ್ಥಪೂರ್ಣ, ಲವಲವಿಕೆಯ ಹಾಸ್ಯದ ಬುಗ್ಗೆ ನಿರಂತರ ಚಿಮ್ಮುತ್ತಿರಲಿ.  ಅವರ ಬದುಕು ಸುಗಮವಾಗಿರಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

Tag: Gangavati Pranesh

ಕಾಮೆಂಟ್‌ಗಳಿಲ್ಲ: