ಭಾನುವಾರ, ಸೆಪ್ಟೆಂಬರ್ 1, 2013

ಅಂದಿನ ಮಾಸ್ಟರ್ ಇಂದಿನ ಟೀನೇಜ್ ಕಿಶನ್

ಅಂದಿನ ಮಾಸ್ಟರ್ ಇಂದಿನ ಟೀನೇಜ್ ಕಿಶನ್

ಮಾಸ್ಟರ್ ಕಿಶನ್ ಎಂದರೆ ಕನ್ನಡ ನಾಡಿನಲ್ಲಿ ಅರಿಯದವರಿಲ್ಲ.  ಕೆಲವೊಂದು ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿದ ಈ ಹುಡುಗನ ಅಭಿನಯ ಚಾತುರ್ಯಕ್ಕೆ ಮನಸೋಲದವರಿಲ್ಲ.  ಮಾಸ್ಟರ್  ಕಿಶನ್ ಇಂದು ವಿಶ್ವದ ಅತಿ ಕಿರಿಯ ನಿರ್ದೇಶಕ ಎಂದು ಪ್ರಸಿದ್ಧಿ ಪಡೆದಿದ್ದಾರೆ.  ಇದುವರೆವಿಗೂ ಸುಮಾರು 25 ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.  ಈತನ ಅರಳು ಕಂಗಳಲ್ಲಿ ವಿಶಿಷ್ಟ ಮಿಂಚಿದೆ. ಮುಗ್ಧ ನಗುವಿದೆ.  ಇಂದು ಹದಿನೇಳನೆಯ ಹುಟ್ಟುಹಬ್ಬ ಆಚರಿಸುತ್ತಿರುವ  ಕಿಶನ್ ಶ್ರೀಕಾಂತ್‌ ಮಾತುಗಳು ಪುಟ್ಟ ಬಾಲಕನೊಬ್ಬನ ಮಾತುಗಳಂತಿಲ್ಲದೆ ಪ್ರಬುದ್ಧತೆಯಿಂದ ಕೂಡಿವೆ ಎಂಬುದು ಚಲನಚಿತ್ರ ಪಂಡಿತರ ಅಭಿಪ್ರಾಯ.   ಮಾಸ್ಟರ್ ಕಿಶನ್ ಜನಿಸಿದ್ದು ಜನವರಿ 6, 1996ರಂದು

ಪುಟ್ಟ ವಯಸ್ಸಿಗೇ ಮಾಡೆಲಿಂಗ್‌ಗೆ ಇಳಿದು ನಾಲ್ಕನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿ, ಹತ್ತನೇ ವಯಸ್ಸಿನಲ್ಲಿ ’ಕೇರಾಫ್ ಫುಟ್‌ಪಾತ್’ ಚಿತ್ರ ನಿರ್ದೇಶಿಸಿ ವಿಶ್ವದ ಅತೀ ಕಿರಿಯ ನಿರ್ದೇಶಕನೆಂಬ ಗಿನ್ನಿಸ್ ದಾಖಲೆ ಬರೆದ ಕೀರ್ತಿಗೆ ಭಾಜನರಾದವರು ಕಿಶನ್.  2006 ನವೆಂಬರ್ 26ರಲ್ಲಿ ತೆರೆಕಂಡ ಈ ಸಿನಿಮಾದಿಂದ ಕಿಶನ್ ದಾಖಲೆ ಬರೆದು ಆರು ವರ್ಷ ದಾಟಿದ್ದರೂ ಈ ದಾಖಲೆ ಹಾಗೆಯೇ ಇದೆ. ಎಚ್.ಆರ್. ಶ್ರೀಕಾಂತ್ ಹಾಗೂ ಶೈಲಜಾ ಶ್ರೀಕಾಂತ್‌ರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದ ಕಿಶನ್‌ಗೆ ಕ್ಯಾಮರಾಗಳ ಜ್ಞಾನ ಚೆನ್ನಾಗಿದೆ.   ಕಿಶನ್ ಎದುರಲ್ಲಿ ಕುಳಿತು ಒಬ್ಬ ನಿರ್ದೇಶಕನ ಜತೆ ಮಾತನಾಡಿದಂತೆ ಪ್ರಶ್ನಿಸಿದರೆ ಆತ ನಿರರ್ಗಳವಾಗಿ ನಿರ್ದೇಶನದ ತಂತ್ರಗಳನ್ನು ಚರ್ಚಿಸುತ್ತಾರೆ.  ಕಿಶನ್ ಹಾಲಿವುಡ್ ಚಿತ್ರಗಳಿಂದ ಪ್ರೇರಣೆ ಪಡೆದಿರುವುದರ ಜೊತೆ ಜೊತೆಗೆ  ’ದ ಪ್ರಾಕ್ಟಿಕಲ್ ಡೈರೆಕ್ಟರ್’ನಂತಹ  ಪ್ರಸಿದ್ಧ ಪುಸ್ತಕಗಳನ್ನು ಓದಿ ನಿರ್ದೇಶನದ ತಂತ್ರಗಳನ್ನು ಅರಿತುಕೊಂಡಿದ್ದಾರೆ. ಇದರ ಜೊತೆಗೆ ಕಿಶನ್ ಕಲ್ಪನೆಯ ಕೂಸಿಗೆ ನೀರೆರೆದವರು ಬಹಳ ಜನರಿದ್ದಾರೆ.  "ನಾನು ನಾಲ್ಕನೇ ವಯಸ್ಸಿನಿಂದಲೇ ಚಿತ್ರರಂಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ ಕ್ಯಾಮರಾಮನ್, ನಿರ್ದೇಶಕರಲ್ಲದೇ ಸ್ಪಾಟ್ ಬಾಯ್‌ನಿಂದ ಆರಂಭಿಸಿ ನಿರ್ಮಾಪಕರವರೆಗೆ ಎಲ್ಲರ ಬಳಿಯೂ ಪ್ರಶ್ನೆಗಳ ಸುರಿಮಳೆ ಸುರಿಸಿ, ನನ್ನ ಜ್ಞಾನದಾಹ ಇಂಗಿಸಿಕೊಂಡಿದ್ದೇನೆ. ಚಿತ್ರ ಹೇಗೆ ತೆಗೆಯುತ್ತಾರೆ ಎಂಬ ಆಸಕ್ತಿ ನನ್ನಲ್ಲಿ ಮೂಡಿತ್ತು. ಅದು ನನ್ನ ಇಷ್ಟದ ಕೆಲಸವು ಆಗಿತ್ತು. ಅದಕ್ಕೇ ಇಷ್ಟ ಪಟ್ಟು ಕಲಿತೆ" ಎಂದು ವಿಶ್ಲೇಷಿಸುತ್ತಾರೆ ಕಿಶನ್.

ಪುಟ್ಟ ವಯಸ್ಸಿನಲ್ಲೇ  ಈ ನಿರ್ದೇಶನ, ನಟನೆಯ ಜವಾಬ್ದಾರಿ ಹೊತ್ತು ಪಾಠಗಳನ್ನು ಮಿಸ್ ಮಾಡಿಕೊಂಡಾಗ ಅವರ ತಾಯಿ ಓದಿ ವಿವರಿಸಿದ್ದಾರೆ. ಕಿಶನ್  ಶೇ. 93  ಅಂಕಗಳೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾಗಿದ್ದಾರೆ.  ಇದು ಅವರು ಕಲಿಯುತ್ತಿದ್ದ ಬೆಂಗಳೂರು ಕಾರ್ಮೆಲ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾಧನೆಯಾಗಿದೆ.   ಈಗ  ಕಿಶನ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ  ವಿದ್ಯಾಭ್ಯಾಸ ಪೂರೈಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಅವರ ಪ್ರತಿಭೆಯನ್ನು ಗುರುತಿಸಿ ಉನ್ನತ ವ್ಯಾಸಂಗದಲ್ಲಿ ಕಿಶನ್‌ಗೆ ಸಹಕರಿಸಲು ಮುಂದೆಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ  ಕಿಶನ್‌ಗೆ ಮಲ್ಟಿ ಮೀಡಿಯಾ ಆಂಡ್ ಅನಿಮೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ನೀಡುವಂತೆ ಆದೇಶಿಸಿದೆ. ಈಗಾಗಲೇ ಕಂಪ್ಯೂಟರ್ ಗ್ರಾಫಿಕ್ಸ್ ಕಂಪನಿ ’ಮಲ್ಟಿ ಡೈಮೆನ್ಷನಲ್ ಟೆಕ್ನಾಲಜಿ ಲಿಮಿಟೆಡ್’ನ ಕಾರ್ಯನಿರ್ವಾಹಕರಾಗಿರುವ ಕಿಶನ್‌ಗೆ ಈ ಅಧಿಕೃತ ಪದವಿಯಿಂದಾಗಿ ಹೆಚ್ಚಿನ ನೆರವಾಗಲಿದೆ. ಕಿಶನ್ ತಮ್ಮ ಕಂಪನಿಯ ಮೂಲಕ ಭಾರತವನ್ನು 3ಡಿ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿಸುವ ಕನಸು ಹೊತ್ತಿದ್ದಾರೆ. "ನಾವು ನಮ್ಮದೇ ಆದ 3ಡಿ ತಂತ್ರಜ್ಞಾನವನ್ನು ಆರಂಭಿಸಲು ಪರಿಕರಗಳನ್ನು ಸಂಗ್ರಹಿಸುವ ಜೊತೆಗೆ ಹೊಸ ತಂತ್ರಜ್ಞಾನವನ್ನೂ ಕಲಿಯುತ್ತಿದ್ದೇವೆ. ಭಾರತದಲ್ಲಿಯೂ  3ಡಿ ಸಿನಿಮಾಗಳು ಬರಬೇಕು ಎನ್ನುವುದು ನಮ್ಮ ಬಯಕೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ" ಎನ್ನುತ್ತಾರೆ ಕಿಶನ್.

ಇಷ್ಟರಲ್ಲೇ ತೆರೆಕಾಣಲಿರುವ ತಮ್ಮ ತಂದೆ ಶ್ರೀಕಾಂತ್ ನಿರ್ದೇಶನದ ಕನ್ನಡ ಸಿನಿಮಾ ’ಟೀನೇಜ್’ನಲ್ಲಿ ಕಿಶನ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.     ಈ  'ಟೀನೇಜ್‌' ಚಿತ್ರಕ್ಕೆ ಸಹಾ  ಈಗಾಗಲೇ ಗಿನ್ನೆಸ್‌ ದಾಖಲೆಯ ಪ್ರಮಾಣ ಪತ್ರ ಸಂದಿದೆ. 'ಟೀನೇಜ್‌' ಚಿತ್ರದ 'ಮಾರೋ ಮಾರೋ ಬೌಂಡರಿ ಮಾರೋ...' ಎಂಬ ಹಾಡಿನಲ್ಲಿ ರಾಜ್ಯದ 22 ಶಾಲಾ-ಕಾಲೇಜುಗಳ 15,122 ಮಕ್ಕಳನ್ನು ಬಳಸಿಕೊಂಡು ಏಕಕಾಲಕ್ಕೆ ಅವರೆಲ್ಲರಿಂದ ಡ್ಯಾನ್ಸ್‌ ಮಾಡಿಸಲಾಗಿರುವುದು ಈ ಗಿನ್ನೆಸ್ ಸಾಧನೆಯಾಗಿದೆ. ಎಲ್ಲಾ ಕಡೆ ಏಕಕಾಲಕ್ಕೆ ಕ್ಯಾಮರಾ ಇಟ್ಟು ಆ್ಯಕ್ಷನ್‌ ಹೇಳುವ ವಿಷಯ ಗಿನ್ನೆಸ್‌ ಸಂಸ್ಥೆವರೆಗೂ ಹೋಗಿತ್ತು.  ಈ ಹಿಂದೆ  ಬ್ರಿಟನ್‌ನಲ್ಲಿ ಏಕಕಾಲಕ್ಕೆ ಏಳು ಸಾವಿರ ಮಕ್ಕಳನ್ನು ಬಳಸಿ ಹಾಡು ಚಿತ್ರೀಕರಿಸಲಾಗಿತ್ತು.

ಈಗಾಗಲೇ ಅಪಾರ ಸಾಧನೆ ಮಾಡಿದ್ದು ಹಲವಾರು ಸಾಧನೆಯ ಕನಸುಗಳನ್ನು ಹೊತ್ತಿರುವ ಅಂದಿನ ಮಾಸ್ಟರ್ ಇಂದಿನ ಟೀನೇಜ್ ಕಿಶನ್ ಅವರಿಗೆ ಎಲ್ಲಾ ಸಾಧನೆಗಳೂ ಕೈಗೂಡಲಿ ಎಂದು ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.

Tag: Master Kishan

ಕಾಮೆಂಟ್‌ಗಳಿಲ್ಲ: