ಭಾನುವಾರ, ಸೆಪ್ಟೆಂಬರ್ 1, 2013

ಬಾಬಾ ಅಮ್ಟೆ

ಬಾಬಾ ಅಮ್ಟೆ

ಈ ಅಜ್ಜನ ಮೋಹಕ ನಗೆ ಆಪ್ತವಾಗುತ್ತದೆ.  ಇಳಿ ವಯಸ್ಸಿನಲ್ಲಿ ಲ್ಯುಕೇಮಿಯಾದಿಂದ  ಹಲವು ಕಾಲ ಬಳಲಿದ ದಿನಗಳಲ್ಲಿ ಕೂಡ ಇಂತ ನಗೆ.  ಇಂತಹ ನಗೆ ತಾವೇ ಆನಂದ ಸೃಷ್ಟಿಸಿಕೊಂಡ ಮಹಾನ್ವಿತರಿಗೆ ಮಾತ್ರ ಸಾಧ್ಯ.  ಮುರಳೀಧರ ದೇವಿದಾಸ್ ಅಮ್ಟೆ ಅವರು ಅಂತಹ ಆನಂದವನವನ್ನು ಸ್ವಯಂ ನಿರ್ಮಿಸಿಕೊಂಡಿದ್ದರು.  ಆನಂದವನಎಂಬುದು ಅವರು ನಿರ್ಮಿಸಿಕೊಂಡ, ಎಲ್ಲರೊಂದಿಗೆ ಅವರು ಸ್ವಯಂ ನಿವಾಸಿಯಾಗಿದ್ದ, ಜೊತೆಗೆ ಇಂದೂ ಸಹಸ್ರಾರು ಮಂದಿಗೆ ಆಶ್ರಯವಾಗಿರುವ ಗ್ರಾಮದ ಹೆಸರು.  ಆನಂದವನವಲ್ಲದೆ ಸೋಮನಾಥಮತ್ತು ಅಶೋಕವನ’  ಆಶ್ರಮಗಳನ್ನೂ ನಿರ್ಮಿಸಿ ಕುಷ್ಟರೋಗಿಗಳಿಗೆ, ಹಿಂದುಳಿದವರಿಗೆ, ಬಡಬಗ್ಗರಿಗೆ ಸೇವೆ ಮಾಡುವುದರಲ್ಲಿ ತಮ್ಮ ಜೀವನಾನಂದವನ್ನು ಕಂಡುಕೊಂಡವರು ಬಾಬಾ ಅಮ್ಟೆ.

ಡಿಸೆಂಬರ್ 26, 1914ರಲ್ಲಿ ಹುಟ್ಟಿದರು ಬಾಬಾ ಅಮ್ಟೆ.  ಹುಟ್ಟಿದ್ದು ಶ್ರೀಮಂತ ಜಾಗೀರದಾರ ಕುಟುಂಬದಲ್ಲಿ.  ವಾರ್ದಾದಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಿದರು.  ಬಾಬಾ ಎಂದು ಚಿಕ್ಕ ವಯಸ್ಸಿನಿಂದಲೂ ಹುಡುಗ ಮುದ್ದಿಗಾಗಿ ಕರೆಯಲ್ಪಡುತ್ತಿದ್ದ.  ಶ್ರೀಮಂತ ಹುಡುಗನ ಎಲ್ಲ ರೀತಿಯ ಪ್ರಲೋಭನೆಗಳಲ್ಲಿ ಬದುಕುತ್ತಿದ್ದ ಹುಡುಗ ಒಮ್ಮೆ ಶಾಂತಿನಿಕೇತನಕ್ಕೆ ಭೇಟಿ ನೀಡಿದ್ದು, ರವೀಂದ್ರರ ಸಂಗೀತ ಮತ್ತು ಸಾಹಿತ್ಯ ಆತನಲ್ಲಿ ಮೂಲಭೂತ ಬದಲಾವಣೆಯನ್ನು ತಂದಿತು.  1942ರ ಬ್ರಿಟಿಷರ ವಿರುದ್ಧದ ಚಳುವಳಿಯಲ್ಲಿ ಪಾಲ್ಗೊಂಡ.  ಹಲವಾರು ಕಾಲ ಸೆರೆವಾಸ ಅನುಭವಿಸಿ, ನಂತರದಲ್ಲಿ ಗಾಂಧೀಜಿಯವರ ಬಳಿ ಸೇವಾಗ್ರಾಮದಲ್ಲಿ ನೆಲೆನಿಂತ.  ಮುಂದೆ ಜೀವನ ಪರ್ಯಂತ ಗಾಂಧೀಜಿಯವರಂತೆ ಬದುಕಿದದೇವರ ವಿಚಾರದಲ್ಲಿ ಬಿಟ್ಟು! ದೇವರಿಗೆ ತೊಂದರೆ ಕೊಡಬಾರದು ಎನಿಸಿರಬೇಕು.  ಆತನ ಸುಂದರ ಮಾತುಗಳು ಹೀಗಿವೆ:

ಆತ್ಮವನ್ನು ಅರಸಿದೆ, ಕೈಗೆ ಸಿಗಲಿಲ್ಲ,
ಪರಮಾತ್ಮನನ್ನು ಅರಸಿದೆ, ಆತ ಅವಿತುಕೊಂಡ,
ಒಡಹುಟ್ಟಿದವರ ಅರಸಿದೆ, ಈ ಮೂರೂ ನನ್ನ ಜೊತೆಯಾದವು

ಬಾಬಾ ಅಮ್ಟೆ ತನ್ನ ಯಾವುದೇ ಔನ್ನತ್ಯವನ್ನೂ ಲೆಖ್ಖಿಸದೆ ಭೂಮಿಯಲ್ಲಿ ಕೆಲಸ ಮಾಡುವ ಹರಿಜನರ ಜೊತೆ ತಾನೂ ನಿಂತು ಕೆಲಸ ಮಾಡಿದರು.  ಧರ್ಮಾಂಧರು  ಪಾಪದ ಫಲವೆಂದು ದೂರ ಮಾಡುತ್ತಿದ್ದ ಕುಷ್ಟರೋಗಿಗಳನ್ನು ಸನಿಹದಲಿ ನಿಂತು ಸೇವೆಗೈದರು.  ಪ್ರಕೃತಿ ಸಮತೋಲನ, ಪರಿಸರ, ವನ, ವನ್ಯಮೃಗ ಮತ್ತು ಅಸಹಾಯಿತರ ಸಂರಕ್ಷಣೆಗಾಗಿ ತಮ್ಮನ್ನು ಮುಂದೆ ಒಡ್ಡಿ ನಿಂತರು.      ಯಾವುದು ತಮಗೆ ಸರಿ ಎನಿಸಿತೋ ಅದಕ್ಕೆ ಪರವಾಗಿ ನಿಂತರು.  ಯಾವುದು ಅನ್ಯಾಯ ಎನಿಸಿತೋ  ಅವೆಲ್ಲಕ್ಕೂ ವಿರುದ್ಧವಾಗಿ ನಿಂತರು.  ತಮ್ಮ ಮನಸ್ಸಾಕ್ಷಿಯಂತೆ ಬದುಕಿದರು. 

ಯಾರು ತನ್ನ ಪರವಾಗಿರುತ್ತಾರೋ ಅವರ ಪರವಾಗಿ ಪರಮಾತ್ಮ ನಾನಾ ರೂಪಗಳಲ್ಲಿ ಜೊತೆ ಬಂದು ನಿಲ್ಲುತ್ತಾನೆ.  ಅವರ ಪತ್ನಿ ಸಾಧನಾ ನಿರಂತರ ಅವರ ಕೆಲಸದಲ್ಲಿ ಭಾಗಿಯಾದರು.  ವೃತ್ತಿಯಲ್ಲಿ ವೈದ್ಯರಾದ ಮಕ್ಕಳು-ಸೊಸೆಯರಾದ  ಪ್ರಕಾಶ್ ಮಂದಾಕಿನಿ ಮತ್ತು  ವಿಕಾಸ್-ಭಾರತಿ ಹಿರಿಯ ಅಮ್ಟೆ ದಂಪತಿಗಳು ಮಾಡಿದ  ಸೇವೆಯನ್ನು ಸಮಾನ ರೀತಿಯಲ್ಲಿ ಮುಂದುವರೆಸಿದ್ದಾರೆ.  ಬಾಬಾ ಅಮ್ಟೆ ಅವರ ಮೊಮ್ಮಕ್ಕಳು ದಿಗಂತ್ ಮತ್ತು ಅನಿಕೇತ್ ಸಹಾ ಈಗ ಆ ಕೆಲಸದಲ್ಲಿ ಜೊತೆಗೂಡಿದ್ದಾರೆ.   ಬಾಬಾ ಅಮ್ಟೆ ಅವರ ಮಗ ಮತ್ತು ಸೊಸೆ ಪ್ರಕಾಶ್ ಮಂದಾಕಿನಿ ಸಹಾ ಬಾಬಾ ಅಮ್ಟೆ ಅವರಂತೆ ಪ್ರತಿಷ್ಟಿತ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಪಡೆದಿರುವುದು ಬಾಬಾ ಅಮ್ಟೆ ಅವರ ಕುಟುಂಬದಲ್ಲಿ ಪ್ರವಹಿಸುತ್ತಿರುವ  ಸೇವಾ ಸಂಚಲನವನ್ನು ಪ್ರತಿಧ್ವನಿಸುತ್ತಿವೆ.

ಇಂದು ಆನಂದವನ ಮತ್ತು ಹೇಮಾಲ್ಕಾಸ ಗ್ರಾಮಗಳು ತಲಾ ಒಂದು ಆಸ್ಪತ್ರೆಯನ್ನು ಹೊಂದಿದೆ.  ಒಂದು ವಿಶ್ವವಿದ್ಯಾಲಯ ಅಲ್ಲಿದೆ.  ಅನಾಥಾಶ್ರಮವಿದೆ.  ಅಂಧರು, ಅಂಗವಿಕಲರು, ಕಿವುಡರು, ಮೂಖರಿಗಾಗಿ ವಿಶೇಷ ಶಾಲೆಗಳಿವೆ.  ಗಾಯಗೊಂಡ ವನ್ಯಪ್ರಾಣಿಗಳಿಗಾಗಿ ಶುಶ್ರೂಷಾ ಕೇಂದ್ರವಿದೆ. ಆನಂದವನದಲ್ಲೇ 5000 ನಿವಾಸಿಗಳಿದ್ದಾರೆ. 

ಬಾಬಾ ಅಮ್ಟೆ ಅವರಿಗೆ ಎಲ್ಲಾ ರೀತಿಯ ಗೌರವಗಳೂ ಮನೆಯ ಬಾಗಿಲನ್ನು ತಟ್ಟಿವೆ.  ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಶಾಂತಿನಿಕೇತನದ ದೇಶಿಕೋತ್ತಮ, ಹಲವು ಸಂಘ ಸಂಸ್ಥೆಗಳು, ಹಲವು ರಾಜ್ಯಗಳು, ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿಗಳೂಪದ್ಮಶ್ರೀ, ಪದ್ಮವಿಭೂಷಣರೇಮನ್ ಮ್ಯಾಗ್ಸೇಸೆ, ಪರ್ಯಾಯ ನೊಬೆಲ್ ಎಂದು ಖ್ಯಾತವಾಗಿರುವ ರೈಟ್ ಲೈವ್ಲಿ ಹುಡ್ ಮುಂತಾದ ಅನಂತ ಪ್ರಶಸ್ತಿಗಳನ್ನೂ ಸಮಸ್ಥಿತಿಯ ಈ ಆತ್ಮ ನಮ್ರವಾಗಿ ಸ್ವೀಕರಿಸಿದೆ. 

ತಮ್ಮ ಕೊನೆಯ ಒಂದೆರಡು ವರ್ಷಗಳಲ್ಲಿ ಹಾಸಿಗೆ ಹಿಡಿದ ಬಾಬಾ ಅಮ್ಟೆ  ಫೆಬ್ರವರಿ 9, 2008ರಲ್ಲಿ ಈ ಲೋಕವನ್ನು ಅಗಲಿದ್ದಾರೆ.  ಇನ್ನೂ ಗಾಳಿ ಕ್ಷೀಣವಾಗಿಲ್ಲ, ಮೇಲೇರಿಬಿಡುಎಂಬ ಅವರ ಆತ್ಮೀಯ ಧ್ವನಿ ಅವರನ್ನು ಕಂಡ ಈ ಪುಣ್ಯ ಭೂಮಿಯಲ್ಲಿ ನಿತ್ಯ ಪ್ರತಿಧ್ವನಿಸುತ್ತಿದ್ದೆ. 


ದಲೈಲಾಮಾ ಹೇಳುತ್ತಾರೆ ನಾನು ಬಾಬಾ ಅಮ್ಟೆ ಅವರ ಅಭಿಮಾನಿ.  ಅವರ ಆಶ್ರಮಗಳಲ್ಲಿ ಕಂಡ ದುರ್ಬಲರ, ಅಂಗವಿಕಲರ ಸೇವೆಯನ್ನು ಕಣ್ಣಾರೆ ಕಂಡು ಮೂಖನಾಗಿದ್ದೇನೆ”.  ಇನ್ನು ನಮ್ಮ ಮಾತುಗಳಿಗೆ ಎಡೆಯೆಲ್ಲಿ?

Tag: Baba Amte

ಕಾಮೆಂಟ್‌ಗಳಿಲ್ಲ: