ಸೋಮವಾರ, ಸೆಪ್ಟೆಂಬರ್ 2, 2013

ಅಮರ್ತ್ಯ ಸೇನ್

ಅಮರ್ತ್ಯ ಸೇನ್

ಅರ್ಥಶಾಸ್ತ್ರವನ್ನು ಒಂದಿಷ್ಟು ಓದಿದವರಿಗೆ ಅರ್ಥವಾಗದ ಒಂದು ವಿಚಾರವಿದೆ.  ಭಾರತಕ್ಕೆ ಮುಗಿಬಿದ್ದು ವಹಿವಾಟು ಮಾಡಲು ಸಾವಿರಾರು ವರ್ಷಗಳಿಂದ ದೇಶ ವಿದೇಶದಿಂದ ಇಲ್ಲಿಗೆ ಜನ ಮುಗಿಬಿದ್ದು  ಬರುತ್ತಿದ್ದರೂ, ಚಾಣಕ್ಯ ಅರ್ಥಶಾಸ್ತ್ರವನ್ನು ಬರೆದಿದ್ದರೂ, “ದುಡ್ಡೊಂದೇ ಪ್ರಧಾನ” ಎಂದು ಪ್ರತಿಪಾದಿಸಿದ (wealth of nations ಲೇಖಕ) ಆ್ಯಡಂ ಸ್ಮಿತ್ ಎಂಬಾತನನ್ನು ‘ಅರ್ಥಶಾಸ್ತ್ರದ ಪಿತ’ ಎಂದು ಕರೆದು ವಿಶ್ವದೆಲ್ಲೆಡೆಯಂತೆ, ಅದನ್ನು ಈ ದೇಶದ ಮಕ್ಕಳಿಗೆ ಕೂಡಾ  ಬಾಯಿ ಪಾಠ ಮಾಡಿಸುವ ಪರಿ ಇಂದೂ ನಡೆದಿದೆ.  ಅಮರ್ತ್ಯ ಸೆನ್ ಅವರಿಗೆ ನೊಬೆಲ್ ಪ್ರಶಸ್ತಿ ಕೊಡುವವರೆಗೆ ವಿಶ್ವಸಮುದಾಯ ಭಾರತಕ್ಕೆ ಆರ್ಥಿಕ ವಿಷಯಗಳಲ್ಲಿ ಮನ್ನಣೆ ನೀಡಲೇ ಇಲ್ಲ.

ರವೀಂದ್ರರ ಶಾಂತಿನಿಕೇತನದಲ್ಲಿ ಜನಿಸಿದ ಅಮರ್ತ್ಯ ಸೆನ್ ಅವರು ಅರ್ಥಶಾಸ್ತ್ರದಲ್ಲಿ ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿ  ನೊಬೆಲ್ ಪಾರಿತೋಷಕ ಪಡೆದವರು.  ಅಮರ್ತ್ಯ ಸೆನ್ ಅವರು ಜನಿಸಿದ್ದು ನವೆಂಬರ್ 3, 1933ರಲ್ಲಿ.

ಅಮರ್ತ್ಯ ಸೆನ್ ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ.  ಅವರ ಚಿಂತನೆಗಳೆಲ್ಲವೂ ಬಡತನದ ದೌರ್ಭಾಗ್ಯಗಳಿಂದ ಬೆಂದು ಬಳಲಿದ ಜನರ ಕುರಿತಾದ ಖಾಳಜಿಗಳಿಂದ ಕೂಡಿದ್ದಾಗಿರುವುದು ಮಹತ್ವದ ಅಂಶವಾಗಿದೆ.  ಈ ಹಿನ್ನೆಲೆಯಲ್ಲಿ ಅವರು ಪ್ರತಿಪಾದಿಸಿದ  ‘ಬರಗಾಲಕ್ಕೆ ಕುರಿತಾದ ಕಾರಣಗಳು’ ಮತ್ತು  ‘ವಿಶ್ವದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಚಿಂತನೆಗಳು’ ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿವೆ.  

ಅಮರ್ತ್ಯಸೆನ್ ಅವರ ವಂಶಜರು  ಇಂದಿನ ಬಾಂಗ್ಲಾದೇಶದ ಡಾಕ್ಕಾ ಪ್ರದೇಶದಿಂದ ಬಂದವರಾಗಿದ್ದು ಅವರ ಹಿರಿಯರು ರವೀಂದ್ರನಾಥ ಠಾಗೂರರಿಗೆ ಆಪ್ತರಾಗಿಯೂ ಶಾಂತಿನಿಕೇತನದ ಶೈಕ್ಷಣಿಕ ಕಾರ್ಯಕ್ಷೇತ್ರದಲ್ಲಿ ನಿರಂತರ ಸಕ್ರಿಯರಾಗಿಯೂ ಇದ್ದವರು.  ಹೀಗಾಗಿ ಅವರ ಜನನದಿಂದ ಮೊದಲ್ಗೊಂಡಂತೆ ಶಾಲಾ ಕಾಲೇಜುಗಳ ವಿದ್ಯಾಭ್ಯಾಸಗಳು ನಡೆದದ್ದೆಲ್ಲಾ ಶಾಂತಿನಿಕೇತನದಲ್ಲೇ.  ಮುಂದೆ ಅವರು ಕೆಂಬ್ರಿಡ್ಜ್, ಹಾರ್ವರ್ಡ್ ಅಂತಹ ವಿಶ್ವವಿದ್ಯಾಲಯಗಳಲ್ಲಿ ಓದು, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತಮ್ಮ ಬದುಕನ್ನು ನಡೆಸಿದವರು.

2010ರ ‘ನ್ಯೂ ಸ್ಟೇಟ್ಸ್ ಮನ್’ ಪತ್ರಿಕೆಯು ಅಮರ್ತ್ಯ ಸೆನ್ ಅವರನ್ನು ವಿಶ್ವದ ಐವತ್ತು ಮಹಾನ್ ಪ್ರಭಾವಿಗಳ ಪಟ್ಟಿಯಲ್ಲಿ ಹೆಸರಿಸಿದೆ.  ಇದೇ ಅಭಿಪ್ರಾಯವನ್ನು ಈ ಹಿಂದೆ ‘ಟೈಮ್ಸ್’ ಕೂಡಾ ವ್ಯಕ್ತಪಡಿಸಿತ್ತು.  ಅಮರ್ತ್ಯ ಸೆನ್ ಅವರು ವಿಶ್ವ ಸಮುದಾಯದ  ‘ಆರ್ಥಿಕ ಶಾಂತಿ ಮತ್ತು ಭದ್ರತಾ ಸಮಿತಿಯ’ ನಿರ್ವಾಹಕರಾಗಿದ್ದಾರೆ.  ಇದಲ್ಲದೆ ವಿಶ್ವದ ಆರ್ಥಿಕ ಚಿಂತನೆಗಳ ಬಹುಮುಖ ವೇದಿಕೆಗಳಲ್ಲಿ ಪ್ರಧಾನರೆನಿಸಿದ್ದಾರೆ.

ಅಮರ್ತ್ಯ ಸೆನ್ ಅವರು ಅರ್ಥಶಾಸ್ತ್ರ ಮತ್ತು ಮಾನವ ಕಲ್ಯಾಣದ ಕುರಿತಾಗಿ ಮೂಡಿಸಿರುವ ಮಹತ್ವದ ಚಿಂತನೆಗಳು ಮತ್ತು ಗ್ರಂಥಗಳೂ ವಿಶ್ವದಾದ್ಯಂತ ಬಹುತೇಕ ಭಾಷೆಗಳಲ್ಲಿ ಮೂಡಿಬಂದಿವೆ.

ಈ ಮಹಾನ್ ಸಾಧಕರ ಕೊಡುಗೆಗಳು ವಿಶ್ವದಲ್ಲಿ ಬಡತನಗಳು ಅಳಿಯಲು ನಿತ್ಯ ಪ್ರೇರಕವಾಗಿರಲಿ, ಅಮರ್ತ್ಯ ಸೆನ್ ಅವರ ಬದುಕು ಮತ್ತು ಸಾಧನೆಗಳು ಎಂದೆಂದೂ ಶೋಭಿಸುತ್ತಿರಲಿ, ಅಮರ್ಯ್ಿರ ಹೆಸರೇ ಹೇಳುವಂತೆ ಅವರ ಕೀರ್ತಿ ಅಮರವಾಗಿರಲಿ, ಅವರ ಬದುಕು ಸುಂದರವಾಗಿರಲಿ ಎಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.

Tag: Amartya Sen

ಕಾಮೆಂಟ್‌ಗಳಿಲ್ಲ: