ಸೋಮವಾರ, ಸೆಪ್ಟೆಂಬರ್ 2, 2013

ವಿ. ಶಾಂತಾರಾಂ

ವಿ. ಶಾಂತಾರಾಂ

ಭಾರತೀಯ ಚಿತ್ರರಂಗದ ಮಹಾನ್ ನಟ, ನಿರ್ಮಾಪಕ, ನಿರ್ದೇಶಕ ವಿ. ಶಾಂತಾರಾಂ ಅವರು ಜನಿಸಿದ ದಿನ ನವೆಂಬರ್ 18, 1901.  ಅವರ ಪೂರ್ಣ ಹೆಸರು ವಣಕುದ್ರೆ ಶಾಂತಾರಾಂ.  ಅವರು ಜನಿಸಿದ್ದು  ಕೊಲ್ಹಾಪುರದಲ್ಲಿ.  ವಣಕುದ್ರೆ ಎಂಬ ಸೂಚಕ ಅವರ ಮನೆತನೆದವರು ಕನ್ನಡಿಗರಾಗಿದ್ದರು, ಅವರಿಗೆ ಕನ್ನಡ ಮಾತನಾಡಲು ಬರುತ್ತಿತ್ತು ಎಂಬ ಅಭಿಪ್ರಾಯಗಳೂ ಇವೆ. 

ವಿ ಶಾಂತಾರಾಂ ಅವರ ಚಿತ್ರಗಳಾದ ನವರಂಗ್ಡಾ. ಕೊಟ್ನಿಸ್ ಕೀ ಅಮರ್ ಕಹಾನಿ, ಝಣಕ್ ಝಣಕ್ ಪ್ಹಾಯಲ್ ಭಾಜೆ, ಸ್ತ್ರೀ, ಗೀತ್ ಗಾಯೋ ಪತ್ತರೋನೆ, ದೋ ಆಂಖೆ ಭಾರಹ್ ಹಾತ್, ಪಿಂಜ್ರ, ಅಮರ್ ಭೂಪಾಲಿ ಮುಂತಾದ ಅಮೋಘ ಚಿತ್ರಗಳನ್ನು ಕಂಡವರು ಆ ಚಿತ್ರದಲ್ಲಿನ ಅಮೋಘ ತಂತ್ರಜ್ಞತೆ, ಸಂಗೀತ, ಸಾಹಿತ್ಯ ನಾಟ್ಯಗಳ ಸಂಮಿಶ್ರಗಳ ಆಮೋದದ ಭಾರತೀಯ ಗುಣ, ಅವರ ವರ್ಣ ಚಿತ್ರಗಳಲ್ಲಿನ ಶ್ರೇಷ್ಠ ಮಟ್ಟದ ಟೆಕ್ನಿಕಲರ್ ವರ್ಣ ಮಿಶ್ರಣದೃಶ್ಯ ಸಂಯೋಜನೆ, ಅವು ತಲುಪಿಸುತ್ತಿದ್ದ ಸಂದೇಶ, ಹೊರಾಂಗಣ ಚಿತ್ರೀಕರಣ, ಸಂಗೀತದಲ್ಲಿನ ಸುಶ್ರಾವ್ಯತೆ ಇವುಗಳನ್ನು ಮರೆಯುವುದು ಸಾಧ್ಯವಿಲ್ಲದ್ದು.  ಅವರ ಮರಾಠಿ ಚಿತ್ರವಾದ ಮನೂಸ್ ಎಂಬುದನ್ನು ವೀಕ್ಷಿಸಿದ ಚಾರ್ಲಿ ಚಾಪ್ಲಿನ್ ಅವರು ಅದರ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.  ವಿ ಶಾಂತಾರಾಂ ಅವರು ಸ್ವಯಂ ಚಿತ್ರಕಥೆ ರಚಿಸುತ್ತಿದ್ದರು.  ಅವರಿಗೆ ತೃಪ್ತಿಯಾಗುವವರೆಗೆ ರಿಹರ್ಸಲ್ ನಡೆದ ನಂತರವೇ ಹಾಡುಗಳ ಧ್ವನಿ ಮುದ್ರಣವಾಗುತ್ತಿತ್ತು.   ಚಿತ್ರನಿರ್ಮಾಣದ ಪ್ರತೀ ಹಂತದಲ್ಲೂ ಅವರು ಸಂಪೂರ್ಣ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.  ಅವರ ದೋ ಆಂಖೆ ಭಾರಾಹ್ ಹಾತ್’  ಚಿತ್ರ ನಮ್ಮ ಕನ್ನಡದಲ್ಲಿ ಯಾರಾದರೂ ಮೂಡಿಸುತ್ತಾರೇನೋ ಎಂಬ ನನ್ನ ಆಶಯ ಅದೇಕೋ ಫಲಿಸಲಿಲ್ಲ. 

ವಿ. ಶಾಂತಾರಾಂ ಅವರು ನಿರ್ಮಿಸಿದ ರಾಜ್ ಕಮಲ್ ಸ್ಟುಡಿಯೋ ಭಾರತದ ಅತ್ಯುತ್ತಮ ಚಲನಚಿತ್ರ ನಿರ್ಮಾಣ ಕ್ಷೇತ್ರವೆಂದು ಪ್ರಸಿದ್ಧಗೊಂಡಿತ್ತು.  ಶಾಂತಾರಾಂ ಅವರ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿದೆ.  ವಿ. ಶಾಂತಾರಾಂ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಅವರ ಜೀವನ ಚರಿತ್ರೆಯು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಪ್ರಕಟಗೊಂಡಿದೆ.  


ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅಮೋಘ ಸಾಧನೆ ಮಾಡಿ ಸುಮಾರು 50 ಉತ್ತಮ ಗುಣಮಟ್ಟದ ಚಿತ್ರಗಳಲ್ಲಿ ತೊಡಗಿದ್ದ  ವಿ. ಶಾಂತಾರಾಂ ಅವರು 1990ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಅವರು ನೀಡಿದ ಕೊಡುಗೆಗಳು ಅವರನ್ನು ಅಮರರನ್ನಾಗಿಸಿವೆ.

Tag: V. Shantaram

ಕಾಮೆಂಟ್‌ಗಳಿಲ್ಲ: