ಮಂಗಳವಾರ, ಸೆಪ್ಟೆಂಬರ್ 3, 2013

ಚಂದ ಕೊಚ್ಚಾರ್

ಚಂದ ಕೊಚ್ಚಾರ್ 

ನವೆಂಬರ್ 17, 1961ರ ವರ್ಷದಲ್ಲಿ ಜನಿಸಿದ ಚಂದ ಕೊಚ್ಚಾರ್ ಅವರು ಇಂದು ಭಾರತದಲ್ಲಿ ಪ್ರಸಿದ್ಧ ಹೆಸರು.  ಭಾರತದ ಪ್ರತಿಷ್ಠಿತ ಖಾಸಗಿ ವಲಯದ ‘ಐ ಸಿ ಐ ಸಿ ಐ’ ಬ್ಯಾಂಕ್ ಪಡೆದ ಜನಮಾನ್ಯತೆಗೆ ಚಂದಾ ಕೊಚ್ಚಾರ್ ಅವರ ಕೊಡುಗೆ ಕೂಡಾ ಮಹತ್ವದ್ದು.  ಬ್ಯಾಂಕಿಂಗ್ ತಜ್ಞ ಕೆ ವಿ  ಕಾಮತ್ ಅವರು ಸಮರ್ಥವಾಗಿ ನಡೆಸಿದ ಐ ಸಿ ಐ ಸಿ ಐ ಬ್ಯಾಂಕಿನ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಚಂದ ಕೊಚ್ಚಾರ್ ಅವರು, ಕಾಮತ್ ಅವರು 2009ರಲ್ಲಿ  ತೆರವು ಗೊಳಿಸಿದ  ಐ ಸಿ ಐ ಸಿ ಐ ಬ್ಯಾಂಕಿನ ಪ್ರಧಾನರ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಭಾರತದಲ್ಲಷ್ಟೇ ಅಲ್ಲದೆ ವಿಶ್ವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡಾ ಸಮರ್ಥರೆಂದು ಹೆಸರು ಗಳಿಸಿದ್ದಾರೆ.  ಅವರ ಒಬ್ಬ ಸಹೋದ್ಯೋಗಿ ಹೇಳುತ್ತಾರೆ, “ಚಂದಾ ಕೊಚ್ಚಾರ್ ಅವರಿಗೆ ಒಂದು ಸೈನ್ಯವನ್ನೇ ನಡೆಸುವಂತಹ ಸಾಮರ್ಥವಿದೆ” ಎಂದು.  ಫೈನಾನ್ಸಿಯಲ್ ಟೈಮ್ಸ್ ಅಂತಹ ಪ್ರಮುಖ ಆರ್ಥಿಕ ಮುಖಪತ್ರಿಕೆಗಳು ಚಂದ ಕೊಚ್ಚಾರ್ ಅವರನ್ನು ಪ್ರಭಾವಶಾಲಿ ವ್ಯಕ್ತಿಗಳ ಪ್ರಮುಖ ಪಟ್ಟಿಯಲ್ಲಿ ಹೆಸರಿಸಿದೆ.

ರಾಜಾಸ್ಥಾನದ ಜೋಧ್ಪುರದಲ್ಲಿ ಜನಿಸಿದ ಚಂದ ಕೊಚ್ಚಾರ್ ಅವರು ಪ್ರಾರಂಭಿಕ ಶಿಕ್ಷಣವನ್ನು ಜಯಪುರದಲ್ಲಿ ಪಡೆದು ಮುಂಬೈನಲ್ಲಿ 1982ರಲ್ಲಿ ಬಿ. ಎ ಪದವೀಧರರಾದರು.  ಮುಂದೆ ಐ.ಸಿ.ಡಬ್ಲ್ಯೂ.ಎ.ಐ ಮತ್ತು ಜಮ್ನಾಲಾಲ್ ಬಜಾಜ್ ಮ್ಯಾನೇಜ್ ಮೆಂಟ್ ಸ್ಟಡೀಸ್  ಸಂಸ್ಥೆಯಿಂದ ಸ್ನಾತಕೋತ್ತರ ಪದವಿಗಳನ್ನು ಪಡೆದರು.  1984ರಲ್ಲಿ ಅವರು ಐ.ಸಿ. ಐ. ಸಿ. ಐ. ಲಿಮಿಟೆಡ್ ಸಂಸ್ಥೆಯನ್ನು ಮ್ಯಾನೇಜ್ ಮೆಂಟ್ ಟ್ರೈನೀ ಆಗಿ ಸೇರಿದರು.  1993ರ ವೇಳೆಗೆ ಅವರು ಆ ಸಂಸ್ಥೆಯ ಉನ್ನತ ಆಡಳಿತ ವರ್ಗದವರಲ್ಲಿ ಓರ್ವರಾಗಿದ್ದರು.   2000 ವರ್ಷದ ವೇಳೆಗೆ ಐ ಸಿ ಐ ಸಿ ಐ ಸ್ಥಾಪಿಸಿದ ಗ್ರಾಹಕ ಬ್ಯಾಂಕಿಂಗ್ ಸೇವಾ ವಿಭಾಗದ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಮಹತ್ವಪೂರ್ಣ ಕಾರ್ಯ ಸಾಧಿಸಿದರು.  ಹೀಗೇ ಮುಂದುವರೆದ ಚಂದಾ ಕೊಚ್ಚಾರ್ ಅವರು 2009ರ ವರ್ಷದಲ್ಲಿ ಕೆ ವಿ ಕಾಮತ್ ಅವರು 1996ರಿಂದ ನಿರ್ವಹಿಸಿದ್ದ ಐ ಸಿ ಐ ಸಿ ಐ ಸಂಸ್ಥೆಯ ಪ್ರಧಾನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು.

ಚಂದ ಕೊಚ್ಚಾರ್ ಅವರು ಹಲವಾರು ಗೌರವಗಳನ್ನು ಸ್ವೀಕರಿಸಿದ್ದು ಅದರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಸಹಾ ಸೇರಿದೆ.

Tag: Chanda Kocchar

ಕಾಮೆಂಟ್‌ಗಳಿಲ್ಲ: