ಬುಧವಾರ, ಸೆಪ್ಟೆಂಬರ್ 18, 2013

ಶ್ರುತಿ

ಶ್ರುತಿ

ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ.  ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ.  ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ ಭಾಷೆಗಳ ಕೆಲವೊಂದು ಪ್ರಸಿದ್ಧ ಚಿತ್ರನಟಿಯರು, ಇಲ್ಲವೇ ಚಿತ್ರವೊಂದಕ್ಕೆ ಅಂತ ನಮ್ಮ ನಿರ್ಮಾಪಕರುಗಳು ನಮಸ್ಕರಿಸಿ ಕರೆತರುತ್ತಿದ್ದ ಕೆಲವೊಂದು ಪರಭಾಷಾ ಬೊಂಬೆಗಳು.  ಇಂತಹವರ ನಡುವೆ ಇಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತ ಕೆಲವೊಂದು ಕಲಾವಿದೆಯರು ನಿಜಕ್ಕೂ ಅಭಿನಂದಾರ್ಹರು.   ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ ಇಂತಹವರಲ್ಲಿ ಪ್ರಮುಖರು.  

ಸುಮಾರು 150 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.  ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಪರದೆಯ ಮೇಲೆ ಮೂಡಿದ್ದ ಮಗು ಇವರು.  ಕಲಾವಿದರ ಕುಟಂಬದಲ್ಲಿ ಬೆಳೆದು ಬಂದ ಹುಡುಗಿ ಪ್ರಿಯದರ್ಶಿನಿ  ಕೆಲವೊಂದು ಚಿತ್ರಗಳಲ್ಲಿ ಪುಟ್ಟ ಪುಟ್ಟ ಒಂದೆರಡು ಚಿತ್ರಗಳಲ್ಲಿ ಪಾತ್ರವಹಿಸಿದ ನಂತರ 1990ರ ವರ್ಷದಲ್ಲಿ ತೆರೆಕಂಡ ದ್ವಾರಕೀಶರು ನಿರ್ಮಿಸಿದ ಶ್ರುತಿಚಿತ್ರದಲ್ಲಿ ಹಾಡೊಂದ ಹಾಡುವೆನು ಹೃದಯ ರಾಗದಲ್ಲಿಎಂದು ಹಾಡುತ್ತಾ ಬಂದು ಆ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರಾದರು.   ಆ ಚಿತ್ರದ ನಾಯಕಿಯಾದಾಗ ಅವರಿಗೆ ಇನ್ನೂ ಹದಿನಾಲ್ಕು ಹದಿನೈದು ವರ್ಷ ವಯಸ್ಸು.  ಶ್ರುತಿ ಅವರು ಜನಿಸಿದ್ದು ಸಪ್ಟೆಂಬರ್ 18, 1975ರಲ್ಲಿ.

ಚಿತ್ರ ಮಾಡಬೇಕೆಂದರೆ ಸಾಮಾನ್ಯವಾಗಿ ಚಿತ್ರ ಕಥೆಗಾರರಿಗೆ ಹೊಳೆಯುವುದು ನಾಯಕ ನಟಿಯರನ್ನು ಅಳಿಸುವುದು.  ಲಕ್ಷಣವಾದ ಸಿನಿಮಾದ ಹೆಣ್ಣುಮಕ್ಕಳನ್ನು ಅಳಿಸಿ,   ಬದುಕಿನಲ್ಲಿ ಅದರಲ್ಲೂ ಸ್ತ್ರೀಯರ ಬದುಕಿನಲ್ಲಿ  ತುಂಬಿರುವ ದುಃಖದ ಕಥೆಗಳಿಗೆ ಒಂದಷ್ಟು  ಬಣ್ಣಕೊಟ್ಟು, ಜನರ ಭಾವನೆಗಳನ್ನು ಆಳದಲ್ಲಿ ತಟ್ಟಿ ಸ್ಪಂದಿಸುವುದೆಂದರೆ ಚಿತ್ರ ನಿರ್ದೇಶಕರಿಗೆ ಎಲ್ಲಿಲ್ಲದ ಹುಮ್ಮಸ್ಸು.  ಹೀಗೆ ನಟಿಯರನ್ನು ಅಳಿಸಿ ನಿರ್ಮಿತವಾದ ಚಿತ್ರಗಳ ನಾಯಕಿ ಸ್ಥಾನಕ್ಕೆ ಯಾವಾಗಲೂ ಪ್ರಥಮ ಆಯ್ಕೆ ಎಂದೆನಿಸಿದ್ದವರು ಶ್ರುತಿ.  ಅಂದಿನ ದಿನಗಳಲ್ಲಿ ಮೂಡಿ ಬಂದ ಚಿತ್ರಲೇಖ’, ‘ರಂಜಿತ’, ‘ಮುದ್ದಿನ ಮಾವ’, ‘ಹೆತ್ತ ಕರುಳು’, ‘ತಾಯಿಲ್ಲದ ತವರು’, ‘ಕರ್ಪೂರದ ಬೊಂಬೆ’, ‘ತವರಿನ ತೊಟ್ಟಿಲುಮುಂತಾದ ಚಿತ್ರಗಳ ಸಾಲಿನಲ್ಲಿ ಹಲವಾರು ವರ್ಷ ಚಿತ್ರಗಳ ಶ್ರುತಿಯವರ ಅಳುವಿನ ಸುರಿಮಳೆಯೇ ಆದವು.  ರವಿಚಂದ್ರನ್ ರಸಿಕತನದ ರಸಿಕ’, ಕಾಲೇಜು ಹುಡುಗಿಯಾಗಿ ಕಾದಂಬರಿ’, ನಾರಾಯಣ್ ಮತ್ತು ಜಗ್ಗೇಶ್ ಜೊತೆ ಕೆಲವೊಂದು ಹಾಸ್ಯ ಚಿತ್ರಗಳಲ್ಲಿ ನಟಿಸಿದ್ದು ಬಿಟ್ರೆ ಶ್ರುತಿ ಹೆಚ್ಚು ನಟಿಸಿದ್ದು ಇಂಥಹ ಪಾತ್ರಗಳಲ್ಲೇ.

ಒಂದೇ ರೀತಿಯ ಏಕತಾನತೆಗಳ ಪಾತ್ರಗಳು ವೃತ್ತಿಯಾಗಿ ದುಡಿಯುವ ಕಲಾವಿದರಿಗೆ ಒಂದು ರೀತಿಯ ಅನಿವಾರ್ಯ.  ಹಾಗೆಂದ ಮಾತ್ರಕ್ಕೆ ಅದು ಅವರಿಗಿರುವ ಸೀಮಿತ ಸಾಮರ್ಥ್ಯ ಎಂದೇನಲ್ಲ.  ಈ ಮಾತು ಶ್ರುತಿ ಅವರಿಗೆ ಹೆಚ್ಚು ಅನ್ವಯಿಸುತ್ತದೆ.   ಡಾ. ಅಶೋಕ್ ಪೈ ಅವರ ಕಥೆಯ ಆಧಾರಿತ ಸುರೇಶ ಹೆಬ್ಳೀಕರ್ ನಿರ್ದೇಶನದ ಆಘಾತ’; ತಮಿಳಿನಲ್ಲಿ ಶ್ರೇಷ್ಠ ನಿರ್ದೇಶಕ ಕೆ. ಬಾಲಚಂದರ್ ಅವರು ನಿರ್ದೇಶಿಸಿ ತಮಿಳು ಚಿತ್ರರಂಗದಲ್ಲಿ ಶ್ರುತಿ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ತಂದು ಕೊಟ್ಟ  ಕಲ್ಕಿ’ ;   ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಸುಂದರ ಚಿತ್ರಗಳಿಗೆ ಸೇರುವ  ವೀರಪ್ಪನಾಯ್ಕ’, ‘ಸೂರಪ್ಪ’;  ಕವಿತಾ ಲಂಕೇಶ್ ಅವರ  ಅವ್ವ’,  ರಾಷ್ಟ್ರ ಪ್ರಶಸ್ತಿ ವಿಜೇತ ಪುಟ್ಟಕ್ಕನ ಹೈವೇ’  ಮುಂತಾದವು ಶ್ರುತಿ ಅವರಿಗಿರುವ ಅಭಿನಯ ಶಕ್ತಿಯನ್ನು ಸಾರಿಹೇಳುತ್ತವೆ.

ರಾಮ, ಶ್ಯಾಮ, ಭಾಮಚಿತ್ರದಲ್ಲಿ ಕಮಲ ಹಾಸನ್ ಅವರೊಂದಿಗೆ ಸರಿ ಸಮಾನವಾಗಿ, ಸುಂದರವಾಗಿ, ಲೀಲಾಜಾಲವಾಗಿ  ನಟಿಸಿದ್ದು  ಶ್ರುತಿ ಅವರ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಸಾರಿ ಹೇಳುತ್ತವೆ. ತಾವೇ ನಿರ್ಮಿಸಿದ ಗಟ್ಟಿಮೇಳಚಿತ್ರದಲ್ಲಿ ಚಿತ್ರಕಥೆಗೂ ಅವರು ಸಾಕಷ್ಟು ಕೆಲಸ ಮಾಡಿದ್ದರು.

ಚಿಕ್ಕವಯಸ್ಸಿನಲ್ಲೇ ಶ್ರುತಿ ಅವರ ನಟಿಸಿರುವ 150 ಚಿತ್ರಗಳ ಸಂಖ್ಯೆ ಮಹತ್ವದ್ದು.  ಶ್ರುತಿ ಲಕ್ಷಣವಾಗಿದ್ದು ಹಲವಾರು ಪಾತ್ರಗಳನ್ನು ಆಗಾಗ ಮಾಡುತ್ತಿದ್ದಾರೆ.  ಇತ್ತೀಚಿನ  ವರ್ಷದಲ್ಲಿ   ಸಂದರ್ಶನದಲ್ಲಿ ಶ್ರುತಿ ಅವರು ಹೇಳಿದ ಮಾತಿವು.  ನಾನು ಯಶಸ್ಸು ಬಂದಾಗ ಹಿಗ್ಗಲಿಲ್ಲ, ಕಷ್ಟ ಬಂದಾಗ ಮೂಲೆ ಸೇರಲಿಲ್ಲ.  ಕಷ್ಟ ಎಂಬುದು ಪ್ರತಿಯೊಬ್ಬರ ಬದುಕಿನಲ್ಲೂ ಬರುತ್ತದೆ.  ಬದುಕಿನಲ್ಲಿ ನನ್ನ ಕರ್ತ್ಯವ್ಯಗಳೇನು ಉಂಟೋ ಅದರ ಬಗ್ಗೆ ಶ್ರದ್ಧಾಪೂರ್ವಕವಾಗಿ ಮುನ್ನಡೆಯುತ್ತೇನೆ”.  ಕಿರುತೆರೆಯಲ್ಲಿ ಕಳೆದ  ಸಾಲಿನ ‘ಬಿಗ್ ಬಾಸ್ 3’ ಸರಣಿಯಲ್ಲಿ  ಅವರು  ಸಾಧಿಸಿದ  ಗೆಲುವು ಸಹಾ  ಮಹತ್ವದ್ದೇ. 

ಬದುಕಿನಲ್ಲಿ ಮಹತ್ವದ ಸಾಧನೆಗಳನ್ನು ಮೂಡಿರುವ ಶ್ರುತಿ ಅವರ ಬದುಕು ಸುಮಧುರವಾದ ಹಾದಿಯಲ್ಲಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭ ಕೋರೋಣ.Tag: Shruti

ಕಾಮೆಂಟ್‌ಗಳಿಲ್ಲ: