ಮಂಗಳವಾರ, ಸೆಪ್ಟೆಂಬರ್ 3, 2013

ಎಸ್. ಸಿ. ನಂದೀಮಠ


ಎಸ್. ಸಿ. ನಂದೀಮಠ

ಎಸ್.ಸಿ.ನಂದೀಮಠರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಂದಿ ಗ್ರಾಮದಲ್ಲಿ ದಿನಾಂಕ 12 ಡಿಸೆಂಬರ್ 1900ರಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಶಿವಲಿಂಗಯ್ಯ ಚೆನ್ನಬಸವಯ್ಯ ನಂದೀಮಠ.

ಗೋಕಾಕ್ ಮತ್ತು ಬೆಳಗಾವಿಗಳಲ್ಲಿ ಆರಂಭದ ಶಿಕ್ಷಣವನ್ನು ಮುಗಿಸಿದ ನಂದೀಮಠ ಅವರು, 1924ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನೂ, 1926ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದುಕೊಂಡರು. ಕೊಲ್ಲಾಪುರದ ರಾಜರಾಮ ಕಾಲೇಜಿನಿಲ್ಲಿ ಅಧ್ಯಾಪಕರಾಗಿ ಸ್ವಲ್ಪಕಾಲ ಕೆಲಸ ಮಾಡಿದರು. ಅನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿದರು. ಅಲ್ಲಿ ಬಾರ್ನೆಟ್‌ ಅವರ ಮಾರ್ಗದರ್ಶನದಲ್ಲಿ ವೀರಶೈವ ಧರ್ಮ ಹಾಗೂ ತತ್ವಜ್ಞಾನಗಳ ಕೈಪಿಡಿ ಎಂಬ ವಿಷಯ ಕುರಿತ ಪ್ರೌಢ ಪ್ರಬಂಧವನ್ನು ಮಂಡಿಸಿ 1930ರಲ್ಲಿ ಪಿ.ಎಚ್.ಡಿ. ಪದವಿ ಪಡೆದರು. ತವರಿಗೆ ಮರಳಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ಶ್ರಮಿಸಿದ ಇವರು ಆ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿ 1933ರಿಂದ 1944ರವರೆಗೆ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ದರು. ಇದಲ್ಲದೆ ಬಾಗಲಕೋಟೆಯಲ್ಲಿ ಬಸವೇಶ್ವರ ಕಾಲೇಜನ್ನು ಸ್ಥಾಪಿಸಿ ಬೆಳೆಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಇವರು ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲುಗಳ ಸದಸ್ಯರಾಗಿಯೂ ಸ್ಮರಣೀಯ ಸೇವೆ ಸಲ್ಲಿಸಿದರು. ಮುಂಬಯಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದುಕೊಂಡು ಉತ್ತರ ಕರ್ನಾಟಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಲಯವನ್ನು ಪಡೆಯಲು ಶ್ರಮಿಸಿದರು.

ಪ್ರೊ. ನಂದೀಮಠರು ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಗುವಾಗ ಅದರ ರೂಪರೇಷೆಗಳನ್ನು ಮತ್ತು ಕಾಯಿದೆ, ಕಾನೂನುಗಳನ್ನು ರೂಪಿಸುವಲ್ಲಿ ಮಹತ್ವದ ಕೆಲಸ ಮಾಡಿದ ನಾಲ್ಕಾರು ಶಿಕ್ಷಣ ತಜ್ಞರ ಸಮಿತಿಯಲ್ಲಿ ಒಬ್ಬರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲ ಸಚಿವರಾಗಿಯೂ, ಕುಲಪತಿಗಳಾಗಿಯೂ ಇವರು ಸ್ವಲ್ಪಕಕಾಲ ಕಾರ್ಯ ನಿರ್ವಹಿಸಿದರು.

ಪ್ರೊ. ನಂದೀಮಠರು ಸಂಸ್ಕೃತವಷ್ಟೇ ಅಲ್ಲದೆ ಕನ್ನಡ, ಪಾಳಿ, ಪ್ರಾಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಪರಿಶ್ರಮಗಳನ್ನು ಪಡೆದಿದ್ದು ಹಲವಾರು ಅಮೂಲ್ಯ ಲೇಖನಗಳನ್ನೂ, ಗ್ರಂಥಗಳನ್ನೂ ಪ್ರಕಟಿಸಿದ್ದಾರೆ.  ಕರ್ನಾಟಕ ಧರ್ಮಗಳು’,  ‘ಕವಿಕರ್ಣ ರಸಾಯನ’, ‘ಕುವಲಯಾನಂದ’, ‘ಗಿರಿಜಾ ಕಲ್ಯಾಣ’, ‘ಶೂನ್ಯ ಸಂಪಾದನೆ’, ‘ಶೈವ ಸಿದ್ಧಾಂತ’, ‘HandBook of Veerashaivismಮುಂತಾದ ಹಲವಾರು ಮಹತ್ವಪೂರ್ಣ ಕೃತಿಗಳನ್ನು ಪ್ರೊ.  ಪ್ರೊ. ನಂದೀಮಠರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

1952ರಲ್ಲಿ ಬೇಲೂರಿನಲ್ಲಿ ಜರುಗಿದ 35ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ ಮುಂತಾದ ಹಲವಾರು ಗೌರವಗಳು ಪ್ರೊ. ನಂದೀಮಠರಿಗೆ ಸಂದಿವೆ.  ಪ್ರೊ. ನಂದೀಮಠರು ನವೆಂಬರ್ 21, 1975ರಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.  


ಮಾಹಿತಿ ಕೃಪೆ: ಕಣಜ

Tag: S. C. Nandimath

ಕಾಮೆಂಟ್‌ಗಳಿಲ್ಲ: