ಭಾನುವಾರ, ಸೆಪ್ಟೆಂಬರ್ 1, 2013

ಮನ್ಸೂರ್ ಆಲಿ ಖಾನ್ ಪಟೌಡಿ

ಮನ್ಸೂರ್ ಆಲಿ ಖಾನ್ ಪಟೌಡಿ

ಕ್ರಿಕೆಟ್ ನವಾಬರೆಂದೆನಿಸಿದ್ದ, ಅರವತ್ತರ ದಶಕದ ಶ್ರೇಷ್ಠ ಕ್ರಿಕೆಟ್ಟಿಗರಲ್ಲಿ ಒಬ್ಬರಾದ, ಭಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ, ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ ಅವರು ಜನಿಸಿದ ದಿನ ಜನವರಿ 5, 1941.  ರಾಜಮನೆತನಕ್ಕೆ ಸೇರಿದ ಪಟೌಡಿ ಅವರ ತಂದೆ ಇಫ್ತಿಕರ್ ಆಲಿ ಪಟೌಡಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳನ್ನು ಪ್ರತಿನಿಧಿಸಿದ ಏಕೈಕ ಕ್ರಿಕೆಟಿಗರೆಂದು ಪ್ರಖ್ಯಾತರಾದವರು.

ಅಂದಿನ ದಿನಗಳಲ್ಲಿ ಪಟೌಡಿ ಅವರು ಬ್ಯಾಟ್ ಮಾಡುತ್ತಿದ್ದ ರೀತಿ, ಕ್ಷೇತ್ರರಕ್ಷಣೆ ಮಾಡುತ್ತಿದ್ದ ರೀತಿ ಪಡ್ಡೆ ಹುಡುಗರ ನಡುವೆ ಏಕಮಾತ್ರ ಪ್ರೊಫೆಷನಲ್ ಸಂಚರಿಸುತ್ತಿದ್ದ ಚಿತ್ರಣ ನೀಡುತ್ತಿದ್ದವು.  ಅತೀ ಚಿಕ್ಕವಯಸ್ಸಿನಲ್ಲಿ ಕ್ರಿಕೆಟ್ ತಂಡದ ನಾಯಕರಾಗಿ, ವೈಯಕ್ತಿಕ ಪ್ರತಿಷ್ಠೆಗೆ ಮಾತ್ರ ಆಡುತ್ತಿದ್ದಾರೇನೋ ಎಂದು ಭಾವ ಹುಟ್ಟಿಸುತ್ತಿದ್ದ ಭಾರತೀಯ  ಆಟಗಾರರನ್ನೆಲ್ಲಾ ಒಂದು ತಂಡವಾಗಿಸಿ, ಕ್ರಿಕೆಟ್ ಎಂಬುದು ಒಂದು ಟೀಂ ಗೇಂ ಎಂದು ಭಾವನೆ ಮೂಡಿಸಿದ ಕೀರ್ತಿ ಪಟೌಡಿ ಅವರಿಗೆ ಸಲ್ಲುತ್ತದೆ.  ಭಾರತೀಯ ಸ್ಪಿನ್ ಬೌಲರುಗಳಾದ ಪ್ರಸನ್ನ, ಚಂದ್ರು, ಬೇಡಿ, ವೆಂಕಟ್ ಅವರುಗಳ ಶಕ್ತಿಯನ್ನು ಪಟೌಡಿ ಸುಂದರವಾಗಿ ಬಳಸಿದ್ದರು.  ನಾಡಿನಲ್ಲೆಲ್ಲಾ ಸಂಚರಿಸಿ ಗ್ರಾಮಗಳಲ್ಲಿ ಆಡುತ್ತಿದ್ದ ಪ್ರತಿಭೆಗಳನ್ನೂ ನಾಡಿನ ಮಟ್ಟದಲ್ಲಿ ಆಡಲು ತಂದ ಕೀರ್ತಿ ಕೂಡ ಪಟೌಡಿ ಅವರಿಗೆ ಸಲ್ಲುತ್ತದೆ.  ಅವರ ಬೆಳೆಸಿದ ಮಹಾನ್ ಪ್ರತಿಭೆಗಳಲ್ಲಿ ನಮ್ಮ ಜಿ. ಆರ್. ವಿಶ್ವನಾಥ್ ಕೂಡಾ ಒಬ್ಬರು.  ಅಂದಿನ ದಿನಗಳಲ್ಲಿ ಭಾರತ ಸೋತರೂ, ಗೆದ್ದರೂ ಅತ್ಯಂತ ಶ್ರೇಷ್ಠ ಕ್ರಿಕೆಟ್ ಕ್ಯಾಪ್ಟನ್ ಎನಿಸಿದ್ದವರು ಪಟೌಡಿ ಮಾತ್ರ. 1976ರ ಸರಣಿಯಲ್ಲಿ ಅತ್ಯಂತ ಸಾಮಾನ್ಯ ತಂಡದ ನಾಯಕರಾಗಿದ್ದ ಪಟೌಡಿ, ಅಂದು ಮಹಾನ್ ತಂಡವಾಗಿ ಭಾರತಕ್ಕೆ ಬಂದಿದ್ದ  ಕ್ಲೈವ್ಲಾಯ್ಡ್ ತಂಡಕ್ಕೆ ಸಮ ಸಮ ಪೈಪೋಟಿ ನೀಡುವಂತೆ ತಂಡವನ್ನು ನಡೆಸಿದ ರೀತಿ ಭಾರತೀಯ ಕ್ರಿಕೆಟ್ ಇತಿಹಾಸದ ಸ್ಮರಣೀಯ ಘಟನೆಯಾಗಿ ದಾಖಲಿಸುವಂತದ್ದಾಗಿದೆ.

ಇಂಗ್ಲೆಂಡಿನ ವಿಂಚೆಸ್ಟರ್  ಕಾಲೇಜಿನಲ್ಲಿ ಓದುವ ದಿನಗಳಲ್ಲಿ ಪಟೌಡಿ ಒಂದು ಸೀಸನ್ನಿನಲ್ಲಿ ಅತ್ಯಧಿಕ  1069 ರನ್ ಗಳಿಸಿ 40 ವರ್ಷಗಳ ಕಾಲ ಇಂಗ್ಲೆಂಡಿನ ಪ್ರಖ್ಯಾತ ಕ್ಯಾಪ್ಟನ್ ಡೌಗ್ಲಸ್ ಜಾರ್ಡನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು.   1960ರ ವರ್ಷದಲ್ಲಿ ಅಪಘಾತವೊಂದರಲ್ಲಿ ಅವರು ತಮ್ಮ ಬಲಗಣ್ಣನ್ನು ಪೂರ್ಣವಾಗಿ ಕಳೆದುಕೊಂಡರು.  ಅದಕ್ಕೆ ಸ್ವಲ್ಪ ದಿನ ಮುಂಚಿತವಾಗಿ ಯಾರ್ಕ್ ಷೈರ್ ಪರ ಆಡುತ್ತಿದ್ದ ಅವರು ಎರಡೂ ಇನ್ನಿಂಗ್ಸ್ಗಳಲ್ಲೂ ಭರ್ಜರಿ ಶತಕ ಬಾರಿಸಿದ್ದರು.  ಅದೂ ಯಾರ ಎದುರು!  ಆ ಕಾಲದ ಶ್ರೇಷ್ಠ ವೇಗದ ಬೌಲರ್ ಎನಿಸಿದ್ದ ಫ್ರೆಡ್ ಟ್ರೂಮನ್ ಬೌಲಿಂಗ್ ಎದುರಿಸಿ.  ಅಪಘಾತವಾದ ನಂತರದಲ್ಲಿ ಅವರಿಂದ ಹೂಜಿಯಲ್ಲಿನ ನೀರು ಕೂಡ ತೆಗಯಲು ಸಾಧವಿರಲಿಲ್ಲವಂತೆ.  ಆದರೆ ಮುಂದಿನ ಹದಿನಾರು ವರ್ಷಗಳಲ್ಲಿ ಆತ ಭಾರತೀಯ ಕ್ರಿಕೆಟ್ ಅನ್ನು ತೆಗೆದುಕೊಂಡು ಹೋದ ಎತ್ತರ ಅತ್ಯಂತ ಮಹತ್ವವಾದದ್ದು.  1967ರ ವರ್ಷದಲ್ಲಿ ತನ್ನ ಇಡೀ ತಂಡ ಕುಸಿಯುತ್ತಿದ್ದ ಸಮಯದಲ್ಲಿ ಲೀಡ್ಸ್ ಪಂದ್ಯದಲ್ಲಿ ಅವರು 64  ಮತ್ತು 148 ರನ್ ಗಳಿಸಿದಾಗ ಬ್ರಿಟಿಶ್ ಸಾಮ್ರಜ್ಯ  ಆತನನ್ನು 'ಹೆಡಿಂಗ್ಲೆ ನವಾಬ' ಎಂದು ಪ್ರಶಂಸಿಸಿತು.  ಪಟೌಡಿ ನಾಯಕರಾದ ಮೇಲೆ ಭಾರತ ತಂಡವನ್ನು ಪ್ರಾಂತೀಯವಾಗಿ, ಜಾತಿ, ಧರ್ಮಗಳ ಆಧಾರದ ಮೇಲೆ ಆಯುವ ಪದ್ಧತಿಗೆ ಮಂಗಳ ಬಿದ್ದು ಉತ್ತಮ ಆಟಗಾರರು ದೇಶದೆಲ್ಲೆಡೆಯಿಂದ ಸ್ಥಾನ ಪಡೆಯುವಂತಾಯಿತು.  ಭಾರತೀಯ ಕ್ರಿಕೆಟ್ ಆಟದಲ್ಲಿ ಕೆಲವೊಂದು ಆಟಗಾರರು ಸಾಧನೆ ಮಾಡಿ ಪೊಗರು ತೋರಿದ ಸಾಕಷ್ಟು ಉದಾಹರಣೆಗಳಿವೆ.  ಆದರೆ ನಿಜವಾಗಿಯೂ ರಾಜನಾಗಿದ್ದ, ವಿದೇಶಗಳಲ್ಲಿ ಓದಿ ಬೆಳೆದಿದ್ದ ಪಟೌಡಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಎಲ್ಲ ರೀತಿಯ ಆಟಗಾರರನ್ನು ಬೆಳೆಸಿ, ಪ್ರೋತ್ಸಾಹಿಸಿ, ಎಲ್ಲರೊಡನೆ ಒಬ್ಬನಂತೆ ಆಡಿ ನಲಿದದ್ದು ಆತನ ಶ್ರೇಷ್ಠತೆ ಎಂತದ್ದು ಎಂಬುದನ್ನು ತೋರುತ್ತದೆ.     ಆತ ನಾಯಕನಾಗಿ ತೋರುತ್ತಿದ್ದ ಧೈರ್ಯ ಅಪ್ರತಿಮವೆನಿಸಿದ್ದು ಅದಕ್ಕಾಗಿಯೇ ಅವರು ಟೈಗರ್ ಪಟೌಡಿಎಂದೇ ಪ್ರಖ್ಯಾತರು.

ಅವರು ಅಷ್ಟೊಂದು ವರ್ಷ ಕ್ರಿಕೆಟ್ ಆವರಣದಲ್ಲಿದ್ದರೂ ಆಡಿದ್ದು 46 ಟೆಸ್ಟ್ ಪಂದ್ಯ ಮಾತ್ರ. ಅದರಲ್ಲಿ ಒಂದು ದ್ವಿಶತಕ ಸೇರಿದಂತೆ ಆರು ಬಾರಿ ಶತಕ ಹದಿನಾರು ಬಾರಿ ಅರ್ಧಶತಕಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ್ದರು.

ಪಟೌಡಿ ಅವರು ವೀಕ್ಷಕ ವಿವರಣೆ ನೀಡುತ್ತಿದ್ದುದು, ಅಧಿಕಾರಯುತವಾಗಿ ಕ್ರಿಕೆಟ್ ಬಗ್ಗೆ ಸುಂದರವಾಗಿ ಮಾತನಾಡುತ್ತಿದ್ದುದನ್ನು ಕೂಡಾ ನಾವು ಮರೆಯುವಂತಿಲ್ಲ.  ಅವರು ಅತ್ಯಂತ ಸುರದ್ರೂಪಿ.  ಅಂದಿನ ಪ್ರಸಿದ್ಧ ತಾರೆ ಶರ್ಮಿಳಾ ಠಾಕೂರ್ ಅವರ ಪತ್ನಿ.  ಅಂದಿನ ದಿನದಲ್ಲಿ ಪ್ರಖ್ಯಾತ ತಾರೆ ಜಯಾ ಬಚ್ಚನ್ ಅವರು ಅತ್ಯಂತ ಸುರದ್ರೂಪಿ ವ್ಯಕ್ತಿ ಯಾರು?’ ಎಂಬ ಪ್ರಶ್ನೆಗೆ ಪಟೌಡಿ ಅವರ ಹೆಸರನ್ನು ಒಂದು ಸಂದರ್ಶನದಲ್ಲಿ ಹೇಳಿದ್ದು ಇನ್ನೂ ನೆನಪಿದೆ.

ಕಪಿಲ್ ದೇವ್ ಅವರ ಬರಹವನ್ನು ಓದುತ್ತಿದ್ದೆ.  ಕಪಿಲ್ ಹೇಳುತ್ತಾರೆ, "ಪಟೌಡಿ ಅಂತಹ ಶ್ರೇಷ್ಠ ಕ್ರಿಕೆಟ್ಟಿಗ ಭಾರತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಿದ್ದರೆ ಎಷ್ಟು ಚೆನ್ನಿತ್ತು ಅಂತ.  ಅಧಿಕಾರ ಎನ್ನುವುದು ಯೋಗ್ಯರಿಗೆ ದಕ್ಕುವುದು ಅಪರೂಪ.  ಆದರೆ ಪಟೌಡಿ ಅವರಿಗೆ ತಂಡದ ನಾಯಕತ್ವ ದೊರೆತಾಗ ಆಟದಲ್ಲಿನ ಸೋಲು ಗೆಲುವುಗಳ ಆಚೆಯಲ್ಲಿ ಅವರು ಮೆರೆದ ಶ್ರೇಷ್ಠತೆ ಉಳಿಸಿಕೊಂಡ ಉತ್ತಮ ಹೆಸರು ವಿಶ್ವದಲ್ಲಿ ಅಪರೂಪವಾದದ್ದು".

ನಮ್ಮ ಕ್ರಿಕೆಟ್ ತಿಳುವಳಿಕೆಯ ಪ್ರಾರಂಭದ ದಿನಗಳಲ್ಲಿ ಎಲ್ಲ ರೀತಿಯಲ್ಲಿ ಸರ್ವ ಮಾನ್ಯರಾಗಿದ್ದ, ಕ್ರಿಕೆಟ್ಟಿನ ನವಾಬರೆನಿಸಿದ್ದ, ನಮ್ಮ ಹಿರಿಯರು ದಂತಕತೆಯಂತೆ ವರ್ಣಿಸುತ್ತಿದ್ದ ನವಾಬ್ ಪಟೌಡಿ ಅವರು  ಸೆಪ್ಟೆಂಬರ್ 22, 2011ರಂದು ಈ ಲೋಕವನ್ನಗಲಿದರು.  ಕ್ರಿಕೆಟ್ ಪ್ರಿಯದೇಶವಾದ ಭಾರತದಲ್ಲಿ ಎಲ್ಲ ಸೋಲು ಗೆಲುವುಗಳಾಚೆಗೆ ಪಟೌಡಿ ಅವರ ಪ್ರಖ್ಯಾತಿ ಮಾತ್ರ ಚಿರಶಾಶ್ವತ.


Tag: Mansur Ali Khan Pataudi

ಕಾಮೆಂಟ್‌ಗಳಿಲ್ಲ: