ಮಂಗಳವಾರ, ಸೆಪ್ಟೆಂಬರ್ 3, 2013

ಅಶುತೋಷ್ ಗೋವಾರಿಕರ್

ಅಶುತೋಷ್ ಗೋವಾರಿಕರ್

ಇಂದಿನ ಚಿತ್ರರಂಗದ ಕೆಲವೇ ಪ್ರಬುದ್ಧ ನಿರ್ದೇಶಕರ ಸಾಲಿನಲ್ಲಿ ಮಿಂಚುವವರಲ್ಲಿ ನಿರ್ದೇಶಕ, ನಿರ್ಮಾಪಕ ಅಶುತೋಷ್ ಗೋವಾರಿಕರ್ ಪ್ರಮುಖ ಹೆಸರು.  ಅವರು ಫೆಬ್ರುವರಿ 15, 1964ರಂದು ಮುಂಬೈನಲ್ಲಿ ಜನಿಸಿದರು.  ಓದಿನಲ್ಲಿ ಅವರು ರಸಾಯನ ಶಾಸ್ತ್ರದ ಪದವಿ ಪಡೆದರು.  ಮೊದಲಿನಿಂದಲೂ ಅಶುತೋಷ್ ಅವರಿಗೆ ನಾಟಕ, ಜನಪದ ನೃತ್ಯ, ಸಂಗೀತಗಳಲ್ಲಿ ಆಸಕ್ತಿ.  ಹೀಗಾಗಿ ಅವರು ಮೊದಲು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಹಲವು ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿದ ಅಶುತೋಷ್ ಗೋವಾರಿಕರ್ 1993ರಲ್ಲಿ ಚಲನಚಿತ್ರ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.  ಅವರ ‘ಲಗಾನ್’ ಚಿತ್ರ ಪ್ರೇಕ್ಷಕರಿಗೆ, ವಿಮರ್ಶಕರಿಗೆ ಇಷ್ಟವಾಗಿದ್ದು  ಮಾತ್ರವಲ್ಲದೆ ಮೊಟ್ಟಮೊದಲ ಬಾರಿಗೆ ಭಾರತದ ಸಿನಿಮಾ ರಂಗವನ್ನು ಆಸ್ಕರ್ ಪ್ರಶಸ್ತಿಯ ಹೆಬ್ಬಾಗಿಲವರೆಗೂ  ತಂದಿತ್ತು.  ‘ಲಗಾನ್’, ‘ಸ್ವದೇಸ್’, ‘ಜೋಧಾ ಅಕ್ಬರ್’  ಸೇರಿದಂತೆ ಇಲ್ಲಿಯವರೆಗೆ ಒಟ್ಟು ಏಳು ಚಿತ್ರಗಳನ್ನು ನಿರ್ದೇಶಿಸಿ, ನಾಲ್ಕು ಚಿತ್ರಗಳನ್ನು ಅವರು  ನಿರ್ಮಿಸಿದ್ದಾರೆ.  ಏಳು ಅಂತರರಾಷ್ಟ್ರೀಯ ಚಲನಚಿತ್ರ ಪಶಸ್ತಿಗಳು, ಐದು ಫಿಲ್ಮ್ ಫೇರ್ ಪ್ರಶಸ್ತಿಗಳು ಹಾಗೂ ಒಂದು ರಾಷ್ಟ್ರೀಯ ಚಲನಚಿತ್ರಯೂ ಪಶಸ್ತಿ ಸೇರಿದಂತೆ ಹಲವಾರು ಮಹತ್ವದ ಗೌರವಗಳು ಅಶುತೋಷ್ ಗೋವಾರಿಕರ್ ಅವರಿಗೆ ಸಂದಿವೆ.

ಸಂಸ್ಕೃತಿ, ಸಂಗೀತ, ಕಲಾತ್ಮಕ ಮತ್ತು ಚಾರಿತ್ರಿಕ ಗುಣಗಳನ್ನು ಸಿನಿಮಾದಲ್ಲಿ ಸಂಯೋಜಿಸುವುದರ ಮೂಲಕ ಸಾಂಸ್ಕೃತಿಕ ಲೋಕಕ್ಕೊಂದು ಹೊಸ ಆಯಾಮವನ್ನು ಹಾಕಿಕೊಟ್ಟು ವಿಶಿಷ್ಟತೆಯನ್ನು ಸಾಧಿಸಿರುವ ಅಶುತೋಷ್ ಗೋವಾರಿಕರ್ ಅವರು ಕಳೆದ ದಶಕದಲ್ಲಿ  ಸಿನಿಮಾ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸಿದವರಾಗಿದ್ದಾರೆ.  ಬುದ್ಧನ ಕುರಿತು ಚಿತ್ರರಚಿಸುವ ಆಶಯದಲ್ಲಿರುವ ಅಶುತೋಷ್ ಆ ಕುರಿತು ಹೆಚ್ಚಿನ ಕಾರ್ಯಪ್ರವೃತ್ತರಾಗಿದ್ದಾರೆಂಬ ಸುದ್ಧಿ ಇದೆ.

ಅಶುತೋಷ್ ಗೋವಾರಿಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಅವರಿಂದ ಉತ್ತಮ ಚಿತ್ರಗಳು ಮೂಡುತ್ತಿರಲಿ ಎಂದು ಆಶಿಸೋಣ.

Tag: Ashutosh Gowarikar

ಕಾಮೆಂಟ್‌ಗಳಿಲ್ಲ: