ಮಂಗಳವಾರ, ಸೆಪ್ಟೆಂಬರ್ 3, 2013

ಚಾರ್ಲ್ಸ್ ಡಾರ್ವಿನ್

ಚಾರ್ಲ್ಸ್ ಡಾರ್ವಿನ್

ಆಧುನಿಕ ಜೀವವಿಜ್ಞಾನಕ್ಕೆ ಬುನಾದಿ ಒದಗಿಸಿದ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್.  ಅವರು 1809ರ ವರ್ಷದ ಫೆಬ್ರುವರಿ 12ರಂದು ಜನಿಸಿದರು.  ತಂದೆಯ ವೈದ್ಯವೃತ್ತಿಯಲ್ಲಿ ಸಹಾಯ ಮಾಡುತ್ತಿದ್ದ ಡಾರ್ವಿನ್  ಎಡಿನ್ಬಂರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನೇನೋ ಪ್ರಾರಂಭಿಸಿದರು. ಏಕೋ ಮನಸ್ಸು ಕೂಡಲಿಲ್ಲ. ಅವರ ಮನಸ್ಸು ಜೀವಶಾಸ್ತ್ರಗಳ ಅಧ್ಯಯನದ ಹಿಂದೆ ಓಡತೊಡಗಿತ್ತು.  ಮಗ ವೈದ್ಯಕೀಯ ಅಭ್ಯಾಸವನ್ನು ನಿರ್ಲಕ್ಷಿಸುತ್ತಿರುವುದು  ತಂದೆಗೆ ಬೇಸರ ಉಂಟುಮಾಡಿತು. ಹಾಗಾಗಿ ಇವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ರಿಸ್ತ ಕಾಲೇಜಿಗೆ ಬಿ.ಎ. ಪದವಿಗಾಗಿ ಸೇರಿಸಿದರು. ಅಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಜಾನ್ ಸ್ಟೀವನ್ಸ್ ಹೆನ್ಸ್ಲೊ ಅವರ ಪಟ್ಟ ಶಿಷ್ಯರಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದಾಗ  ವಿಲಿಯಂ ಪೇಲೆ, ಜಾನ್ ಹೆರ್ಶೆಲ್, ಅಲೆಕ್ಸಾಂಡರ್ ವಾನ್ ಹುಮ್ಬೊಲ್ಟ್ ಮತ್ತಿತರರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು. ಆಗಿನ ಪ್ರಖ್ಯಾತ ಭೂರಚನಶಾಸ್ತ್ರಜ್ಞರಾಗಿದ್ದ ಆಡಮ್ ಸೆಡ್ಜ್‌ವಿಕ್ ಅವರ ಮಾರ್ಗದರ್ಶನದಲ್ಲಿ  ಸಂಶೋಧನಾ ಕಾರ್ಯ ಕೈಗೊಂಡರು. ಈ ಹೊತ್ತಿಗೆ ಹೆನ್ಸ್ಲೊ ಅವರು ಡಾರ್ವಿನ್ ಅವರನ್ನು ದಕ್ಷಿಣ ಅಮೇರಿಕ ಖಂಡಕ್ಕೆ ಅಧ್ಯಯನ ನಡೆಸ ಹೊರಟಿದ್ದ ಎಚ್ ಎಮ್ ಎಸ್ ಬೀಗಲ್’  ಹಡಗಿನಲ್ಲಿನ    ಜೀವಶಾಸ್ತ್ರಜ್ಞ ಪಯಣಿಗನನ್ನಾಗಿ ಶಿಫಾರಸ್ಸು ಮಾಡಿದರು.

ಬೀಗಲ್ ಹಡಗು  ಸುಮಾರು 5 ವರ್ಷಗಳವರೆಗೆ ತನ್ನ ಪರ್ಯಟನೆಯನ್ನು ನಡೆಸಿತು.   ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವೈವಿಧ್ಯಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು. ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳ ಪ್ರಾಣಿಗಳ ಬಗೆಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು.  ಪೆಟಗೋನಿಯ ಪ್ರದೇಶದಲ್ಲಿದ್ದಾಗ ಅವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು. ಮುಂದೆ  ಗ್ಯಾಲಾಪಗೊಸ್ ದ್ವೀಪಗಳಲ್ಲಿ   ವೈವಿಧ್ಯಮಯ ಜೀವಿಗಳನ್ನು ಕಂಡರು. ಇಂಥಹ ಜೀವಿಗಳು ಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ತರಹದ ಜೀವಿಗಳೂ ಒಂದೇ ಕಾಲಮಾನದಲ್ಲಿ  ಸೃಷ್ಟಿಯಾದವು  ಎಂಬ ಸಿದ್ಧಾಂತದ ಬಗ್ಗೆ ಅವರಲ್ಲಿ  ತೀವ್ರ ಸಂಶಯಗಳನ್ನು ಹುಟ್ಟುಹಾಕಿದವು.  ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳುಫಿಂಚ್ ಮತ್ತು ವ್ರೆನ್ ಕುಟುಂಬದ 12 ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು.

ಮುಂದೆ ಡಾರ್ವಿನ್ ಅವರು ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರೊಡನೆ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳುವ ಸಾಧ್ಯತೆಗಳಿವೆ ಎಂದು ಚಿಂತಿಸತೊಡಗಿದ್ದರು. ಇದರ ಜೊತೆಗೆ ಇವರು ತಮ್ಮ ಸುದೀರ್ಘ ಪ್ರವಾಸದ ಕುರಿತಾಗಿ  ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು. ಅನೇಕ ಸಂಪುಟಗಳಲ್ಲಿ ಪ್ರಕಟವಾದ ಜುವಾಲಜಿ ಆಫ್ ದ ವಾಯೇಜ್ ಆಫ್ ಎಚ್.ಎಮ್.ಎಸ್. ಬೀಗಲ್ ಮೇಲೆ ತೀವ್ರವಾಗಿ ಕೆಲಸ ಮಾಡಿದರು. 

ಮುಂದೆ ಭೂರಚನಶಾಸ್ತ್ರ ಸಂಘದ ಕಾರ್ಯದರ್ಶಿ ಸ್ಥಾನವನ್ನು ಪಡೆದ ಡಾರ್ವಿನ್ ತಮ್ಮ ಬರವಣಿಗೆಗಳನ್ನು ಮುಂದುವರೆಸುತ್ತಾ  ತಮ್ಮ ವಿಕಾಸವಾದದ ಬಗ್ಗೆ ಹೆಚ್ಚು ಹೆಚ್ಚು  ಕಾರ್ಯಪ್ರವೃತ್ತರಾದರು. ಈ ನಿಟ್ಟಿನಲ್ಲಿ  ಅನೇಕ ಶಾಸ್ತ್ರಜ್ಞರೇ ಅಲ್ಲದೆ  ರೈತರಿಂದ ಮತ್ತು ಪಕ್ಷಿ ಸಾಕುವವರಿಂದಲೂ ಮಾಹಿತಿ ಸಂಗ್ರಹಿಸತೊದಗಿದರು. ಒಮ್ಮೆ ಮೃಗಾಲಯವೊಂದರಲ್ಲಿ ಒರಾಂಗುಟಾನ್ ಒಂದನ್ನು ನೋಡಿದ ಮೇಲೆ ಈ ವಿಕಾಸವಾದದಲ್ಲಿ ಮಾನವ ಪ್ರಜಾತಿಯೂ ಸೇರುತ್ತದೆಂದು ನಂಬತೊಡಗಿದರು. 

ಒಮ್ಮೆ  ಥಾಮಸ್ ಮಾಲ್ಥಸ್ ಅವರು ಜನಸಂಖ್ಯಾ ಸ್ಫೋಟದ ಬಗ್ಗೆ ಮೂಡಿಸಿದ  ಲೇಖನವನ್ನು ಕಂಡರು. ಅದರಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆಯು ಜನಸಂಖ್ಯೆಯನ್ನುಯಾವ ರೀತಿ  ನಿಯಂತ್ರಣ ಮಾಡುತ್ತದೆ ಎಂದು ವಿವರಿಸಲಾಗಿತ್ತು.  ಡಾರ್ವಿನ್,  “ಕೊರತೆಯ ಕಾಲದಲ್ಲಿ ಹೆಚ್ಚು ಹೊಂದಿಕೊಳ್ಳುವವರು ಮಾತ್ರ  ಉಳಿಯುತ್ತಾರೆಎಂಬ ತಮ್ಮ ಸಿದ್ಧಾಂತದ ಮೂಲಕ್ಕೆ ಹೋಗಿ ಈ ಕಾಲಘಟ್ಟಗಳಲ್ಲಿ ಹೊಸ ಹೊಸ ಜೀವಿಗಳ ಉತ್ಪತ್ತಿಯ ಸಾಧ್ಯತೆಗಳೂ ಇವೆ  ಎಂಬ ನಿರ್ಧಾರಕ್ಕೆ ಬಂದರು.  ಇದಕ್ಕೆ ಪೂರಕವೆಂಬಂತೆ  ಹೊಸ ತಳಿಗಳನ್ನು ಉತ್ಪಾದಿಸುತ್ತಿದ್ದ ರೈತರು  ಮತ್ತು ಪ್ರಾಣಿ ಸಾಕಾಣೆ ನಡೆಸುತ್ತಿದ್ದ ಜನಾಂಗವನ್ನು ಅಭ್ಯಸಿಸುತ್ತಿದ್ದ ಅವರಿಗೆಪರಿಸರಕ್ಕೆ ತಕ್ಕಂತೆ ಹೊಂದುಕೊಳ್ಳುವ ಗುಣಗಳುಳ್ಳ  ಹೊಸ ಹೊಸ ತಳಿಗಳು  ಉತ್ಪಾದನೆಯಲ್ಲಿ  ಬಳಕೆಯಾಗುತ್ತಿರುವುದು ಕಂಡು ಬಂತು.  ಈ ತೆರನಾಗಿ ಅವರಿಗೆ  ನಿಸರ್ಗವು ಗುಣಗಳನ್ನು ಗುರಿಯಿಲ್ಲದೆ ನೀಡುತ್ತದೆಂದೂ, ಪರಿಸರದ ಪರಿಸ್ಥಿತಿಗಳು ಈ ಗುಣಗಳಲ್ಲಿ ಉತ್ತಮವಾದವುಗಳನ್ನು ಆರಿಸುತ್ತದೆಂದೂ, ಈ ರೀತಿಯಲ್ಲಿ ಹೊಸ ಜೀವಿಗಳು ಹುಟ್ಟುತ್ತವೆಎಂದು ಮನವರಿಕೆ ಮಾಡಿಕೊಂಡರು..

ಈ ಮಧ್ಯೆ 1842ರಲ್ಲಿ ಡಾರ್ವಿನ್ ಹವಳದ ಬಗ್ಗೆ ಒಂದು ದೊಡ್ಡ ಕೃತಿಯನ್ನು ಪ್ರಕಟಿಸಿದರು. 1844ರ ಜನವರಿಯಲ್ಲಿ ತಮ್ಮ ಜೀವ ವಿಕಾಸ  ಸಿದ್ಧಾಂತದ ಬಗ್ಗೆ ಒಂದು ಕರಡು ಪ್ರತಿಯನ್ನು ರಚಿಸಿ, ಸಸ್ಯಶಾಸ್ತ್ರಜ್ಞ ಹೂರ್ಕ್ ಅವರಿಗೆ ಇದರ ಬಗ್ಗೆ ತಿಳಿಸಿದರು. ಹೂರ್ಕ್ ಇದರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ನೀಡಿದರು. ಜುಲೈ ಹೊತ್ತಿಗೆ ಈ ಕರಡು ಪ್ರತಿಯನ್ನು 230 ಪುಟಗಳ ಪ್ರಬಂಧವಾಗಿ ಪರಿವರ್ತಿಸಿದ್ದರು. 1846ರಲ್ಲಿ ಡಾರ್ವಿನ್ ತಮ್ಮ ಮೂರನೆಯ ಭೂರಚನಾಶಾಸ್ತ್ರದ ಕುರಿತಾದ  ಪುಸ್ತಕವನ್ನು ರಚಿಸಿದರು. 1851ರಲ್ಲಿ ಡಾರ್ವಿನ್ನರ  ಪ್ರೀತಿಯ ಮಗಳಾದ ಆನ್ನಿ ತೀವ್ರವಾಗಿ ಅಸ್ವಸ್ಥಳಾಗಿ ಮೃತಳಾದಳು. ಇದರಿಂದ ಡಾರ್ವಿನ್ ತೀವ್ರವಾಗಿ ವ್ಯಾಕುಲಗೊಂಡರು. ಇದರಿಂದ ತಮ್ಮನ್ನು ಕೆಲಸದಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡರು. ಬಾರ್ನಕಲ್ಸ್ಗಳ ಬಗ್ಗೆ ಇವರ ಅಧ್ಯಯನಕ್ಕೆ 1853ರಲ್ಲಿ ರಾಯಲ್ ಸೊಸೈಟಿಯ ಪದಕವನ್ನು ನೀಡಲಾಯಿತು.

1856ರಲ್ಲಿ ಲ್ಯೆಲ್ ಅವರು ಆಲ್ಫ್ರೆಡ್ ರಸೆಲ್ ವಾಲೇಸ್ ಅವರ ಒಂದು ಲೇಖನವನ್ನು ಓದಿದರು. ಅದರಲ್ಲಿನ ವಿಚಾರಗಳು ಡಾರ್ವಿನ್ ಅವರ ಸಿದ್ಧಾಂತಗಳನ್ನು ಹೋಲುವುದನ್ನು ನೋಡಿ, ಡಾರ್ವಿನ್ ಅವರಿಗೆ ತಮ್ಮ ವಾದವನ್ನು ಮೊದಲು ಪ್ರಕಟಿಸಲು ಎಚ್ಚರಿಸಿದರು. ಆದರೆ ಡಾರ್ವಿನ್ ಇದರ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ತಮ್ಮ ಸಿದ್ಧಾಂತದ ಬಗ್ಗೆ ಒಂದು ಚಿಕ್ಕ ಲೇಖನವನ್ನು ರಚಿಸಿದರೂ, ಮುಖ್ಯವಾಗಿ ಇದರ ಬಗ್ಗೆ ದೊಡ್ಡ ಪುಸ್ತಕವನ್ನು ಬರೆಯುವುದರಲ್ಲಿ ಹೆಚ್ಚು ಮಗ್ನರಾಗಿದ್ದರು. 1858ರ ಜೂನ್ 18ರಂದು ವಾಲೇಸ್ ಅವರಿಂದ ತಮ್ಮ ವಾದವನ್ನು ಹೆಚ್ಚಾಗಿ ಹೋಲುವ ಲೇಖನವೊಂದನ್ನು ಪಡೆದರು. ಇದರಿಂದ ದಿಗಿಲುಗೊಂಡರೂ, ಇದನ್ನು ಲ್ಯೆಲ್ ಅವರಿಗೆ ಕಳುಹಿಸಿ, ವಾಲೇಸ್ ಅವರಿಗೆ ಇದನ್ನು ಪ್ರಕಟಣೆ ಮಾಡುವಲ್ಲಿ ಸಹಕರಿಸುವ ಮಾತು ನೀಡಿದರು. ಮಾತುಕತೆಯ ನಂತರ ಈ ಲೇಖನವನ್ನು ತಮ್ಮ ಲೇಖನದೊಂದಿಗೆ ಲಿನ್ನಿಯನ್ ಸೊಸೈಟಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದರು. ಡಾರ್ವಿನ್ ಅವರ  ಚಿಕ್ಕ ಮಗ ಸ್ಕಾರ್ಲೆಟ್ ಜ್ವರದಿಂದ ಮರಣ ಹೊಂದಿದರಿಂದ, ಈ ಲೇಖನಗಳನ್ನು ಲ್ಯೆಲ್ ಮತ್ತು ಹೂಕರ್ ಅವರು ಜುಲೈ 1ರಂದು ಮಂಡಿಸಿದರು.

ಈ ಪ್ರಕಟಣೆಗಳು ವಿಜ್ಞಾನಿಗಳಲ್ಲಿ ಮೊದಲಿಗೆ ಹೆಚ್ಚು ಆಸಕ್ತಿ ಉಂಟು ಮಾಡಲಿಲ್ಲ. ಮುಂದಿನ 13 ತಿಂಗಳುಗಳಲ್ಲಿ ಡಾರ್ವಿನ್ ತಮ್ಮ ಪುಸ್ತಕದ ರಚನೆಯ ಮೇಲೆ ಹೆಚ್ಚಾಗಿ ಕೆಲಸ ನಡೆಸಿದರು. 1859ರ ನವೆಂಬರ್ 22ರಂದು ಆನ್ ದ ಆರಿಜಿನ್ ಆಫ್ ಸ್ಪೀಶೀಸ್ಪುಸ್ತಕವು ಪ್ರಕಟಣೆಗೊಂಡಿತು. ಮೊದಲ ಆವತರಣಿಕೆಯ 1250 ಪ್ರತಿಗಳು ಬಹಳ ಬೇಗನೆಯೇ ಮಾರಾಟಗೊಂಡವು.  ಈ ಪುಸ್ತಕ ಪ್ರಕಟಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಲ್ಲಿ ಆಸಕ್ತಿ ಮೂಡಿಸಿತು. ಡಾರ್ವಿನ್ ಅಸ್ವಸ್ಥ್ಯತೆಯಿಂದ ಸಾರ್ವಜನಿಕ ವಾದಗಳಲ್ಲಿ ಭಾಗವಹಿಸದಿದ್ದರೂ, ಪ್ರತಿಕ್ರಿಯೆಗಳನ್ನು ಅನುಸರಿಸಿದರು ಮತ್ತು ಆದಷ್ಟು ಪತ್ರಮುಖೇನ ತಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಿದರು. ಇಂಗ್ಲೆಂಡಿನ ಚರ್ಚು ಮತ್ತು ಇತರ ಧಾರ್ಮಿಕ ಸಂಘಟನೆಗಳು ಡಾರ್ವಿನ್ ಅವರ ವಾದಗಳಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಡಾರ್ವಿನ್‌ ಅವರ ಆಪ್ತ ಮಿತ್ರರಾದ ಗ್ರೇ, ಹೂಕರ್, ಹಕ್ಸ್ಲಿ ಮತ್ತು ಲ್ಯೆಲ್ ಅವರನ್ನು ಬೆಂಬಲಿಸಿದರು.

ಕಾಲಕ್ರಮೇಣ ನೈಸರ್ಗಿಕ ಆಯ್ಕೆ ಸಿದ್ಧಾಂತಕ್ಕೆ ಹೆಚ್ಚು ಪುರಾವೆಯನ್ನು ನೀಡುವ ಪುಸ್ತಕಗಳು ಪ್ರಕಟಗೊಂಡವು. ಜೀವಶಾಸ್ತ್ರದ ಬುನಾದಿಯಾಗಿ ಈ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಈ ಸಾಧನೆಗೆ 1864ರ ನವೆಂಬರ್ 3ರಂದು ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕವನ್ನು ಡಾರ್ವಿನ್ ಅವರಿಗೆ ನೀಡಲಾಯಿತು.

1839ರಲ್ಲಿ ವಿವಾಹವಾದ ಡಾರ್ವಿನ್-ಎಮ್ಮಾ  ದಂಪತಿಗಳಿಗೆ ಒಟ್ಟು ಹತ್ತು ಮಕ್ಕಳು ಹುಟ್ಟಿದರು. ಇಬ್ಬರು ಮಕ್ಕಳು ಶೈಶವ್ಯದಲ್ಲಿ ಮೃತರಾದರು. ಡಾರ್ವಿನ್ ಅವರ ಮೇಲೆ ತುಂಬ ಹೆಚ್ಚಿನ ಪ್ರಭಾವ ಬೀರಿದ್ದು ತಮ್ಮ ಎರಡನೆ ಮಗು ಮತ್ತು ಹಿರಿಯ ಮಗಳಾದ ಆನ್ನಿ ತನ್ನ ಹತ್ತನೆಯ ವರ್ಷದಲ್ಲಿ ಮೃತಳಾದದ್ದು. ಈಕೆಯನ್ನು ತುಂಬಾ ಪ್ರೀತಿಸುತ್ತಿದ್ದ ತಂದೆ, ಈ ಸಾವಿನಿಂದ ಕ್ರೈಸ್ತ ಧರ್ಮದಲ್ಲಿನ ತಮ್ಮ ನಂಬಿಕೆಯನ್ನು ಕಳೆದುಕೊಂಡರು. ಉಳಿದ ಮಕ್ಕಳಲ್ಲಿ ಅನೇಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಫಲರಾದರು.

ತಮ್ಮ ಜೀವನದ ಕೊನೆಯ 22 ವರ್ಷಗಳಲ್ಲಿ ಮಧ್ಯ ಮಧ್ಯ ತೀವ್ರ ಅನಾರೋಗ್ಯ ಉಂಟಾಗುತ್ತಿದ್ದರೂ, ಡಾರ್ವಿನ್ ತಮ್ಮ ಕೆಲಸವನ್ನು ಮುಂದುವರೆಸಿದರು. ಆರ್ಕಿಡ್ಗಿಳಲ್ಲಿ ಸಂತಾನೊತ್ಪತ್ತಿಗೆ ವಿಕಾಸಗೊಂಡಿರುವ ಪ್ರಕ್ರಿಯೆಗಳ ಬಗ್ಗೆ 1862ರಲ್ಲಿ ಒಂದು ಪುಸ್ತಕವನ್ನು ಪ್ರಕಟಿಸಿದರು. ಮುಂದೆ ಜೀವವಿಕಾಸವಾದದಲ್ಲಿ ಮಾನವನ ಸ್ಥಾನವನ್ನು ವಿವರಿಸುವ ದ ಡಿಸೆಂಟ್ ಆಫ್ ಮ್ಯಾನ್, ಅಂಡ್ ಸೆಲೆಕ್ಷನ್ ಇನ್ ರಿಲೇಷನ್ ಟು ಸೆಕ್ಸ್ (ಮನುಜನ ವಂಶವೃಕ್ಷ ಮತ್ತು ಲಿಂಗ ಆಧಾರಿತ ಆಯ್ಕೆ ಕ್ರಿಯೆ) ಪುಸ್ತಕವನ್ನು 1871ರಲ್ಲಿ ಪ್ರಕಟಿಸಿದರು. ಇದರಲ್ಲಿ ಪ್ರಾಣಿಗಳಲ್ಲಿ ವಿರುದ್ಧ ಲಿಂಗವನ್ನು ಆಕರ್ಷಿಸುವುದಕ್ಕೊಸ್ಕರ ಯಾವ ರೀತಿಯಲ್ಲಿ  ಗುಣಗಳು ಉತ್ಪಾದನೆಗೊಳ್ಳುತ್ತವೋ ಅಂತಹದ್ದೇ ಗುಣಗಳು ಮಾನವನಲ್ಲೂ ಉತ್ಪಾದನೆಯಾಗುತ್ತವೆ    ಎಂದು ವಿವರಿಸಿದರು. ಈ ಪುಸ್ತಕಕ್ಕೆ ನಡೆಸಿದ ಸಂಶೊಧನೆಯ ಉಳಿದ ಮಾಹಿತಿಯನ್ನು 1872ರಲ್ಲಿ ದ ಎಕ್ಸ್ಪ್ರೆಷನ್ ಆಫ್ ಎಮೊಷನ್ಸ್ ಇನ್ ಮ್ಯಾನ್ ಅಂಡ್ ಅನಿಮಲ್ಸ್’ (ಮಾನವ ಮತ್ತಿತರ ಪ್ರಾಣಿಗಳಲ್ಲಿ ಭಾವನೆಗಳ ತೋರುವಿಕೆ) ಪುಸ್ತಕದಲ್ಲಿ ಪ್ರಕಟಿಸಿದರು. ಈ ಎರಡೂ ಪುಸ್ತಕಗಳು ವೈಜ್ಞಾನಿಕ ಮತ್ತು ಸಾರ್ವಜನಿಕ ಸಮುದಾಯಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದವು.


ಮುಂದಿನ ಹತ್ತು ವರ್ಷಗಳಲ್ಲಿ ಡಾರ್ವಿನ್ ಸಸ್ಯಗಳ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿದರು. 1882ರ ಏಪ್ರಿಲ್ 19ರಂದು ಡಾರ್ವಿನ್  ಸಾವನ್ನು ಅಪ್ಪಿದರು. ಡಾರ್ವಿನ್ ಅವರು ಚಿಂತನೆಗಳಲ್ಲಿ ಮುಂದೆ ಹಲವು ಬೆಳವಣಿಗೆಗಳು ತಿದ್ದುಪಡಿಗಳು ಆಗಿರುವುದು ನಿಜ.  ಆದರೆ ಈ ಮಹಾನ್ ವಿಜ್ಞಾನಿ ತಾವು ನಡೆಸಿದ ತಪಸ್ಸು ಮತ್ತು ಶ್ರದ್ಧಾಪೂರ್ಣ ಕಾರ್ಯದಿಂದ ಮಾನವನ ಹಲವಾರು ಮೂಡನಂಬಿಕೆಗಳನ್ನು ಹೋಗಲಾಡಿಸಿ ಮಾನವನನ್ನು ತನ್ನ ಪರಿಸರದೊಂದಿಗೆ ಗುರುತಿಸಿಕೊಂಡು  ಅದಕ್ಕೆ ಗೌರವಯುತವಾಗಿ ನಡೆದುಕೊಳ್ಳುವುದಕ್ಕೆ ತೋರಿಸಿದ ಮಾರ್ಗ ಮಹತ್ವಪೂರ್ಣವಾದುದಾಗಿದೆ.  ಈ ಮಹಾನ್ ತಪಸ್ವಿಗೆ ನಮಿಸೋಣ.

Tag: Charles Darvin

ಕಾಮೆಂಟ್‌ಗಳಿಲ್ಲ: