ಮಂಗಳವಾರ, ಸೆಪ್ಟೆಂಬರ್ 3, 2013

ಹೂವಿನ ಸೊಬಗನು


ಹೂವಿನ ಸೊಬಗನು ನೋಡುತ ನೀನು
ಕೋಮಲವೆನ್ನುತ ಮುತ್ತಿಡುವೆ
ಹೂವಿನ ಪೆಂಪಿಗೆ ಬಾಳನು ಕೊಟ್ಟ
ಮೊಳಕೆಯ ಗೋಳನು ನೀನರಿಯೆ

ಭುವಿಯನು ನೋಡುತ ಸೊಬಗಿಗೆ ಮೆಚ್ಚಿ
ಕವಿಯೇ ಕವಿತೆಯ ವಿರಚಿಸುವೆ
ಭುವಿಯಾನಂದಕೆ ಜೀವವನಿತ್ತ
ಬೆಸ್ತನ ವೇದನೆ ಅರಿತಿಹೆಯಾ

ಯುಗಯುಗ ಯುಗಗಳ ಯಾತನೆಯಿಂದ
ಜನಿಸಿತು ನಲಿವೀ ಬ್ರಹ್ಮಾಂಡ
ನಲಿಯುವ ಒಂದೊಂದಲರಿನ ಹೃದಯದಿ
ಬ್ರಹ್ಮವು ಮೌನದಿ ನರಳುತಿದೆ

ಮುಂದಕೆ ನೋಡುವ ಕವಿಗಳ ಕಣ್ಣಿಗೆ
ಬ್ರಹ್ಮವು ಹರ್ಷದಿ ಕುಣಿಯುತಿದೆ
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ
ಯಾತನೆಯಿಂದದು ಹೊರಳುತಿದೆ

ಸಾಹಿತ್ಯ: ಕುವೆಂಪು
photo courtesy of : talkingplant

ಈ ಕವಿತೆಯ ಕುರಿತು ಒಂದು ಚಿಂತನೆ: 

ಈ ಕವನದಲ್ಲಿ ನಾನು ಕಾಣುವ ವಿಚಾರವೆಂದರೆ “ಮನುಷ್ಯ ಎಲ್ಲವನ್ನೂ ತನ್ನ ಸ್ವಲಾಭ ದೃಷ್ಟಿಯಿಂದ ಮಾತ್ರ ಕಾಣುವ ಸ್ವಾರ್ಥ ದೃಷ್ಟಿ.” ಹೂವಿನ ಸೊಬಗನ್ನು ಕಾಣುವ ನಾವು ಅದರ ಮೊಳಕೆಯ ಗೋಳನ್ನು ಅರಿಯುವುದಿಲ್ಲ ಮಾತ್ರವಲ್ಲ ಅದರ ಬೆಳವಣಿಗೆಯೇ ಇಲ್ಲದಂತೆ ಮಾಡುತ್ತೇವೆ.  ಅಪ್ಪ ಅಮ್ಮಂದಿರ ಹಿಂದೆ ತನ್ನ ಎಲ್ಲ ಬೇಕು ಬೇಡಗಳಿಗೆ ಅಲೆಯುವ ವ್ಯಕ್ತಿ ಮುಂದೆ ಅವರನ್ನೂ ಬೇಡದ ವಸ್ತುವಿನಂತೆ ಮೂಲೆಗುಂಪು ಮಾಡುತ್ತಾನೆ.  “ಯುಗಯುಗ ಯುಗಗಳ ಯಾತನೆಯಿಂದ ಜನಿಸಿತು ನಲಿವೀ ಬ್ರಹ್ಮಾಂಡ” - ಈ ಪ್ರಕೃತಿ ಎಂಬ ಬ್ರಹ್ಮಾಂಡ ಏನೆಲ್ಲವನ್ನೂ ತನ್ನನ್ನೇ ಒಡ್ಡಿಕೊಂಡು ನೋವನ್ನನುಭವಿಸಿ ಹೊರತರುತ್ತದೆ.  ಒಮ್ಮೆ ಜಿ. ಎಸ್. ಶಿವರುದ್ರಪ್ಪನವರು ನಮ್ಮಲ್ಲಿಗೆ ಉಪನ್ಯಾಸ ನೀಡಲಿಕ್ಕೆ ಬಂದಾಗ ಹೇಳುತ್ತಿದ್ದರು “ಮನುಷ್ಯ ವಿಜ್ಞಾನದ ಉಪಯೋಗವನ್ನು ಮಾತ್ರ ಬಯಸುತ್ತಾನೆ.  ವೈಜ್ಞಾನಿಕ ಮನೋಭಾವವನ್ನು ಮಾತ್ರ ಹೊಂದುವುದಿಲ್ಲ” ಎಂದು.  ಕವಿಯಾಗುವ ನಮ್ಮ  ಮನಸ್ಸು ತನಗೆ ಕಂಡ ಒಂದು ತುಂಡು ಸೌಂದರ್ಯದ ಕುರಿತು ಕಾವ್ಯ ರಚಿಸುತ್ತದೆ.  ಆದರೆ ಆ ಸೌಂದರ್ಯದ ಸೃಷ್ಟಿಯ ಹಿಂದಿನ ಶ್ರಮ, ಕೊಡುಗೆ, ತ್ಯಾಗಗಳ ಬಗ್ಗೆ ಅದಕ್ಕೆ ಗೌರವ ಪೂಜ್ಯ ಭಾವನೆಗಳಿಲ್ಲ.  ಹಾಗಿದ್ದಿದ್ದಲ್ಲಿ ಈ ಲೋಕದಲ್ಲಿ ನಡೆದ ಇಷ್ಟೊಂದು ವಿನಾಶಗಳು ನಡೆಯುತ್ತಿರಲಿಲ್ಲ.  ಕವಿಯಾಗುವ ನಮ್ಮ ಮನಸ್ಸು ಮುಂದಕೆ ನೋಡುವ ಬಯಕೆಗಳಲ್ಲಿ, expectationಗಳಲ್ಲಿ ಬ್ರಹ್ಮಾಂಡ ಎಂಬುದು ಕಾಮಧೇನುವಿನಂತೆ ಕಂಡು ಹೆಚ್ಚು ಹೆಚ್ಚು ಬಯಕೆಗಳಿಂದ ನಲಿಯುತ್ತಿದೆ.  ಆದರೆ ಈ ಬ್ರಹ್ಮಾಂಡದ ಅಂತರಾಳದ ಆಳವನ್ನು ಅರ್ಥೈಸುವ  ತಪಸ್ವೀ ಮನಸ್ಸೆಂಬ ಋಷಿಗಳ ಕಣ್ಣಿಗೆ ಕಾಣುತ್ತಿರುವ ಚರಿತ್ರೆಯದರೂ ಏನು?  ಬರೀ ಹೊಡೆದಾಟ, ರಕ್ತಪಾತ, ಸ್ವಾರ್ಥ, ಪ್ರಕೃತಿ ನಾಶ, ಪ್ರಕೃತಿ ಎಂಬ ಬ್ರಹ್ಮಾಂಡ ನೀಡಿರುವ ಅಪಾರ ಕೊಡುಗೆಯನ್ನು ನಾನು ನನ್ನದು ಎಂದು ಬೇರೆ ಮಾಡಿಕೊಂಡು ಕಾದಾಡಿ ಯಾವುದನ್ನೂ ಗೌರವಿಸದೆ ಇರುವ ಅನಿಷ್ಟ ಪ್ರವೃತ್ತಿ.  ಬ್ರಹ್ಮಾಂಡದ ಇಷ್ಟೊಂದು ತ್ಯಾಗವನ್ನೂ ಕಿಂಚಿತ್ತೂ ಅರ್ಥೈಸದ, ಗೌರವಿಸದ, ಪೂಜಿಸದ ಕೇವಲ ಸ್ವಾರ್ಥ.  -   ಇದು ನನ್ನ ಚಿಂತನೆಗೆ ಸಿಲುಕಿದ್ದು.  ತಿಳಿದವರಲ್ಲಿ ಕೂಡಾ ಇದನ್ನು ಚರ್ಚಿಸಿ ಅವರ ಅಭಿಪ್ರಾಯ ಬೇರೆಯದಿದ್ದರೆ ಅದನ್ನೂ ತಿಳಿಸುತ್ತೇನೆ.

Tag: Huvina sobaganu noduta neenu

ಕಾಮೆಂಟ್‌ಗಳಿಲ್ಲ: