ಮಂಗಳವಾರ, ಸೆಪ್ಟೆಂಬರ್ 3, 2013

ಸಗ್ಗದ ಸಿರಿ ಬಂತುಸಗ್ಗದ ಸಿರಿ ಬಂತೊ ನಮ್ಮೂರಿಗೆ
ಸುಗ್ಗಿಯ ಸೊಬಗಿಂದ ನಮ್ಮೂರಿಗೆ

ಎತ್ತೆತ್ತಲು ತೆನೆ ಚೆಲ್ಲಿ ಹಾಲ
ಚಿಲಿಪಿಲಿ ಹರಿಸಿತು ಹಕ್ಕಿಯ ಮೇಳ;
ಕಣ ಕಣದಲ್ಲಿ ಬಂಗಾರ ಜಾಲ-
ಬೆರಗಾಗಿ ನಿಂತಿತೊ ಚಲಿಸದೆ ಕಾಲ.
ಸಗ್ಗದ ಸಿರಿ...

ಅರಸಿನ ಕುಂಕುಮ ಮೈಗೆಲ್ಲ ಮೆತ್ತಿ
ಹಸುರುಟ್ಟ ನೆಲದವ್ವ ಮದುವಣಗಿತ್ತಿ 
ತೊಟ್ಟಿರೆ ಜರತಾರಿ ಮರಗಳ ನೆತ್ತಿ
ದಿಬ್ಬಣ ಹೊರಟವೋ ಪಾತರಗಿತ್ತಿ
ಸಗ್ಗದ ಸಿರಿ...

ಕೊಟ್ಟಿಗೆ ತುಂಬ ಕರುಗಳ ಅಂಬಾ
ಆಕಳ ಕೆಚ್ಚಲು ಅಮೃತದ ಕುಂಭ!
ಹಟ್ಟಿಯ ಬೆಳಗಿದೆ ತುಂಬಿದ ಚೀಲ-
ತೀರಿತೊ ದೇವರೇ, ಬಡವರ ಸಾಲ.
ಸಗ್ಗದ ಸಿರಿ

ಚಾವಡಿ ಮುಂದಿಗೆ ಚಪ್ಪರವೆದ್ದು
ಸೇರಿತೊ ಊರೆಲ್ಲ ಗುಜುಗುಜು ಸದ್ದು;
ಬೆಳುದಿಂಗಳಿರುಳಲ್ಲಿ ಬಯಲಾಟವಿದ್ದು
ಗೌಡರೆ ನೋಡಲು ಬಂದರು ಖುದ್ದು.
ಸಗ್ಗದ ಸಿರಿ...

ಹೂ ಕಾಯಿ ನೀಡುವೆವು ದೀಪವನುರಿಸಿ
ಬಾರಮ್ಮ ಮಾರಮ್ಮ, ಬಾ ಗೌರಿಯರಸಿ;
ಊರಾಚೆ ಹನುಮ, ಬಾ ನಮ್ಮ ಹರಿಸಿ
ಶರಣು ಶರಣೆಂಬೆವು ತುಂಗೆಗೆ ನಮಿಸಿ.
ಸಗ್ಗದ ಸಿರಿ...

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್Tag: Saggada siri bantu

ಕಾಮೆಂಟ್‌ಗಳಿಲ್ಲ: