ಸೋಮವಾರ, ಸೆಪ್ಟೆಂಬರ್ 2, 2013

ಡಾ. ಮನಮೋಹನ್ ಸಿಂಗ್, ನಮ್ಮ ದೇಶ ಮತ್ತು ನಾವು

ಡಾ. ಮನಮೋಹನ್ ಸಿಂಗ್,  ನಮ್ಮ ದೇಶ ಮತ್ತು ನಾವು

ಭಾರತದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರು ಜನಿಸಿದ ದಿನ ಸೆಪ್ಟೆಂಬರ್ 26, 1932ರಂದು.   ನಮ್ಮ ಪ್ರಧಾನಿಗಳನ್ನುನೆನೆದಾಗಲೆಲ್ಲಾ ವಿಭಿನ್ನ ಭಾವಗಳು ನನ್ನಲ್ಲಿ ಹಾದುಹೋಗುತ್ತದೆ.

ಮೊದಲನೆಯದಾಗಿ ಇಂದು ಭಾರತ ದೇಶ ನಿಂತಿರುವ ಹಲವು ಕವಲು ದಾರಿಗಳಲ್ಲಿ ಈ ದೇಶದ ನೇತಾರರಾಗಿರುವ ಸಿಂಗ್ ಅವರ ವ್ಯಕ್ತಿತ್ವವನ್ನು ಇಂಥಹ ಸಾರ್ವಜನಿಕ ವೇದಿಕೆಯಲ್ಲಿ ಸಕಾರಾತ್ಮಕವಾಗಿ ಅಭಿವ್ಯಕ್ತಿಸುವುದು ಕಷ್ಟ ಸಾಧ್ಯವಾದ ವಿಚಾರ.  ನಾವು ನಮ್ಮ ದೇಶವನ್ನು ಕಾಣುವಾಗಲೆಲ್ಲಾ ನಮ್ಮ ದೇಶದ ನಾಯಕತ್ವವನ್ನು ದೂಷಿಸುವುದು ನಮ್ಮ ಭಾರತೀಯತೆಯ ಜನ್ಮಜಾತ ಗುಣ.  ಇಂದಿನ ರಾಜಕಾರಣ ಅಂತಹ ದೂಷಣೆಗೆ ಅನ್ವರ್ಥವಾಗಿ ನಡೆಯುತ್ತಿದೆ ಎಂಬುದು ಕೂಡಾ ಅಷ್ಟೇ ಸತ್ಯ.   ನಾವು ದೂಷಿಸಿ ದೂಷಿಸಿ ನಮ್ಮ ವ್ಯವಸ್ಥೆಯನ್ನು ನಮ್ಮ ಮಾತುಗಳಂತೆ ಮಾಡಿಕೊಂಡಿದ್ದೇವೆಯೋ ಇಲ್ಲವೇ ನಮ್ಮ ವ್ಯವಸ್ಥೆಯನ್ನು ನೋಡಿಯೇ ದೂಷಣೆಯನ್ನೇ ನಮ್ಮ ಜೀವನವನ್ನಾಗಿ ಮಾಡಿಕೊಂಡಿದ್ದೇವೆಯೋ, ಒಟ್ಟಿನಲ್ಲಿ ನಮ್ಮ ಭಾರತೀಯ ವ್ಯವಸ್ಥೆ ಎಂಬುದೇ ದೂಷಿತವೆಂಬಂತೆ ಸ್ಥಗಿತತೆಯಲ್ಲಿ ನಿಂತು ಹೋಗಿರುವಂತೆ ಭಾಸವಾಗುತ್ತಿದೆ.

ನಮ್ಮ ದೇಶದಲ್ಲಿ ಏನಿಲ್ಲ.  ಪ್ರಕೃತಿ ಸಂಪತ್ತು, ಬುದ್ಧಿವಂತ ಜನಾಂಗ, ಪರಂಪರೆ, ಸಾಕಷ್ಟು ಒಳ್ಳೆಯ ಜನ ಇತ್ಯಾದಿ ಇತ್ಯಾದಿ.  ಆದರೆ ಈ ಎಲ್ಲವೂ ಕಿಂಚಿತ್ತು ಮಾಲಿನ್ಯ, ಒಂದಷ್ಟು ಜನರ  ಮೌಢ್ಯ, ಸ್ವಾರ್ಥ, ಭ್ರಷ್ಟತೆ ಇವುಗಳ ನಡುವೆ ಮರೆಮಾಚಿಹೋಗಿದೆ.  ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರ ಬಯೋಡಾಟಾದಲ್ಲಿ  ಪ್ರಪಂಚದಲ್ಲಿ ಇನ್ನ್ಯಾವ ನಾಯಕನಿಗೂ ಇಲ್ಲದಷ್ಟು ವಿದ್ಯಾಭ್ಯಾಸ, ಸಾಧನೆ, ವೈವಿಧ್ಯಪೂರ್ಣ ಅನುಭವ, ಒಂದಷ್ಟು ಯಶಸ್ಸು ಎಲ್ಲವೂ ಇದೆ.   ಆದರೆ ಇವೆಲ್ಲವೂ ಅವರ ಸುತ್ತ ಇರುವ ವಂಶಪಾರಂಪರ್ಯದ ಹಿಡಿತ, ಏನೂ ಮಾಡಲು ಬಿಡದ ವಿಭಿನ್ನ ಸ್ವಾರ್ಥ ರಾಜಕಾರಣಿಗಳ ಕಾಲೆಳೆತಗಳು,  ಅಷ್ಟೊಂದು ಭ್ರಷ್ಟತೆ ಹೆಜ್ಜೆ ಹೆಜ್ಜೆಯಲ್ಲಿದ್ದರೂ, ಪ್ರಕೃತಿಯನ್ನು ಮೊಗೆ ಮೊಗೆದು ಹಾಳು ಮಾಡುತ್ತಿದ್ದರೂ, ಓಟಿನ ಕೀಳು ತನಕ್ಕಾಗಿ ಪಕ್ಕದ ದೇಶಗಳಿಂದ ಒಳತರುವ ಹೇಯ ಕ್ರಮಗಳು ಮುಂತಾದವು ನಡೆಯುತ್ತಿದ್ದರೂ  ಏನೂ ಕ್ರಮ ಕೈಗೊಳ್ಳಲಾಗದೆ ಸುಮ್ಮನೆ ಕುಳಿತುಕೊಳ್ಳುವಂತಹ ಮೂಖತೆಗಳ ನಡುವೆ ಕಳೆದುಹೋಗಿರುವಂತೆ ಕಾಣಬರುತ್ತದೆ.

ಕಷ್ಟಪಟ್ಟು ಮೇಲೆ ಬಂದ ಅಪ್ರತಿಮ ಪ್ರತಿಭಾವಂತ, ಆಕ್ಸ್ ವರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್  ಪಡೆದಾತ, ವಿಶ್ವಸಂಸ್ಥೆಯಲ್ಲಿ ಉದ್ಯೋಗ ಮಾಡಿದಾತ, ಅರ್ಥಶಾಸ್ತ್ರಜ್ಞ, ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಾಕ್ಷ, ರಿಸರ್ವ್ ಬ್ಯಾಂಕ್ ಮುಖ್ಯಸ್ಥ,  ದೇಶವನ್ನು ಲೈಸೆನ್ಸ್ ರಾಜ್ ಮುಷ್ಠಿಯಿಂದ ಬಿಡುಗಡೆಯ ಹಾದಿಗೆ ತಂದ ಧೀಮಂತ ಹಣಕಾಸು ಮಂತ್ರಿ, ಜವಹರಲಾಲ್ ನೆಹರೂ ನಂತರ ಐದು ವರ್ಷ ಅವಧಿ ಪೂರೈಸಿ ಮತ್ತೊಂದು ಅವಧಿಗೆ ಪ್ರಧಾನಿಯಾದ ಕೀರ್ತಿ ಇವೆಲ್ಲವೂ ಡಾ. ಮನಮೋಹನ್ ಸಿಂಗ್ ಅವರ ಹೆಗ್ಗಳಿಕೆಯಲ್ಲಿವೆ.  ಇಷ್ಟಿದ್ದರೂ ಅವರು ಯಾವುದೋ ಕಬಂಧ ಮುಷ್ಠಿಯಲ್ಲಿ ಸಿಲುಕಿದಂತೆ ಕಾಣುತ್ತಾರೆ.  ಅಮೆರಿಕದೊಂದಿಗೆ ಪರಮಾಣು ಒಪ್ಪಂದ, ಈಗ ಚಿಲ್ಲರೆ ಮಾರುಕಟ್ಟೆಗಾಗಿ ವಿದೇಶಿಗರಿಗೆ ಪರವಾನಗಿ, ಅಡುಗೆ ಗ್ಯಾಸ್ ಮೇಲೆ ಸಬ್ಸಿಡಿ ಬಗ್ಗೆ ಬಿಗಿ ನಿಲುವು ತಾಳಿದ ಮನಮೋಹನ್ ಸಿಂಗರು, ಅವರ ಕಾಲದಲ್ಲಿ ನಡೆಯುತ್ತಿರುವ ಭ್ರಷ್ಟತೆಯ ಬಗ್ಗೆ ಅದೇ ನಿಲುವನ್ನು ತಾಳಲಾಗದಿದ್ದುದು ದೊಡ್ಡ ವಿಪರ್ಯಾಸವೆನಿಸುತ್ತದೆ.  ವೈಯಕ್ತಿಕವಾಗಿ ಮನಮೋಹನ್ ಸಿಂಗ್  ಅವರ ಕಚೇರಿಯನ್ನೇ ಉಪಯೋಗಿಸಿ  ಕಲ್ಲಿದ್ದಲು ಹಗರಣದ ಎರಡು ಲಕ್ಷ ಕೋಟಿ ರೂಪಾಯಿಗಳ ಹಗರಣ ನಡೆಸಲಾಗಿದೆ. ಟೆಲಿಕಾಂ ಹಗರಣ ಮುಂತಾದ ಅನೇಕ ಹಗರಣಗಳು ಇದಕ್ಕೆ ಪೂರಕವಾಗಿವೆ.  ಇಷ್ಟಾದರೂ ಈ ದೇಶದ ಬಹುತೇಕ ಜನಕ್ಕೆ ವೈಯಕ್ತಿಕವಾಗಿ ಡಾ. ಮನಮೋಹನ ಸಿಂಗ್ ಅವರು ಭ್ರಷ್ಟರು ಎಂದು ಹೇಳಲು ಮನಸ್ಸು ಬರುವುದಿಲ್ಲ.  ಆದರೆ ಅವರನ್ನು ಭ್ರಷ್ಟವಾಗಿ ಬಳಸಲು ದಾಳವಾಗಿ ಬಳಸಲಾಗುತ್ತಿರುವಾಗ ಅವರ ಬಹುದೊಡ್ಡ ಮೌನ ದೇಶದ ಜನತೆಗೆ ಮೋಹಕವಾಗಿ ಉಳಿದಿಲ್ಲ.

ಒಟ್ಟಾರೆಯಾಗಿ ಇಷ್ಟೊಂದು ಬುದ್ಧಿವಂತ ವ್ಯಕ್ತಿ ಪ್ರಧಾನಿಯಾಗಿರುವಾಗಲೂ ನಮ್ಮ ದೇಶಕ್ಕೆ ಹಿಡಿದಿರುವ ಗ್ರಹಣ ಮಾತ್ರ, ಇದಕ್ಕೆ ಎಂದಾದರೂ ವಿಮೋಚನೆ ಉಂಟೆ ಎಂಬಂತಹ ಭೀತಿಯನ್ನು ಇಡೀ ಭಾರತೀಯ ಸಮುದಾಯದಲ್ಲಿ ವ್ಯಾಪಕವಾಗಿಸಿದೆ ಎಂಬುದು ಮಾತ್ರ ನಮ್ಮ ಬದುಕಿನ ನಿತ್ಯ ಸತ್ಯವಾಗಿ ಹೋಗಿದೆ.  ಈ ಕುರಿತು ನಾಡಿನ ಪ್ರತಿಯೋರ್ವ ಪ್ರಜೆಯೂ ಅತ್ಯಂತ ಗಂಭೀರವಾಗಿ ಯೋಚಿಸುವಂತಹ ಸನ್ನಿವೇಶ ನಮ್ಮ ಮುಂದಿದೆ.

ಹಾಗೆಂದ ಮಾತ್ರಕ್ಕೆ ಭಾರತದ ಪ್ರಧಾನಮಂತ್ರಿಯ ಹುದ್ಧೆ ಸುಲಭದ್ದಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ.  ಭಾರತದಲ್ಲಿ ಅತೀ ಕಡಿಮೆ ನಿದ್ದೆ ಮಾಡುವ ವ್ಯಕ್ತಿಯೆಂದರೆ ಪ್ರಧಾನ ಮಂತ್ರಿ ಎಂಬ ಮಾತು ಮೊದಲಿನಿಂದಲೂ ಜನಜನಿತ.  ಇಷ್ಟೊಂದು ತಲೆಕೆಡಿಸಿಕೊಂಡು ದುಡಿಯುವ ವ್ಯಕ್ತಿಗೆ ಹುಟ್ಟು ಹಬ್ಬದ ಶುಭಾಶಯವಾದರೂ ನಮ್ಮಿಂದ ಸಲ್ಲಲೇ ಬೇಕು.   ಡಾ. ಮನಮೋಹನ್ ಸಿಂಗ್ ಅವರೇ ನಿಮಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು.  ಆದರೆ ನಮಗೆ ನಿಮ್ಮ ಹುಟ್ಟು ಹಬ್ಬದ ಸಿಹಿ ತಿನ್ನುವ ಸಂತೋಷವಂತೂ ಇಲ್ಲ.  ನಮಗೆ ನಮ್ಮ ದೇಶದ ಬಗ್ಗೆ ತುಂಬಾ ಚಿಂತೆಯಾವರಿಸಿಬಿಟ್ಟಿದೆ.  ಆ ಚಿಂತೆಯನ್ನು ನಿಮ್ಮಿಂದ ಎಷ್ಟರಮಟ್ಟಿಗೆ ನಿವಾರಿಸಲಾದೀತು ಎಂಬುದನ್ನು ನಾವೂ ನಿಮ್ಮಂತೆ ಮೌನವಾಗಿ ನೋಡುತ್ತಿದ್ದೇವೆ.  ಎಷ್ಟು ದಿನ ಎಂಬುದನ್ನು ಹೇಳಲು ಸಾಧ್ಯವಿಲ್ಲ!

Tag: Dr. Manmohan Singh

ಕಾಮೆಂಟ್‌ಗಳಿಲ್ಲ: