ಸೋಮವಾರ, ಸೆಪ್ಟೆಂಬರ್ 2, 2013

ಓ.ಎಲ್.ನಾಗಭೂಷಣಸ್ವಾಮಿ


ಓ.ಎಲ್.ನಾಗಭೂಷಣಸ್ವಾಮಿ

ಕನ್ನಡದ ಹೆಸರಾಂತ ಶಿಕ್ಷಕರೂ. ವಿಮರ್ಶಕರೂ, ಬರಹಗಾರರೂ ಆದ  ಓ. ಎಲ್.  ನಾಗಭೂಷಣಸ್ವಾಮಿ  ಅವರು  ಸೆಪ್ಟೆಂಬರ್ 22, 1953ರಂದು ಜನಿಸಿದರು.  ತಂದೆ ಓ.ಎನ್.ಲಿಂಗಣ್ಣಯ್ಯನವರು ಮತ್ತು  ತಾಯಿ ಪುಟ್ಟಗೌರಮ್ಮನವರು. 

ಹೈಸ್ಕೂಲಿನಲ್ಲಿ ರಾಮಪ್ಪ ಮೇಷ್ಟರು  ಮಾಡಿದ  ರನ್ನನ ಗದಾಯುದ್ಧಪಾಠಮಹಾರಾಜಾ ಕಾಲೇಜಿನಲ್ಲಿ ಸುಜನಾ ಕಲಿಸಿದ ಕುಮಾರವ್ಯಾಸ, ಗುರುರಾಜಾರಾವ್ ಮಾಡಿದ ಶೇಕ್ಸ್ಪಿಯರ್ ಪಾಠ, ಗೋವಿಂದರಾವ್ ಇಂಗ್ಲಿಷ್ ಕಾದಂಬರಿಗಳ ಪಾಠ, ಎಂ.ಎ. ಗೆ ಬಂದಾಗ ದಾಮೋದರರಾವ್ ಕಲಿಸಿದ ವಿಮರ್ಶೆಯ ಶಿಸ್ತು, ಅನಂತಮೂರ್ತಿಯವರು ತೋರಿಸಿಕೊಟ್ಟ ವರ್ಡ್ಸ್ ವರ್ತ್, ಪೋಲಂಕಿಯವರು ಕಾಣಿಸಿದ ಲಾರೆನ್ಸ್ ಇವೆಲ್ಲಾ ಸ್ವಾಮಿಯವರ ಸುಪ್ತ  ಸಾಹಿತ್ಯಾಂತರ್ಯದ ಕದವನ್ನು ತಟ್ಟಿತ್ತು. 

ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕ ವೃತ್ತಿ ನಡೆಸಿದ ಓ ಎಲ್ ಎನ್ ಸ್ವಾಮಿ ಅವರು  ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ, ಕನ್ನಡ ಸಾಹಿತ್ಯ ಮತ್ತು ಭಾಷೆ ವಿಭಾಗಗಳ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದಾರೆ.  

ವಿಮರ್ಶೆಯ ಕೆಲಸ ಓ. ಎಲ್. ಎನ್. ಸ್ವಾಮಿಯವರಿಗೆ ಅವರ ಆಂತರ್ಯದ  ಲೋಕವನ್ನು ಬುದ್ಧಿಯ ಮೂಲಕ ಸ್ಪಷ್ಟ ಮಾಡಿಕೊಳ್ಳುವ ಕೆಲಸವಾಗಿದ್ದರೆ ಸಮುದಾಯದ ಮೂಲಕ ಆರಂಭಗೊಂಡಿದ್ದ ರಂಗಭೂಮಿಯ ಆಕರ್ಷಣೆ, ಲೋಕದ ಒಡನಾಟ, ನಾಕು ಜನರೆದುರು ಮಾತಾಡುವ ರೀತಿ, ಹತ್ತು ಜನ ಒಟ್ಟಿಗೆ ಸೇರಿ ನಂಬಿಕೆ, ವಿಶ್ವಾಸಗಳಿಂದ ಸಾವಿರ ಜನರ ಎದುರಿಗೆ ಅರ್ಥಲೋಕವನ್ನು ಸೃಷ್ಟಿಸುವ ಬೆರಗು ಮನಸ್ಸನ್ನು ಸೆಳೆದವು.  ಅಲ್ಲಿ ಅವರಿಗೆ  ಆಸಕ್ತಿ ಇದ್ದದ್ದು ರಂಗದ ಮೇಲೆ ಅರ್ಥವನ್ನು ನಿರ್ಮಿಸುವ ಕ್ರಮದಲ್ಲಿಮಾತನ್ನು ಆಡುವ ಸರಿಯಾದ ಕ್ರಮವನ್ನು ತಿಳಿಯುವ, ತಿಳಿಸುವ ಬಗೆಯಲ್ಲಿ, ವಿಮರ್ಶೆಯ ಪರಿಭಾಷೆ ಬೆಳೆಯುತ್ತಿದ್ದಾಗಲೇ ಪ್ರಸನ್ನ, ಸಿಜಿಕೆ, ಸಮುದಾಯ, ಕೆ.ವಿ. ಸುಬ್ಬಣ್ಣ, ಜಂಬೆ, ನೀನಾಸಂ, ಶಿವಮೊಗ್ಗದ ಅಭಿನಯ ತಂಡದ ಗೆಳೆಯರು, ಜಯತೀರ್ಥ ಜೋಶಿಯವರ ಒಡನಾಟಗಳಿಂದ ನಾಟಕ ಅನುವಾದ, ಸಣ್ಣಪುಟ್ಟ ಅಭಿನಯ, ಮುಖ್ಯವಾಗಿ ನಿರ್ದೇಶನ, ಇಂಥವುಗಳ ಮೂಲಕ ಕಾವ್ಯಮೀಮಾಂಸೆಯ ಪ್ರಾಯೋಗಿಕ ಅನುಭವಗಳು ಅವರಿಗೆ ದೊರೆತವು.  ಹೀಗೆ  ಸಾಹಿತ್ಯ ವಿಮರ್ಶೆ, ಅನುವಾದ, ವಚನ ಸಾಹಿತ್ಯ, ಪ್ರವಾಸ ಸಾಹಿತ್ಯ, ತತ್ವಶಾಸ್ತ್ರ, ರಂಗಭೂಮಿ, ಸಿನಿಮಾ ಮುಂತಾದವು ಅವರ ಆಸಕ್ತಿಯ ವಿಷಯಗಳಾದವು.

ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಕನ್ನಡಕ್ಕೆ ಬಂದ ಕವಿತೆ, ಇಂದಿನ ಹೆಜ್ಜೆ, ನಮ್ಮ ಕನ್ನಡ ಕಾವ್ಯ ಮುಂತಾದವು ಅವರ ಕೆಲವು ಪ್ರಮುಖ ಕೃತಿಗಳು. ಚಂದ್ರಶೇಖರ ಕಂಬಾರ ಅವರ ಚಕೋರಿ, ಆಯ್ದ ಕವಿತೆಗಳು ಮತ್ತು ತುಕ್ರನ ಕನಸು ನಾಟಕಗಳನ್ನು; ಜಿ. ಎಸ್. ಶಿವರುದ್ರಪ್ಪ ಅವರ ಆಯ್ದ ಕವಿತೆಗಳನ್ನು; ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಏಗದಾಗೆಲ್ಲಾ ಐತೆ ಮುಂತಾದ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಟಾಲ್ಸ್ಟಾಯ್ ಕಥೆಗಳು, ಜೆ. ಕೃಷ್ಣಮೂರ್ತಿ ಅವರ ಕೆಲವು ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ನೀನಾಸಂ ಅವರ ಸಾಹಿತ್ಯ ಶಿಬಿರಗಳು, ಬೆಂಗಳೂರು ವಿವಿಧ ವಿಶ್ವವಿದ್ಯಾಲಯದ ವಿಚಾರ ಸಂಕೀರ್ಣಗಳು ಹೀಗೆ ಹತ್ತಾರು ರೀತಿಯಲ್ಲಿ ತಮ್ಮನ್ನು ನಿರಂತರವಾಗಿ ಸಕ್ರಿಯವಾಗಿ ತೊಡಗಿಸಿಕೊಂಡ ಸ್ವಾಮಿಯವರುಕೇಂದ್ರ ಸಾಹಿತ್ಯ ಅಕಾಡೆಮಿಕರ್ನಾಟಕ ಅನುವಾದ ಅಕಾಡೆಮಿಗಳ ಸದಸ್ಯರಾಗಿ ಸಹಾ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಮರ್ಶೆ ಹಾಗೂ ಅನುವಾದ ಕೃತಿಗಳಿಗಾಗಿ ಬಹುಮಾನ ಪಡೆದಿದ್ದಾರೆ.

ಓ ಎಲ್ ನಾಗಭೂಷಣ ಸ್ವಾಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.Tag: O. L. Nagabhushana Swamy, O. L. N. Swamy


ಕಾಮೆಂಟ್‌ಗಳಿಲ್ಲ: