ಸೋಮವಾರ, ಸೆಪ್ಟೆಂಬರ್ 2, 2013

ಎಂ ಎಸ್ ನರಸಿಂಹಮೂರ್ತಿ

ಎಂ ಎಸ್ ನರಸಿಂಹಮೂರ್ತಿ

ಬ್ರಿಗೇಡ್ ರೋಡ್ ನಲ್ಲಿ ಬೆಲ್ಟ್ ಗೆ 5,000 ರೂಪಾಯಿ, ಪ್ಯಾಂಟ್ ಗೆ 100 ರುಪಾಯಿ ಯಾವುದನ್ನು ಯಾವುದಕ್ಕೆ ಹಾಕುವುದು ಎಂಬುದೇ ಪ್ರಶ್ನೆ?”

ಅಪ್ಪ ಈಶ್ವರನಿಗೆ Lapನಲ್ಲಿ ಒಬ್ಬಾಕೆ topನಲ್ಲಿ ಒಬ್ಬಾಕೆ.  ಇವೆಲ್ಲವನ್ನೂ ನೋಡಿದ ಗಣಪ ಲ್ಯಾಪ್ ಟಾಪ್ ಬೇಡ ಎಂದು ಮೌಸ್ ಹಿಡಿದು ಕುಳಿತು ಕೊಂಡ.

ಒಬ್ಬರು  ಸಾಹಿತಿಗಳ  ಹೆಸರಲ್ಲಿ ಒಬ್ಬ ಏಳೆಂಟು ಸಾವಿರ ಲಪಟಾಯಿಸಿದಾಗ ಆ ಸಾಹಿತಿಗಳು ಆ ಲಫಂಗನಿಗೆ ಬೈದದ್ದು ಹೀಗೆ:  "ಎಂಥಾ ಚಿಲ್ಲರೆ ಕೆಲಸ ಮಾಡಿ  ದೊಡ್ಡ ತಪ್ಪು ಮಾಡ್ಬಿಟ್ಯೋನಂಗೊಂದು ಮಾತು ಹೇಳಿದ್ದಿದ್ರೆ, ನಮ್ಮಿಬ್ರಿಗೂ ಹೆಚ್ಚಿನ ಉಪಯೋಗ ಆಗೋತರಹ ಸಲಹೆ ಕೊಡ್ತಾ ಇದ್ನಾ!

ಇವೆಲ್ಲಾ ನಮ್ಮ ಎಂ. ಎಸ್. ನರಸಿಂಹಮೂರ್ತಿ ಅವರ ಹಾಸ್ಯದ ಪರಿ.  ನರಸಿಂಹ ಮೂರ್ತಿ ಅವರು ಯಾವಾಗಲೂ ಹೊಸ ಹೊಸತಾಗಿ ಹಾಸ್ಯವನ್ನು ಹೇಳ್ತಾ ಇರ್ತಾರೆ.  ಹೀಗಾಗಿ ಹಾಸ್ಯ ಉಪನ್ಯಾಸಗಳಲ್ಲಿ, ದೂರದರ್ಶನದ ಹಾಸ್ಯ ಧಾರಾವಾಹಿಗಳಲ್ಲಿ , ರೇಡಿಯೋ  ಸಂಭಾಷಣೆಗಳಲ್ಲಿಕಥೆಗಳಲ್ಲಿ, ನಗೆಬರಹಗಳಲ್ಲಿ ಹೀಗೆ ಎಲ್ಲೆಡೆಯಲ್ಲಿ ನರಸಿಂಹಮೂರ್ತಿ ಯಾವಾಗಲೂ  ಜನರಿಂದ ಅಪೇಕ್ಷಿತರು.

ಐದುಸಾವಿರಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳ ದಾಖಲೆ, ಎರಡು ಸಾವಿರಕ್ಕೂ ಹೆಚ್ಚು ನಗೆ ಲೇಖನಗಳು, ಎರಡು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳು, ನೂರಾರು ಬಾನುಲಿ ನಾಟಕಗಳು, ನೂರಾರು  ಪುಸ್ತಕಗಳು ಇವು ನರಸಿಂಹಮೂರ್ತಿ ಅವರ ಅಗಾಧ ಸಾಧನೆಯ ಬಗ್ಗೆ  ಉಲ್ಲೇಖಿತವಾಗಿರುವ ಸಂಕ್ಷಿಪ್ತ ಮಾತುಗಳು. 

ಎಂ.ಎಸ್.ನರಸಿಂಹಮೂರ್ತಿಯವರು 1949 ಅಕ್ಟೋಬರ 20ರಂದು ಕೋಲಾರ ಜಿಲ್ಲೆಯ ಮಾಲೂರು ಗ್ರಾಮದಲ್ಲಿ ಜನಿಸಿದರು.  ಮಾಲೂರಿನಲ್ಲಿ ಶಾಲೆಯ ಓದು, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು ಓದು, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ, ಭಾರತೀ ವಿದ್ಯಾಭವನದ ಪತ್ರಿಕೋದ್ಯಮದಲ್ಲಿ ಉನ್ನತ ಶ್ರೇಣಿಯ ಸಾಧನೆ ಇವು ನರಸಿಂಹಮೂರ್ತಿ ಅವರ ವಿದ್ಯಾರ್ಜನೆಯ ಸಾಧನೆಗಳು.  ವೃತ್ತಿಯಲ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಮ್ಯಾನೇಜರ್ ಹುದ್ದೆಯವರೆಗೆ ಏರಿ ಈಗ ಅಲ್ಲಿಂದ ನಿವೃತ್ತರು.  ಹಾಸ್ಯದ ಪ್ರವೃತ್ತಿಯ ಅವರು ಆ  ವಿಚಾರದಲ್ಲಿ ಮಾತ್ರ ನಿರಂತರ ಕಾರ್ಯಪ್ರವೃತ್ತರು.

ಹಾಸ್ಯದಲ್ಲಿ ಬರಹವೆಂದ ಮಾತ್ರಕ್ಕೆ ನರಸಿಂಹ ಮೂರ್ತಿ ಅವರು ಇತರ ಕ್ಷೇತ್ರಗಳಲ್ಲಿ ಬರವಣಿಗೆ ಮಾಡಿಲ್ಲವೆಂದೇನಲ್ಲ.  ಮಂದಸ್ಮಿತ ಅಂಥಹ ಕಾದಂಬರಿ; ಬಾಲಗಂಗಾಧರ ತಿಲಕ್, ಆಶುತೋಷ ಮುಖರ್ಜಿ, ವಿದ್ಯಾವತಿದೇವಿ, ಮೇಡಂ ಕಾಮಾ ಮುಂತಾದ ಮಕ್ಕಳ ಸಾಹಿತ್ಯ; ‘ಭಾರತದ ರಾಷ್ಟ್ರೀಯತೆಎಂಬ ವಿಚಾರ ಸಾಹಿತ್ಯ; ಅಂಕಣ ಬರಹ, ಸಂಪಾದಕತ್ವ ಇವೆಲ್ಲವನ್ನೂ ನರಸಿಂಹ ಮೂರ್ತಿ ಸಮರ್ಥವಾಗಿ ನಿರ್ವಹಿಸಿದ್ದಾರೆ. 

ಹಾಸ್ಯ ಸಂಕಲನಗಳಲ್ಲಿ ಸ್ವಯಂವಧು’, ‘ಟೈರ್ ಪ್ರಶಸ್ತಿ ವಿಜೇತ’, ‘ಶ್ರಮದಾನ’, ‘ಬಾಬ್ಬಿ’, ‘ಗೂಳಿಕಾಳಗ’, ‘ಕಂಡಕ್ಟರ್  ಕರಿಯಪ್ಪ’, ‘ಕಾನಿಷ್ಕೋಪಾಖ್ಯಾನ’, ‘ವೈಕುಂಠಕ್ಕೆ ಬುಲಾವ್’, ‘ಸನ್ಮಾನಸುಖ ಮತ್ತು ಇತರ ನಗೆ ನಾಟಕಗಳು’, ‘ಕಿವುಡು ಸಾರ್ ಕಿವುಡು ಮತ್ತು ಇತರ ನಗೆ ನಾಟಕಗಳು’, ‘ವರ್ಗಾವರ್ಗಿ’, ‘ಸಮಗ್ರ ಹಾಸ್ಯಮುಂತಾದ ಹಲವಾರು ಸಂಗ್ರಹಗಳಿವೆ.  1966ರಲ್ಲಿ ಸುಧಾವಾರಪತ್ರಿಕೆಯಲ್ಲಿ ಮೂಡಿಬಂದ ಮೊದಲನಗೆ ಲೇಖನದಿಂದ ಪ್ರಾರಂಭಗೊಂಡು ನರಸಿಂಹ ಮೂರ್ತಿ ಅವರ  ಸಹಸ್ರಾರು  ನಗೆಲೇಖನ, ಲಲಿತ ಪ್ರಬಂಧಗಳು ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಆಕಾಶವಾಣಿಗಾಗಿ ನೂರಾರು ನಗೆ ನಾಟಕಗಳನ್ನು ಬರೆದಿದ್ದಾರೆ.  ನಾಡಿನ ಹಲವೆಡೆಗಳಲ್ಲಿ ಹಾಸ್ಯ ಸಾಹಿತ್ಯ ರಚನಾ ಕಮ್ಮಟಗಳ ಸಂಚಾಲಕತ್ವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.  ವಿಶ್ವದೆಲ್ಲೆಡೆ ಉಪನ್ಯಾಸ, ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಕೇಳುಗರ ಪ್ರಶ್ನೆಗೆ ಹಲವು ಹೆಸರುಗಳಲ್ಲಿ ತಮ್ಮನ್ನು ಮರೆಸಿಕೊಂಡು ನಕ್ಕು ನಗಿಸುವ ಉತ್ತರ ನೀಡಿದ್ದಾರೆ.

ದೂರದರ್ಶನದಲ್ಲಿ ಪ್ರಸಿದ್ಧವೆನಿಸಿರುವ ಕ್ರೇಜಿ ಕರ್ನಲ್’, ದೂರದರ್ಶನದಲ್ಲಿ ಕಿವುಡು ಮೂಖ ಮಕ್ಕಳು ಅಭಿನಯಿಸಿ ಎಲ್ಲೆಡೆ ಪ್ರಶಂಸೆ ಪಡೆದ  ಮೊಟ್ಟ ಮೊದಲ ಮೂಕಿ ಧಾರಾವಾಹಿ ನಿಶ್ಶಬ್ದ ಕನಸು’, ‘ಪಾ.ಪ.ಪಾಂಡು’, ‘ಸಿಲ್ಲಿ ಲಲ್ಲಿ’, ‘ಕಂಡಕ್ಟರ್ ಕರಿಯಪ್ಪ’, ‘ಪ್ರೇಮ ಎಂದರೆ ಇದೇ ಇದೇ’, ‘ಸಬೀನಾ’, ‘ಮಿ || ನಿರುದ್ಯೋಗಿ’, ‘ನಗುನಗುತಾನಲಿ’, ‘ಯದ್ವಾತದ್ವಾ ‘, ‘ಯಾಕ್ ಹಿಂಗಾಡ್ತಾರೋ’, ‘ಸೆಕೆಂಡ್ ಹ್ಯಾಂಡ್ ಸದಾಶಿವ’, ‘ಪಾಂಡೂ ಐ ಲವ್ ಯೂ’, ‘ಪಾಯಿಂಟ್ ಪರಿಮಳ’,  ‘ಹಾಸ್ಯದರಸ’, ‘ಕಾಮಿಡಿ ಕಿಲಾಡಿಗಳು’, ‘ಕಾಮಿಡಿ ಎಕ್ಸ್‌ಪ್ರೆಸ್ಹೀಗೆ ನೂರಾರು ಧಾರಾವಾಹಿಗಳ ಇದುವರೆಗಿನ  ಏಳು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಿಗೆ ಅವರು ಚಿತ್ರಕಥೆ ಬರೆದಿದ್ದಾರೆ. 


ನರಸಿಂಹ ಮೂರ್ತಿ ಅವರ  ಸ್ವಯಂವಧು’.  ‘ವರ್ಗಾವರ್ಗಿಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನರಾಜ್ಯ ಸರ್ಕಾರ, ಸಂಘ ಸಂಸ್ಥೆಗಳು, ಹಲವು ಪ್ರತಿಷ್ಠಾನಗಳ  ಗೌರವಗಳು, ದೂರದರ್ಶನ ಧಾರಾವಾಹಿಗಳಿಗೆ ಸಂದ ಪ್ರಶಸ್ತಿಗಳುದೇಶ ವಿದೇಶಗಳಲ್ಲಿ ವಿವಿಧ ರೀತಿಯ ಸನ್ಮಾನಗಳು ಹೀಗೆ ಹಲವಾರು ರೀತಿಯ ಪ್ರೀತಿ ಗೌರವಗಳು ಸಂದಿವೆ.    ಸದಾ ನಗೆಮೊಗದ ಎಲ್ಲೆಲ್ಲಿಯೂ ನಗೆಯ ಸೌಗಂಧವನ್ನು ಪಸರಿಸುತ್ತಾ ಬಂದಿರುವ ಎಂ. ಎಸ್. ನರಸಿಂಹಮೂರ್ತಿ ಅವರ ಬದುಕು ಸುಖ, ಸೌಖ್ಯ, ನಲ್ಮೆಗಳ ಸೌಗಂಧದಲ್ಲಿ ನಿರಂತರವಾಗಿ ಅರಳುತ್ತಿರಲಿ ಎಂದು ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

Tag: M. S. Narasimha Murthy

ಕಾಮೆಂಟ್‌ಗಳಿಲ್ಲ: