ಸೋಮವಾರ, ಸೆಪ್ಟೆಂಬರ್ 2, 2013

ಜಿ.ಕೆ. ವೆಂಕಟೇಶ್

ಜಿ.ಕೆ. ವೆಂಕಟೇಶ್

ಕನ್ನಡ ಚಿತ್ರರಂಗದ ಅಪ್ರತಿಮ ಸಂಗೀತ ನಿರ್ದೇಶಕ ವಿಶ್ವ ಪ್ರಸಿದ್ಧರಾದ ಇಳಯರಾಜಾ ಅವರ ಗುರುಗಳಾದ ಶ್ರೀ ಜಿ.ಕೆ. ವೆಂಕಟೇಶ್ ಅವರು ಜನಿಸಿದ್ದು ಸೆಪ್ಟೆಂಬರ್ 21, 1927ರಂದು.  ಯಾರ ಯಾರ ಬದುಕಿನ ಪ್ರಾರಂಭ ಎಲ್ಲೋ, ಅಂತ್ಯ ಎಲ್ಲೋ, ಅವರ ಸಾಧನೆ ಹೇಗೋ ಅದೆಲ್ಲಾ ಯಾರು ಹೇಗೆ ತಾನೇ ಊಹಿಸಬಲ್ಲರು.  ಅದೆಲ್ಲಾ ದೈವನಿಯಾಮಕನಿಗೇ ಸೇರಿದ್ದಿರಬಹುದೆ ಈ ಮಾತು ಇಲ್ಲೇಕೆ ಬರುತ್ತಿದೆ ಎಂದರೆ, ನಮ್ಮ ಜಿ. ಕೆ. ವೆಂಕಟೇಶ್ ಅವರು ಜನಿಸಿದ್ದು ಆಂಧ್ರದಲ್ಲಿ.  ಅವರ ಬದುಕು (1993ರ ನವೆಂಬರ್ ಮಾಸದಲ್ಲಿ) ಅಂತ್ಯ ಕಂಡದ್ದು ಚನ್ನೈನಲ್ಲಿ. ಆದರೆ ಅವರು ಅದ್ಭುತ ಸಾಧನೆ ಮಾಡಿ ಜನಪ್ರಿಯರಾಗಿದ್ದು ಕನ್ನಡದ ಮಣ್ಣಿನಲ್ಲಿ.  

ಕುವೆಂಪು ಅವರ ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ಮತ್ತು ಕೆ. ಎಸ್. ನರಸಿಂಹ ಸ್ವಾಮಿ ಅವರ ಇವಳು ಯಾರು ಬಲ್ಲೆಯೇನು’, ಮಂಜೇಶ್ವರ ಗೋವಿಂದ ಪೈ ಅವರ ತಾಯೆ ಬಾರ ಮೊಗವ ತೋರಮುಂತಾದ  ಕವಿತೆಗಳನ್ನು ಚಲನಚಿತ್ರ ಗೀತೆಗಳಾಗಿ ಅಳವಡಿಸುವುದರ ಮೂಲಕ ಚಿತ್ರರಂಗದಲ್ಲಿ ಹೊಸ ಪರಂಪರೆಗಳನ್ನು ಸೃಷ್ಟಿಸಿದವರು ಜಿ. ಕೆ. ವೆಂಕಟೇಶ್.  ಡಾ. ರಾಜ್, ಸಿ. ಅಶ್ವಥ್, ಬಿ.ಕೆ. ಸುಮಿತ್ರ, ಬೆಂಗಳೂರು ಲತ, ಸುಲೋಚನ ಮುಂತಾದವರನ್ನು ಚಲನಚಿತ್ರ ಗಾಯನ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿದ್ದು ಸಹಾ ಜಿ. ಕೆ. ವೆಂಕಟೇಶ್ ಅವರೇ.  ಅವರು   ಇಮ್ಮಡಿ ಪುಲಿಕೇಶಿ, ತುಂಬಿದಕೊಡ ಮುಂತಾದ   ಚಿತ್ರ ನಿರ್ಮಾಣ ಸಹಾ ಮಾಡಿದ್ದರು. ಇಳಯರಾಜಾ, ವೈದ್ಯನಾಥನ್, ಶಂಕರ್ ಗಣೇಶ್ ಅವರಂತಹ ಸಂಗೀತ ನಿರ್ದೇಶಕರನ್ನು ತಯಾರು ಮಾಡಿದವರು ಕೂಡಾ ಅವರೇ.   ಹೀಗೆ ಅವರ ಸಾಧನೆಗಳನ್ನು ಹೇಳುತ್ತ ಹೋಗಬಹುದು.

'ಹರಿಭಕ್ತ' ಜಿ. ಕೆ. ವೆಂಕಟೇಶ್ ಅವರ ಸಂಗೀತ ನಿರ್ದೇಶನದ  ಮೊದಲ ಚಿತ್ರ. ಅಂದು ರೇಡಿಯೋದಲ್ಲಿ ಕೇಳಿಬರುತ್ತಿದ್ದ ದೇವ ದರುಶನವ ನೀಡೆಯ’, ‘ತಾಯಿ ತಂದೆಯ ಸೇವೆಯ ಯೋಗ ಎಂಬ ಸಾಲಿನ ಘಂಟಸಾಲ ಹಾಡಿದ ಗೀತೆಗಳು ಇಂದೂ ಕಿವಿಯಲ್ಲಿ ಮಾರ್ದನಿಸುತ್ತಿರುವ ಹಾಗಿದೆ.  'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ' ಹಾಡನ್ನು ಸ್ವತಃ ಹಾಡಿ ಅವರು  ತೆರೆಯ ಮೇಲೂ ಆ ಗೀತೆಯ ಹಾಡುಗಾರರಾಗಿ ಮೂಡಿ ಬಂದಿದ್ದರು.  ಅವರ 119 ಚಿತ್ರಗಳ ಪಟ್ಟಿಯನ್ನು ನೋಡುತ್ತಿದ್ದೆ.  ಅದರಲ್ಲಿನ ಬಹುತೇಕ ಹಾಡುಗಳು ಜನ ಮನದಲ್ಲಿ ಸ್ಥಿರವಾಗಿದೆ.  ದಶಾವತಾರದ ವೈದೇಹಿ ಏನಾದಳು, ತಾಯೆ ಬಾರಾ ಮೊಗವ ತೋರ, ಕಾಳಿಂಗ ರಾಯರು ಹಾಡಿದ ಅಂತಿಂಥ ಹೆಣ್ಣು ನೀನಲ್ಲ  ಇತ್ಯಾದಿ ಹಾಡುಗಳು ಅಂದಿನಿಂದ ಇಂದಿನವರೆಗೆ ಜನರ ನರ ನಾಡಿಯಲ್ಲಿ ಬೆರೆತು ಹೋಗಿದೆ.  ಭೀಮ ಸೇನ ಜೋಷಿ, ಬಾಲಮುರಳಿ ಕೃಷ್ಣ, ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್  ಅಂತಹವರನ್ನು ಒಟ್ಟಿಗೆ ತಂದು ವಿಶಿಷ್ಟ ಸಂಗೀತ ಧಾರೆಯನ್ನು ಸುರಿಸಿದ 'ಸಂಧ್ಯಾರಾಗ' ಹಾಡುಗಳನ್ನು ಮರೆಯುವುದಾದರೂ ಹೇಗೆ!  ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಚಿತ್ರಗಳ ಸಂಗೀತವಂತೂ ಎಲ್ಲಾ ರೀತಿಯ ವರ್ಣನೆಗಳ ಮೇರೆಯನ್ನೂ ಮೀರುವಂತದ್ದು.  ಭಕ್ತ ಕುಂಬಾರ ಹಾಡುಗಳು ಭಕ್ತಿ ಪಂಥದ ಚಲನಚಿತ್ರಗಳ ಸಾಲಿನಲ್ಲಿ ಹೊಸ ವಾಖ್ಯೆ ಬರೆದಂತದ್ದು.  'ನೋಡಿ ಸ್ವಾಮಿ ನಾವಿರೋದು ಹೀಗೆ' ಚಿತ್ರದಲ್ಲಿ ಭೀಮ ಸೇನ ಜೋಷಿ ಅವರು ಹಾಡಿದ ಭಾಗ್ಯದ ಲಕ್ಷ್ಮಿ ಭಾರಮ್ಮ ಹಾಡು, ಅಂದಿನವರೆಗೆ ನಾವು  ಕೇಳಿದ ಆ ದಾಸ ರಚನೆಯ ಎಲ್ಲ ರೀತಿಗಳಿಗಿಂತಲೂ ವಿಭಿನ್ನವಾದದ್ದು.  ಬಿಸ್ಮಿಲ್ಲಾ ಖಾನರ ಷಹನಾಯ್ ವಾದನವನ್ನು ಕನ್ನಡಿಗರ ಹೃದಯದಲ್ಲಿ ಅಮರವಾಗಿಸಿದ 'ಸನಾದಿ ಅಪ್ಪಣ್ಣ' ಚಿತ್ರವನ್ನು ಯಾರು ತಾನೇ ಮರೆತಾರು.  

ಸ್ವಯಂ ಜಿ. ಕೆ. ವೆಂಕಟೇಶ್ ಅವರೇ ಹಾಡಿರುವ 'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ', 'ವಿರಸವೆಂಬ ವಿಷಕೆ ಬಲಿಯಾದೆ ಏತಕೆ', 'ಆಡಿಸಿದಾತ ಬೇಸರಮೂಡಿ ಗೀತೆಗಳು ನಮ್ಮನ್ನು ಭಾವನಾತ್ಮಕ ಪ್ರಪಂಚದಲ್ಲಿ ತೇಲಿಸುತ್ತವೆ.


ಈ ಮಹಾನ್ ಸಂಗೀತ ನಿರ್ದೇಶಕರು ನವೆಂಬರ್ 13, 1993ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಇಂತಹ ಮಹಾನ್ ವ್ಯಕ್ತಿಯ ಅಸಾಮಾನ್ಯ ಸಾಧನೆಯನ್ನು  ನಮ್ಮ ಕನ್ನಡದಲ್ಲಿ ಕಂಡ ನಾವೆಷ್ಟು ಧನ್ಯರಲ್ಲವೆ.  ಈ ಮಹಾನ್ ಸಂಗೀತ ಸಾಮ್ರಾಟರಿಗೆ ನಮೋನ್ನಮಃ. Tag: G. K. Venkatesh

ಕಾಮೆಂಟ್‌ಗಳಿಲ್ಲ: