ಭಾನುವಾರ, ಅಕ್ಟೋಬರ್ 13, 2013

ಆಯುಧಪೂಜೆ

ಆಯುಧಪೂಜೆ

ನಾವು ಉಪಯೋಗಿಸುವ ವಸ್ತುಗಳಾದ ಆಯುಧಗಳಿಗೆ ಕೃತಜ್ಞತಾ ಭಾವನೆ ಹೊಂದುವುದೇ ಆಯುಧ ಪೂಜೆ’.  ಈ ವಿಶ್ವವನ್ನೆಲ್ಲಾ ಒಂದು ವ್ಯವಸ್ಥೆಯಲ್ಲಿ ನಡೆಸುತ್ತಿರುವ ಬ್ರಹ್ಮ ತತ್ವವೆಂಬ  ಪರಮಾತ್ಮನಿಗೆ ನಾವು ಪೂಜೆ ಸಲ್ಲಿಸುತ್ತೇವೆ.  ಆ ಪರಮಾತ್ಮ ಎಂಬುದು ಒಂದು ಚೈತನ್ಯ.  ಆ ಚೈತನ್ಯದಿಂದಲೇ ವಸ್ತುಗಳು ರೂಪಗೊಳ್ಳುತ್ತವೆ.  ನಾವು ಅದರಲ್ಲಿ ಆ ಪರಮಾತ್ಮ ಶಕ್ತಿ ಕಾಣುವವರೆಗೆ ಅದು ಜಡವಾಗಿಯೇ ಇರುತ್ತವೆ.  ಅದರಲ್ಲಿ ಪರಮಾತ್ಮ ನೀಡಿರುವ ಜ್ಞಾನವನ್ನು ಉಪಯೋಗಿಸಿಕೊಂಡು ಸಂಚಲನ ಶಕ್ತಿ ಎಂಬ ಚೈತನ್ಯವನ್ನು ತುಂಬಿದಾಗ ಅದು ನಮಗೆ ಉಪಯುಕ್ತವಾಗಿ ಚಾಲನಾ ಶಕ್ತಿಯನ್ನು ಪಡೆದುಕೊಳ್ಳುತ್ತದೆ.  ನಮ್ಮ ನಿರೀಕ್ಷೆಗಳ ಔನ್ನತ್ಯಕ್ಕೆ ಅನುಗುಣವಾಗಿ ಅದು ನಮಗೆ ಕಾಮಧೇನುವೂ ಆಗಿರುತ್ತದೆ.  ಒಂದು ರೀತಿಯಲ್ಲಿ ಇದು ವಿಜ್ಞಾನ ಹೇಳುವ matter ಮತ್ತು energy ಸಿದ್ಧಾಂತಕ್ಕೆ ಸಮೀಪವಾದದ್ದು.   ನಾವು, ‘ನಾನುಎಂದು ಭಾವಿಸುವ ನಮ್ಮ ದೇಹ ಕೂಡಾ ಚೈತನ್ಯವೆಂಬ ಸಂಚಲನ ಶಕ್ತಿ ಇಲ್ಲದಿದ್ದರೆ ಜಡವೇ!  ಅಂದರೆ ತ್ಯಾಜ್ಯಕ್ಕೆ  ಯೋಗ್ಯವಾಗಿ ಮತ್ತೆ ಪ್ರಕೃತಿಶಕ್ತಿಯಲ್ಲಿ ಗುರುತಿಲ್ಲದಂತೆ ಅಂತರ್ಧಾನವಾಗಲು ಯೋಗ್ಯವಾದದ್ದೇ.

ನಾವು ಒಂದು ಹೊಸ ಬಟ್ಟೆ ಕೊಂಡಾಗ ನಾವು ನಿಂತಾಗ, ಕುಳಿತಾಗ, ಚಲಿಸುವಾಗ ಅದಕ್ಕೆಲ್ಲಿ ಸುಕ್ಕು ಬಂದಿತೋ ಎಂದು ಜಾಗರೂಕರಾಗಿರುತ್ತೇವೆ.  ಹೊಸ ಕುರ್ಚಿ ಕೊಂಡಾಗ ಅದರ ಮೃದು ಸ್ಪರ್ಶದಲ್ಲಿ ತೇಲಿ ತೇಲಿ ಸುಖಿಸುತ್ತೇವೆ.  ಹೊಸ ವಾಹನ ಕೊಂಡಾಗ ಅದಕ್ಕೆ ಒಂದು ಸಣ್ಣ ಗೆರೆ ಮೂಡಿದರೂ ನೋವನುಭವಿಸುತ್ತೇವೆ.  ಬರಬರುತ್ತಾ ಅದರ ಇರುವಿಕೆಯನ್ನೇ ಮರೆತು ಅದನ್ನು ಅಜಾಗರೂಕವಾಗಿ ನಡೆಸುತ್ತೇವೆ.  ಸಿಟ್ಟಿನಲ್ಲಿ ಅದಕ್ಕೂ ನಾಲ್ಕು ಭಾರಿಸುತ್ತೇವೆ.  ಒಂದು ದಿನ ತೂಕಕ್ಕೆ ಹಾಕುತ್ತೇವೆ ಅಥವಾ ಗಪ್ ಚುಪ್ ಎಂದು ಕಸದ ತೊಟ್ಟಿಯ ಬಳಿ ಇಟ್ಟು ಹಿಂದಿರುಗಿ ನೋಡದೆ ಕಾಲ್ತೆಗೆಯುತ್ತೇವೆ.  ಒಂದು ರೀತಿಯಲ್ಲಿ ನಾವು ಆ ವಸ್ತುವನ್ನು ವಸ್ತುವಾಗಿ ನೋಡುವುದರ ಮೋಹ ತಿರಸ್ಕಾರಗಳ ಆಚೆಯಲ್ಲಿ, ಆ ವಸ್ತುವಿನ ಚೈತನ್ಯ ಶಕ್ತಿಯನ್ನು ನಾವು ಅನುಭಾವಿಸುವುದಿಲ್ಲ.  ಹೀಗಾಗಿ ನಮಗೆ ಜೀವಿಗಳಾದ ಪ್ರಾಣಿ, ಸಸ್ಯ ಮತ್ತು ಮನುಷ್ಯರೂ ಕೂಡ, ನಮಗೆ ಉಪಯೋಗಕ್ಕೆ ಬರುವ ಅಥವಾ ಬಾರದಿರುವ ವಸ್ತುಗಳಾಗಿಯೇ ಆಗಿಬಿಟ್ಟಿದ್ದಾರೆ. 

ನಾನು ಪುಟ್ಟ ಹುಡುಗನಾಗಿದ್ದಾಗ, ಇಂದು ಮೈಸೂರು ಮೆಡಿಕಲ್ ಕಾಲೇಜು ಆಗಿರುವ ಅಂದಿನ ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಹೋದಾಗ, ಅಲ್ಲಿ ಇಟ್ಟಿದ್ದ ಟೆಲಿವಿಷನ್ಯಂತ್ರವನ್ನು ನೋಡಿದ್ದ ನೆನಪು ಇನ್ನೂ ಇದೆ.  ವರ್ಷ 1968 ಇರಬೇಕು.   ಆಗ ಭಾರತದಲ್ಲಿ ಇನ್ನೂ ದೂರದರ್ಶನ ಕೆಂದ್ರ ಸ್ಥಾಪಿತವಾಗಿರಲಿಲ್ಲ ಎನಿಸುತ್ತದೆ.   ಆ ಟೆಲಿವಿಷನ್ ನೋಡಿದಾಗ ನನಗೆ ಅದರಲ್ಲಿ ನನ್ನ ಮುಖ ಕಂಡಿತು.  ಆಗ ಅಂದುಕೊಂಡೆ ಓ ಟೆಲಿವಿಷನ್ ಅಂದ್ರೆ ನಮ್ಮ ಮುಖ ನೋಡಿಕೊಳ್ಳುವ ಕನ್ನಡಿ ಇರುವ ಒಂದು ಪೆಟ್ಟಿಗೆ ಅಂತ.  ಹಲವು ವರ್ಷದ ಹಿಂದೆ ನಮ್ಮ ಗುರುಗಳಾದ ಸ್ವಾಮಿ ಸುಖಬೋಧಾನಂದರು ಹೇಳುತ್ತಿದ್ದರು.  ನಾನು ಅಮೆರಿಕಕ್ಕೆ ಹೋದಾಗ ನನಗೆ ಒಂದು ಲ್ಯಾಪ್ ಟಾಪ್ಕೊಟ್ಟರು.  ಅದನ್ನು ನಾನು ಪೇಪರ್ ವೈಟ್ ತರಹ ಉಪಯೋಗಿಸುತ್ತಿದ್ದೇನೆಎಂದು.  ಎಲ್ಲಿಯವರೆಗೆ ಒಂದು ವಸ್ತುವಿನ ಚೈತನ್ಯ ಶಕ್ತಿ ಅರಿವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಅದನ್ನು ಅರ್ಥೈಸುವುದಿಲ್ಲ.  ನಾವು ಪರಮಾತ್ಮನನ್ನು ಅರ್ಥೈಸಿಲ್ಲ ಎಂಬುದಕ್ಕೆ ಇದೇ ಚಿಂತನೆ ಮತ್ತಷ್ಟು ದಾರಿ ಮಾಡಿಕೊಟ್ಟೀತೇನೋ!

ಈ ಭೂಮಿಯ ಮೇಲೆ ಅವತರಿಸಿದ ಯುಗಪುರುಷರು, ಋಷಿ ಮುನಿಗಳು, ವಿಜ್ಞಾನಿಗಳು ಈ ಬ್ರಹ್ಮಾಂಡದಲ್ಲಿರುವ ಸರ್ವಂ ಬ್ರಹ್ಮಮಯಂಎಂಬ ಚಿಂತನೆಯ ಅನುಭೂತಿಯಲ್ಲಿ, ತಮ್ಮ ಅಂತರ್ಚಕ್ಷುವಿನ ಮೂಲಕ ಎಲ್ಲೆಡೆ ಸಂಚಲನೆಯನ್ನು ಗುರುತಿಸಿ ಅವುಗಳನ್ನು ಪ್ರತಿನಿತ್ಯ ಕಾಣುವಂತಹ ಮತ್ತು  ಅನುಭಾವಿಸುವಂತಹ ವಸ್ತುಗಳ ರೂಪದಲ್ಲಿ ನಮ್ಮ ಮುಂದಿರಿಸಿದರು.  ಬನ್ನಂಜೆ ಗೋವಿಂದಾಚಾರ್ಯರು ಈ ಮಾತನ್ನು ಸುಂದರವಾಗಿ ಹೇಳುತ್ತಾರೆ. ಒಬ್ಬ ಮಹಾನ್ ಅಮೆರಿಕನ್ ತತ್ವಶಾಸ್ತ್ರಜ್ಞರು ಹೇಳುತ್ತಾರೆ.   ನಾವು ಯಾವುದನ್ನೂ ಸೃಜಿಸಲು ಸಾಧ್ಯವಿಲ್ಲ.  ನಾವು ಯಾವು ಯಾವುದನ್ನು ಇಂದಿನ ಶ್ರೇಷ್ಠ ಆವಿಷ್ಕಾರ ಎಂದು ಅರಿತಿದ್ದೇವೆಯೋ, ಅದೆಲ್ಲವೂ ಹಲವಾರು ಸಹಸ್ರವರ್ಷಗಳು  ಮುಂಚಿತವಾಗಿ ಈ ಭುವಿಯಲ್ಲಿದ್ದ ಋಷಿಮುನಿಗಳಿಗೆ ತಿಳಿದಿತ್ತು.  ನಮಗೆ ಏನೂ ತಿಳಿದಿಲ್ಲ.  ಕಾರಣವೆಂದರೆ we have covered our intuition with our intellegence”.  ನಮ್ಮ ಬುದ್ಧಿವಂತಿಕೆ ಎಂಬ ಅಹಂ, ನಾವು ಈ ಲೋಕದಲ್ಲಿರುವ, ಈ ನಮ್ಮನ್ನೊಳಗೊಂಡ ಈ ಲೋಕದ ಸಮಸ್ತ ಚೈತನ್ಯ ಶಕ್ತಿಯನ್ನೂ ಅನುಭಾವಿಸುವತ್ತ, ಅಂದರೆ ಆ ಶಕ್ತಿಗಳಿಗೆ ಕೃತಜ್ಞರಾಗಿರುವ ಬಗ್ಗೆ ನಮ್ಮನ್ನು ವಿಮುಖರನ್ನಾಗಿಸಿಬಿಟ್ಟಿದೆ.  ಹಾಗಾಗಿ God, I am lost please help meಎಂಬ ಅಸಹಾಯಕತೆಗೆ ತಲುಪಿದ್ದೇವೆ.  ಅದೂ ಯಾಂತ್ರಿಕ ಪ್ರಾರ್ಥನೆಯಾಗಿ.

ನಾನು ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಒಬ್ಬ ಹಿರಿಯ ನಿರ್ದೇಶಕರೊಬ್ಬರು ತಾವು ತೊಂಬತ್ತರ ದಶಕದಲ್ಲಿ  ಜಪಾನಿನ ಸಿಟಿಜನ್ ಕೈಗಡಿಯಾರ ಸಂಸ್ಥೆಗೆ ಭೇಟಿ ಕೊಟ್ಟ ಅನುಭವವನ್ನು ವರ್ಣಿಸಿದ್ದರಲ್ಲಿ ಒಂದು ಮಾತು ಇನ್ನೂ ಮನಸ್ಸಿನಲ್ಲಿ ಗಾಢವಾಗಿ ನಿಂತಿದೆ.  ಅಲ್ಲಿದ್ದ ಹಲವಾರು ಸ್ವಯಂಚಾಲಿತ ಯಂತ್ರಗಳಲ್ಲಿ  ಕೆಲಸ ಮಾಡದೆ ಸುಮ್ಮನಿದ್ದ ಯಂತ್ರವನ್ನು ಕುರಿತು ಜಪಾನಿನ ಅಧಿಕಾರಿ “she is sick.  Doctors are attending to it” ಎಂದರಂತೆ.  ತಾವು ಉಪಯೋಗಿಸುತ್ತಿದ್ದ ಯಂತ್ರ ತಮಗೊಂದು ಮಾತೆ ಅಥವಾ ತಮ್ಮಂತೆಯೇ ಸಜೀವ ವ್ಯಕ್ತಿ ಹಾಗೂ ಅದನ್ನು ಸರಿಪಡಿಸಲು ಬರುವ ವ್ಯಕ್ತಿ ಕೇವಲ ರಿಪೇರಿಯವನಲ್ಲ ಒಬ್ಬ ವೈದ್ಯ ಎಂದು ಭಾವಿಸುವುದು ಜಪಾನಿಯರಿಗೆ ಒಂದು ಸಹಜ ಬದುಕಿನ ರೀತಿಯದ್ದು ಎಂಬುದು ಅತ್ಯಂತ ಮನಮುಟ್ಟುವಂತ ವಿಷಯವಾಗಿದೆ.

ಹಿಂದೆ ಆಯುಧಗಳನ್ನು ಪೂಜಿಸುತ್ತಿದ್ದರು ಎನ್ನುತ್ತೇವೆ.  ಪಾಂಡವರು ಅಜ್ಞಾತವಾಸದಿಂದ ಹೊರಬಂದ ಸಮಯದಲ್ಲಿ ಬನ್ನಿಮರದಲ್ಲಿ ಮುಚ್ಚಿರಿಸಿದ್ದ ಶಸ್ತ್ರಾಸ್ತ್ರಗಳನ್ನು ಪೂಜ್ಯಭಾವನೆಯಿಂದ ಹೊರತೆಗೆದ ದಿನ ಈ ದಿನ ಎಂಬ ಮಾತೂ ಇದೆ.  ಇದೇ ರೀತಿಯಲ್ಲಿ ಮಹಾರಾಜರುಗಳು ತಮ್ಮಲ್ಲಿದ್ದ ವಸ್ತುಗಳನ್ನು ಪೂಜನೀಯ ಭಾವನೆಯಲ್ಲಿ ಆರಾಧಿಸುತ್ತಿದ್ದ ದಿನ ಕೂಡಾ ಇದು ಎಂಬ ಮಾತಿದೆ.  ಆದರೆ ಪುರಾಣಗಳನ್ನು ಕೊಂಚ ಒಳಹೊಕ್ಕು ನೋಡಿದಾಗ ಅವರು ಉಪಯೋಗಿಸುತ್ತಿದ್ದ ಒಂದೊಂದು ವಸ್ತುವಿಗೂ ಗಾಂಢೀವ, ವಿಷ್ಣುಧನುಸ್ಸು, ಪಾಂಚಜನ್ಯ ಮುಂತಾದ ಹೆಸರಿತ್ತು.  ಅವರು ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ವರುಣ, ಇಂದ್ರ, ಅಜ್ಞೇಯ, ಬ್ರಹ್ಮ ಮುಂತಾದ ಶಕ್ತಿಗಳನ್ನು ಅವಶ್ಯಕತೆಗೆ ತಕ್ಕ ಹಾಗೆ ಭಕ್ತಿಯಿಂದ ಆಹ್ವಾನಿಸುತ್ತಿದ್ದರು.  ನಾವು ಕೂಡಾ ಕಂಪ್ಯೂಟರ್ ಉಪಯೋಗಿಸಿ ನಮ್ಮ ಉತ್ತಮ ಚಿಂತನೆಯ ಧ್ಯೇಯ ಮನೋಭಾವಕ್ಕೆ ಅನುಗುಣವಾಗಿ  ಉತ್ತಮವಾದ ಪ್ರೋಗ್ರಾಂ ಮೂಡಿಸಬಹುದು.  ಇಲ್ಲವೇ ಕೆಲವು ರಾಕ್ಷಸರು ಬಾಣ ಬಿಡಲು ವಿಷ ಪೂರಿತ ಸರ್ಪ ಶಕ್ತಿ, ಅಸುರ ಶಕ್ತಿ ಆಹ್ವಾನಿಸಿದಂತೆ ವಿನಾಶಕ್ಕೂ ಉಪಯೋಗಿಸಬಹುದು.  ಯೋಗಿಯೋಬ್ಬನ ಆತ್ಮ ಚರಿತ್ರೆಪುಸ್ತಕದಲ್ಲಿ ಇದನ್ನು ಪರಮಹಂಸ ಯೋಗಾನಂದರು ಸುಂದರವಾಗಿ ಹೇಳುತ್ತಾರೆ.  ದೇವರು ನಮಗೆ ಒಳ್ಳೆಯದನ್ನೂ ಮಾಡಬಯಸುವುದಿಲ್ಲ.  ಕೆಡುಕನ್ನೂ ಮಾಡಬಯಸುವುದಿಲ್ಲ.  ಆತ ಪಾಸಿಟೀವ್ ಮತ್ತು ನೆಗೆಟೀವ್ ಎರಡೂ energyಗಳನ್ನೂ ಈ ಲೋಕದಲ್ಲಿರಿಸಿದ್ದಾನೆ.  ನಾವು ಏನಾಗಿದ್ದೇವೆಯೋ ಆ ಪ್ರಮಾಣದಲ್ಲಿ ಅವುಗಳನ್ನು ನಾವು ಆಕರ್ಷಿಸುತ್ತಾ ಬದುಕುತ್ತೇವೆ”.

ಹೀಗೆ ಎಲ್ಲ ವಿಚಾರದಲ್ಲೂ ನಾವು ಈ ಲೋಕದಲ್ಲಿ ಬಳಸುತ್ತಿರುವ, ಕಾಣುತ್ತಿರುವ ವಸ್ತುಗಳಲ್ಲಿ ಬ್ರಹ್ಮತ್ವ, ಪರಮತತ್ವವನ್ನು ನಾವು ಭಕ್ತಿಯಿಂದ ಅಹಂಕಾರವಿಲ್ಲದೆ ಆರಾಧಿಸುತ್ತಾ  ಪ್ರಸನ್ನ ಚಿತ್ತತೆಯಿಂದ ಬಾಳಬೇಕಾಗಿದೆ.  ಇವೆಲ್ಲವುಗಳ ಅಂತರಾಳದ ಸುಪ್ತತೆ ಈ ಆಯುಧಪೂಜೆ ಎಂಬ ಚಿಂತನೆಯಲ್ಲಿ ನನ್ನ ಅಂತಃಪಟಲದಲ್ಲಿ ಸರಿದುಹೊಗುತ್ತಿದೆ. 

ಇವೆಲ್ಲವುಗಳ ಪರಿಧಿಯಾಚೆಗೆ ಸಹಾ ನಾವು ಉಪಯೋಗಿಸುವ ವಸ್ತುಗಳನ್ನು ಹೇಗೆ ಗೌರವಿಸಿ ಅದರೊಂದಿಗೆ ಬಾಳಬಹುದು ಎಂಬುದಕ್ಕೆ ಒಂದು ಸಣ್ಣ ಕಥೆ ನೆನಪಾಗುತ್ತದೆ.  ಊರಿನ ಶ್ರೀಮಂತನ ಬಳಿಯಲ್ಲಿ ಸೌದೆ ಸೀಳುವವನೊಬ್ಬನಿದ್ದ.  ಆತ ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದ.  ಶ್ರೀಮಂತನಿಗೆ ಆತನ ಮೇಲೆ ಪ್ರೀತಿ ಗೌರವವೂ ಇತ್ತು.  ಆದರೆ ಆತನ ಕೆಲಸದಲ್ಲಿ ದಿನೇ ದಿನೇ ನಿರೀಕ್ಷಿತ ಮಟ್ಟದ ಉತ್ಪನ್ನ ಹೊರಬರುತ್ತಿರಲಿಲ್ಲ.  ಹೀಗಾಗಿ ಶ್ರೀಮಂತ ಮತ್ತೊಬ್ಬ ಯುವಕನೊಬ್ಬನನ್ನು ಈ ಹಳಬನೊಂದಿಗೆ ನೇಮಿಸಿಕೊಂಡ.  ಹೊಸಬ ಹಳಬನಷ್ಟು ಕಷ್ಟಪಡುತ್ತಿರಲಿಲ್ಲ.  ಆದರೆ ಹಳಬನಿಗಿಂತ ಹಲವು ಪಟ್ಟು ಹೆಚ್ಚು ಉತ್ಪನ್ನ ನೀಡುತ್ತಿದ್ದ.  ಒಂದು ದಿನ ಈ ಹೊಸಬನ ಬಳಿ ಬಂದ ಹಳಬ ಕೇಳಿದ.  “ನಾನು ಅಷ್ಟೊಂದು ಕಷ್ಟಪಟ್ಟರೂ ನಿನ್ನಷ್ಟು ಉತ್ಪನ್ನ ನೀಡಲಾಗುತ್ತಿಲ್ಲ.  ನಾನು ಯಾಕೆ ಹಾಗೆ ಮಾಡಲಾಗುತ್ತಿಲ್ಲ, ನಾನು ಕೆಲಸ ಮಾಡುತ್ತಿರುವ ವಿಧಾನದಲ್ಲಿ ಏನು ತಪ್ಪಿದೆ ದಯವಿಟ್ಟು ತಿಳಿಸಿಕೊಡು” ಎಂದು ವಿನಂತಿಸಿದ. ಆ ಹೊಸಬ ಹೇಳಿದ “ಹಿರಿಯರೇ, ತಾವು ಕೆಲಸ ಮಾಡುತ್ತಿರುವ ವಿಧಾನದಲ್ಲಿ ಯಾವುದೇ ತಪ್ಪೂ ಇಲ್ಲ.  ತಮ್ಮಷ್ಟು ಸಾಮರ್ಥ್ಯ ಖಂಡಿತ ನನ್ನಲ್ಲಿಲ್ಲ.  ನಾನು ಗಮನಿಸಿದ್ದ ಒಂದೇ ಒಂದು ಅಂಶವೆಂದರೆ, “ತಾವು ಉಪಯೋಗಿಸುತ್ತಿರುವ ಕೊಡಲಿಯನ್ನು ತಾವು ಆಗಾಗ ಚೂಪು ಮಾಡಿಕೊಳ್ಳುತ್ತಿಲ್ಲ.  ನಾನು ಯಾವಾಗಲೂ ನನ್ನ ಕೊಡಲಿ ಚೂಪಾಗಿರುವುದರತ್ತ ಗಮನ ಹರಿಸುತ್ತೇನೆ”.  ಬಹುಶಃ ನಾವು ಉಪಯೋಗಿಸುವ ವಸ್ತುಗಳನ್ನು ಸಶಕ್ತವಾಗಿಟ್ಟುಕೊಳ್ಳುವ ರೀತಿಯೂ ಆಯುಧಪೂಜೆಯೇ ಸರಿ.

ಹೀಗೆ ಆಯುಧ ಪೂಜೆ ಎಂಬ ಎಲ್ಲೆಲ್ಲೂ ಬ್ರಹ್ಮವನ್ನು ಕಾಣುವ, ನಮ್ಮ ಬದುಕಿನ ಭಾಗವಾಗಿರುವ ಎಲ್ಲವನ್ನೂ ಆದರದಿಂದ ಕಾಣುವ,   ಪೂಜಿಸುವ ಈ ಹಬ್ಬಕ್ಕೆ ಎಲ್ಲರಿಗೂ ಶುಭ ಹಾರೈಕೆಗಳು.  ನಿಮ್ಮಂತಹ ಸಹೃದಯರನ್ನು ಒದಗಿಸಿರುವ ಈ ಅಂತರಜಾಲ  ವ್ಯವಸ್ಥೆಗೂ ನನ್ನ ಭಕ್ತಿಪೂರ್ವಕ ನಮನಗಳು.

Tag: Ayudha Puja

ಕಾಮೆಂಟ್‌ಗಳಿಲ್ಲ: