ಮಂಗಳವಾರ, ಅಕ್ಟೋಬರ್ 15, 2013

ಬಿ. ಅರ್. ಛಾಯಾ

ಬಿ. ಅರ್. ಛಾಯಾ

ಹಿನ್ನಲೆ ಗಾಯನ, ಭಾವಗೀತೆ, ಕನ್ನಡ ಗೀತೆ, ಜನಪದ ಗೀತೆ, ಮಕ್ಕಳ ಗೀತೆ, ಶಾಸ್ತ್ರೀಯ ಗಾಯನ ಹೀಗೆ ಸಕಲಗಾಯನ ಪರಿಣತೆ ಬಿ. ಆರ್. ಛಾಯಾ.   ಸಂಗೀತವು  ಛಾಯಾ ಅವರಿದ್ದೆಡೆ ನೆರಳಿನಂತೆ ಜೊತೆಗೂಡಿರುತ್ತದೆ.  ಹೀಗಾಗಿ ಅವರು ಸಂಗೀತದ ಛಾಯೆಯೇ ಹೌದು.  ನಮ್ಮ ಬಿ. ಆರ್. ಛಾಯಾ ಅವರು ಹುಟ್ಟಿದ ದಿನ ಅಕ್ಟೋಬರ್ 16.   ಅವರ ತಾತ ಕೃಷ್ಣರಾವ್ ಗುಬ್ಬಿ ಕಂಪೆನಿಯಲ್ಲಿ ಹಾರ್ಮೋನಿಯಂ ವಾದನದಲ್ಲಿ ಹೆಸರಾಗಿದ್ದವರು.   ಸಂಗೀತ ಪ್ರಿಯರಾದ ತಂದೆ ಸಿ. ಕೆ. ರಾಮಮೂರ್ತಿ ಅವರ ಪ್ರೋತ್ಸಾಹ ಮತ್ತು ಗುರುಗಳಾದ ವಿಜಯವಾಣಿ ಹಾಗೂ ಜಗನ್ಮಾತ ವಾಸುದೇವಮೂರ್ತಿ ಅವರ ಸಂಗೀತ ಶಿಕ್ಷಣ ಬಿ. ಆರ್. ಛಾಯಾ ಅವರನ್ನು ಗಾಯಕಿಯನ್ನಾಗಿಸಿತು. 

ಛಾಯಾ ಅವರು ಸಂಗೀತದಲ್ಲಿ  ಪ್ರವರ್ಧಮಾನ ಹಂತದಲ್ಲಿದ್ದ ದಿನಗಳಲ್ಲಿ  ಕೈಗಡಿಯಾರ ತಂತ್ರಜ್ಞೆಯಾಗಿ ಸಾರ್ವಜನಿಕ ಉದ್ದಿಮೆಯಲ್ಲಿದ್ದರು.  ಮುಂದೆ ಸಂಗೀತದಲ್ಲಿ ಅವರ ತೊಡಗಿಕೊಳ್ಳುವಿಕೆ ಹೆಚ್ಚಾದಂತೆ ಸಂಗೀತವೇ ಅವರ ವೃತ್ತಿ, ಪ್ರವೃತ್ತಿ, ಬದುಕು  ಎಲ್ಲವೂ ಆಯಿತು.   ಸೊಬಗಿನ ಸೇರೆಮನೆಯಾಗಿಹೆ ನೀನು’, ‘ಜ್ಯೋತಿ ಹರಿಯಿತು ಇಂದು ನಮ್ಮಯ ಚೆಲುವ ಕನ್ನಡ ನಾಡಿಗೆಮುಂತಾಗಿ ಅವರು ಅಂದು ಹಾಡುತ್ತಿದ್ದ ಗೀತೆಗಳು ಇಂದೂ ಕಿವಿಯಲ್ಲಿ ರಿಂಗಣಿಸುತ್ತಿವೆ.  ನನ್ನ ಹರಣ ನಿನಗೆ ಶರಣ ಸಕಲ ಕಾರ್ಯ ಕಾರಣಾ, ನಿನ್ನ ಮನನದಿಂದ ತನನವೆನುತಿದೆ ತನು ಪಾವನಾಎಂಬ ಬೇಂದ್ರೆಯವರ  ಕವನ ಕೂಡಾ ಆಕಾಶವಾಣಿಯಲ್ಲಿ ಪದೇ ಪದೇ ಮೂಡಿಬರುತ್ತಿತ್ತು.  ಅಂದ ಹಾಗೆ ಬಿ. ಆರ್. ಛಾಯಾ ಕಿರಿಯ ವಯಸ್ಸಿನಲ್ಲೇ ಆಕಾಶವಾಣಿಯ ಗ್ರೇಡ್ ಕಲಾವಿದೆಯಾದ ಪ್ರತಿಭಾವಂತೆಯೂ  ಹೌದು.

ಛಾಯಾ ಅವರ ಪ್ರತಿಭೆ, ಸಂಗೀತದ ಮೇರುಪರ್ವತರಾದ ಇಳೆಯರಾಜಾ ಅವರನ್ನು ಸೆಳೆದಿತ್ತು.  ಇಳೆಯರಾಜಾ ಅವರ ಸಂಗೀತ ನಿರ್ದೇಶನದ ಹಲವು ಚಲನಚಿತ್ರ ಹಾಡುಗಳನ್ನು ಛಾಯಾ ಹಾಡಿದರು.  ಅಂದು ಸಂಗೀತದ ಹಿನ್ನಲೆಗಾಯನ ಧ್ವನಿಮುದ್ರಣ ನಡೆಯುತ್ತಿದುದೆಲ್ಲಾ ಮದರಾಸಿನಲ್ಲಿ.  ಬೆಂಗಳೂರಿನಲ್ಲಿ ಆ ಸೌಲಭ್ಯ ಇನ್ನೂ ಒದಗಿರಲಿಲ್ಲ.  ಇಂದಿನಂತೆ ಅಂದಿನ ದಿನದಲ್ಲಿ ಕಾಸಿಗೊಂದು, ಗಳಿಗೆಗೊಂದು ವಿಮಾನಗಳೂ ಇರಲಿಲ್ಲ. ಅಲ್ಲಿಯೇ ಮನೆ ಮಾಡಿಕೊಂಡಿರಲು ಸಾಧ್ಯವಾಗಲಿಲ್ಲ.  ಹೀಗಾಗಿ ಛಾಯಾ ಅವರು ಕನ್ನಡದಲ್ಲೇ ಅದೃಷ್ಟ ಪರೀಕ್ಷೆಗೆ ಕಾಯಲು ನಿರ್ಧರಿಸಿದರು.

ಛಾಯಾ ಅವರಿಗೆ ದೊಡ್ಡದೊಂದು ಅವಕಾಶ ನೀಡಿದವರು ವಿಜಯಭಾಸ್ಕರ್ ಮತ್ತು ಪುಟ್ಟಣ್ಣ ಕಣಗಾಲರು.  ಅಮೃತ ಘಳಿಗೆಯಲ್ಲಿನ ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು’ , ‘ಪಾರ್ವತಿ ಪರಶಿವರ ಪ್ರಣಯ ಪ್ರಸಂಗಮುಂತಾದ ಗೀತೆಗಳು ಕನ್ನಡಕ್ಕೊಬ್ಬರು ಹಿನ್ನಲೆಗಾಯಕಿಯನ್ನು ಸೃಷ್ಟಿಸಿತ್ತು.  ಮುಂದೆ ಋತುಮಾನ ಸಂಪುಟದಿ ನವ ಕಾವ್ಯ ಬರೆದವಳೆ’, ‘ಕಣ್ಣಿಂದ ನೀ ಬಾಣ ಬೀಸಿದಾಗ’, ‘ಬೆಳ್ಳಿ ಬೆಳಕು ಮೂಡಿದೆ, ಮಂಜು ಮುಸುಕು ಕರಗಿದೆ’, ‘ಬೆಳ್ಳಿ ರಥದಲಿ ತಂದ ಸೂರ್ಯ ಕಿರಣ’, ‘ಏಕೆ ಹೀಗಾಯ್ತೋ ನಾನು ಕಾಣೆನು’, ‘ನಿನ್ನಂಥ ಅಪ್ಪ ಇಲ್ಲ’, 'ಕೂ ಕೂ ಎನುತಿದೆ ಬೆಳವಾ', ‘ಇಬ್ಬನಿ ತಬ್ಬಿದ ಇಳೆಯಲಿ ರವಿತೇಜ ಕಣ್ಣ ತೆರೆದು’   ಮುಂತಾದ ಅನೇಕ ಸುಶ್ರಾವ್ಯ ಗೀತೆಗಳಿಗೆ ಛಾಯಾ ಧ್ವನಿಯಾದರು.

ಸುಗಮ ಸಂಗೀತ ಕ್ಷೇತ್ರದಲ್ಲೂ ಛಾಯಾ ಅವರು ಮಾಡಿದ ಸಾಧನೆ ಅಪಾರವಾದದ್ದು.  ಇಂದಿನ ದಿನದ ಸುಗಮ ಸಂಗೀತ ಕಲಾವಿದರು  ಮತ್ತೊಬ್ಬರು ಹಾಡಿದ ರಾಗದಲ್ಲೇ ಹಾಡಿ ಸುಗಮ ಸಂಗೀತವನ್ನೂ ಆರ್ಕೆಸ್ಟ್ರಾ ಸಂಗೀತವನ್ನೇ ಮಾಡಿರುವುದಕ್ಕೂ ಛಾಯಾ ಅವರು ಸುಗಮ ಸಂಗೀತವನ್ನು ಬೆಳಗಿದ್ದಕ್ಕೂ ಸಾಕಷ್ಟು ವೆತ್ಯಾಸವಿದೆ.  ಛಾಯಾ ಅವರು ಕಂಡುಕೊಂಡ ಸಂಗೀತ, ಹೊಸ ಹೊಸ ಗೀತೆಗಳು, ಅವಕ್ಕೆ ಅವರು ನೀಡಿದ ಸೃಜನೆ ಇವೆಲ್ಲವೂ ಗಮನಾರ್ಹವಾದದ್ದು.  ಹೂವು ಹೊರಳುವುವು ಸೂರ್ಯನವರೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ’, ‘ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ’, ‘ತಪ್ಪಿ ಹೋಯಿತಲ್ಲೇ’, ‘ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’,  ‘ಮುಂಗಾರಿನ ಅಭಿಷೇಕಕೆ’, ‘ಪುಟಾಣಿ ನೀಲಿ ಹಕ್ಕಿ’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’,  ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ’, ಮುಂತಾದ ಅನೇಕ ಸುಶ್ರಾವ್ಯ ಗೀತೆಗಳು ಛಾಯಾ ಅವರ ಸೃಜನಶೀಲ ಪ್ರತಿಭೆಗೆ ಸಾಕ್ಷಿಯಾಗಿವೆ.

ಸಂಗೀತ ಕ್ಷೇತ್ರದಲ್ಲಿ ಬಿ ಆರ್ ಛಾಯಾ ಅವರು ಮಾಡಿರುವ ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಇಂದಿನ ಮಕ್ಕಳಿಗೆ ಅಲಭ್ಯವಾಗಿದ್ದ ಹಳೆಯ ಕನ್ನಡ ಹಾಡುಗಳಲ್ಲಿನ ಕನ್ನಡದ ಕಂಪನ್ನು ಮತ್ತೊಮ್ಮೆ ಕಾಣಸಿಗುವಂತೆ ಮಾಡಿದ್ದು.  ಛಾಯಾ ಅವರ ಕಿನ್ನರಿ’  ಗೀತೆಗಳ ಪ್ರಯತ್ನ ಅತ್ಯಂತ ಶ್ಲಾಘನೀಯವಾದದ್ದು.

ಛಾಯಾ ಅವರು ನೀಡಿರುವ ಸಂಗೀತ ಕಾರ್ಯಕ್ರಮಗಳು, ಸಿನಿಮಾ, ದೂರದರ್ಶನಸುಗಮ ಸಂಗೀತ ಮತ್ತು ಕ್ಯಾಸೆಟ್ಟುಗಳಿಗೆ ಹಾಡಿರುವ ಗೀತೆಗಳು  ಹಲವಾರು ಸಹಸ್ರ ಸಂಖ್ಯೆಗಳನ್ನು ಮೀರುವಂತದ್ದಾಗಿವೆ.  ಆಶಾ ಬೋಸ್ಲೆ, ಲತಾ ಮಂಗೇಶ್ಕರ್ ಅವರ ಅಭಿಮಾನಿಯಾದ ಛಾಯಾ ಅವರ ಇನಿಧ್ವನಿಯಲ್ಲಿ, ಹಿಂದೀ ಚಿತ್ರಗೀತೆಗಳನ್ನು ಕೇಳುವುದೂ ಅತ್ಯಂತ ಸಂತಸ ಕೊಡುವಂತದ್ದು.  ಎಲ್ಲಾ ಭಾಷೆಯ ಹಳೆಯ ಹಾಡುಗಳನ್ನೂ ಅವರ ಅತ್ಯಂತ ಆಪ್ತವಾಗಿ ಹಾಡುತ್ತಾರೆ.  ಉದಾಹರಣೆಗೆ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಮೂಡಿಬಂದ ಬೆಳ್ಳನೆ ಬೆಳಗಾಯಿತು ಕೇಳುವಾಗ ಅಲ್ಲಿನ ಸುಶ್ರಾವ್ಯತೆ ಎಷ್ಟೇ ಚೆನ್ನಿದ್ದರೂ ಅಲ್ಲಿನ ತಪ್ಪು ಕನ್ನಡದ ಉಚ್ಚಾರ ನಿರಾಸೆ ಮೂಡಿಸುವಂತದ್ದು.  ಅದೇ ಗೀತೆಯನ್ನು ಛಾಯಾ ಅವರ ಧ್ವನಿಯಲ್ಲಿ ಸ್ಪಷ್ಟ ಉಚ್ಛಾರದಲ್ಲಿ ಕೇಳುವುದಕ್ಕೆ ಸಂತಸವೆನಿಸುತ್ತದೆ.   

ದೇಶ, ವಿದೇಶಗಳಲ್ಲಿ ಛಾಯಾ ಅವರ ಕಾರ್ಯಕ್ರಮಗಳು ನಿರಂತರ ಜನಾಕರ್ಷಣೆಯನ್ನು ಗಳಿಸಿಕೊಳ್ಳುತ್ತಿವೆ.   ಫೇಸ್ಬುಕ್ ಒಳಗೊಂಡಂತೆ ಅವರ ಅಭಿಮಾನಿ ಬಳಗ ಅಂತರ್ಜಾಲ  ಸಮೂಹದಲ್ಲೂ ವ್ಯಾಪಕವಾಗಿ ಪಸರಿಸಿದೆ. 


ಹಲವಾರು ರಾಜ್ಯಮಟ್ಟದ ಪ್ರಶಸ್ತಿಗಳನ್ನೂ, ಜನಪ್ರಿಯತೆಯನ್ನೂ ಗಳಿಸಿಕೊಂಡಿರುವ ಬಿ. ಆರ್. ಛಾಯಾ ಅವರ ಸಾಧನೆ ಅನವರತ ಬೆಳಗುತ್ತಿರಲಿ ಅವರ ಇನಿಧ್ವನಿಯನ್ನು ನಾವು ನಿರಂತರವಾಗಿ ಕೇಳುತ್ತಿರುವಂತಾಗಲಿ, ಅವರ  ಬದುಕು ಸುಖಮಯವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ತಿಳಿಸೋಣ.

Tag: B. R. Chaya

ಕಾಮೆಂಟ್‌ಗಳಿಲ್ಲ: