ಭಾನುವಾರ, ಅಕ್ಟೋಬರ್ 27, 2013

ಉತ್ತಂಗಿ ಚನ್ನಪ್ಪ

ಉತ್ತಂಗಿ ಚನ್ನಪ್ಪ

ಅಕ್ಟೋಬರ್ 28, 'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡ  'ಸರ್ವಜ್ಞನ ವಚನ'ಗಳ ಸಂಪಾದನೆಗಾಗಿ ಖ್ಯಾತರಾದ ಉತ್ತಂಗಿ ಚನ್ನಪ್ಪನವರ ಜನ್ಮದಿನ. 'ಸರ್ವಜ್ಞನ ಪದಗಳನ್ನು' ಪ್ರಸಿದ್ಧಿಪಡಿಸಿದ ಕೀರ್ತಿ  ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ. ಅವರ ಪ್ರಯತ್ನದಿಂದಾಗಿ ಇಂದು ಅದು, ಎಲ್ಲರ ಮನೆಮಾತಾಗಿದೆ.  ಕ್ರೈಸ್ತಧರ್ಮಕ್ಕೆ ಸೇರಿದ ಉತ್ತಂಗಿಯವರು, ಕನ್ನಡದ ಸೇವೆಯನ್ನು ದೇವರ ಕೆಲಸವೆಂದೇ ತಿಳಿದಿದ್ದರು. ಬಾಸೆಲ್ ಮಿಶನ್ನಿನ, ರೆವರೆಂಡ್ ಕಿಟ್ಟೆಲ್ ಅಂತಹ ಹಲವಾರು ಮತಪ್ರಚಾರಕರೂ ಕೂಡ ಕನ್ನಡ ಭಾಷೆಗೆ ಸೇವೆಸಲ್ಲಿಸಿರುವ ವಿಚಾರ ನಮಗೆಲ್ಲಾ ತಿಳಿದಿರುವ  ಸಂಗತಿ.

ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು  ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ, ಉತ್ತಂಗಿ ಗ್ರಾಮದ ಗೌಡರ ಮನೆತನದಲ್ಲಿ,  28, ಅಕ್ಟೋಬರ್ 1881ರಲ್ಲಿ ಜನಿಸಿದರು. ಅವರ ಪೂರ್ವಜರು ಕ್ರೈಸ್ತಧರ್ಮವನ್ನು ಸ್ವೀಕರಿಸಿ ಅನೇಕ ದಶಕಗಳೇ ಆಗಿದ್ದವು. ಗದಗ ಮತ್ತು ಬೆಟಗೇರಿಗಳ "ಕೈಸ್ತ ಅನಾಥಾಶ್ರಮಗಳ" ಮೇಲ್ವಿಚಾರಣೆಯ ಜವಾಬ್ದಾರಿಯು ಇವರ ಮನೆತನಕ್ಕೆ ಬಂದಿತ್ತು. ತಮಗೆ ಒಪ್ಪಿಗೆಯಾಗದ ಯಾವುದನ್ನೂ ಕಣ್ಣುಮುಚ್ಚಿಕೊಂಡು ಅನುಸರಿಸುವ ಸ್ವಭಾವ ಉತ್ತಂಗಿ ಅವರದಾಗಿರಲಿಲ್ಲ.

ಉತ್ತಂಗಿಯವರು ವಿದೇಶಿ ಮಿಷಿನರಿಗಳು ವಿಧಿಸಿದ್ದ ಸಮವಸ್ತ್ರಗಳನ್ನು ತಿರಸ್ಕರಿಸಿ ತಮ್ಮ ಜೀವಮಾನವನ್ನೆಲ್ಲಾ ಖಾದಿಬಟ್ಟೆಯಲ್ಲೇ ಕಳೆದರು.  1904ರಲ್ಲಿ ಕೊನೆಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಧಾರವಾಡದಲ್ಲಿ ಅವರಿಗೆ ಉಪನ್ಯಾಸಕರ ಹುದ್ದೆ ಸಿಕ್ಕಿತು. ಶಾಲೆಯಲ್ಲಿ ಓದುತ್ತಿದ್ದಾಗಲೇ ಬಾಸೆಲ್ ಮಿಶನ್ನಿನ ಕೆಲವು ಗೆಳೆಯರ ಸಹಕಾರದಿಂದ ಒಂದು ಪತ್ರಿಕೆಯನ್ನು ಪ್ರಕಟಿಸುವ ಧೈರ್ಯ ಮಾಡಿದರು. ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರು, ಕ್ರೈಸ್ತಧರ್ಮದ ಉಪದೇಶಕರಾಗಿಯೂ, ತಮ್ಮ ಬೋಧನಕ್ರಮದಲ್ಲಿ ದೇಶೀ ಪದ್ಧತಿಯನ್ನು ಅಳವಡಿಸಿಕೊಂಡರು. ಮತಗಳೆಲ್ಲದರಲ್ಲೂ ಅವರಿಗೆ ಸಮಾನ ಗೌರವ ಮತ್ತು ಶ್ರದ್ಧೆಯಿತ್ತು.  ಪ್ರತಿಯೊಂದು ಮತದ ಒಳ್ಳೆಯ ಅಂಶಗಳನ್ನೂ ಸಮಯೋಚಿತವಾಗಿ ಉಲ್ಲೇಖಿಸುತ್ತಿದ್ದ  ಅವರ ಪ್ರೌಡಿಮೆಯನ್ನು ಬಹಳಷ್ಟು  ಧಾರ್ಮಿಕ ಮೂಲಭೂತವಾದಿಗಳು ಸಹಿಸಲಿಲ್ಲ. ಅವರ ಮೇಲಿನ ಅಧಿಕಾರಿಗಳಿಂದ ಪ್ರತಿಭಟನೆ, ಕಿರುಕುಳಗಳು ನಿರಂತರವಾಗಿ ಅವರ ಬೆನ್ನುಹತ್ತಿದ್ದವು.  ಆದರೆ ಅವ್ಯಾವುದಕ್ಕೂ  ಸೊಪ್ಪು ಹಾಕದೆ ತಮ್ಮ ವಿವೇಚನೆಗೆ ಸರಿಯಾಗಿ ಕಂಡದ್ದನ್ನು ಪಾಲಿಸುವ ಎದೆಗಾರಿಕೆ ಅವರಲ್ಲಿ ಸದಾ ಜಾಗೃತವಾಗಿತ್ತು. 

1950ರ ವರ್ಷದಲ್ಲಿ ಉತ್ತಂಗಿಯವರು, ಮಹಾನ್ ವಿದ್ವಾಂಸರಾದ ಎಸ್. ಎಸ್. ಭೂಸನೂರಮಠ ಅವರ  ಜೊತೆಗೆ, ‘ ಮೋಳಿಗೆ ಮಾರಯ್ಯ’, ‘ರಾಣಿ ಮಹಾದೇವಿಯರು’, ‘ವಚನಗಳ ಸಂಪಾದನೆಯ ಹೊಣೆಯನ್ನು ಹೊತ್ತುಕೊಂಡರು.  ಅವರು ತಮ್ಮ ವಿರಾಮ ಸಮಯವನ್ನೆಲ್ಲಾ ಕನ್ನಡ ಸಾಹಿತ್ಯದ ಹಲವು ಗ್ರಂಥಗಳ ಸಂಪಾದನೆಗಾಗಿ ಕಳೆದರು. ವಿಮರ್ಶಾತ್ಮಕ ಸಂಶೋಧನೆ ಅವರ ವಿಶೇಷ ಒಲವುಗಳಲ್ಲೊಂದಾಗಿತ್ತು.  ಜಯದೇವಿತಾಯಿ ಲಿಗಾಡೆಯವರ ಆದೇಶದಂತೆ, ರೆ. ಫಾದರ್ ಚನ್ನಪ್ಪ ಉತ್ತಂಗಿಯವರು, ‘ಸಿದ್ಧರಾಮ ಸಾಹಿತ್ಯವನ್ನು ಸಂಗ್ರಹಿಸಿ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆಯುವ ಜವಾಬ್ದಾರಿಯನ್ನು ಹೊತ್ತುಕೊಂಡರು. ನಾಡಿನುದ್ದಕ್ಕೂ ತಿರುಗಾಡಿ, ಸುಮಾರು  20 ಕೈಬರಹಗಳ ಪ್ರತಿಗಳನ್ನು ಸಂಗ್ರಹಿಸಿದರು. ಒಟ್ಟು 2,000 ವಚನಗಳ ಸಂಗ್ರಹವನ್ನು ಶ್ರಮವಹಿಸಿ ಮಾಡಿದುದಲ್ಲದೆ ಹಲವಾರು ಮಹನೀಯರ ಜೊತೆಗೂಡಿ ಅವುಗಳ ಪ್ರಕಟಣೆಯಲ್ಲೂ ಪ್ರಮುಖ ಜವಾಬ್ಧಾರಿ ನಿರ್ವಹಿಸಿದರು. ಅವರಿಗೆ ತತ್ವಶಾಸ್ತ್ರ ಬಲುಪ್ರಿಯವಾಗಿತ್ತು. ವಿದೇಶಿ ಮತ್ತು ಭಾರತೀಯವಾದ ಎರಡೂ ನಿಲುವುಗಳನ್ನೂ ಮುಕ್ತವಾಗಿ ಸ್ವೀಕರಿಸಿದರು. ಉಪನಿಷತ್ತುಭಗವದ್ಗೀತೆಗಳನ್ನು ಸಹಾ ಆಳವಾಗಿ ಅಧ್ಯಯನ ಮಾಡಿದರು. 

ಫಾದರ್ ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿತು. 1949ರಲಿ, ಕಲ್ಬುರ್ಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೆ. ಫಾದರ್ ಉತ್ತಂಗಿ ಬಸಪ್ಪನವರು ಆಯ್ಕೆಯಾಗಿದ್ದರು. ಹಾಸ್ಯಪ್ರಿಯತೆ, ತೀಕ್ಷ್ಣಮತಿತ್ವ, ವಿಮರ್ಶಾತ್ಮಕ ದೃಷ್ಟಿಕೋನಹೊಸವಿಷಯಗಳನ್ನರಿಯುವ ಶ್ರದ್ಧೆ, ಉಜ್ವಲ ರಾಷ್ಟ್ರಪ್ರೇಮ, ಸಮಾಜದ ಹಿತಚಿಂತನೆ ಇವು ಉತ್ತಂಗಿಯವರ ವೈಶಿಷ್ಟ್ಯಗಳಾಗಿದ್ದುಅವರ ಬಹುಮುಖ ಸಾಧನೆಗಳಲ್ಲಿ  ಮಹತ್ವದ ಪಾತ್ರವನ್ನು ವಹಿಸಿದವು. 33 ವರ್ಷಗಳ ಕಾಲ ಸತತವಾಗಿ ದುಡಿದರು. ಜೀವನದ ಸಂಕಷ್ಟಗಳನ್ನು ಮರೆತು ತಮ್ಮನ್ನು ಕನ್ನಡ ಸಾಹಿತ್ಯ ಸೇವೆಗೆ ಮುಡುಪಾಗಿಟ್ಟುಕೊಂಡರು. ಬಾಸೆಲ್ ಚರ್ಚಿನ ಭಾರತೀಕರಣ ಮತ್ತು ಭಾರತದ ಸ್ವಾತಂತ್ರ್ಯ ಇವೆರಡೂ ಅವರ ಪ್ರಮುಖ ಕನಸುಗಳಾಗಿದ್ದವು. ಅವರ ಜೀವಿತದ ಸಮಯದಲ್ಲೇ ಈ ಎರಡೂ ಕನಸುಗಳು ನನಸಾದವು.

ಉತ್ತಂಗಿ ಚನ್ನಪ್ಪನವರು 28 ಆಗಸ್ಟ್ 1962ರಂದು ನಿಧನರಾದರು.

ಮಾಹಿತಿ ಆಧಾರ: ಎಲ್. ಎಸ್. ಶೇಷಗಿರಿರಾಯರು ಬರೆದಿರುವ ಕಿರು ಹೊತ್ತಗೆ

ಫೋಟೋ ಕೃಪೆ: www.kamat.com

Tag: Uttangi Channappa

ಕಾಮೆಂಟ್‌ಗಳಿಲ್ಲ: