ಭಾನುವಾರ, ಅಕ್ಟೋಬರ್ 20, 2013

ಪಂಚ’ಮ’ಗಳ ನಡುವೆ
ಸತ್ಯಕಾಮ ಅವರ ಬರಹಗಳ ಬಗ್ಗೆ ಆಪ್ತತೆ ಹೊಂದಿರುವ ನಾನು ಇತ್ತೀಚೆಗೆ ಅವರ ‘ತಂತ್ರಯೋನಿ’ ಪುಸ್ತಕ ಓದಿದ ಬಗ್ಗೆ ಬರೆದಿದ್ದೆ.  ಅದೇ ಗುಂಗಿನಲ್ಲಿ ಹಲವರಿಂದ ಕೇಳಿದ್ದ ಅವರ “ಪಂಚ’ಮ’ಗಳ ನಡುವೆ” ನಡುವೆ ಓದಲೇ ಬೇಕೆನಿಸಿದಾಗ ತಕ್ಷಣವೇ ಸಿಗಲಿಲ್ಲ.  ಜಸ್ಟ್ ಬುಕ್ಸ್ ಲೈಬ್ರೆರಿಯವರಿಗೆ ಕೇಳಿದಾಗ ಸಾರ್ ಸರ್ಕುಲೇಶನ್ನಿನಲ್ಲಿದೆ ಎಂದಿದ್ದವರು ಮೊನ್ನೆ ಫೋನ್ ಮಾಡಿದ್ದರು.  ಸರಿ ಕಳುಹಿಸಿಕೊಡಿ ಎಂದು ಕೆಲವೊಂದೇ ಪುಟ ಓದಿದ್ದ ಅವರ ಪುಸ್ತಕವನ್ನು ಕೊಟ್ಟು ಇದನ್ನು ಕೈಗೆತ್ತಿಕೊಂಡೆ.  ಬಹಳ ದಿನಗಳ ನಂತರ ಒಂದು ಪುಸ್ತಕದ ಬಹುತೇಕ ಭಾಗವನ್ನು ಒಂದೇ ದಿನದಲ್ಲಿ ಓದಿ ಮುಗಿಸಿದ್ದೆ.  ಕಾಕತಾಳಿಯವೋ ಎಂಬಂತೆ ಇಂದು ಅವರ ಸಂಸ್ಮರಣೆಯ ದಿನವಾಗಿದ್ದು  ಬೆಳಿಗ್ಗೆ ಪೇಪರ್ ತೆರೆದಾಗ ಅವರ ಕುರಿತಾದ ಒಂದು ಲೇಖನವೂ ಇತ್ತು.  ಪಂಚ’ಮ’ಗಳ ನಡುವೆ ಓದಿದ್ದು ಒಂದು ಅನಿರ್ವಚನೀಯ ಅನುಭವ.

ಈ ಪುಸ್ತಕದ ಹಿಂದೆ ಈ ಮಾತುಗಳಿವೆ:

ಸತ್ಯಕಾಮರು ನೆನ್ನೆ ಇರಲಿಲ್ಲ
ನಾಳೆ ಇರುವುದಿಲ್ಲ
ಇಂದು ಬಂದವರು

ಅವರು ಹುಟ್ಟಿದ್ದು ಗಲಗಲಿ
ಬೆಳೆದದ್ದು ಹಿಮಾಲಯ....
ಇಳಿದದ್ದು ಕಲ್ಲಹಳ್ಳಿಯಲ್ಲಿ
ಉಳಿದದ್ದು ಎದೆಯೊಳಗೆ....

ಅವರನ್ನು ಕೃಷಿಕ ಎಂದವರುಂಟು
ಸಾಹಿತಿ ಎಂದು ಕರೆದವರಿದ್ದಾರೆ
ಋಷಿ ಎಂದು ನಂಬಿದ್ದಾರೆ.

ಬಯಲಿಗೆ ‘ಆಯತನ’ವೇ ಸತ್ವ
ಅದರೊಳಗೆ ಏನಿಟ್ಟರೂ ಹಿಡಿದುಕೊಳ್ಳುತ್ತದೆ
ಸತ್ಯಕಾಮರು ಇವೆಲ್ಲವೂ ಹೌದು
ಇವಾವೂ ತಾನಲ್ಲ ಎಂದೇ ಒಳಗೊಳಗೇ ನಕ್ಕವರು....

ಸತ್ಯಕಾಮರು ಬರೆದ ಪುಸ್ತಕ ಮೂವತ್ತು
ರಚಿಸಿದ ಕೃತಿ ನೂರಾರು
ಇವರು ಆಡಿದ್ದು ಕೆಲವು
ನಡೆಸಿದ್ದು ಹಲವು ....

ಈ ಕೃತಿಯೇ ಅವರಲ್ಲ
ಇದು ನಮ್ಮನ್ನು ನೋಡಲು ಅವರಿಟ್ಟ ಬೆಳಕಿನ ಕನ್ನಡಿ.

ಮೇಲೆ ಹೇಳಿದ ಹಾಗೆ ಈ ಕೃತಿಯನ್ನು ಇದನ್ನು ಓದಿದಾಗ ದೊರೆತ ಅನುಭೂತಿ ಮಾತಿಗೆ ಮೀರಿದ್ದು.  ಬಹಳಷ್ಟು ಕಡೆ ಹೃದಯವನ್ನು ಮೀಟಿದ್ದು.  ನನ್ನಲ್ಲಿ ಯಾವುದೋ ಅವಶ್ಯವಿತ್ತು ಎಂದು ಭಾವಿಸಿದ್ದ ಒಂದು ಭಾವಕ್ಕೆ ಸ್ಪರ್ಶ ನೀಡಿದ್ದು.  ಇಂತಹ ಪುಸ್ತಕವನ್ನು ತುಂಬಾ ಹಿಂದೆಯೇ ಓದಿದ್ದರೆ ಚೆನ್ನಿತ್ತು ಎನಿಸಿತು.  ಇಷ್ಟಕ್ಕೆ ನನ್ನ ಮಾತನ್ನು ನಿಲ್ಲಿಸಿ,  ಈ ಕೃತಿಯ ಮೊದಲ ಪುಟಗಳಲ್ಲಿ  ಸತ್ಯಕಾಮರು ವ್ಯಕ್ತಪಡಿಸಿರುವ ಮಾತುಗಳನ್ನು ಓದುಗರ ಉಪಯೋಗಕ್ಕೆ ನೀಡುವುದು ಉಚಿತ ಎಂದು ಭಾವಿಸಿದ್ದೇನೆ.

“ಅನುಭವಗಳು ತರಂಗಗಳಂತೆ.
ಚಲನೆ ನೇರ ನಿಟ್ಟಿನಲ್ಲಲ್ಲ”

ನೀವು ಈ ಪುಟಗಳನ್ನು ತೆರೆದು ಓದುತ್ತಿರುವುದು ಒಂದು ಬದುಕನ್ನು.  ಆ ಬದುಕಿನ ಹಿಂದೆ ಒಂದು ಪ್ರಾಮಾಣಿಕವಾದ ಅನುಭವ ಮಾತ್ರ ಇಲ್ಲ; ಸಶಕ್ತವಾದ ನೆಲೆಗಟ್ಟೂ ಇದೆ.  ಇಲ್ಲಿಯ ಒಂದು ಮಾತು, ಕೃತಿ, ಅಸಂಭಾವಿಯ ಅನಿಸಿದರೆ ಓದುಗ, ಇನ್ನೊಮ್ಮೆ ತನ್ನ ‘ಶಕ್ತಿ’ಯನ್ನು ಅಳೆದುಕೊಂಡರೆ ಸಾಕು.

ಗತಿಯು ಶಕ್ತಿಯ ಮೂಲ.  ಗತಿಶೀಲತೆ ಶಕ್ತಿವಂತಿಕೆಯ ಗುರುತು.  ‘ನಿರ್ಗತಿಕತೆ’ ಆಶಕ್ತತೆಯ ಲಕ್ಷಣ!  ತಂತ್ರ ಮನಸ್ಸಿನ ಗತಿಯನ್ನು ತೀವ್ರಗೊಳಿಸುತ್ತದೆ.  ಗತಿಯ ತೀವ್ರತೆಯನ್ನು ವೇಗವೆಂದು ಗುರುತಿಸುತ್ತೇವೆ.  ವೇಗ ಇಲ್ಲದೆ ಶಕ್ತಿ ಇಲ್ಲ.  ಒಂದು ಅರ್ಥದಲ್ಲಿ ವೇಗವೇ ಶಕ್ತಿ!

ಮನಸ್ಸು ‘ಗತಿಗೆಟ್ಟರೆ’, ನಿಂತು ಮಲೆತರೆ, ಬದುಕು ನಿಃಶಕ್ತವಾಗುತ್ತದೆ.  ಅದು ಅದ್ಭುತ ವೇಗಕ್ಕೆ ಒಳಪಟ್ಟರೆ, ಅಚುಂಬಿತ ಶಕ್ತಿ ಪ್ರದರ್ಶನದ, ಉತ್ಪಾದನೆಯ ಕೇಂದ್ರವಾಗುತ್ತದೆ.  ಮನಸ್ಸನ್ನು ಪ್ರಚಂಡ ವೇಗಕ್ಕೆ ಒಳಪಡಿಸಿ ಅಪಾರಶಕ್ತಿಯನ್ನು ಉತ್ಪಾದಿಸುವುದೇ ತಾಂತ್ರಿಕ ವೈಶಿಷ್ಟ್ಯ!

ತಂತ್ರ ಎಂದುದೊಂದು ದೇವಾಲಯವಾದರೆ ಅದನ್ನು ಸುತ್ತಿ ಬಂದವ ಈ ಶಾಸನವನ್ನು ಓದುತ್ತಾನೆ.

ದೇವರನ್ನು ಕಡಿಮೆ ಒಪ್ಪಿದವ ಹೆಚ್ಚು ಸುಖಿ.

ದುಡಿಯದವನ ಜತೆಗೆ ದೇವರ ಒಗೆತನವಿಲ್ಲ.

ಮೌಲ್ಯಗಳು ಜೀವದ ನೆತ್ತರ ಕುಡಿಯುವ ಜಿಗಣೆಗಳಲ್ಲ.

ತಂತ್ರ ಅಸಭ್ಯರ ಆಚಾರ ಎಂದು ಮೂಗು ಮುರಿಯುವವರೂ ಇದ್ದಾರೆ.  ತಂತ್ರವೊಂದೇ ಶಕ್ತಿ ಸಾಧನೆಯ ದಾರಿ ಎಂದು, ಅರ್ಹತೆ ಇರಲಿ ಬಿಡಲಿ ಲಂಪಟ ಮನೋಭಾವದಿಂದ ಅದರಲ್ಲಿ ಕಾಲಿಡುತ್ತಾರೆ.  ಭಾರತೀಯ ದೃಷ್ಟಿಯಿಂದ ಅನೈತಿಕ, ಅಸಾಮಾಜಿಕ ಎನ್ನುವ ಆಚಾರಗಳಿಗೆಲ್ಲ ಮುಕ್ತ ಅವಕಾಶವಿದೆ.  ಧೀರರು ಅದನ್ನು ಆಹ್ವಾನ ಎಂದು ಅಂಗೀಕರಿಸಿದರೆ ಲಂಪಟರು ಅದರ ಆಮಿಷಕ್ಕೆ ಪಕ್ಕಾಗುತ್ತಾರೆ.

ತಂತ್ರದ ಬಗ್ಗೆ ಹಲವು ರೋಮಾಂಚಕ ಸಂಗತಿಗಳಿವೆ.  ಆದರೆ ಎಷ್ಟು ಸತ್ಯ? ಎಷ್ಟು ಸುಳ್ಳು?  ನನ್ನ ಬದುಕಿನ ಒಂದು ತಪದ ಸಮಯ ನಾನು ತಾಂತ್ರಿಕರ ಕಣ್ಣಳತೆಯಲ್ಲಿ ಕೈಯಳತೆಯಲ್ಲಿ ಪಡೆದ ಅನುಭವಗಳನ್ನು ಇಲ್ಲಿ ಹೇಳಿದ್ದೇನೆ.  ಅನೇಕರಿಗೆ ಅವು ಬಾಯಲ್ಲಿ ನೀರೂರಿಸುತ್ತವೆ.  ಕೆಲವರಿಗೆ ನಾಲಗೆ ಒಣಗಿಸಲೂಬಹುದು.  ಯುದ್ಧದ ಸುದ್ಧಿ ಕೇಳಲು ರಮ್ಯ.  ಯುದ್ಧ ಮಾಡುವುದು ವೀರನಿಗಲ್ಲದೆ ಇತರರಿಗೆ ಸಾಧ್ಯವಿಲ್ಲ.  ತಂತ್ರದಲ್ಲಿ ಕಾಲಿಟ್ಟವರೆಲ್ಲ ಎತ್ತರ ಸಾಧಿಸಿಲ್ಲ.  ಕಾಲು ಮುರಿದುಕೊಂಡವರು ನೋವು ಹೇಳಿಲ್ಲ.  ತಂತ್ರದ ದಾರಿಯಲ್ಲಿ ನಡೆದು ಎಡವಿದವರ ನೋವು, ನಿಂತು ಹಿಗ್ಗಿದವರಿಗಿಂತ ಬಹುಪಾಲು ದೊಡ್ಡದು.

ತಂತ್ರ ಒಂದು ಸಂಪ್ರದಾಯವಾಗುವುದಕ್ಕೆ ಮೊದಲು ಅದು ವೈಯಕ್ತಿಕ ಒಪ್ಪಿಗೆಯ ಮುನ್ನಡೆ.  ಅದಮ್ಯ ಉತ್ಸಾಹದ ಸ್ಥಾಯಿ ಮಾತ್ರ ಸಫಲ ತಂತ್ರದ ವೇದಿಕೆ.  ಸದಾ ಅದುರುತ್ತಿರುವ ಪುಕ್ಕಲು ಚಾಪಲ್ಯದ ವ್ಯಭಿಚಾರಿ ತಂತ್ರ ಸ್ವಭಾವವಲ್ಲ.

ಎಲ್ಲವನ್ನೂ ಸಮಾಜದ ಬಿಳಿ ಕೊಡೆಯಲ್ಲಿ ಬೆಳೆಸುವುದು ನಮಗೊಂದು ಅಂಟಿದ ಜಾಡ್ಯ.  ಅದರ ಫಲವಾಗಿ ನಾವು ತಂತ್ರವನ್ನೂ ಸಂಪ್ರದಾಯವೆಂದೇ ಕರೆದೆವು.  ತಂತ್ರವು ಖಂಡಿತವಾಗಿಯೂ ವೈಯಕ್ತಿಕ ಸತ್ವ, ಶಕ್ತಿಗಳ ವಿಕಾಸ ಕೆಂದ್ರ.  ಅದು ಅರ್ಹತೆಯನ್ನು ಅನಿವಾರ್ಯ ಅಗತ್ಯವೆಂದು ನಂಬುತ್ತದೆ.

ಸ್ವತಂತ್ರ ಭಾವನೆಯ ಮೂಲದ್ರವ್ಯದಿಂದ ಮೈದಾಳಿದ ವ್ಯವಸ್ಥೆ ‘ತಂತ್ರ’.  ಸ್ವಾತಂತ್ರ್ಯಕ್ಕೆ ಗತಿಶೀಲತೆಯೇ ಗುಣಧರ್ಮವಾಗಿದೆ.  ನಿರ್ಭಯತೆ ಸ್ವಾತಂತ್ರ್ಯದ ಉಸಿರು.  ಹೀಗಾಗಿ ತಂತ್ರ ಎನ್ನುವುದು ವೇಗ, ನಿರ್ಭಯತೆ, ಸ್ವಾತಂತ್ರ್ಯಗಳ ತ್ರಿಕೋನವಾಗಿದೆ.  ತಂತ್ರವನ್ನು ಸಂಪ್ರದಾಯ ಎಂದು ಕರೆದಾಗ ಅದರ ಸ್ವಾತಂತ್ರ್ಯವನ್ನು ನಿರ್ಭಯತೆಯನ್ನೂ ಮೊಟಕು ಮಾಡುತ್ತೇವೆ.

ದೀಕ್ಷೆ ಅರ್ಹತೆಗೆ ಅಗತ್ಯವಾದ ಒಂದು ಸಂಸ್ಕಾರ.  ದೀಕ್ಷಾವಂತನಾದವ ಅನರ್ಹನಾಗಿರಲೂ ಸಾಧ್ಯವಿದೆ.  ದೀಕ್ಷೆಯಾಗದವನು ತನ್ನ ವಿಶೇಷದಿಂದ ಅರ್ಹನಾಗಿರುವ ಸಂಭವವೂ ಇದೆ.  ತಂತ್ರಜ್ಞ ಅನರ್ಹನಾದ ದೀಕ್ಷಾವಂತನನ್ನು ನಿರಾಕರಿಸುವ ಹಾಗೆ ಅರ್ಹನಾದ ಅದೀಕ್ಷಾವಂತನನ್ನು ಅಂಗೀಕರಿಸುತ್ತಾನೆ.  ಆತ ಇಬ್ಬಾಯಿಯ ಅಲಗು.  ಅವನಿಗೆ ಕ್ರಮದ ವಿಷಯದಲ್ಲಿ ಅನುಚಿತ ಆಸಕ್ತಿ, ಕ್ರಮಲೋಪದ ಬಗ್ಗೆ ಅಕಾರಣ ಭೀತಿ, ಅಕ್ರಮದ ಬಗ್ಗೆ ಅನವಶ್ಯಕ ಪಶ್ಚಾತ್ತಾಪಗಳು ಇರುವುದಿಲ್ಲ.

ನಾನು 1944ರಿಂದ 1956ರ ಒಂದು ತಪದ ಕಾಲದಲ್ಲಿ ವಿವಿಧ ಶಾಕ್ತರ ಜತೆಗಿದ್ದೆ.  ಅವರಲ್ಲಿ ಕೆಲವರು ಗಟ್ಟಿಯಾದರೆ ಹಲವು ಜನ ತೀರ ಟೊಳ್ಳು.  ನಮ್ಮ ದೇಶದಲ್ಲಿ ಎಲ್ಲಕ್ಕೂ ಹೆಚ್ಚು ಜನ ವಂಚಕರು ಬೀಡು ಬಿಟ್ಟ ಕ್ಷೇತ್ರವು ಇದೇ ಆಗಿದೆ.  ಈ ವಂಚಕರು ನೆಲಸಿದ ನೆಲದಲ್ಲಿಯೆ ಒಂದು ಆರ್ಜವ ಪ್ರಪಂಚ ಪ್ರತಿಷ್ಠಿತವಾಗಿದೆ.

ಗಟ್ಟಿಗರಾದ ಹಲವು ಜನರಲ್ಲಿ ತಮ್ಮ ಶಕ್ತಿಯ ಬಗ್ಗೆ ಪ್ರಜ್ಞೆ ಇದ್ದವರನ್ನು ನಾನು ‘ಇಲ್ಲ’ ಎನ್ನುವಷ್ಟು ಕಂಡೆ.  ಶಕ್ತಿ ಏನೋ ಅಪಾರವಿತ್ತು.  ಅದು ಬಂದ ಬಗ್ಗೆ, ಅದನ್ನು ಬೆಳೆಸುವ ಬಗ್ಗೆ, ಅದರ ವಿನಿಯೋಗದ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ಇದ್ದದ್ದು ಸಾಕಷ್ಟು ಕಡಿಮೆ.  ಇನ್ನೊಂದು ಅರ್ಥದಲ್ಲಿ ಅದು ಆಕಸ್ಮಿಕ ಪ್ರಾಪ್ತಿಯಾಗಿತ್ತು.  ನಾನು ಹತ್ತು ಹಲವು ಸಮರ್ಥರನ್ನು ಸಂದರ್ಶಿಸಿದ್ದೇನೆ.  ಸಂಪರ್ಕಿಸಿದ್ದೇನೆ.  ಅಲ್ಲದೆ ಅವರ ಹಲವು ಶಕ್ತಿ ಪ್ರದರ್ಶನಗಳನ್ನೂ ನೋಡಿದ್ದೇನೆ.  ಆದರೆ ತಂತ್ರಕ್ಕೆ ಬೇಕಾದ ‘ತ್ರಿಪುಟಿ’ಯ ಪೂರ್ಣ ಪ್ರಜ್ಞೆ ಅವರಲ್ಲಿ ಕಾಣಲಿಲ್ಲ.

ನನ್ನ ಅನುಭವದಲ್ಲಿ ಬಂದ ತಾಂತ್ರಿಕರು ನಿರ್ಭಯರಾಗಿದ್ದರು.  ನಿರ್ಭಯತ್ವ ಇದ್ದಲ್ಲಿ ಬುದ್ಧಿವಂತಿಕೆ ಇದ್ದೇ ತೀರಬೇಕು.  ಆದರೆ ಅದನ್ನು ನಾನು ಅವರಲ್ಲಿ ಹಲವು ಸಲ ಕಾಣಲಿಲ್ಲ.  ಆದ್ದರಿಂದ ಅವರ ನಿರ್ಭಯತೆ “ವಿದ್ಧ”ವಾಗಿದ್ದೇ ಇರಲು ಸಾಕು.  ಶಕ್ತಿ ಸಾಧನೆ ಒಂದು ವೈಜ್ಞಾನಿಕ ಕ್ರಮ ಎಂಬುದು ನಿರ್ವಿವಾದ.  ಮನುಷ್ಯ ಅಪಾರ ಶಕ್ತಿ ಪಡೆಯಬಲ್ಲ, ಉಪಯೋಗಿಸಬಲ್ಲ ಎನ್ನುವುದು ನನ್ನ ಗಮನಕ್ಕೆ ಬಂದ ಸಂಗತಿ.

ಈ ಕೃತಿಯಲ್ಲಿ ಬರುವ ಘಟನೆಗಳಿಗೆ ಒಂದು ಸುಸಂಬದ್ಧವಾದ ವೈಜ್ಞಾನಿಕ ಹಿನ್ನೆಲೆ ಇದೆ.  ವ್ಯಕ್ತಿಗೆ ಒಂದು ಸಂಗತಿ ಆಕಸ್ಮಿಕವಾಗಿ ಹೊಳೆದರೂ ಅದು ಅವನಿಗೆ ಆಕಸ್ಮಿಕವೆನಿಸಿದರೂ ಆಕಸ್ಮಿಕತೆಯೂ ಒಂದು ವಿಜ್ಞಾನಕ್ಕೆ ಒಳಪಟ್ಟಿರುವುದು.  ಹುಟ್ಟು ಕಿವುಡರಿಗೆ ಶ್ರವಣಾನುಭವ ಪವಾಡ ಎನ್ನಿಸುತ್ತದೆ.  ಅಸಂಭವ ಬರೇ ಆಜ್ಞಶ್ರದ್ಧೆ ಅನ್ನಿಸಲೂಬಹುದು.  ಇದರ ನಿವಾರಣೆಗೆ ಶ್ರವಣ ಜ್ಞಾನದ ವೈಜ್ಞಾನಿಕ ತಿಳಿವಳಿಕೆ ಒಂದೇ ದಾರಿ.

ಇಲ್ಲಿ ಹೂಗಳ ಬಣ್ಣ ಬದಲಾಯಿಸುವ, ವಾಸನೆಯಿಂದ ಸಂಗತಿಗಳನ್ನು ಅರಿಯುವ ಸಂಗತಿಗಳಿವೆ.  ಕೆಲವರಿಗೆ – ತಮ್ಮನ್ನು ವೈಜ್ಞಾನಿಕ ಪ್ರಜ್ಞೆಯುಳ್ಳವರೆಂದು ಭಾವಿಸುವ – ಅವನ್ನು ಶಂಕಿಸುವ, ನಿರಾಕರಿಸುವ ಚಾಪಲ್ಯ ಸಹಜವಾಗಿದೆ.  ಆದರೆ ಇಂತಹದೊಂದು ಅನುಭವ ಇದೆ ಎಂದು ವಿಚಾರ ಮಾಡಬೇಕು.  ಅನುಭವಗಳು ತರಂಗಗಳಂತೆ.   ಅವುಗಳ ಚಲನೆ ನೇರ ನಿಟ್ಟಿನಲ್ಲಿ ಅಲ್ಲ ಎಂದು ತಿಳಿಯಬೇಕು.    ಅನುಭವವನ್ನೇ ಶಂಕಿಸುವವರು ಅದನ್ನು ತನ್ನ ಎದುರು ಪ್ರದರ್ಶಿಸಲಿ ಎಂದು ಮೊಂಡು ಆಹ್ವಾನ ನೀಡುವ ಬದಲು ಆ ಅನುಭವಿಗಳನ್ನು ಹುಡುಕಿಕೊಂಡು ಅವರ ಪ್ರದರ್ಶನ ಕಾಣಬೇಕು!  ಅವರು ನಮ್ಮ ಮುಂದೆ ಪ್ರದರ್ಶಿಸಲಿ ಎಂಬ ಆಢ್ಯತೆಯನ್ನು ಶಕ್ತಿವಂತರು ಹುಲ್ಲಿಗೆ ಬಗೆದರೆ ಆಶ್ಚರ್ಯವಿಲ್ಲ.

ಒಂದು ವ್ಯಕ್ತಿಗೆ ಆಧುನಿಕ ಯಂತ್ರದಷ್ಟು ಶಕ್ತಿ ಇದೆ ಎಂದರೆ ವಿಜ್ಞಾನಿಗಳಿಗೆ ಆಶ್ಚರ್ಯವೆನಿಸುತ್ತದೆ.  ಆದರೆ ತಂತ್ರಸಿದ್ಧನೊಬ್ಬ ಆಧುನಿಕ ಯಂತ್ರ ಶಕ್ತಿಯನ್ನು ನೋಡಿ ಕನಿಕರಪಡುತ್ತಾನೆ.  ಇಷ್ಟೆಯೆ? ಎನ್ನುತ್ತಾನೆ.  ನಾನು ತಾಂತ್ರಿಕರ ಶಕ್ತಿ ಸಂಗ್ರಹದ ಪರಿ ಮೆಚ್ಚಿಕೊಂಡಿದ್ದೇನೆ.  ಅದರ ಜತೆಯಲ್ಲಿಯೇ ಅವರ ಹುಳು ಹತ್ತಿದ ಅಶಕ್ತತೆಯನ್ನೂ ಕಂಡು ಕನಿಕರಪಟ್ಟೂ ಇದ್ದೇನೆ.

ತಂತ್ರದಲ್ಲಿ ಸ್ವತಂತ್ರತೆ, ನಿರ್ಭಯತೆ, ಪ್ರಗಲ್ಭಪ್ರಜ್ಞೆ ಮೂರೂ ಅಗತ್ಯ.  ಒಂದು ಇಲ್ಲದೆ ಹೋದರೆ ಇದೆಲ್ಲ ಆಟಮಟಿಗತನ ಎಂದು ನಾನು ನಡೆದುದೇ ತಂತ್ರದಿಂದ ಕಾಲು ಕಿತ್ತಲೂ ಕಾರಣವಾಯಿತು. 

“ಪಂಚ’ಮ’ಗಳ” ನಡುವೆ ನನ್ನ ಬದುಕಿನ ಹಂದರದ ಮೇಲೆ ಹಬ್ಬಿದ ಬಳ್ಳಿ.  ಬದುಕಿಗೆ ಭಾರ ಎನ್ನಿಸುವಾಗ ಅದನ್ನು ಕೆಳಗಿಳಿಸಿ ಹಂದರದ ಅಸ್ಥಿಪಂಜರ ಹೂಳಿದೆ.  ತಂತ್ರಜ್ಞ ಅನುಭವಕ್ಕೆ ಇಂದ್ರಿಯಬೇಕು,  ದೇಶ, ಕಾಲ ಅಗತ್ಯ – ಎಂಬುದನ್ನೂ ದಾಟಿದವ.  ಆದ್ದರಿಂದ ಅವನ ಅನುಭವದ ದಾರ್ಢ್ಯಅಳೆಯುವವ ತಕ್ಕ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಬೇಕು.

ನಗ್ನ ಅನುಭವ ಸಾಹಿತ್ಯದ ಓದುಗನಿಗೆ ಜೀರ್ಣವಾಗುವುದೊ, ಇಲ್ಲವೊ ನಾನು ವಿಚಾರಿಸಿಲ್ಲ.  ಅನುಭವ ಹೇಳಲು ಹವಣಿಸಿದ್ದೇನೆ.  ಅದನ್ನು ಸಾಹಿತ್ಯ ಮಾಡುವ ಯತ್ನಕ್ಕೆ ಗಮನವಿತ್ತಿಲ್ಲ.  ಇದು ಸಾಹಿತ್ಯವೆಂದು ನಾನು ಸಾಧಿಸಲಾರೆ.  ಅದು ಆಗದಿದ್ದರೆ ವ್ಯಸನವೂ ಇಲ್ಲ.  ಈ ಅನುಭವಗಳು ‘ಅಶಕ್ತ’ ಎನ್ನಿಸುವ ನಿರೂಪಣೆಗೆ ಒಳಪಟ್ಟರೆ ನನ್ನ ಸಂಸ್ಕಾರದ ಗುಣದೋಷದ ಪರಿಣಾಮ ಅಷ್ಟೆ.

ಇದರ ಪ್ರಾಮಾಣಿಕತೆಯನ್ನು ಶಂಕಿಸುವ ಸ್ವಭಾವವನ್ನು ನಾನು ಪ್ರಶ್ನಿಸುವುದಿಲ್ಲ.  ಇನ್ನೊಂದನ್ನು ಶಂಕಿಸುವುದಕ್ಕೆ ಮೊದಲು ತಮ್ಮ ಅರಿವು ನಂಬಿಕೆಗಳನ್ನು ಅಳೆದುಕೊಂಡರೆ ಸಾಕು.  ಶಂಕೆ ಆಶಕ್ತತೆಯ ‘ಅನುಸ್ವಾರ’ ಎಂಬ ಮಾನಸ ಶಾಸ್ತ್ರದ ಮಾತಿನಲ್ಲಿ ನನಗೆ ವಿಶ್ವಾಸವಿದೆ.

ಒಬ್ಬನ ಶಂಕೆಯಿಂದ ಅನುಭವ ವಿಚಲಿತವಾದರೆ ಅದೆಂತಹ ‘ಶಾಕ್ತ’ ಸಾಧನೆ.  ನನ್ನ ಓದುಗರಲ್ಲಿ ಈ ಅನುಭವವನ್ನು ಶಂಕಿಸುವ ಅಗತ್ಯತೆಗಿಂತ ಇಂತಹ ಅನುಭವದ ಹಾದಿಯಲ್ಲಿ ನಡೆದ ಎರಡು ಹೆಜ್ಜೆಗಳಿಗೆ ನಾನು ಹಣೆ ಹಚ್ಚುತ್ತೇನೆ.  ಮನಸ್ಸಿಗೆ ಪ್ರಚಂಡ ವೇಗ ಸಾಧಿಸಿದ ನಿರಾಕರಣೆಯನ್ನೂ ಮನ್ನಿಸುತ್ತೇನೆ.  ನಡೆಯಲು ಬರದವರ ಓಟವನ್ನು ನಂಬಲಾರೆ. 

ಈ ಕೃತಿಯ ಪ್ರಕಾಶಕರು: ಐ.ಬಿ.ಎಚ್ ಪ್ರಕಾಶನ, ಬೆಂಗಳೂರು


ಕಾಮೆಂಟ್‌ಗಳಿಲ್ಲ: