ಶನಿವಾರ, ಅಕ್ಟೋಬರ್ 12, 2013

ಕೀರ್ತಿನಾಥ ಕುರ್ತಕೋಟಿ

ಕೀರ್ತಿನಾಥ ಕುರ್ತಕೋಟಿ

ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸ, ವಿಮರ್ಶಕರು ಕೀರ್ತಿನಾಥ ಕುರ್ತಕೋಟಿ. ಕೀರ್ತಿನಾಥ ಕುರ್ತಕೋಟಿಯವರು ಹುಟ್ಟಿದ್ದು ಅಕ್ಟೋಬರ್‌ 13, 1928. ಕುರ್ತಕೋಟಿಯವರ ಉರಿಯ ನಾಲಗೆಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ವೈಯನ್ಕೆ ಹೀಗೆ ಬರೆದಿದ್ದರು. 

ಕುರ್ತಕೋಟಿ
ಕುರಿತು
ಪದ್ಯ ಬರೆಯಲು
ನನ್ನ ಷರತ್ತು;
ಕುಮಾರವ್ಯಾಸನ
ಹೊರತು
ಇತರ ಕವಿಗಳ
ಅವರು
ಮರೆತು
ಬಿಡಲಿ. ಕುಕಾವ್ಯ ವೃಕ್ಷಕ್ಕೆ
ಅವರಾಗಲಿ
ಕೊಡಲಿ

ಕುರ್ತಕೋಟಿ
ಎಂಥ ಮೆಮರಿ!
ಟೇಪ್‌ರಿಕಾರ್ಡರ್‌
ಅನ್‌ನೆಸಸರಿ
ಕುರ್ತಕೋಟಿ
ನಿಮಗಾರು ಸಾಟಿ

ವೈಯನ್ಕೆಯವರ ಪ್ರಕಾರ ಕೀರ್ತಿಮನಿಅಂದರೆ ಲೇಖಕನ ಎರಡು ಬಹುಮುಖ್ಯ ಅಗತ್ಯಗಳು; ಕೀರ್ತಿ ಮತ್ತು ಮನಿ ಅಂದರೆ ಕ್ರೆಡಿಟ್‌ ಮತ್ತು ಕ್ಯಾಷ್‌! ಕೀರ್ತಿನಾಥ ಕುರ್ತಕೋಟಿಯವರು ಆ ಮನಿಬರೆದ ನಂತರ ವೈಯನ್ಕೆ ಅವರನ್ನು ಕೀರ್ತಿಮನಿ ಎಂದೇ ಕರೆಯುತ್ತಿದ್ದರು.

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.

ಇಂತಹ  ಬೇಂದ್ರೆ ಪದ್ಯಗಳನ್ನು, ಅವುಗಳ ವ್ಯಾಖ್ಯಾನಗಳನ್ನು ನಾವೆಲ್ಲಾ ಹೆಚ್ಚು ಓದಿದ್ದು ಕುರ್ತಕೋಟಿಯವರ ಪ್ರಬಂಧಗಳ ಮೂಲಕವೇ.  ಪ್ರಜಾವಾಣಿಯ ಪುರವಣಿಯಲ್ಲಿ ಅವರ ಲೇಖನಗಳು ಪ್ರತೀ ವಾರವೂ ಹಲವು ವರ್ಷಗಳ ವರೆಗೆ ಓದುಗರನ್ನು ಪ್ರತೀವಾರ ತಪ್ಪದೆ ಕರೆಯುತ್ತಿದ್ದವು.  ಮನೋಹರ ಗ್ರಂಥ ಮಾಲೆಯ ಜೋಷಿ ಅವರಿಗೆ ಕೀರ್ತಿನಾತರೇ ಸಲಹೆಗಾರರು.  ನೀನಾಸಂ ಸಾಹಿತ್ಯ ಕಮ್ಮಟಗಳಲ್ಲಿ ಸಾಹಿತ್ಯದ ಆಸಕ್ತಿಯಿಂದ ಬಂದ ನಮ್ಮಂತ ಹೊಸಬರಿಗೂ ಪ್ರೀತಿಯಿಂದ ಅರ್ಥವಾಗುವಂತೆ ಸಾಹಿತ್ಯದೌತಣ ಉಣಬಡಿಸುತ್ತಿದ್ದರು.

ಕೀರ್ತಿನಾಥ ಕುರ್ತಕೋಟಿಯವರನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ.  ಅವರು ಬರೆದ ಕೃತಿಗಳ ಮೂಲಕವೇ ಪ್ರಕಟವಾಗಬೇಕಾದವರು ಅವರು. ಯಾಕೆಂದರೆ ಕುರ್ತಕೋಟಿಯವರನ್ನು ಹತ್ತಿರದಿಂದ ಕಂಡವರು ಕಡಿಮೆ. ಗೆಳೆಯರ ಗುಂಪಿನಲ್ಲಿ ಅವರು ಒಬ್ಬರಾಗಿದ್ದರೂ ಗುಂಪಿನಿಂದ ಹೊರಗೆ ಉಳಿಯುವುದರಲ್ಲೇ ಅವರ ಸಂತೋಷವಿತ್ತು. ಅವರ ಹತ್ತಿರ ಮಾತಾಡುವುದಕ್ಕಾಗಲೀ ಹಂಚಿಕೊಳ್ಳುವುದಕ್ಕಾಗಲೀ ಸಾಹಿತ್ಯೇತರ ಸಂಗತಿಗಳೇ ಇರಲಿಲ್ಲ ಎಂಬ ಭಯ ಅವರ ಓರಗೆಯ ಅನೇಕರನ್ನು ಕಾಡಿದಂತಿತ್ತು. ಅದಕ್ಕಿಂತ ಹೆಚ್ಚಾಗಿ ಕುರ್ತಕೋಟಿಯವರಿಗಿದ್ದ ಪಾಂಡಿತ್ಯ ಎಲ್ಲರನ್ನು ಮೌನವಾಗಿಸುತ್ತಿತ್ತೋ ಏನೋ? ಯಾವ ಬರಹಗಾರರೂ ಅವರ ಹತ್ತಿರ ಉಡಾಫೆಯಿಂದ ಮಾತಾಡುವುದು ಸಾಧ್ಯವಿರಲಿಲ್ಲ. ಕಾರಂತರ ಜೊತೆ ಮಾತಾಡುವವನ ಅಜ್ಞಾನ ಹೇಗೆ ಬಹುಬೇಗ ಬಯಲಾಗುತ್ತಿತ್ತೋ, ಕುರ್ತಕೋಟಿ ವಿಚಾರದಲ್ಲೂ ಅಷ್ಟೇ. ಹೀಗಾಗಿ ಅವರನ್ನು ತುಂಬ ಮೆಚ್ಚುತ್ತಿದ್ದವರೂ ಅವರನ್ನು ದೂರದಲ್ಲಿಟ್ಟಿದ್ದರು. 

ಸಾಹಿತ್ಯದ ಎಲ್ಲ ಪ್ರಕಾರಗಳ ಬಗ್ಗೆ ಯಾವ ಪೂರ್ವಾಗ್ರಹಗಳನ್ನೂ ಇಟ್ಟುಕೊಳ್ಳದೇ ಬರೆದ ಕುರ್ತಕೋಟಿಯವರ ಬಗ್ಗೆ ಬಹುತೇಕ ಸಾಹಿತಿಗಳಿಗೊಂದು ಪೂರ್ವಾಗ್ರಹವಿತ್ತು. ಅದೆಂದರೆ; ಕುರ್ತಕೋಟಿ ಎಷ್ಟೇ ಉದಾರವಾಗಿದ್ದರೂ ಆಳದಲ್ಲಿ ಅವರಿಗೆ  ಬೇಂದ್ರೆ ಅವರಲ್ಲಿ ನಿಷ್ಠೆ. ಅದಕ್ಕಿಂತ ಆಳದಲ್ಲಿ ಅವರು ಕುಮಾರವ್ಯಾಸನಿಗೆ ನಿಷ್ಠರು. ಹೀಗಾಗಿ ಕುರ್ತಕೋಟಿ ಅವರದ್ದು ಪತಿವ್ರತಾ ಪ್ರತಿಭೆ; ಒಬ್ಬನೇ ಒಬ್ಬ ಕವಿಗೆ ಅದು ನಿಷ್ಠವಾಗಿತ್ತು ಎಂದವರಿದ್ದರು.

ಕುರ್ತಕೋಟಿ ಬರೆದ ವಿಮರ್ಶೆಗಳನ್ನು ಸಾಹಿತ್ಯ ಕೃತಿಯಷ್ಟೇ ಪ್ರೀತಿಯಿಂದ ಓದುವುದು ಸಾಧ್ಯವಿತ್ತು. ಒಂದು ಕೃತಿಯನ್ನು ಓದಿ ಅದಕ್ಕೊಂದು ಪರ್ಯಾವರಣವನ್ನು ದಕ್ಕಿಸಿಕೊಡುವ ಶಕ್ತಿ ಅವರ ಬರಹಗಳಿಗಿತ್ತು. ಕೆ. ಎಸ್‌. ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ ಕವಿತೆಗಳನ್ನು ಓದಿದ ನಂತರ ಇಲ್ಲಿಯ ಯಾವ ಅನುಭವಗಳೂ ರೂಪಕವಾಗಲು ಬಯಸುವುದಿಲ್ಲ ಎಂದು ಹೇಳುತ್ತಲೇ ಅದೇ ಲೋಕಪ್ರಿಯತೆಗೆ ಕಾರಣವೂ ಇರಬಹುದು ಎಂದು ಊಹಿಸುತ್ತದೆ ಕುರ್ತಕೋಟಿ ಪ್ರತಿಭೆ. ಅಂಥ ವಿಶ್ಲೇಷಣೆ ಅವರಿಗಷ್ಟೇ ಸಾಧ್ಯ. ಕಣವಿಯವರ ಕಾವ್ಯದಲ್ಲಿ ನಿಸರ್ಗ ಎಂದೂ ನಿರ್ಜನವಾಗುವುದಿಲ್ಲ ಎನ್ನುವುದನ್ನು ಗುರುತಿಸಿದವರೂ ಅವರೇ. ಸು. ರಂ. ಎಕ್ಕುಂಡಿಯವರ ಬಕುಲದ ಹೂವುಗಳ ಬಗ್ಗೆ ಬರೆಯುತ್ತಾ ಕವಿತೆಯ ವಿವರಗಳ ಕಾರ್ಯವಿಧಾನ ಬಹುಮುಖಿಯಾಗುವುದನ್ನೂ ಬಹುಮುಖಿಯಾದದ್ದು ಒಮ್ಮುಖವಾಗುವುದನ್ನೂ ಕುರ್ತಕೋಟಿ ತೋರಿಸಿದ್ದಾರೆ. ಹಾಗೇ, ಅನಂತಮೂರ್ತಿಯವರ ಕತೆಯ ಶಿಲ್ಪ ಅವು ಹೇಳುವ ಸಂಗತಗಳ ಸಂವಹನದ ಅನುಕೂಲತೆಗಾಗಿಯೇ ನಿರ್ಮಾಣವಾದಂತಿರುತ್ತವೆ, ಆದರೆ ಕಲೆಗಾರಿಕೆಯಲ್ಲಿ ಅವು ಸಹಜವಾಗಿರುವಂತೆ ಕಾಣುತ್ತವೆ ಎಂದಿದ್ದಾರೆ ಕುರ್ತಕೋಟಿ. ಈ ನಿಲುವನ್ನು ಅವರು ಶಂಕರ ಮೊಕಾಶಿ ಪುಣೇಕರರ ಕಾದಂಬರಿಯ ಬಗ್ಗೆ ಬರೆಯುವಾಗ ಮತ್ತೊಂದು ಅರ್ಥದಲ್ಲಿ ಬಳಸುತ್ತಾರೆ. ಬೇಂದ್ರೆಯ ಒಂದು ಕವಿತೆಯನ್ನಿಟ್ಟುಕೊಂಡು ಕನಕದಾಸನಿಗೂ ಬೇಂದ್ರೆಗೂ ಇರುವ ಬೌದ್ಧಿಕ ಕೊಂಡಿಯನ್ನು ಕುರ್ತಕೋಟಿ ಕಂಡುಹಿಡಿಯುತ್ತಾರೆ. 

ಕುರ್ತಕೋಟಿ ಧಾರವಾಡದ ಗೆಳೆಯರ ಗುಂಪಿನ ಬಗ್ಗೆ ಬರೆದಿದ್ದಾರೆ. ಯಾವುದನ್ನೂ ಬರೆದಿಟ್ಟುಕೊಳ್ಳದೇ ಎಲ್ಲವನ್ನೂ ನೆನಪಿಸಿಕೊಂಡು ಬರೆಯಬಲ್ಲ ಶಕ್ತಿ ಅವರಿಗಿತ್ತು.  ಬೇಂದ್ರೆಯವರೂ ಮತ್ತು ಅವರ ಖಾಸಾ ಗೆಳೆಯರೂ ಇದ್ದ ಗೆಳೆಯರ ಗುಂಪಿನ ಬಗ್ಗೆ, ಅಲ್ಲಿ ನಡೆದ ಚರ್ಚೆಗಳ ಬಗ್ಗೆ ಕುರ್ತಕೋಟಿ ಬರೆದಿದ್ದಾರೆ. ಮನೋಹರ ಗ್ರಂಥಮಾಲೆಗಾಗಿ ಅವರು ಸಂಪಾದಿಸಿದ ನಡೆದು ಬಂದ ದಾರಿಮತ್ತು ಅದಕ್ಕೆ ಬರೆದ ಪ್ರಸ್ತಾವನೆಗಳೂ, ‘ಪುಟಬಂಗಾರಕ್ಕೆ ಬರೆದ ಮುನ್ನುಡಿಗಳೂ ಸಾಕಷ್ಟು ವಿದ್ವತ್ಪೂರ್ಣವಾಗಿವೆ.

ಕುರ್ತಕೋಟಿಯವರನ್ನು ನಾವು ಇಷ್ಟಪಡಬೇಕಾದದ್ದು ಕೃತಿವಿಮರ್ಶೆಗಿಂತ ಹೆಚ್ಚಾಗಿ ಸಂಸ್ಕೃತಿ ವಿಮರ್ಶೆಗೆ. ಇವತ್ತು ಕೃತಿ ವಿಮರ್ಶೆಯ ಹೆಸರಲ್ಲಿ ಪ್ರಬಂಧಗಳೂ, ಸೋಷಿಯಾಲಜಿಯ ಪಾಠಗಳೂ, ಸಂವಾದಗಳೂ ಪ್ರಕಟವಾಗುತ್ತಿವೆ. ಡಿ. ಆರ್‌. ನಾಗರಾಜ್‌ ಸಂಸ್ಕೃತಿ ವಿಮರ್ಶೆಯನ್ನು ಹೊರತು ಪಡಿಸಿದರೆ ಅಷ್ಟು ಒಳನೋಟಗಳುಳ್ಳ ಟಿಪ್ಪಣಿಗಳನ್ನು ಮತ್ಯಾರೂ ಬರೆದಿಲ್ಲ. ಉಳಿದವರು ಬರೆಯುತ್ತಿರುವ ನೆಲೆಗಟ್ಟನ್ನೂ ಅವರು ಕಂಡುಕೊಂಡ ಸ್ಫೂರ್ತಿಯ ಮೂಲವನ್ನೂ ನಾವು ಸುಲಭವಾಗಿ ಹುಡುಕಿಬಿಡಬಹುದು. 

ಆದರೆ, ಕುರ್ತಕೋಟಿಯವರ ಮಜ್ಜಿಗೆ ರಾಮಾಯಣದಂಥ ಲೇಖನಗಳು ಸ್ವಭಾವತಃ ಇಂಥ ಯಾವ ಬಾಹ್ಯ ಪ್ರೇರಣೆಗಳೂ ಇಲ್ಲದ ಬರಹ. ಅದು ಹೀಗೆ ಶುರುವಾಗುತ್ತದೆ

ಆ ದೌ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ ವಾಲೀ
ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ.

ಇದು ರಾಮಾಯಣದ ಕತೆಯನ್ನು ಸಂಗ್ರಹವಾಗಿ ಹೇಳುವ ಪದ್ಯ ಎನ್ನುತ್ತಲೇ ಕುರ್ತಕೋಟಿ ಇದರ ಹಿಂದಿರುವ ಒಂದು ಕತೆಯನ್ನೂ ವಿವರಿಸುತ್ತಾರೆ. ಅದು ಹೀಗಿದೆ;

ಒಬ್ಬ ಬ್ರಾಹ್ಮಣ ಒಬ್ಬ ಮುದುಕಿಯ ಮನೆಗೆ ಹೋಗಿ ಮಜ್ಜಿಗೆಯನ್ನು ಕೇಳಿದನಂತೆ. ಅವಳಲ್ಲಿ ಮಜ್ಜಿಗೆ ಇತ್ತು. ಆದರೆ ಯಾರೋ ಕೇಳಿದರೆಂದು ಹಾಗೆಯೇ ಕೊಡಲು ಮನಸ್ಸಿರಲಿಲ್ಲ. ಅವನಿಂದ ಏನಾದರೂ ಕೆಲಸವಾದರೆ ಕೊಡುತ್ತೇನೆ ಎಂದುಕೊಂಡು ರಾಮಾಯಣದ ಕತೆ ಹೇಳುವಂತೆ ಹೇಳಿದಳಂತೆ. ಅವನು ಈ ಪದ್ಯವನ್ನು ಹೇಳಿದನಂತೆ. ರಾಮಾಯಣದ ಕತೆ ತುಂಬ ಚಿಕ್ಕದಾಯಿತು ಎಂದಿದ್ದಕ್ಕೆ ಅವನು ಮಜ್ಜಿಗೆಗೆ ತಕ್ಕ ರಾಮಾಯಣ ಎಂದನಂತೆ.

ಕುರ್ತಕೋಟಿ ಬರೆಯುತ್ತಾರೆ: "ಒಂದು ಕಾವ್ಯಕೃತಿ ಮತ್ತು ಅದು ಹುಟ್ಟಿ ಬಂದು ಪ್ರಯೋಜನವಾಗಬೇಕಾದ ಸಮಾಜ- ಇವುಗಳ ಸಂಬಂಧವನ್ನು ಈ ಸಂಗತಿಯ ಮೂಲಕ ಅರಿಯಬಹುದಾಗಿದೆ. ಆರುಕಾಂಡಗಳಲ್ಲಿ ವಿಸ್ತಾರವಾಗಿ ಹಬ್ಬಿದ್ದ ರಾಮಾಯಣ ಮಹಾಕಾವ್ಯದ ಪ್ರಯೋಜನವನ್ನು ಸಮಕಾಲೀನ ಸಮಾಜ ಯಾವ ರೀತಿಯಲ್ಲಿ ಪಡಕೊಂಡಿತು ಎಂಬುದರ ಬಗ್ಗೆ ದಾಖಲೆಗಳು ನಮಗೆ ದೊರೆತಿಲ್ಲ. ಉತ್ತರಕಾಂಡದಲ್ಲಿ ಸ್ವತಃ ರಾಮನೇ ರಾಮಾಯಣವನ್ನು ಲವಕುಶರ ಬಾಯಿಯಿಂದ ಕೇಳುತ್ತಾನೆ. ರಾಮ ತನ್ನ ಮಕ್ಕಳೊಂದಿಗೆ ಪುನರ್ಮಿಲನವನ್ನು ಪಡೆದದ್ದು ರಾಮಾಯಣ ಕಾವ್ಯದ ಮೂಲಕವಾಗಿಯೇ ಎಂಬುದು ನಮಗೆ ಅದೇ ಕಾವ್ಯದಿಂದ ಗೊತ್ತಾಗುತ್ತದೆ. ರಾಮಾಯಣದ ಕತೆಯನ್ನು ಸ್ವತಃ ರಾಮನೇ ಕೇಳುವ ಪ್ರಸಂಗ ಅನೇಕ ರೀತಿಯಲ್ಲಿ ಅರ್ಥಪೂರ್ಣವಾಗಿದೆ. ರಾಮಾಯಣದ ಕತೆಗಾರನಂತೆ ರಾಮಾಯಣದ ಶ್ರೋತೃವೂ ಕತೆಯ ಮಹತ್ವದ ಅಂಗವಾಗುತ್ತಾನೆ. ವಾಲ್ಮೀಕಿ ಮತ್ತು ರಾಮರ ನಡುವೆ ರಾಮಾಯಣದ ಕತೆ ಇದೆ. ರಾಮ ರಾಮಾಯಣದ ನಾಯಕನೂ ಹೌದು, ಆ ಕತೆಯ ಮೊದಲ ಶ್ರೋತಾರನೂ ಹೌದು.

ಮೇಲೆ ಹೇಳಿದಂತೆಯೇ ನಾಲ್ಕು ಚರಣಗಳ ಒಂದು ಶ್ಲೋಕದಲ್ಲಿ ಮಹಾಭಾರತವನ್ನೂ ಹೇಳುವುದುಂಟು. ಕುರ್ತಕೋಟಿಯವರ ಮಜ್ಜಿಗೆ ರಾಮಾಯಣದ ವಿಶ್ಲೇಷಣೆಯನ್ನು ಇದಕ್ಕೂ ವಿಸ್ತರಿಸಬಹುದಾಗಿದೆ. ಹೀಗೆ ರಾಮಾಯಣದ ಬಗ್ಗೆ ಅವರು ಬರೆದಿದ್ದನ್ನು ಓದಿದಾಗ ಮಹಾಭಾರತದ ಒಂದು ಶ್ಲೋಕ ನೆನಪಾಗುವಂತೆ ಮಾಡಬಲ್ಲ ಶಕ್ತಿ ಕುರ್ತಕೋಟಿಯವರ ಬರಹಗಳಿಗಿತ್ತು.

ಈಗ ಆ ಮಹಾಭಾರತದ ಕುರಿತ ಶ್ಲೋಕ ನೋಡಿ. ಎರಡಕ್ಕೂ ಇರುವ ಸಾಮ್ಯ ಗಮನಿಸಿ;

ಆ ದೌ ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ.

ಕೆಲವು ವರ್ಷಗಳ ಹಿಂದೆ ಕುರ್ತಕೋಟಿಯವರು ಪತ್ನಿ ಸಮೇತ ಈ ಲೋಕವನ್ನಗಲಿದಾಗ, ಶಂಬಾಜೋಷಿಯವರೂ ಹೀಗೆಯೇ ದಂಪತಿಸಮೇತರಾಗಿ ನಡೆದುಹೋಗಿದ್ದನ್ನು ಅನೇಕರು ಜ್ಞಾಪಿಸಿಕೊಂಡಿದ್ದರು. ಶಂಬಾ ತೀರಿಕೊಂಡಾಗ ಕುರ್ತಕೋಟಿಯವರೇ ಒಂದು ಲೇಖನ ಬರೆದಿದ್ದರು ಅನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.

ಅದು ಹೀಗೆ ಕೊನೆಯಾಗುತ್ತದೆ: "ಶಂಬಾ ಒಬ್ಬರೇ ತೀರಿಕೊಳ್ಳಲಿಲ್ಲ . ಅವರ ಧರ್ಮಪತ್ನಿ ಪಾರ್ವತೀಬಾಯಿ 10 ದಿನ ಮೊದಲೇ ಕೋಮಾದ ಸ್ಥಿತಿಯಲ್ಲಿದ್ದರು. ಶಂಬಾ ತೀರಿಕೊಂಡು ಹನ್ನೆರಡು ತಾಸುಗಳು ಕಳೆದ ಮೇಲೆ ಅವರೂ ತೀರಿಕೊಂಡರು. ಶಂಬಾ ಈ ವಿಷಯದಲ್ಲಿ ಬಹಳ ಪುಣ್ಯವಂತರು. ಹೆಂಡತಿ, ಅವರು ಸತ್ತ ಮೇಲೂ ಅವರ ಕೈ ಬಿಡಲಿಲ್ಲ. ಇದೂ ಒಂದು ಪುರಾಣಕತೆ."

ಕುರ್ತಕೋಟಿಯವರ ಜೀವನದಲ್ಲಿ ಕೂಡ ಹೀಗೆಯೇ ಆಯಿತು. ಕುರ್ತಕೋಟಿಯವರ ಧರ್ಮಪತ್ನಿ ಸರಸ್ವತಿಯವರೂ ಪುಣ್ಯವಂತರು. ಅವರು ತೀರಿಕೊಂಡ ಮೇಲೂ ಕುರ್ತಕೋಟಿಯವರು ಅವರ ಕೈಬಿಡಲಿಲ್ಲ.

ಕೀರ್ತಿನಾಥ ಕುರ್ತಕೋಟಿಯವರು 2003ರ ವರ್ಷದಲ್ಲಿ ನಿಧನರಾದರು. ಅವರ ನಿಧನಾನಂತರ ಧಾರವಾಡದಲ್ಲಿ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಸ್ಥಾಪಿತವಾಗಿದೆ.  ಕನ್ನಡ ಸಾಹಿತ್ಯಲೋಕ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಕೀರ್ತಿನಾಥ ಕುರ್ತುಕೋಟಿ ಎಂಬ ಚೇತನಕ್ಕೆ ನಮ್ಮ ನಮನಗಳು.


ಮಾಹಿತಿ ಆಧಾರ:  ಜಾನಕಿ ಅವರು thatskannada.oneindia.in ನಲ್ಲಿ ಬರೆದ ಲೇಖನ

Tag: Keerthinatha Kurthakot, Keertinatha Kurtakoti

ಕಾಮೆಂಟ್‌ಗಳಿಲ್ಲ: