ಭಾನುವಾರ, ಅಕ್ಟೋಬರ್ 20, 2013

ಜಚನಿ

ಜಚನಿ  

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ‘ಜಚನಿ’ ಎಂಬ ಹೆಸರಿನಿಂದ ಪ್ರಖ್ಯಾತರಾದವರು ‘ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳು’.  ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ಶ್ರೀನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷಿಕ್ತರಾಗಿದ್ದ ಶ್ರೀ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಗಾಧವಾದುದು. 

ಜ. ಚ. ನಿ ಅವರು ವೇದ, ಆಗಮ, ಶಾಸ್ತ್ರ, ಯೋಗ, ವ್ಯಾಕರಣ, ಉಪನಿಷತ್ತು, ವಚನ ಶಾಸ್ತ್ರ, ಭಗವದ್ಗೀತೆ, ರಾಮಾಯಣ, ಮಹಾಭಾರತ ಮುಂತಾಧ ಮಹಾಕಾವ್ಯಗಳು, ಭಾರತೀಯ ಸಂಸ್ಕೃತಿ, ಮಾನವ ಶಾಸ್ತ್ರ, ಜನಾಂಗೀಯ ಆಧ್ಯಯನ ಮುಂತಾದ ಮಾನವಿಕ ಶಾಸ್ತ್ರಗಳು ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಸಂಪತ್ತನ್ನು ಕರಗತ ಮಾಡಿಕೊಂಡಿದ್ದ ವಿದ್ವಾಂಸರೆಂದು ಖ್ಯಾತರಾಗಿದ್ದವರು. 

ಜ.ಚ.ನಿ. ಯವರ ಪೂರ್ವಾಶ್ರಮದ ಹೆಸರು ಚಂದ್ರಶೇಖರ.  ಅವರು  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ 1909ರ ಅಕ್ಟೋಬರ್  20ರಂದು ಜನಿಸಿದರು.  ತಂದೆ  ಹಿರೇಮಠದ ದುಂಡಯ್ಯನವರು  ಮತ್ತು ತಾಯಿ ತಾಯವ್ವ.  ಇನ್ನೂ ಐದು ವರ್ಷದವನಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತನಾದ ಚಂದ್ರಶೇಖರನಿಗೆ ಓದಿಗೆ ಅಡೆತಡೆಯುಂಟಾದರೂ ಅಂಬಡಗಟ್ಟಿಯಿಂದ ನವಲಗುಂದ ತಾಲ್ಲೂಕಿನ ಅಡ್ನೂರಿಗೆ ಬಂದು ಪ್ರಾಥಮಿಕ ಶಿಕ್ಷಣ ಪಡೆದು ನಾಲ್ಕನೆಯ ತರಗತಿಯಲ್ಲಿ ತೇರ್ಗಡೆಯಾದ ನಂತರ ಹಾನಗಲ್ಲ ಶಿವಕುಮಾರ ಸ್ವಾಮಿಗಳ ಉಪದೇಶದಂತೆ ಶಿವಮೊಗ್ಗದ ಶಿವಯೋಗ ಮಂದಿರಕ್ಕೆ ಸೇರಿದ.

ಚಂದ್ರಶೇಖರರು ಶಿವಯೋಗ ಮಂದಿರದಲ್ಲಿ 12 ವರ್ಷಗಳ ಕಾಲ ಅಧ್ಯಯನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದರು.   ಶಿವಕುಮಾರ ಸ್ವಾಮಿಯವರ ಶಿವಯೋಗ ಮಂದಿರ ಆಗಿನ ಕಾಲಕ್ಕೆ ಬೇರೆ ಬೇರೆ ಮಠಗಳಿಗೆ ಸ್ವಾಮಿಗಳನ್ನು ತಯಾರು ಮಾಡುವ ವಿದ್ಯಾ ಕೇಂದ್ರವಾಗಿತ್ತು. ಒಂದು ಮಠದ ಜವಾಬ್ದಾರಿಯನ್ನು ಹೊರುವುದಕ್ಕೆ ಬೇಕಾದ ಎಲ್ಲಾ ರೀತಿಯ ವಿದ್ಯೆ ಮತ್ತು ತರಬೇತಿಯನ್ನು ಅಲ್ಲಿ ನೀಡಲಾಗುತ್ತಿತ್ತು.

ಚಂದ್ರಶೇಖರನದು ದುರ್ಬಲ ಶರೀರ. ಅವನಿಗೆ ದೈಹಿಕವಾಗಿ ಹೆಚ್ಚು ಕೆಲಸ ಮಾಡಲಾಗದ ಸ್ಥಿತಿ. ಹಾಗಾಗಿ ಶಿವಕುಮಾರ ಸ್ವಾಮಿಗಳು ಆತನಿಗೆ ಗ್ರಂಥಾಲಯದ ಜವಾಬ್ದಾರಿಯ ಕೆಲಸ ಹಚ್ಚಿದರು. ಸುಕುಮಾರಎಂಬ ಕೈ ಬರಹದ ಪತ್ರಿಕೆಯೊಂದನ್ನು ಸ್ವಾಮೀಜಿ ಹೊರ ತರುತ್ತಿದ್ದರು. ಅದರ ಜವಾಬ್ದಾರಿ ಕೂಡಾ ಚಂದ್ರಶೇಖರನ ಪಾಲಿಗೆ ಬಿತ್ತು. ನಿಧಾನವಾಗಿ ಸಂಪಾದಕೀಯಗಳನ್ನು ಬರೆಯತೊಡಗಿದ ಚಂದ್ರಶೇಖರನಿಗೆ ಬರಹದ ಬಗೆಗಿನ ಒಲವು ಪ್ರಾರಂಭವಾಯಿತು. ಭಾರತೀಯ ತತ್ವಚಿಂತನೆ, ವೀರಶೈವ  ತತ್ವಚಿಂತನೆ, ಹಳೆಗನ್ನಡ ಸಾಹಿತ್ಯಾಧ್ಯಯನ, ಸಂಗೀತ, ವೈದ್ಯ, ಯೋಗ, ಸಂಸ್ಕತಾಧ್ಯಯನ ಹೀಗೆ ಅನೇಕ ವಿಷಯಗಳಲ್ಲಿ ಚಂದ್ರಶೇಖರನಿಗೆ ಪ್ರವೇಶ ದೊರೆತದ್ದು ಇಲ್ಲೇ.

ಶಿವಯೋಗ ಮಂದಿರದಲ್ಲಿನ ನನ್ನ ಬದುಕು ನನ್ನ ಜೀವನದ ಅಮೃತ ಘಳಿಗೆ. ನನ್ನ ಜೀವನದ ಉದ್ದೇಶ ಸಫಲ ಆಯಿತು ಎಂದು  ‘ಕ್ರಾಂತಿಕಾರಿ ಕುಮಾರ ಯೋಗಿಎಂಬ ತಮ್ಮ ಗ್ರಂಥದಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಮತ್ತೊಮ್ಮೆ ಅವರ ಆರೋಗ್ಯ ಕೈ ಕೊಟ್ಟಿತು. ಚಿಕಿತ್ಸೆಗೆಂದು ಬೆಳಗಾವಿಗೆ ಹೋದರು. ಆರೋಗ್ಯ ಸುಧಾರಿಸಿದ ಮೇಲೆ ಅವರಿಗೆ ಎದುರಾದ ಪ್ರಶ್ನೆ ಮುಂದಿನ ವಿದ್ಯಾಭ್ಯಾಸಕ್ಕೆ ಎಲ್ಲಿಗೆ ಹೋಗಬೇಕು? ಬನಾರಸ್‌ಗೋ ಅಥವಾ ಬೆಂಗಳೂರಿಗೋ. ಆಗಿನ ಕಾಲಕ್ಕೆ ಹೆಚ್ಚಿನ ಶಿಕ್ಷಣಾರ್ಥಿಗಳು ಬನಾರಸ್‌ಗೆ ಹೋಗುತ್ತಿದ್ದರು. ಕಡೆಗೂ ಅವರು ನಿರ್ಧರಿಸಿದ್ದು ಬೆಂಗಳೂರಿಗೆ ಹೋಗುವುದೆಂದು. ಹಾಗೆ ಅವರು ಸೇರಿದ್ದು ಸರ್ಪಭೂಷಣ ಮಠದ ಮಹಾದೇವ ಸ್ವಾಮೀಜಿಯವರ ಬಳಿ. ಅಲ್ಲಿ ಎರಡು ವರ್ಷಗಳ ಕಾಲ ವೀರಶೈವ ತತ್ವಚಿಂತನೆಯ ಅಧ್ಯಯನ ಮಾಡಿದರು.

ಅವರ ಅಭ್ಯಾಸ ಮುಗಿಯುವ ಸಮಯಕ್ಕೆ ಸರಿಯಾಗಿ ಕೋಲಾರ ಜಿಲ್ಲಾಧಿಕಾರಿಯಿಂದ  ಸಂದರ್ಶನವೊಂದಕ್ಕೆ ಬರಬೇಕೆಂಬ ಕರೆ ಬಂತು. ಜಿಲ್ಲಾಧಿಕಾರಿ, ನಿಡುಮಾಮಿಡಿ ಮಠದ ಧರ್ಮಗುರು ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ತಪಾಸಣೆಯಲ್ಲಿದ್ದರು. 

ಸಂದರ್ಶನದಲ್ಲಿ ಮೂರು ಜನರನ್ನು ಆಯ್ಕೆ ಮಾಡಲಾಯಿತು. ಮೂರನೆಯವರೇ ಜಚನಿಯವರು. ಆಯ್ಕೆಯಾದ ಮೊದಲ ಇಬ್ಬರಿಗೆ ಬನಾರಸ್‌ನಲ್ಲಿ  ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಅವರು ಮಠದ ಸ್ಥಾನವನ್ನು ನಿರಾಕರಿಸಿ ಬನಾರಸ್‌ಗೆ ಹೋದರು. ಇದನ್ನೇ ಯೋಗಾಯೋಗ ಎನ್ನುವುದು. ಚಂದ್ರಶೇಖರರಿಗೆ ನಿಡುಮಾಮಿಡಿ ಮಠದ ಧರ್ಮ ಗುರುವಿನ ಸ್ಥಾನ ದೊರಕಿತು. 
ತಾವು  ಪೀಠಾರೋಹಣ ಮಾಡಿದ ಸಂದರ್ಭದಲ್ಲಿ ಮಹಾಪೀಠವನ್ನು ಆರೋಹಣಮಾಡಿದ ಮಾತ್ರದಿಂದಲೇ ಗುರುವೆಂಬ ಹೆಮ್ಮೆಯಿಂದ ಮೆರೆಯಬೇಕೆಂಬ ವಾಂಛೆ ನಮಗಿಲ್ಲ. ಸಾಹಿತಿಯಾಗಿ, ಸಮಾಜ ಸುಧಾರಕರಾಗಿ, ಧರ್ಮ ಪ್ರಚಾರಕಾರ‍್ಯದಲ್ಲಿ ಕಾರ‍್ಯ ಪ್ರವೃತ್ತರಾಗಬೇಕೆಂದು ಸಂಕಲ್ಪಿಸಿದ್ದೇವೆ”  ಎಂದು ನುಡಿದ ಅವರ  ಮಾತುಗಳು ಅವರ ವಿನಮ್ರತೆಯನ್ನೂ ವಿಶಾಲ ಮನೋಭಾವಗಳುಳ್ಳ ಧ್ಯೇಯವನ್ನೂ  ಎತ್ತಿ ತೋರುತ್ತಿದ್ದವು.

1939ರ ಜೂನ್ 12ರಂದು ಚಂದ್ರಶೇಖರ ಮಠದ ಅಧಿಕಾರ ವಹಿಸಿಕೊಂಡು ಜ.ಚ.ನಿ.ಯಾದರು. ಆಗ ಮಠ ಶಿಥಿಲಾವಸ್ಥೆಯಲ್ಲಿತ್ತು. ಎಲ್ಲಾ ಕಡೆಯಿಂದ ಸಾಲ, ಸೋಲ. ಜ.ಚ.ನಿ. ನಿಧಾನವಾಗಿ ಮಠವನ್ನು ಪುನಶ್ಚೇತನಗೊಳಿಸಿದರು. ಸುಮಾರು ಎಂಟು ವರ್ಷಗಳ ಕಾಲ ಶ್ರಮಿಸಿ ಜನರ ಪ್ರೀತ್ಯಾದರಗಳನ್ನು ಗಳಿಸಿಕೊಂಡರು. ಅದನ್ನು ಸುಸ್ಥಿತಿಗೆ ತಂದರು. 

ಅಷ್ಟರಲ್ಲಾಗಲೇ ಅವರಲ್ಲಿ ಮನೆಮಾಡಿದ್ದ ಸೃಜನಶೀಲತೆಯ ಅದಮ್ಯ ಹಂಬಲ ಲೇಖಕನ ರೂಪದಲ್ಲಿ ಹೊರಬರಲು ಹವಣಿಸುತ್ತಿತ್ತು. ಸುಮಾರು 1937ರಲ್ಲಿ ಪ್ರಾರಂಭವಾದ ಅವರ ಬರವಣಿಗೆ 1996ರಲ್ಲಿ ಅವರು ನಿಧನರಾಗುವವರೆಗೆ ನಿರಂತರವಾಗಿ ಮುಂದುವರಿಯಿತು. ಜೊತೆ ಜೊತೆಗೆ ಸಂಘ ಸಂಸ್ಥೆಗಳನ್ನು ಕಟ್ಟುವುದು.  ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದು, ಅರ್ಹರನ್ನು ಗುರುತಿಸಿ ಅವರನ್ನು ಸಾರ್ವಜನಿಕವಾಗಿ ಗೌರವಿಸುವುದು  ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದರು. ವ್ಯಕ್ತಿಯಾಗಿದ್ದವರು ಶಕ್ತಿಯಾಗಿ, ಶಕ್ತಿಯಾದವರು  ಸಂಸ್ಥೆಯಾಗಿ ಪರಿವರ್ತನೆ ಹೊಂದಿದರು.

ಜ.ಚ.ನಿ.ಯವರದು ನಡೆ ಶುದ್ಧಶೀಲಶುದ್ಧ ಬದುಕು. ಸಾಮಾಜಿಕವಾಗಿ ಅಷ್ಟೇ ಪ್ರಖರವಾದ ಕ್ರಾಂತಿಕಾರಿ ಮನೋಭಾವ. 1948ರಲ್ಲೇ ತಮ್ಮ ಮಠದೊಳಗೆ ದಲಿತರಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಸಮತಾ ಬದುಕಿನ ಕನಸು ಕಂಡರು. ಕರ್ನಾಟಕದ ಏಕೀಕರಣಕ್ಕಾಗಿ ಇಡೀ ಕರ್ನಾಟಕ ಸುತ್ತಿದರು. ಹಾಗಾಗಿ ನಿಡುಮಾಮಿಡಿ ಮಠ ಬೇರೆ ಮಠಗಳಿಗಿಂತ ಭಿನ್ನ; ಜ.ಚ.ನಿ.ಯವರು ಬೇರೆ ಮಠಾಧೀಶರುಗಳಿಗಿಂತ ಭಿನ್ನ.

ಜ.ಚ.ನಿ ಅವರು ತಮ್ಮ  ಸಾಹಿತ್ಯ ಸೇವೆಯ ನಾಲ್ಕು ದಶಕಗಳ ಅವಧಿಯಲ್ಲಿ 6000 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಲ್ಲದೆ ನಾನ್ನೂರಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರ ವಚನಗಳು ವೈವಿಧ್ಯತೆಯಿಂದ ಕೂಡಿದ್ದು ವಚನಗಳೆಂದರೆ ಬರೇ ನುಡಿ, ಭಾಷೆ, ಮಾತು ಎಂಬ ಅರ್ಥಗಳಿದ್ದರೂ ಶರಣರ ಅನುಭಾವದ ಅಭಿವ್ಯಕ್ತಿಯ ಶಕ್ತಿಯ ಸ್ಫೋಟವೇ ವಚನಗಳಾಗಿವೆ. ಇದನ್ನೇ ಅಲ್ಲಮ ಪ್ರಭು ಜ್ಯೋತಿರ್ಲಿಂಗವೆಂದು ಕರೆದರೆ ಸಂಸ್ಕೃತದಲ್ಲಿ ಶಬ್ಧಬ್ರಹ್ಮವೆನ್ನುತ್ತಾರೆ. ಸಹಜವಾದ ಅರ್ಥವಲ್ಲದೆ ಅರ್ಥಾತೀತ ಅರ್ಥಗಳನ್ನು ಪಡೆಯುತ್ತಾ ಹೋದಾಗ, ಅಧ್ಯಾತದ ಅನುಭವದ ವಿವಿದಾರ್ಥಗಳನ್ನು ಹೊಮ್ಮಿಸಿದಾಗ ಅದು ಅನಂತಾನಂತ ಅರ್ಥಗಳು ಹೊಂದಿ ಜ್ಯೋತಿರ್ಲಿಂಗ ಅಥವಾ ಶಬ್ಧಬ್ರಹ್ಮವಾಗುತ್ತದೆ. ಇಂತಹ 6000 ವಚನಗಳನ್ನೊಳಗೊಂಡ 1700 ಪುಟಗಳ ಅವರ ಬೃಹದ್ಗ್ರಂಥವು ಹಲವು ಮರು ಮುದ್ರಣಗಳನ್ನು ಕಂಡಿರುವುದು  ಅವರ ಮೇಧಾಶಕ್ತಿಯ ಪ್ರತೀಕವೆನಿಸಿದೆ.

ಜ.ಚ.ನಿ ಅವರ  ವಚನಗಳು ವೈವಿದ್ಯತೆಯಿಂದ ಕೂಡಿದ್ದು ಸಾಲ, ಶೂಲಗಳಿಂದ ಬಸವಳಿದ ದಲಿತನ ಚಿತ್ರಣ, ದಲಿತರ ಸುಧಾರಣೆಗಾಗಿ ಸರಕಾರ ಮಂಜೂರು ಮಾಡಿದ ಹಣಕ್ಕಾಗಿ ಭೂತದಂತೆ ಕಾಯ್ದು ಲಪಟಾಯಿಸುವ ಅಧಿಕಾರಿಗಳು, ಸಮಾನತೆ, ಸಹಕಾರ, ಧಾರ‍್ಮಿಕಸಾಮಾಜಿಕಸಾಹಿತ್ಯ, ಸಮಕಾಲೀನ ರಾಜಕೀಯ, ಪಕ್ಷಾಂತರದ ಪಿಡುಗು, ಹೀಗೆ ಹಲವಾರು ವಿಚಾರಗಳ ಕುರಿತು ಬೆಳಕು ಬೀರುತ್ತವೆ.   ರಾಜಕೀಯದಲ್ಲಿ ಪಕ್ಷಾಂತರದ ಪಿಡುಗಿನಿಂದ ರಾಜಕೀಯ ಹೇಗೆ ಭ್ರಷ್ಟಗೊಂಡಿದೆ ಎಂಬುದನ್ನು ಸೂಚಿಸಲು

ಒಡೆತನಕ್ಕೆ ಹೊಡೆದಾಡುವ ಹಿರಿಯರ ನೋಡಾ
ಪಕ್ಷಕ್ಕೊಮ್ಮೆ ಪಕ್ಷಾಂತರವಾಗುವ ಪ್ರತಿಷ್ಠಿತರ ನೋಡಾ    
………………………………………….
ಇವರು ಒಡೆತನಕ್ಕೆ ಉಚಿತರಹರೆ ?
ಇವರಿಂದ ನಾಡು ನುಡಿ ಉದ್ಧಾರವೆ?

ಎಂದು ಪ್ರಶ್ನಿಸಿ ಇಂದಿನ ರಾಜಕೀಯ ಚಿತ್ರಣಕ್ಕೆ ಕನ್ನಡಿ ಹಿಡಿದಿದ್ದಾರೆ. ಇದಲ್ಲದೆ ರಾಷ್ಟ್ರೀಯತೆ, ದೇಶಭಕ್ತಿ, ನಾಡುನುಡಿ, ತುರ್ತು ಪರಿಸ್ಥಿತಿ, ಕುಟುಂಬ ಯೋಜನೆ, ಇತ್ಯಾದಿ ವಿಚಾರಗಳ ಬಗ್ಗೆಯೂ ವಚನಗಳ ಮೂಲಕ ಅವರು ಜನ ಸಾಮಾನ್ಯರ ಕಣ್ಣು ತೆರೆಸಿದ್ದಾರೆ.

ವಚನಗಳಲ್ಲದೆ ಜ. ಚ. ನಿ ಅವರ ಸಿದ್ಧಾಂತ  ಶಿಖಾಮಣಿಯನ್ನಾಧರಿಸಿದ ಜೀವನ ಸಿದ್ಧಾಂತದಆರು ಬೃಹತ್ ಸಂಪುಟಗಳು, ಶೂನ್ಯ ಸಂಪಾದನೆಯನ್ನಾಧರಿಸಿದ ಸಂಪಾದನೆಯ ಸೊಂಪುನಾಲ್ಕು ಬೃಹತ್ ಸಂಪುಟಗಳು, ‘ಪ್ರಾಚೀನ ಮಹಾ ವ್ಯಕ್ತಿತ್ವಗಳು ಶತಕ ತ್ರಯ ಪ್ರವಚನ’, ‘ಕೈವಲ್ಯ ಪದ್ಧತಿ ಪ್ರದೀಪಿಕೆಮುಂತಾದ ಕೃತಿಗಳೂ ಮಹತ್ವದ್ದೆನಿಸಿವೆ.

ಜ.ಚ.ನಿ ಅವರು  ನಾಲ್ಕು ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು ಇವುಗಳನ್ನು ವ್ಯಕ್ತಿ ಚಿತ್ರಣ ಅಥವಾ ಜೀವನ ಚರಿತ್ರೆ,  ಕಾವ್ಯ,  ಆಧುನಿಕ ವಚನ ರಚನೆ,  ಅನುವಾದ,  ತಾತ್ವಿಕ ಚಿಂತನೆಯ ಕೃತಿಗಳು,  ಜೀವನ ಸಿದ್ಧಾಂತ, ವಿಮರ್ಶಾ ಕೃತಿಗಳು,  ಲಾಕ್ಷಣಿಕ ಕೃತಿಗಳು,  ಚಾರಿತ್ರಿಕ ಗ್ರಂಥಗಳು,  ಸಂಶೋಧನಾ ಕೃತಿಗಳು ಎಂದು ವಿಂಗಡಿಸಬಹುದಾಗಿದೆ.

ಕನ್ನಡವನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಶ್ರೀ ಸ್ವಾಮಿಗಳು ಕನ್ಡಡಿಗರು ಕನ್ನಡಿಗರಾಗಿಯೇ ಬಾಳಬೇಕು, ಬೆಳಗಬೇಕು, ಕನ್ನಡಾಂಬೆಯ ಋಣಮುಕ್ತರಾಗಲು ಹೆಣಗಬೇಕು. ಕನ್ನಡದಲ್ಲಿ ಕಂಪಿದೆ, ಕತ್ತುರಿಯಿದೆ, ಕಲ್ಲು ಸಕ್ಕರೆ ಸವಿ ಇದೆ, ಕನ್ನಡಿಗರು ಕನ್ನಡವನ್ನು ಕೈಹಿಡಿಯದಿದ್ದರೆ ಇನ್ನಾರು ಹಿಡಿದಾರು, ಇನ್ನಾರು ಸವಿದಾರು?” ಎಂದು ಪ್ರಶ್ನಿಸುತ್ತಾ ತಮಗಿರುವ ಅಗಾಧ ಪ್ರೀತಿಯನ್ನು ತೋರಿದ್ದಾರೆ.  ಜಚನಿಯವರು ಕನ್ನಡ ಶಬ್ದಕೋಶಕ್ಕೆ ಹೊಸದಾಗಿ ಪದಗಳನ್ನು ಸೃಷ್ಟಿಸಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಆಧುನಿಕ ವಚನಗಳಂತೂ ಹನ್ನೆರಡನೇ ಶತಮಾನದ ವಚನ ಸಾಹಿತ್ಯದ ಸಮರ್ಥ ವಿಸ್ತರಣೆಯೆಂದೇ ವಿದ್ವಾಂಸರು ಅಭಿಮತಿಸುತ್ತಾರೆ. ರಾಚನಿಕ ಸ್ವರೂಪ ಮತ್ತು ಸತ್ವಗಳೆರಡರಲ್ಲೂ ಅವರನ್ನು ಆ ಪ್ರಕಾರದಲ್ಲಿ ಸರಿಗಟ್ಟಿದವರು ವಿರಳ.  ಕುವೆಂಪು ಅವರು  “ಶ್ರೀ ಜಚನಿಯವರು ಧಾರ್ಮಿಕ ಕ್ಷೇತ್ರದಲ್ಲಿ ಗುರುವಾದಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ  ಗುರುವಾಗಿದ್ದಾರೆ” ಎಂದು ಹೇಳಿದ್ದಾರೆ.

ಅಕ್ಷರ ಪೂಜೆಯಲ್ಲಿಯೇ ತಮ್ಮನ್ನು  ತೊಡಗಿಸಿಕೊಂಡಿದ್ದ ಜ.ಚ.ನಿ. ಯವರಿಗೆ 1967 ರಲ್ಲಿ ದಾಸೋಹ’, 1971 ರಲ್ಲಿ ಜೀವನ ಸಿದ್ಧಿಎಂಬ ಎರಡು ಗ್ರಂಥಗಳನ್ನು ಅಭಿಮಾನಿಗಳು ಅರ್ಪಿಸಿದ್ದರು.    ಮೈಸೂರು ವಿಶ್ವವಿದ್ಯಾಲಯವು ಅವರಿಗೆ  ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

ಜ. ಚ. ನಿ ಅವರು 1996ರ ನವೆಂಬರ್ 5ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.
  
Tag: Jachaniಕಾಮೆಂಟ್‌ಗಳಿಲ್ಲ: