ಗುರುವಾರ, ಅಕ್ಟೋಬರ್ 3, 2013

ಮಹಾನ್ ನೇತ್ರತಜ್ಞ ಡಾ. ಎಂ. ಸಿ. ಮೋದಿ

 ಡಾ. ಎಂ. ಸಿ. ಮೋದಿ

ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ (ಡಾ. ಎಂ ಸಿ ಮೋದಿ ) ಎಂದರೆ ಲಕ್ಷಾಂತರ ಜನರಿಗೆ ನೇತ್ರ ಚಿಕಿತ್ಸೆ ಸುಲಭವಾಗಿ ಕೈಗೆಟಕುವಂತೆ ಮಾಡಿದವರೆಂದೇ ಪ್ರಸಿದ್ಧಿ.   ಭಾರತದ ಪ್ರಖ್ಯಾತ ನೇತ್ರ ತಜ್ಞರಾದ ಡಾ. ಎಂ. ಸಿ. ಮೋದಿಯವರ  ಸಾಧನೆ ಅನನ್ಯವಾಗಿದೆ. ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಡಾ. ಮೋದಿಯವರು ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿದ್ದರೆಂದು ನಂಬಲಾಗಿದೆ.  ಭಾರತ ಸರ್ಕಾರವು ಡಾ. ಮೋದಿಯವರನ್ನು 'ಪದ್ಮಭೂಷಣ' ಮತ್ತು 'ಪದ್ಮಶ್ರೀ ಪ್ರಶಸ್ತಿ'ಗಳಿಂದ ಗೌರವಿಸಿದೆ.

'ಮುರಿಗೆಪ್ಪ ಚನ್ನವೀರಪ್ಪ ಮೋದಿ'ಯವರು  ಅಕ್ಟೋಬರ್ 4, 1916 ವರ್ಷದಲ್ಲಿ ಬಾಗಲಕೋಟೆಯ 'ಬೀಳಗಿ' ಗ್ರಾಮದಲ್ಲಿ ಜನಿಸಿದರು.   ಜಮಖಂಡಿಯ ಪಿ ಬಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಬೆಳಗಾವಿ 'ಆಯುರ್ವೇದ ಕಾಲೇಜಿ'ನಲ್ಲಿ ವಿದ್ಯಾಭ್ಯಾಸ ನಡೆಸಿದ  ಮೋದಿಯವರು ಮುಂದೆ  'ಕೆ ಬಿ ‌ಎಚ್‌ ಬಿ ಕಣ್ಣಿನ ಆಸ್ಪತ್ರೆ' ಹಾಗೂ 'ರಾಮವಾಡಿ ಕಣ್ಣಿನ ಆಸ್ಪತ್ರೆ'ಯಲ್ಲಿ ವೈದ್ಯ ಶಿಕ್ಷಣ ಪಡೆದರು. ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್   ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಬೆಳಗಾವಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಮೋದಿಯವರು  ನಂತರದಲ್ಲಿ  ದಾವಣಗೆರೆಯಲ್ಲಿ ನೆಲೆಸಿದರು.

1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾದ ಮೋದಿಯವರು  ಕೆಲವು ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. ಕಣ್ಣಿನ ಪೊರೆ (ಕ್ಯಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ನಿರಂತರವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಅವರು 'ರಷ್ಯಾ' ಮತ್ತು 'ಅಮೇರಿಕ' ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ತಮ್ಮ ಸೇವೆ ಸಲ್ಲಿಸಿ ಅಲ್ಲಿನ ಗೌರವಾದರಗಳಿಗೆ ಪಾತ್ರರಾಗಿದ್ದಾರೆ.

ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ನೇತ್ರ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಡಾ. ಎಂ. ಸಿ ಮೋದಿಯವರು  ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. 'ಸಾಮೂಹಿಕ ನೇತ್ರ ಚಿಕಿತ್ಸೆ' ಹಾಗೂ 'ಸಂಚಾರಿ ಘಟಕ'ವನ್ನು ತೆರೆದ ಮೊದಲ ವೈದ್ಯರೆಂಬ  ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು.

ಮೋದಿಯವರು ತಿರುಪತಿಯಲ್ಲಿ ಒಂದೇ ದಿನದಲ್ಲಿ 833 ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಲಕ್ಷಾಂತರ ಜನಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿರುವುದೂ ಒಂದು ಅಚ್ಚಳಿಯದ ದಾಖಲೆಯೇ  ಆಗಿದೆ.  ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿದರು. ಮೋದಿಯವರು ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿ ನಿಯೋಜಿತರಾಗಿದ್ದರು.  ತಮ್ಮ ಬದುಕಿನ ಕೊನೆಯ ದಶಕಗಳಲ್ಲಿ ಅವರು ತಮ್ಮ ಬೆಂಗಳೂರಿನ ಕಣ್ಣಿನ ಆಸ್ಪತ್ರೆಗೆ ತಮ್ಮ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿದ್ದರು.

ತಮ್ಮ ಜೀವನವನ್ನು ನಿರಂತರ ಜನಸೇವೆಗೆ ಮುಡಿಪಾಗಿಟ್ಟ ಮೋದಿಯವರು ನವೆಂಬರ್ 11, 2005ರಲ್ಲಿ, ತಮ್ಮ 90ನೆ ವಯಸ್ಸಿನಲ್ಲಿ  ನಿಧನರಾದರು.  ಅವರ ಇಚ್ಚೆಯಂತೆ ಅವರ ಕಣ್ಣುಗಳನ್ನು ಮರಣೋತ್ತರವಾಗಿ ದಾನಮಾಡಲಾಯಿತು. ಅವರ ಪುತ್ರ ಡಾ. ಅಮರನಾಥ ಮೋದಿ ಸಹಾ ನೇತ್ರ ತಜ್ಞರಾಗಿದ್ದಾರೆ.


ಮಹಾನ್ ನೇತ್ರತಜ್ಞ, ದೃಷ್ಟಿದಾನಿ ಎಂ. ಸಿ. ಮೋದಿ ಎಂಬ ಮಹಾನ್ ಚೇತನಕ್ಕೆ ನಮ್ಮ ನಮನ.

Tag: Dr. M. C. Modi

ಕಾಮೆಂಟ್‌ಗಳಿಲ್ಲ: