ಶನಿವಾರ, ಅಕ್ಟೋಬರ್ 26, 2013

ಡಿ. ಎಲ್. ನರಸಿಂಹಾಚಾರ್ಯ

ಡಿ. ಎಲ್. ನರಸಿಂಹಾಚಾರ್ಯ

ಕನ್ನಡ ನಾಡಿನ ತಮ್ಮ ಕಾಲದ ಶ್ರೇಷ್ಠ ವಿದ್ವಾಂಸರಲ್ಲಿ ಅಗ್ರಗಣ್ಯರೆನಿಸಿಕನ್ನಡ ಭಾಷೆ ಸಾಹಿತ್ಯಗಳ ಸಂಶೋಧನೆ ಕ್ಷೇತ್ರದಲ್ಲಿ ಮೌಲಿಕವೂ ಮಾರ್ಗದರ್ಶಕವೂ ಆದ ಹಲವಾರು ಕೆಲಸಗಳನ್ನು ಮಾಡಿ ಕೀರ್ತಿಶಾಲಿಗಳಾದವರು ಡಿ. ಎಲ್. ನರಸಿಂಹಾಚಾರ್ಯರು.  ಡಿ.ಎಲ್.ಎನ್’ ಎಂದೇ ಕನ್ನಡ ನಾಡಿನಲ್ಲಿ ಪ್ರಸಿದ್ಧರಾದ  ಇವರ ಪೂರ್ತಿ ಹೆಸರು ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ ಎಂದು.  ಇವರು 27.10.1906ರಂದು ಚಿಕ್ಕನಾಯಕನ ಹಳ್ಳಿಯಲ್ಲಿ ಹುಟ್ಟಿದರು. 

ಬಿ.ಎ. ಮತ್ತು ಎಂ.ಎ ಗಳನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಹಲವಾರು ಚಿನ್ನದ ಪದಕಗಳನ್ನು ಗಳಿಸಿದ ಅವರ ಗುರುಗಳೆಂದರೆ ಬಿ.ಎಂ. ಶ್ರೀಕಂಠಯ್ಯಟಿ. ಎಸ್. ವೆಂಕಣ್ಣಯ್ಯಟಿ. ಎನ್. ಸುಬ್ಬರಾಯಶಾಸ್ತ್ರಿಆರ್. ಅನಂತಕೃಷ್ಣಶರ್ಮಸಿ.ಆರ್. ನರಸಿಂಹ ಶಾಸ್ತ್ರಿ ಮತ್ತು ಡಿ. ಶ್ರೀನಿವಾಸಾಚಾರ್ಯ.  ಎ. ಆರ್ ಕೃಷ್ಣ ಶಾಸ್ತ್ರಿಗಳೂ ಕೆಲವು ಸಲ ಅಧ್ಯಾಪಕರಾಗಿದ್ದರು.  ಸಹಪಾಠಿಗಳಾಗಿದ್ದವರು ಕೆ. ವಿ. ಪುಟ್ಟಪ್ಪಡಿ. ಕೆ. ಭೀಮಸೇನರಾವ್ಎನ್. ಅನಂತರಂಗಾಚಾರ್ಕೆ. ವೆಂಕಟರಾಮಪ್ಪಎಂ. ನಾಗೇಶಾಚಾರ್ಬಿ. ನಂಜುಂಡಯ್ಯಬಿ. ಎಸ್. ವೆಂಕಟರಾಮಯ್ಯ ಮತ್ತು ಎಂ. ಎ. ಅಳಸಿಂಗಾಚಾರ್ಯ ಮುಂತಾದ ಮಹನೀಯರು. 

ಡಿ. ಎಲ್ ನರಸಿಂಹಾಚಾರ್ಯರು ಮೊದಲಿಗೆ ಮೈಸೂರಿನ ಪ್ರಾಚ್ಯ ವಿದ್ಯಾಸಂಶೋಧನಾ ಸಂಸ್ಥೆಯಲ್ಲಿ ಕನ್ನಡ ಪಂಡಿತರಾಗಿನಂತರ ಮಹಾರಾಜ ಕಾಲೇಜುಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ನಡೆಸಿದರು.  1962ರಲ್ಲಿ ನಿವೃತ್ತಿಯ ನಂತರದಲ್ಲಿ ಸಹಾ ತಮ್ಮ ವೃತ್ತಿ ಜೀವನದ ಉದ್ದಕ್ಕೆ ನಡೆಸಿಕೊಂಡು ಬಂದಿದ್ದ ಅಧ್ಯಯನಸಂಶೋಧನೆ ಮತ್ತು ಲೇಖನ ಕಾರ್ಯಗಳನ್ನು ಇನ್ನೂ ಚುರುಕುಗೊಳಿಸಿದರು.  1963ರಿಂದ ಆರು ವರ್ಷಗಳ ಕಾಲ ಅವರು ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗದ ಸಂಶೋಧಕ ವಿದ್ವಾಂಸರಾಗಿ ಕನ್ನಡ ಗ್ರಂಥ ಸಂಪಾದನೆ’ ಹಾಗೂ ಪಂಪಭಾರತ ದೀಪಿಕೆ’ ಎಂಬ ಎರಡು ಶ್ರೇಷ್ಠಗ್ರಂಥಗಳನ್ನು ಬರೆದು ಪ್ರಕಟಿಸಿದರು.  ಆಗಲೇ ತೀ.ನಂ.ಶ್ರೀ ಅವರ ನಿಧನದಿಂದ ತೆರವಾಗಿದ್ದ ಕನ್ನಡ-ಕನ್ನಡ ನಿಘಂಟಿನ ಅಧ್ಯಕ್ಷ ಸ್ಥಾನವನ್ನೂ ಪ್ರಧಾನ ಸಂಪಾದಕತ್ವದ ಜವಾಬ್ಧಾರಿಯನ್ನೂ ವಹಿಸಿಕೊಂಡರು.  ತಮ್ಮ ಬದುಕಿನ ಕೊನೆಯವರೆಗೂ ಈ ಕಾರ್ಯವನ್ನು ಅವರು ನಿಷ್ಠೆಯಿಂದಲೂಶ್ರದ್ಧೆಯಿಂದಲೂ ನಿರ್ವಹಿಸಿದರು.

1960ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರನ್ನು ಅರಸಿ ಬಂತು.  1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರ ಅಪಾರ ವಿದ್ವತ್ತನ್ನು ಮನ್ನಿಸಿ ಗೌರವ ಡಿ.ಲಿಟ್ ಪದವಿಯನ್ನು ಸಲ್ಲಿಸಿತು. 

ಡಿ. ಎಲ್. ಎನ್ ನೋಟಕ್ಕೆ ಎತ್ತರದ ಆಳುಆ ಎತ್ತರಕ್ಕೆ ತಕ್ಕಂತೆ  ದೊಡ್ಡ ದೇಹ.  ಬಣ್ಣ ಎಣ್ಣೆಗೆಂಪುತುಂಬಿಕೊಂಡ ಮಾಟದ ಮೈಗೆ ಒಪ್ಪುವ ಮುಗುಳುನಗೆಯ ಮುದ್ದು ಮುಖವಿನಯ ವಿದ್ವತ್ತುಗಳ ಭಾರಕ್ಕೋ ಎನ್ನುವಂತೆ ಬಿಲ್ಲಿನಂತೆ ಸ್ವಲ್ಪ ಬಗ್ಗಿದ ಬೆನ್ನುಪ್ರಯತ್ನದಿಂದ ಎತ್ತಿ ಇಡುತ್ತಿರುವಂತೆ ತೋರುವ ತೋರಹೆಜ್ಜೆಗಳ ಮರದ ನಡಿಗೆತಡೆದು ತಡೆದು ಆಡುತ್ತಿರುವಂತೆ ಕಂಡರೂ ದೃಢವಾಗಿ ಹೊರಡುವ ಸ್ಪಷ್ಟೋಕ್ತಿಮಾತಿನ ಮರ್ಮವನ್ನು ಕೇಳುವವರಿಗೆ ಮನವರಿಕೆ ಮಾಡಬೇಕೆಂದು ಹವಣಿಸಿದಾಗ ತಲೆತಗ್ಗಿಕಣ್ಣು ಅರೆಮುಚ್ಚಿಬುದ್ದಿಯಾಳಕ್ಕೆ ಇಳಿಯುತ್ತಿರುವಂತೆ ತೋರುವ ಒಳನೋಟಶೂನ್ಯದತ್ತ ಹಾಯುವ ತುಂಬು ಹಸ್ತದ ಬಲಗೈ ಬೀಸುಏರಿಳಿಯುವ ಉಸಿರಿನ ಹಾಸುಒಟ್ಟು ನೋಟದಲ್ಲಿ ಒಂದು ಭವ್ಯಾಕೃತಿಕಿವಿಗೊಟ್ಟು ಆಲಿಸಬೇಕಾದ ಅಧಿಕಾರವಾಣಿ. ವೇಷವೋ?  ಮಾಟವಾಗಿ ತಿದ್ದಿದ ಕ್ರಾಪನ್ನು ಒಳಗಡಸಿದ ಒಪ್ಪವಾದ ಜರೀಪೇಟಮುಚ್ಚು ಕೋಟುಸೊಗಸಾಗಿ ಉಟ್ಟ ಶುಭ್ರವೂನವುರೂ ಆದ ಕಚ್ಚೆಪಂಚೆ.  ಇದು 40-50ರ ಹರೆಯದಲ್ಲಿ ಡಿ.ಎಲ್.ಎನ್ ಅವರ ನಿಲುವು.

ಡಿ. ಎಲ್. ಎನ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸುಮಾರು 70-80 ಸಂಶೋಧನ ಮತ್ತು ಸಮೀಕ್ಷಾ ಲೇಖನಗಳನ್ನು ಬರೆದು ನಾಡಿನ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿದರು.  ಅವರ ಕೆಲವು ಅಪೂರ್ವ ಕೃತಿಗಳೆಂದರೆಸಕಲ ವೈದ್ಯಸಂಹಿತಾ ಸಾರಾರ್ಣವ’, ‘ಕರ್ನಾಟಕ ಮಹಾಭಾರತ : ಭೀಷ್ಮಪರ್ವ’ ,‘ಪಂಪರಾಮಾಯಣ ಸಂಗ್ರಹ’, ‘ವಡ್ಡಾರಾಧನೆ’, ‘ಸಿದ್ಧರಾಮ ಚರಿತೆಯ ಸಂಗ್ರಹ’, ‘ಶಬ್ದಮಣಿದರ್ಪಣಂ’, ‘ಸಿದ್ಧರಾಮ ಚಾರಿತ್ರ’, ‘ಸುಕುಮಾರ ಚರಿತಂ’, ‘ಗೋವಿನ ಹಾಡು’, ‘ಹಂಪೆಯ ಹರಿಹರ’, ‘ಶಬ್ದ ವಿಹಾರ’, ‘ಕನ್ನಡ ಗ್ರಂಥ ಸಂಪಾದನೆ’ , ‘ಪಂಪ ಭಾರತ ದೀಪಿಕೆ’, ‘ಪೀಠಿಕೆಗಳು ಲೇಖನಗಳು’ , ‘ಆಯ್ದ ಲೇಖನಗಳು’ ಇತ್ಯಾದಿ.

ಡಿ.ಎಲ್. ನರಸಿಂಹಾಚಾರ್ಯರು ಸಮರ್ಥ ಹಾಗೂ ಶ್ರದ್ಧಾವಂತ ಅಧ್ಯಾಪಕರುಶ್ರೇಷ್ಠ ದರ್ಜೆಯ ಹಾಗೂ ಬಹುಮುಖ ವ್ಯಾಸಂಗದ ವಿದ್ವಾಂಸರು.  ಅವರು ಸುಮಾರು ೪೦ ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಭಾಷೆ ಸಾಹಿತ್ಯಗಳ ಅಭಿವೃದ್ಧಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ವಿನಿಯೋಗಿಸಿದರು.  ಅದನ್ನು ತಮ್ಮ ಬದುಕಿನ ದೀಕ್ಷೆಯಾಗಿ ಗ್ರಹಿಸಿಮೊದಲು ಅವುಗಳಲ್ಲಿ ತಾವು ಪ್ರೌಢಿಮೆಯನ್ನು ಗಳಿಸಿಕೊಂಡರು.  ಆ ಗಳಿಕೆಯ ಫಲವನ್ನು ಚಿಂತನವಿಚಾರ ವಿಮರ್ಶೆಸಿದ್ಧಾಂತಗಳ ರೂಪದಲ್ಲಿ ಹಲವು ವರ್ಷಗಳವರೆಗೆ ವಿದ್ಯಾಥಿಗಳಿಗೆ ಅಧ್ಯಾಪನದ ಮೂಲಕವಾಚಕರಿಗೆ ಬರಹಗಳ ಮೂಲಕಶ್ರೋತೃಗಳಿಗೆ ಉಪನ್ಯಾಸಗಳ ಮೂಲಕ ಹಂಚಿದರು. 

ಡಿ.ಎಲ್. ಎನ್. ಎಂದರೆ ಪಾಂಡಿತ್ಯಪಾಂಡಿತ್ಯ ಎಂದರೆ ಡಿ.ಎಲ್. ಎನ್ ಎನ್ನುವುದು ಕನ್ನಡ ಬಲ್ಲವರಲ್ಲೆಲ್ಲಾ ಈಗ ರೂಢಿಯ ಭಾವನೆಯಾಗಿದೆ” ಎಂಬುದಾಗಿ ಅವರ ಆಪ್ತಮಿತ್ರರೂವಿಖ್ಯಾತ ಕನ್ನಡ ವಿದ್ವಾಂಸರೂ ಆಗಿದ್ದ ಪ್ರೊ. ತೀ. ನಂ. ಶ್ರೀಕಂಠಯ್ಯನವರು ಅಂದಿನ ದಿನಗಳಲ್ಲಿ ಆಡಿದ ಪ್ರಶಸ್ತಿಯ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲವೆಂದು ಅದು ನ್ಯಾಯವಾಗಿಯೇ ಸಂದ ಮೆಚ್ಚು ಮಾತೆಂದು ಆ ಕಾಲವನ್ನೂ ಆ ಇಬ್ಬರು ಘನವಿದ್ವಾಂಸರನ್ನೂ ಬಲ್ಲವರೆಲ್ಲಾ ಸುಲಭವಾಗಿ ತಿಳಿಯಬಲ್ಲರು.

ಈ ಮಹಾನ್ ವಿದ್ವಾಂಸರು ಮೇ 7, 1971ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ.

ಮಾಹಿತಿ ಆಧಾರ:  ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ಲೇಖನ

ಫೋಟೋ ಕೃಪೆ: www.kamat.com

Tag: D.L.N., D. L. Narsimhacharya, D. L. Narasimhachar

ಕಾಮೆಂಟ್‌ಗಳಿಲ್ಲ: