ಸೋಮವಾರ, ಅಕ್ಟೋಬರ್ 28, 2013

ಕಮಲಾ ಹಂಪನಾಕಮಲಾ ಹಂಪನಾ


ಕಮಲಾ ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು.  ಅವರು ಶೈಕ್ಷಣಿಕ ವಲಯದಲ್ಲಿ ಸಿ. ಆರ್. ಕಮಲಮ್ಮ ಅಥವಾ ಕಮಲಾ ಮೇಡಂ ಎಂದು ಪರಿಚಿತರು.  ಅವರು ಕಥೆ, ಕಾವ್ಯ, ನಾಟಕ, ವಿಮರ್ಶೆ  ಇವುಗಳ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ  ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

ಬೆಂಗಳೂರು ಜಿಲ್ಲೆಯ ದೇವನ ಹಳ್ಳಿಯಲ್ಲಿ ಅಕ್ಟೋಬರ್ 28, 1935ರಲ್ಲಿ ಜನಿಸಿದ ಕಮಲಾ ಹಂಪನಾ ಅವರಿಗೆ ಹುಟ್ಟಿನಿಂದಲೇ ಸುಸಂಸ್ಕೃತ, ಸಾಂಸ್ಕೃತಿಕ ಪರಿಸರ ದೊರೆಯಿತು.  ಅಂದಿನ ದಿನಗಳಲ್ಲಿ ಮನೆಯಲ್ಲಿ ಶ್ರೀಮಂತಿಕೆಯ ಮತ್ತು ಮನೆತನದ ಸಾಂಸ್ಕೃತಿಕ ಪರಂಪರೆಗಳ ಅನುಕೂಲವಿದ್ದದ್ದರಿಂದ ಸಂಗೀತ ಪ್ರವಚನ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಮನೆಯ ಆವರಣದಲ್ಲೇ ದೊರೆಯುವಂತಿತ್ತು.  ಮುಂದೆ ತಂದೆಯ ಅಕಾಲಿಕ ಮರಣೋತ್ತರದಲ್ಲಿ ಉಂಟಾದ ಜೀವನ ಅಸ್ತವ್ಯಸ್ತತೆಯಲ್ಲಿ, ಅವರ ಬದುಕಿನಲ್ಲಿ ಅನಿರೀಕ್ಷಿತ ಬಡತನ ಮೂಡಿ ಬಂದು, ಬದುಕು ಮತ್ತು ಓದನ್ನು ಬಂಧುಗಳ ಕೃಪೆಯಲ್ಲಿ ನಡೆಸುವ ದೌರ್ಭಾಗ್ಯ ಒದಗಿತು.  ಹೀಗಿದ್ದರೂ ಪ್ರತಿಭಾವಂತರಾಗಿದ್ದ ಅವರು ಶಾಲಾ ದಿನಗಳಿಂದಲೇ ನಿರರ್ಗಳವಾಗಿ ಮಾತನಾಡಬಲ್ಲ, ಭಾಷಣಗಳಿಂದ ಮೋಡಿ ಹಾಕಬಲ್ಲ ಸಾಮರ್ಥ್ಯ ರೂಢಿಸಿಕೊಂಡಿದ್ದರು.

ಬಿ.ಎ, ಆನರ್ಸ್ ಓದುವ ಸಮಯದಲ್ಲಿ ಅವರಿಗೆ ಗುರುಗಳಾಗಿದ್ದವರು ಪ್ರೊ. ತೀ.ನಂ.ಶ್ರೀಡಿ. ಎಲ್. ನರಸಿಂಹಾಚಾರ್, ತ. ಸು. ಶಾಮರಾಯರು, ಕೆ. ವೆಂಕಟರಾಮಪ್ಪ, ಎಸ್. ವಿ. ಪರಮೇಶ್ವರ ಭಟ್ಟರು, ಡಾ. ಎಸ್. ಶ್ರೀಕಂಠಶಾಸ್ತ್ರಿ  ಮುಂತಾದವರು.  ಜೊತೆಗಾರರಾಗಿಸಹಪಾಠಿಗಳಾಗಿದ್ದ, ಅ.ರಾ ಮಿತ್ರ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್. ಜಿ. ಸಣ್ಣಗುಡ್ಡಯ್ಯ ಮೊದಲಾದವರು ಇಂದು ಸಾಹಿತ್ಯ ಲೋಕದಲ್ಲಿ ಹೆಸರಾದವರು ಎಂಬ ಹೆಮ್ಮೆಯ ಭಾವ ಅವರದು.  ಕಾಲೇಜಿನ ದಿನಗಳಿಂದಲೇ ಸಹಪಾಠಿಗಳಾಗಿ ಪರಸ್ಪರ ಪರಿಚಯದೊಂದಿಗೆ ದಂಪತಿಗಳಾದವರು ಎಚ್. ಪಿ. ನಾಗರಾಜಯ್ಯ ಮತ್ತು ಕಮಲಾ.  ಕಮಲಾ ಹಂಪನ ಅವರು 1959ರಿಂದ ಕನ್ನಡ ಅಧ್ಯಾಪಕರಾಗಿ ವೃತ್ತಿರಂಗ ಪ್ರವೇಶಿಸಿದರು.  18ನೆಯ ಶತಮಾನದ ಪರಮದೇವ ಕವಿಯ ತುರಂಗ ಭಾರತ ಒಂದು ಅಧ್ಯಯನಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದರು.  ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೆ ಮೊದಲಿಗರು.

ಕಮಲಾ ಹಂಪನಾ ಅವರು ಪ್ರಕಟಿಸಿರುವ 50ಕ್ಕೂ ಹೆಚ್ಚು ಕೃತಿಗಳಲ್ಲಿ ಸುಕುಮಾರ ಚರಿತ್ರೆಯ ಸಂಗ್ರಹ’, ‘ಭರತೇಶ ವೈಭವ’, ‘ಶ್ರೀ ಪಚ್ಚೆ’, ‘ಕೆ. ಎಸ್.ಧರಣೀಂದ್ರಯ್ಯನವರ ಸ್ಮೃತಿ ಗ್ರಂಥ’, ‘ಸಹಸ್ರಾಭಿಷೇಕ’, ‘ಚಾವುಂಡರಾಯ ಪುರಾಣ’, ‘ಡಾ. ಡಿ. ಎಲ್. ಎನ್. ಅವರ ಆಯ್ದ ಲೇಖನಗಳು’, ‘ಹಳೆಯ ಗದ್ಯ ಸಾಹಿತ್ಯ’, ‘ದಾನಚಿಂತಾಮಣಿ ಸ್ಮರಣ ಸಂಚಿಕೆಇವೆಲ್ಲವೂ ಸಂಪಾದಿತ ಕೃತಿಗಳಾಗಿವೆ.  ‘ಆದರ್ಶ ಜೈನ ಮಹಿಳೆಯರುಎಂಬ ಕೃತಿಯಾರ ಗಮನಕ್ಕೋ ಬರದೆ ಅಜ್ಞಾತರಾಗಿ ಉಳಿದು ತಮ್ಮ ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಪ್ರತಿಭೆ, ದಾನಗುಣ, ಇತ್ಯಾದಿಗಳಿಂದ ಆದರ್ಶಪ್ರಾಯರೆನಿಸಿಕೊಂಡ ಜೈನಮಹಿಳೆಯರಾದ ಕಾಳಲಾದೇವಿ, ಚಂಪಾದೇವಿ, ಅತ್ತಿಮಬ್ಬೆ ಮುಂತಾದವರನ್ನು ಪ್ರಾಕೃತ, ಸಂಸ್ಕೃತ, ಹಳಗನ್ನಡ ಕಾವ್ಯ, ಶಾಸನಗಳಿಂದ ಹೆಕ್ಕಿ ತೆಗೆದು ಅವರ ಉದಾತ್ತ ಚಿತ್ರಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ.  ‘ಮಹಾವೀರರ ಜೀವನ ಸಂದೇಶ24ನೆ ತೀರ್ಥಂಕರರಾದ ಮಹಾವೀರರ ಕುರಿತಾಗಿದೆ.  ‘ಅನೇಕಾಂತಾವಾದವು ಜೈನಧರ್ಮಕ್ಕೆ ಸಂಬಂಧಿಸಿದೆ.  ‘ಮುಡಿ ಮಲ್ಲಿಗೆಮತ್ತು ಆ ಮುಖವ್ಯಕ್ತಿ ಚಿತ್ರಗಳಾಗಿವೆ. 

ಮಕ್ಕಳ ಸಾಹಿತ್ಯದ ಬಗ್ಗೆ ಹೇಳುವುದಾದರೆಕಮಲಾ ಅವರು ರಮ್ಯ, ರೋಚಕ, ಸರಳ ಶೈಲಿಯ ಮೂಲಕ ಓದುಗರಿಗೆ ಪ್ರಿಯವೆನಿಸುವಂತೆ ಅಕ್ಕಮಹಾದೇವಿ, ವೀರವನಿತೆ ಓಬವ್ವ, ಹೆಳವನಕಟ್ಟೆ ಗಿರಿಯಮ್ಮ, ಡಾ.ಅಂಬೇಡ್ಕರ್, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಮುಳುಬಾಗಿಲು ಇತ್ಯಾದಿ ಸುಂದರವಾದ ಕಥೆಗಳನ್ನು ರಚಿಸಿದ್ದಾರೆ. ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು ಇವರ ಅನುವಾದ ಕೃತಿಗಳಾಗಿವೆ.  ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರಗಳು ಅವರ ಪ್ರಬುದ್ಧ ಚಿಂತನೆ, ಆಲೋಚನೆಗಳನ್ನು ಬಿಂಬಿಸುವ ವೈಚಾರಿಕ, ವಿಮರ್ಶಾತ್ಮಕ ಲೇಖನಗಳ ಸಂಗ್ರಹವಾಗಿದೆ.  ಪ್ರಾಚೀನ ಕಾಲದಿಂದ ಇಂದಿನವರೆಗಿನ ಕನ್ನಡ ಕಾವ್ಯ ಕವಿಗಳ ಒಂದು ಸ್ಥೂಲ ಪರಿಚಯವನ್ನು ಸಹಾ ನೀಡಿದ್ದಾರೆ.  ಇವರ ಸಮಸ್ತ ಕೃತಿಗಳಲ್ಲಿ ಬದುಕಿನ ವಿವಿಧ ಮುಖಗಳ ಎಲ್ಲ ರೀತಿಯ ಚಿತ್ರಣಗಳೂ ಸಿಗುತ್ತವೆ.  ‘ಅಕ್ಷತೆ ಸುರಿದ ಕೈಲೇ ಸೀಮೆ ಎಣ್ಣೆ ಸುರಿವರಯ್ಯ, ಅರಿಸಿನ ಹಚ್ಚಿದ ಕೈಲೇ ಬೆಂಕಿ ಹಚ್ಚಿ ಸುಡುವರಯ್ಯಎಂಬ ಸಾಲುಗಳು ಹೆಣ್ಣಿನ ಸ್ಥಿತಿಗತಿಗಳ ಬಗೆಗಿನ ಅವರ ಕಾಳಜಿಗಳನ್ನು ಬಿಂಬಿಸುತ್ತವೆ.

ಆಧುನಿಕ ಕಾಲದ ಯಾಂತ್ರಿಕ ಬದುಕಿನ ಸೂಕ್ಷ್ಮ ವಿಡಂಬನೆಗೆ ಅವರ ಒಂದೆರಡು ಸಾಲುಗಳನ್ನು ಗಮನಿಸಬಹುದು.

ಆಕಾಶವಾಣಿಯ ಸಮಾಚಾರದ ಮೊರೆ
ದೂರವಾಣಿಯ ಟ್ರಿಣ್ ಟ್ರಿಣ್ ಕರೆ
ಕರೆಗಂಟೆಯ ಕುಕಿಲ ಕರೆ
ಮಕ್ಕಳ ಮಮತೆಯ ಕರೆ
ಇನಿಯನ ಇನಿದನಿಯ ಕರೆ
ಈ ವಿವಿಧ ಕರೆಗಳ ನಡುವೆ
ಎಂತು ಕೇಳುವೆ ನಾನು
ನನ್ನಂತರಂಗದ ಕರೆಯ ಕಮಲಾ ಪ್ರಿಯ.

ಇನ್ನು, ಎಂತಹ ಆತ್ಮೀಯ ಸಂಬಂಧಗಳೂ ಮಾರ್ದವತೆ ಕಳೆದುಕೊಂಡಾಗ ಶೂಲಗಳಾಗುವಾರೆಂಬುದು ಅವರ ಅನಿಸಿಕೆ.  ಆದ್ದರಿಂದಲೇ

ಗಂಡನೊಂದು ಶೂಲ, ಮಗಳೊಂದು ದ್ವಿಶೂಲ
ಮಗನೊಂದು ತ್ರಿಶೂಲ, ಬಂಧುಗಳೋ ಬಹುಶೂಲಗಳಯ್ಯಾ
ಈ ಶೂಲಗಳಿಂದ ಪಾರುಗಾಣಿಸೋ
ಎನ್ನ ಕಮಲಾ ಪ್ರಿಯ

ಎಂಬ ಆರ್ಥ ಪ್ರಾರ್ಥನೆ ಸಲ್ಲಿಸುತ್ತಾರೆ.  ಹೀಗೆ ಅವರ ವಚನಗಳರಾಶಿ ನೋಡಿದರೆ ಅವರು ಸ್ಪಂದಿಸದ ವಿಚಾರವಿಲ್ಲ ಎನಿಸುತ್ತದೆ.  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಹಿರಿತನದವರೆಗೆ ಅವರಿಗೆ ಹಲವು ರೀತಿಯ ಪ್ರಶಸ್ತಿ - ಗೌರವಗಳು ದೊರೆತಿವೆ.  ಅತ್ತಿಮಬ್ಬೆ ಪ್ರಶಸ್ತಿ ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳಲ್ಲೊಂದು.
ರನ್ನ ಕವಿಗೆ ಆಶ್ರಯಕೊಟ್ಟು ಪೋಷಿಸಿದ ಅತ್ತಿಮಬ್ಬೆಯ ಬಗ್ಗೆ ಬೆಳೆಸಿಕೊಂಡ ಅಗಾಧ ಪ್ರೀತಿ, ಗೌರವ, ಭಕ್ತಿ, ಶ್ರದ್ಧೆಗಳಿಂದ ಅತ್ತಿಮಬ್ಬೆಯ ಹೆಸರು ಎಲ್ಲೆಲ್ಲೂ ಕೇಳಿ  ಬರುವಂತೆ ಶ್ರಮಿಸಿದ್ದಾರೆ.  ದಲಿತ ಸಮಸ್ಯೆ, ಭಾಷಾ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.  ಚಳುವಳಿಗಳಿಗೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ. 

ಈ ಸಾಹಿತ್ಯಲೋಕದ ಹಿರಿಯರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

Tag: Kamala Hampana

ಕಾಮೆಂಟ್‌ಗಳಿಲ್ಲ: