ಗುರುವಾರ, ಅಕ್ಟೋಬರ್ 24, 2013

ಬೆಟ್ಟದ ಜೀವ

ಬೆಟ್ಟದ ಜೀವ

ಡಾ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಸುಮಾರು ಮೂರು ದಶಕಗಳ ಹಿಂದೆ ಓದಿದ್ದು ಪುನಃ ಓದಬೇಕೆನಿಸಿತು.  ಗಳಿಗೆ ಕೂಡಿ ಬಂದಿದ್ದು ಕಳೆದೆರಡು ದಿನಗಳಲ್ಲಿ.  ಹಿಂದೆ ಆ ಪುಸ್ತಕವನ್ನು ಓದಿದಾಗ ಅದು ತರಿಸಿದ ಗುಂಗಿನಲ್ಲಿ ಕಾರಂತರ ಹಲವಾರು ಕಾದಂಬರಿಗಳನ್ನು ಸತತವಾಗಿ ಓದಿದ್ದು ನೆನಪಾಗುತ್ತದೆ.  ಆದರೆ ‘ಬೆಟ್ಟದ ಜೀವ’ ಬಹಳಷ್ಟು ಓದುಗಳ ಮೇಲೆ ಹಲವು ಬೆಟ್ಟಗಳ ಶೃಂಗದ ಮೇಲೆ ನಿಂತಂತೆ ಮನಮುಟ್ಟಿದಂತದ್ದು.  ಈ ಪುಸ್ತಕವನ್ನು ಇಂದು ಓದಿದ ರೀತಿಗೂ ಮೂರು ದಶಕಗಳ ಹಿಂದೆ ಓದಿದ ವ್ಯಕ್ತಿ ನಾನೇ ಆದರೂ ಅದು ತಲುಪಿದ ಆಳ ಸಾಕಷ್ಟು ವಿಭಿನ್ನ.  ಅಂದಿನ ದಿನದಲ್ಲಿ ಬೆಟ್ಟ ಗುಡ್ಡಗಳ ಮಧ್ಯೆ ಪಯಣ, ಪ್ರವಾಸಗಳಲ್ಲಿದ್ದಾಗಲೆಲ್ಲಾ ಇವನ್ನೆಲ್ಲಾ ನೋಡಿದ್ದು ಮೊದಲೇ ಆದರೂ,  ಮೊದಲೇ ನೋಡಿದಂತಹ ಒಂದು ಭಾವ ಕಾಡುತ್ತಿತ್ತು.  ಆ ಭಾವದ ಹಿಂದಿದ್ದದ್ದು ಕಾರಂತರ ‘ಬೆಟ್ಟದ ಜೀವ’ದಂತಹ ಕೃತಿಗಳಲ್ಲಿ ಆವಿರ್ಭವಿಸಿಕೊಂಡಿದ್ದ ಪ್ರಕೃತಿ ಪ್ರೀತಿ.

ಅಂದು ಪ್ರಕೃತಿಯ ನಿಟ್ಟಿನಲ್ಲಿ ನನ್ನಲ್ಲಿ ಹುದುಗಿದ್ದ ‘ಬೆಟ್ಟದ ಜೀವ’ ಈಗ ಮಾಡಿದ ಓದಿನಲ್ಲಿ ಆ ಪ್ರಕೃತಿಯ ಆಳವನ್ನು ಅನುಭಾವಿಸಿದ ಮಾನವನ ಅಂತರಾಳವನ್ನು ಸ್ಪರ್ಶಿಸಿದ ಅನುಭಾವ ನೀಡುತ್ತಿದೆ.  ಅಲ್ಲಿನ ಕುಮಾರಧಾರಾ ಪರ್ವತ, ಕಳಂಜಿಮಲೆ  ಬೆಟ್ಟದ ಸಾಲು, ನೀರಿನ ಝಳ ಝಳ ಇವೆಲ್ಲಾ ಇಂದಿನ ಓದಿನಲ್ಲಿ ಮತ್ತಷ್ಟು ಆಪ್ತವಾಗಿ ಕಂಡದ್ದು ನಿಜ.  ಅಥವಾ ಅಂದು ಎಷ್ಟು ಆಪ್ತವಾಗಿತ್ತೋ ಆ ಆಪ್ತತೆಯ ಮೇಲೆ ಎಳೆದಿದ್ದ ಮಂಜಿನ ತೆರೆ ಸರಿದು ಪುನಃ ಅದೇ ರೀತಿ ಕಂಡಂತೆ ಆಗಿದ್ದರೂ ಇದ್ದೀತು.  ಆದರೆ ಇವೆಲ್ಲವನ್ನೂ ಮೀರಿದ್ದು ಈ ಪ್ರಕೃತಿಯ ನಡುವೆ ಮಾನವ ಹೃದಯದಲ್ಲಿ ಕೂಡಾ ಅದನ್ನು ಅಷ್ಟೇ ಸೌಂಧರ್ಯಯುತವಾಗಿ ಕಾಣುವ ಶಿವರಾಮ ಕಾರಂತರ ಅನನ್ಯ ಸಾಕ್ಷೀ ಪ್ರಜ್ಞೆ.  ಶಿವರಾಮ ಕಾರಂತರು ತಮ್ಮ ಬರಹದಲ್ಲಿ ಯಾವುದನ್ನೂ ವೈಭವೀಕರಿಸಿದವರೇ ಅಲ್ಲ.  ಮಾನವನ ಬದುಕಿನ ಸೌಂದರ್ಯವನ್ನು ಕಾಣುವ ಹ್ರದಯ ಮತ್ತು ಅದನ್ನು ಯಾವುದೇ ಭಾಷಾ ಮಧ್ಯವರ್ತಿಕೆಯಿಂದ ಕಲುಷಿತಗೊಳಿಸದೆ ಸಹಜವಾಗಿ ತೆರೆದಿಡುವ ಬರಹ ಅವರದ್ದು.

ಕಾರಂತರನ್ನು ಆಕರ್ಷಿಸುವುದು ನಿಸರ್ಗದ ಪ್ರಕೃತಿ ಮಾತ್ರವಲ್ಲ.  ತನ್ನ ಪರಿಮಿತಿಗಳನ್ನು ಮೀರಿ ಬದುಕನ್ನು ದೊಡ್ಡದಾಗಿ ಕಾಣುವ ಮಾನವನ ಪ್ರಕೃತಿ ಕೂಡಾ ಅವರಿಗೆ ತುಂಬಾ ಆಪ್ತವಾದದ್ದು.  ಅವರ ಅಪಾರ ವೈಯಕ್ತಿಕ ಸಾಧನೆಗಳಿಗೆ ಸಹಾ ಇದೇ ಹಿನ್ನೆಲೆ ಇರುವುದು ಬೆಟ್ಟದ ಜೀವದ ಗೋಪಾಲಯ್ಯ, ನಾರಾಯಣಯ್ಯ ಅಂಥಹವರ ಪಾತ್ರ ಸೃಷ್ಟಿಯ ಪ್ರೀತಿಯಲ್ಲೂ ಗುರುತುಸಿಗುತ್ತದೆ.  ಶಿವರಾಮ ಕಾರಂತರಿಗೂ ಇಲ್ಲಿನ ಪಾತ್ರಗಳಿಗೂ ವೆತ್ಯಾಸವೆಂದರೆ ಈ ಬೆಟ್ಟದ ಜೀವಗಳಿಗೆ ಒಂದು ಬೆಟ್ಟದ ಆವರಣ ಒಂದು ಪ್ರಯೋಗಶಾಲೆಯಾದರೆ ಕಾರಂತರಿಗೆ ಈ ಬದುಕೆಂಬ ಪ್ರಪಂಚವೇ ಒಂದು ಪ್ರಯೋಗಶಾಲೆ. 

ಕಾರಂತರು ಸೃಷ್ಟಿಸುವ ಪಾತ್ರಗಳಲ್ಲಿನ ಉತ್ತುಂಗತೆಯಲ್ಲಿ ಕೇವಲ ಆ ಪಾತ್ರಗಳ ಬಾಹ್ಯ ಸಾಧನೆಯಾದ ಯಶಸ್ಸು ಮಾತ್ರ ಭಾಗವಹಿಸದೆ, ಪಾರಸ್ಪರಿಕ ಪ್ರೀತಿ ವಿಶ್ವಾಸಗಳ ಹೃದಯವಂತಿಕೆಯ ಅರಳುವಿಕೆ ಸಹಾ ಬಹುಪಾಲು ಪಡೆಯುತ್ತದೆ.  ಹೀಗಾಗಿ ‘ಬೆಟ್ಟದ ಜೀವ’ದಲ್ಲಿನ ಪಾತ್ರಗಳಾದ ಗೋಪಾಲಯ್ಯ, ನಾರಾಯಣಯ್ಯ, ಶಂಕರಿ, ಲಕ್ಷ್ಮೀ, ಬಟ್ಯ ಮುಂತಾದ ಪ್ರತೀ ಪಾತ್ರಗಳೂ ತಮ್ಮಲ್ಲಿನ ಕ್ರಿಯಾಶೀಲತೆಯ ಜೊತೆಗೆ ತಮ್ಮಲ್ಲಿನ ದುಃಖ, ನೋವು, ಅಭದ್ರತೆಯಂತಹ ಭಾವಗಳ ನಡುವೆಯೂ ಬದುಕಿನ ಕುರಿತಾದ ಅನನ್ಯ ಪ್ರೀತಿ ವಿಶ್ವಾಸಗಳನ್ನು ಯಥೇಚ್ಛವಾಗಿ ಹೊರಸೂಸುತ್ತವೆ.  ಶಂಭು, ದೇರಣ್ಣ, ಕೆಂಚಣ್ಣ ಮುಂತಾದ ಪಾತ್ರಗಳಲ್ಲಿನ ಹುಳುಕು, ಸ್ವಾರ್ಥ ಬಯಕೆ ಮತ್ತು ಮಿತಿಗಳು, ಅಡ್ಡ ಬದುಕಿನ ಕುರುಹುಗಳನ್ನು ಹೊಂದಿರುವುದಾಗಿದ್ದರೂ ಆ ಪಾತ್ರಗಳನ್ನು ಸುಮ್ಮನೆ ಪಕ್ಕಕ್ಕಿರಿಸದೆ, ಬದುಕಿನ ಹಾದಿಯಲ್ಲಿ ಒಂದು ಶಿಸ್ತಿನ ಆವರಣದಲ್ಲಿ ಜೊತೆಗೆ ಕೊಂಡೊಯ್ಯುತ್ತವೆ.

ಶಿವರಾಮ ಕಾರಂತರ ಕೃತಿಗಳನ್ನು ಓದುವುದೆಂದರೆ ಅದು ಕಥೆ ಎಂದೆನಿಸುವುದಿಲ್ಲ.  ಅದು ನಡೆದ ಪರಿಸರ ನಮ್ಮೊಡನೆ ಇಂದಿಲ್ಲವಾದರೂ, ಅದು ನಡೆದದ್ದು, ಅಂತಹ ಪಾತ್ರ ನಮ್ಮ ನಡುವೆಯೇ ಅಲ್ಲಲ್ಲಿ ಅಥವಾ ನಮ್ಮಲ್ಲಿಯೇ ಅಷ್ಟಷ್ಟು ಹಾದು ಬೆರೆತಿರುವಂತದ್ದು ಎಂಬ ಗಾಢ ಭಾವ ನಮ್ಮಲ್ಲಿ ಸೇರಿಹೋಗಿರುತ್ತದೆ.  ಅಂತಹ ಗಾಢ ಭಾವದಲ್ಲಿ ಸುದೀರ್ಘ ಕಾಲದ ನಂತರ ಈ ‘ಬೆಟ್ಟದ ಜೀವ’ ಎಂಬ ಓದಿನಲ್ಲಿ ಲೀನವಾಗಿದ್ದು ಅಭಿವ್ಯಕ್ತಿಸಲಿಕ್ಕಾಗದಿರುವ ಒಂದು ಸುಖೀಭಾವದಂತಿದೆ.


ನಮ್ಮ ರೂಪಾಯಿಗೆ ತುಂಬಾ ಬೆಲೆ ಕಡಿಮೆ ಆಗಿರುವ ಇಂದಿನ ದಿನದಲ್ಲೂ ಈ ಪುಸ್ತಕದ ಬೆಲೆ ಕೇವಲ ಎಪ್ಪತ್ತು ರೂಪಾಯಿ ಮಾತ್ರ.  ಅದರ ಒಳಗಿನ ಬೆಲೆ ಮಾತ್ರ ಅಮೂಲ್ಯವಾದದ್ದು.

Tag: Bettada Jeeva

ಕಾಮೆಂಟ್‌ಗಳಿಲ್ಲ: