ಗುರುವಾರ, ಅಕ್ಟೋಬರ್ 3, 2013

ಹುಯಿಲಗೋಳ ನಾರಾಯಣ ರಾಯರು

ಹುಯಿಲಗೋಳ ನಾರಾಯಣ ರಾಯರು


"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"  ಗೀತೆಯನ್ನು  ಕೇಳದ ಕನ್ನಡಿಗರೇ ಇಲ್ಲ.   ಈ ಹಾಡು ಪ್ರಕಟಗೊಂಡ ದಿನದಿಂದ ಕನ್ನಡ ನಾಡಿನ ಹೆಸರಿನ  ಜೊತೆಗೆ ಅಜರಾಮರವಾಗಿ, ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ.  ಕಾಳಿಂಗರಾಯರ ದನಿಯಲ್ಲಿ ಹೊರ ಹೊಮ್ಮಿದ ಈ ಹಾಡನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ. ಇದೇ ಹಾಡು ಡಾ. ಭೀಮಸೇನ ಜೋಷಿ ಮತ್ತು ಕೃಷ್ಣ ಹಾನಗಲ್ ಅವರ ದ್ವನಿಯಲ್ಲೂ ಸೊಗಸಾಗಿ ಮೂಡಿ ಬಂದಿದೆ. ಈ ಹಾಡಿನ ಕರ್ತೃ ಹುಯಿಲಗೋಳ ನಾರಾಯಣರಾಯರು.  ದಿನಾಂಕ 4ನೇ ಅಕ್ಟೋಬರ್ 1884,  ಅವರು ಹುಟ್ಟಿದ ದಿನ.  ಈ ಮಹಾನ್ ಕರ್ತಾರನನ್ನು ನೆನೆಯುವುದು ನಮ್ಮ ಸೌಭಾಗ್ಯವೇ ಹೌದು.   

ಹುಯಿಲಗೋಳ ನಾರಾಯಣರಾಯರು, ಕೃಷ್ಣರಾಯರು ಮತ್ತು ಬಹೆಣಕ್ಕ ದಂಪತಿಗಳ ಮಗನಾಗಿ ಗದಗದಲ್ಲಿ ಜನಿಸಿದರು. ನಾರಾಯಣರಾಯರು ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಮತ್ತು  ಧಾರವಾಡಗಳಲ್ಲಿ ಪೂರೈಸಿದರು. 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು.  1907ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು 1911ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ 'ಜೈ ಕರ್ನಾಟಕ ವೃತ್ತ', 'ಪ್ರಭಾತ', 'ಧನಂಜಯ' ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಜೊತೆಗೆ ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸುತ್ತಿದ್ದರು. 

ನಾರಾಯಣರಾಯರು ‘ಮೂಡಲು ಹರಿಯಿತು' ಎಂಬ ಕಾದಂಬರಿಯನ್ನೂ ಬರೆದಿದ್ದರು.  ‘ಕನಕ ವಿಲಾಸ’, ‘ಪ್ರೇಮಾರ್ಜುನ’, ‘ಮೋಹಹರಿ’, ‘ಅಜ್ಞಾತವಾಸ’, ‘ಪ್ರೇಮ ವಿಜಯ’, ‘ಸಂಗೀತ’, ‘ಕುಮಾರರಾಮ ಚರಿತ’, ‘ವಿದ್ಯಾರಣ್ಯ’, ‘ಭಾರತ ಸಂಧಾನ’, ‘ಉತ್ತರ ಗೋಗ್ರಹಣ’, ‘ಸ್ತ್ರೀಧರ್ಮ ರಹಸ್ಯ’, ’ಶಿಕ್ಷಣ ಸಂಭ್ರಮ’,  ‘ಪತಿತೋದ್ಧಾರ’ ಇವು ನಾರಾಯಣ ರಾಯರ ಪ್ರಮುಖ ನಾಟಕಗಳು.  

ಹುಯಿಲಗೋಳ ನಾರಾಯಣರಾಯರ “ಪತಿತೋದ್ಧಾರ” ನಾಟಕಕ್ಕೆ ಮುಂಬಯಿ ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರು ನಾಟ್ಯ ವಿಲಾಸಿ ತಂಡವನ್ನು ಕಟ್ಟಿ ಆ ಮೂಲಕ ಆಡಿದ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸುವ ಮಹದುದ್ದೇಶ ಹೊಂದಿದ್ದರು. ಆ ಪ್ರಕಾರವಾಗಿ ಗದಗಿನಲ್ಲಿ ವಿದ್ಯಾದಾನ ಸಮಿತಿಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು. ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.

ಹುಯಿಲಗೋಳ ನಾರಾಯಣರು ರಚಿಸಿದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"  ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, 1924ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು.  ಮಹಾತ್ಮ ಗಾಂಧಿಯವರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಆಗಿನ್ನೂ ಬಾಲಕಿಯಾಗಿದ್ದ  ದಿವಂಗತ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು. ಇಂದೂ ಕೂಡ ಈ ಹಾಡು ಕನ್ನಡಿಗರ ಹೃದಯದಲ್ಲಿ ನೆಲೆನಿಂತಿದೆ.

"ಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ,
ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ"  
ಇದು ಅವರ ಒಂದು ದೇಶ ಭಕ್ತಿ ಗೀತೆಯ ಪ್ರಾರಂಭಿಕ ಸಾಲುಗಳು.

ಹುಯಿಲಗೋಳ ನಾರಾಯಣರಾಯರು, ಕನ್ನಡದಲ್ಲಿ ಶಾಸ್ತ್ರೀಯ ಸಂಗೀತಕಾರರು ಹಾಡಬಲ್ಲ ಅತ್ಯುತ್ತಮ ಭಕ್ತಿಗೀತೆಗಳನ್ನೂ ಕೂಡ ರಚಿಸಿದ್ದಾರಲ್ಲದೆ, ಅವುಗಳಿಗೆ ರಾಗ ಸಂಯೋಜನೆಯನ್ನೂ  ಮಾಡಿದ್ದಾರೆ. 

ಕರ್ನಾಟಕ ಏಕೀಕರಣವಾದ ನಂತರದಲ್ಲಿ ಅವರು ರಚಿಸಿದ ಸುಂದರವಾದ ಕವನ ಹೀಗಿದೆ:

ಮೂಡಿದುದು ಮೂಡಿದುದು ಕನ್ನಡದ ರವಿಬಿಂಬ
“ನಾಡಿಗಡದ ನಿಶೆ ಹರಿದು ಬೆಳಕಾಯ್ತು ಜಗದಂಬ”||
“ಹೊತ್ತಿನೊಳಗೆಚ್ಚರಿಸಿ ಕವಿಕೋಳಿ ಕರೆಯಿತಿರೆ|
ಮುತ್ತಿರುವ ಪರವಶತೆ ಮಂಜು ತಾ ಕರಗುತಿರೆ||
ಬಿತ್ತರಿಪ ಜಾತಿಭೇದಗಳ ಚುಕ್ಕೆ ಸರಿಯುತಿರೆ|
ಮತ್ತೆ ನಾವೊಂದೆಂಬ ತಿಳಿಗಾಳಿ ತೀಡುತಿರೆ||
“ಬಯಕೆ ಕೈಗೂಡಿತೆಂದೊರೆದು ಜನಗಳು ಸಾರೆ|
ನಯ ಪ್ರೇಮ ಕನ್ನಡಿಗರೊಬ್ಬೊಬ್ಬರೊಳು ತೋರೆ||
ಜಯ ಜಯ ಕರ್ನಾಟಕವೆಂಬ ಧ್ವನಿ ನಭಕೇರೆ|
ದಯವ ಗದುಗಿನ ವೀರನಾರಾಯಣನು ಬೀರೆ||”ಹುಯಿಲಗೋಳ ನಾರಾಯಣರಾಯರು 1971ರ ವರ್ಷದಲ್ಲಿ ನಿಧನರಾದರು.  ಅವರು ಮಾಡಿದ ಕಾರ್ಯ ಮತ್ತು ಕೃತಿಗಳು ಅಮರ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪ ಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.


(ಆಧಾರ:  ಹುಯಿಲಗೋಳ ನಾರಾಯಣರ ಕುರಿತು ಅವರ ಮೊಮ್ಮಗಳಾದ ರಾಧಾ ಕುಲಕರ್ಣಿ ಅವರು ಬರೆದಿರುವ "ಹುಯಿಲಗೋಳ ನಾರಾಯಣರಾಯರು ಜೀವನ-ಸಾಧನೆ"  ಮತ್ತು ವಿಕಿಪಿಡಿಯ)

ಫೋಟೋ ಕೃಪೆ: www.kamat.com


Tag: Huyilagola Narayana Rao, Huyilagola Narayanarao


2 ಕಾಮೆಂಟ್‌ಗಳು:

ಕೃಷ್ಣ ಹುಯಿಲಗೋಳ (kitti) ಹೇಳಿದರು...

ಅತ್ಯಂತ ಸೊಗಸಾಗಿ ಬರೆದಿದ್ದೀರಿ ಮಹನೀಯರೇ. ಭಹಳ ಸಂತೋಷವಾಯಿತು.

ತಿರು ಶ್ರೀಧರ ಹೇಳಿದರು...

ಹೃದಯಪೂರ್ವಕ ನಮನಗಳು