ಶನಿವಾರ, ಅಕ್ಟೋಬರ್ 19, 2013

ಕೊರಟಿ ಶ್ರೀನಿವಾಸರಾವ್

ಕೊರಟಿ ಶ್ರೀನಿವಾಸರಾವ್

ಕನ್ನಡದ ಸುಪ್ರಸಿದ್ದ ಕಾದಂಬರಿಕಾರರಾದ ಶ್ರೀನಿವಾಸರಾವ್ ಅವರು ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರ ವರ್ಷದಲ್ಲಿ ಜನಿಸಿದರು.  ತಂದೆ ಶ್ರೀಪಾದರಾವ್ ಮತ್ತು ತಾಯಿ ನಾಮಗಿರಿಯಮ್ಮನವರು.  ಪ್ರಾರಂಭಿಕ ಶಿಕ್ಷಣವನ್ನು ಹೊಸಕೋಟೆ, ಬೆಂಗಳೂರುಗಳಲ್ಲಿ ನಡೆಸಿದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು  1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. 

ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ  ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ,   ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ಆಚಾರ್ಯ ಪಾಠಶಾಲೆಯ ವಾಣಿಜ್ಯ, ಕಲಾ, ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಸಂಜೆ ಕಾಲೇಜಿನ ಉಪಪ್ರಾಚಾರ್ಯರಾಗಿ ಹೀಗೆ ವಿವಿಧ  ಹಂತಗಳಲ್ಲಿ ಸೇವೆ ಸಲ್ಲಿಸಿದರು. 

ಕೊರಟಿ ಶ್ರೀನಿವಾಸರಾವ್ ಅವರು ಐತಿಹಾಸಿಕ, ಸಾಮಾಜಿಕ ಕಾದಂಬರಿಗಳ ಸೃಷ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದವರು. ಕಣ್ಣೀರಿನ ಕಡಲು, ಮಂಗಳ ದೀಪ, ವಿದ್ಯಾಧರೆ, ಗೃಹಿಣಿ, ಮಿಸ್ ಲೀಲಾವತಿ, ಮಮತೆಯ ಸುಳಿ, ಊರು ಕವಲೊಡೆದಾಗ, ಚೈತ್ರಯಾತ್ರೆ, ತೂರಿ ಬಂದ ತಾರೆ ಮುಂತಾದವು ಅವರ ಸಾಮಾಜಿಕ ಕಾದಂಬರಿಗಳು 

ಕೊರಟಿ ಶ್ರೀನಿವಾಸರಾವ್ ಅವರ ಪ್ರಮುಖ ಐತಿಹಾಸಿಕ ಕಾದಂಬರಿಗಳಲ್ಲಿ ವಿಜಯನಗರದ ಸಾಮ್ರಾಜ್ಯದ ಬಗ್ಗೆಯೇ ಸುಮಾರು ಇಪ್ಪತ್ತು ಕಾದಂಬರಿಗಳಿವೆ.   ದೇವಗಿರಿ ಪತನ-2 ಭಾಗ, ಕನ್ನಡಿಗರ ಕಾಳರಾತ್ರಿ, ಬಲಿದಾನ, ರಾಜ್ಯೋದಯ, ರಾಯಪರಾಭವ, ಗಜಬೇಂಟೆಕಾರ, ರಾಜ್ಯಕ್ರಾಂತಿ, ತೌಲವೇಶ್ವರ, ನಾಗಲಾದೇವಿ, ಜಗನ್ಮೋಹಿನಿ, ಶಾಂತಿವಾದಿ, ರಾಜದ್ರೋಹಿ, ಅಮಾತ್ಯರತ್ನ, ಹುಚ್ಚು ದೊರೆ, ರಕ್ಕಸತಂಗಡಿ, ರಘುನಾಥ ವಿಜಯ, ದೇವಿಕೋಟೆ, ಘಾಟಿ ಕಲಹ, ರಾಜ್ಯಕ್ಷಯ ಮುಂತಾದವು ಇವುಗಳಲ್ಲಿ ಸೇರಿವೆ.  ಅವರ  ಇತರ ಐತಿಹಾಸಿಕ ಕಾದಂಬರಿಗಳೆಂದರೆ ಮೈಸೂರು ಹುಲಿ, ಹುಲಿಯ ಹೆಜ್ಜೆ, ವ್ಯಾಘ್ರನಖ, ಧರ್ಮದೀಕ್ಷೆ, ಉಭಯ ಲೋಕೇಶ್ವರ, ತೇಜಸಿಂಹ, ರಾಣಿ ಚೆನ್ನಮ್ಮಾಜಿ, ಗುಣವಂತಿ, ರಾಜಾ ವೆಂಕಟಪ್ಪನಾಯಕ ಮುಂತಾದವು.

ರಾಯರ ಧಾರ್ಮಿಕ ಕೃತಿಗಳಲ್ಲಿ ಶ್ರೀ ತಿರುಪತಿ, ಶ್ರೀ ಮಧ್ವಾಚಾರ್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರ ಸ್ವಾಮಿಗಳು, ಪುರಂದರದಾಸರು, ಶ್ರೀಪಾದರಾಜರು ಮುಂತಾದ ಕೃತಿಗಳಿವೆ.  

ಇವಲ್ಲದೆ ಒಂಬತ್ತು ಐತಿಹಾಸಿಕ ಕಥಾಸಂಕಲನಗಳು, ಭಾರತ-ಭಾರತಿ ಮಾಲಿಕೆಗಾಗಿ ರಚಿಸಿದ ಹಲವಾರು ಕೃತಿಗಳು, ಆದಿಮಾನವರು ಎಂಬ ಅನುವಾದ ಮುಂತಾದವು  ಶ್ರೀನಿವಾಸರಾಯರ ಬರಹ ವೈವಿಧ್ಯದಲ್ಲಿವೆ.  ಅವರ . ವಿಜಯನಗರದ ಕುರಿತಾದ  ಕಾದಂಬರಿಗಳು ತೆಲುಗಿಗೂ ಅನುವಾದಗೊಂಡು ಪ್ರಖ್ಯಾತಗೊಂಡಿವೆ.

ಕನ್ನಡ ಚಿತ್ರರಂಗದ ಮಹತ್ವದ ಚಿತ್ರಗಳೆಂದು ಪರಿಗಣಿತವಾಗಿರುವ ‘ಮಿಸ್ ಲೀಲಾವತಿ’ ಕೊರಟಿ ಶ್ರೀನಿವಾಸರಾಯರ ಕಾದಂಬರಿ ಆಧಾರಿತವಾದದ್ದು.  ಗೃಹಿಣಿಅವರ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ.

ಅಮಾತ್ಯ ರತ್ನ ಕೃತಿಗೆ ರಾಜ್ಯ ಸರಕಾರದಿಂದ ಪ್ರಥಮ ಬಹುಮಾನವ್ಯಾಸರಾಯರು ಕೃತಿಗೆ ಸಂಸ್ಕೃತಿ ಇಲಾಖೆಯಿಂದ ಬಹುಮಾನ, ಪೆನುಗೊಂಡೆಯಲ್ಲಿ ನಡೆದ ಕೃಷ್ಣದೇವರಾಯ ವರ್ಧಂತಿ ರಜತೋತ್ಸವದಲ್ಲಿ ಸನ್ಮಾನತಿರುಮಲ ತಿರುಪತಿ ದಾಸ ಸಾಹಿತ್ಯ ಯೋಜನೆಯಡಿಯಲ್ಲಿ ಬೆಂಗಳೂರಿನಲ್ಲಿ ಅದ್ದೂರಿ ಸನ್ಮಾನ ಮುಂತಾದ ಹಲವಾರು ಗೌರವಗಳು ಕೊರಟಿ ಶ್ರೀನಿವಾಸರಾವ್ ಅವರಿಗೆ ಸಂದಿವೆ. 

ಕೊರಟಿ ಶ್ರೀನಿವಾಸರಾವ್ ಅವರು ಈ ಲೋಕವನ್ನಗಲಿದ್ದು ಏಪ್ರಿಲ್ 25, 1983ರಲ್ಲಿ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: Korati Srinivasarao

ಕಾಮೆಂಟ್‌ಗಳಿಲ್ಲ: