ಭಾನುವಾರ, ಅಕ್ಟೋಬರ್ 6, 2013

ಎಲ್. ಬಸವರಾಜು

ಎಲ್. ಬಸವರಾಜು

ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ವಿದ್ವಾಂಸ, ಕವಿ,  ದಿಟ್ಟ ವಿಚಾರಶೀಲರೆಂದು ಪ್ರಖ್ಯಾತರಾದ ಎಲ್ ಬಸವರಾಜು ಅವರು ಕರ್ನಾಟಕದ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗನೂರು ಎಂಬ ಹಳ್ಳಿಯಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪನವರು ಮತ್ತು  ತಾಯಿ ಈರಮ್ಮನವರು.  ಅವರದು ತುಂಬಾ ಬಡ ಕುಟುಂಬ.  ಬಸವರಾಜು ಅವರು  ಪ್ರೌಢಶಾಲಾ ಶಿಕ್ಷಣವನ್ನು ಸಿದ್ಧಗಂಗೆಯಲ್ಲಿ ಪೂರೈಸಿದರು.  ಅಂದು ತಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ಆ ಮಠದ ಬಗ್ಗೆ ಅವರಲ್ಲಿ ತುಂಬು ಕೃತಜ್ಞತೆ ಇತ್ತು. ಮೈಸೂರಿನಲ್ಲಿ ಬಿ.ಎ,  ಎಂ.ಎ ಗಳನ್ನು ಪೂರೈಸಿದರು.  ಅವರ ಓದಿನ ದಿನಗಳಲ್ಲಿ ಬಿ.ಎಂ. ಶ್ರೀಕಂಠಯ್ಯ ಮತ್ತು ಡಿ.ಎಲ್. ನರಸಿಂಹಾಚಾರ್ಯರ ನೇರ ಪ್ರಭಾವಕ್ಕೆ ಒಳಗಾಗಿದ್ದರು. 

ಬಸವರಾಜು ಅವರು  ದಾವಣಗೆರೆಯಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.  ವಿದ್ಯಾರ್ಥಿಗಳ ಜೊತೆ ಹಾಸ್ಟೆಲ್ಲಿನಲ್ಲಿಯೇ ಇದ್ದುಕೊಂಡು ಅವರ ಪ್ರಗತಿಗೆ ನೀರೆರೆದ ಅದಮ್ಯ ಚೇತನರಿವರು.  ಇವರ ಶಿಷ್ಯರಾದ ಡಾ. ಚಿದಾನಂದ ಮೂರ್ತಿ ಹೇಳುತ್ತಾರೆ:  ಗುರುಗಳಾದ ಎಲ್. ಬಸವರಾಜು ಅವರು ನನ್ನ ಮೇಲೆ ನಿರಂತರವಾದ ಪ್ರೀತಿಯ ಧಾರೆಯನ್ನೇ ಎರೆದಿದ್ದಾರೆ.  ಅವರಿಂದ ನಾನು ಕಲಿತಿರುವುದು ಎಷ್ಟೋ”.  ಮುಂದೆ ಬಸವರಾಜು ಅವರು ಅಲ್ಲಮನ ವಚನಚಂದ್ರಿಕೆಮತ್ತು ಶಿವದಾಸ ಗೀತಾಂಜಲಿಗಳಿಗೆ ಡಿ.ಲಿಟ್ ಪದವಿ ಪಡೆದರು. 

ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಸವರಾಜು ಅವರು ಗ್ರಂಥ ಸಂಪಾದನೆ, ಕಾವ್ಯ ಅನುವಾದ, ಸಂಶೋಧನ ಬರಹ ಮತ್ತು ಸರಳ ಗದ್ಯಾನುವಾದ  ಮುಂತಾದ  ಅಪಾರ ಕಾರ್ಯವನ್ನು ಮಾಡಿದರು.  ಪ್ರಾಚೀನ ಕನ್ನಡ ಸಾಹಿತ್ಯದ ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಸರ್ವಜ್ಞ, ನಿಜಗಣಸಿವಯೋಗಿ, ನಾಗವರ್ಮ, ಕೇಶಿರಾಜ ಮುಂತಾದ ಮುಖ್ಯ ಲೇಖಕರ ಬಗ್ಗೆ ಅವರು ಕೆಲಸ ಮಾಡಿದ್ದಾರೆ.   ಜೈನ ಕಾವ್ಯ ಸಂಪಾದನೆ, ವೀರಶೈವ ಸಾಹಿತ್ಯ, ‘ಸರಳ ಪಂಪ ಭಾರತಮುಂತಾದ ಸಂಪಾದನೆಗಳನ್ನು  ಮಾಡಿದ್ದಾರೆ. ಶೂನ್ಯ ಸಂಪಾದನೆಯ ಬಗೆಗಿನ ಶಿವಗಣ ಪ್ರಸಾದಿ ಮಹಾದೆವಯ್ಯಗಳ ಶೂನ್ಯಸಂಪಾದನೆ' ರಚಿಸಿದ್ದಾರೆ.   ಶಾಸ್ತ್ರ ಸಾಹಿತ್ಯದಲ್ಲಿ ಕನ್ನಡ ಚಂದಸ್ಸಂಪುಟ’, ‘ಶಬ್ದಮಣಿ ದರ್ಪಣಹೀಗೆ ಹಲವು ಕೃತಿಗಳನ್ನು ಪರಿಷ್ಕರಿಸಿದ್ದಾರೆ. ಕಾವ್ಯ, ಅನುವಾದದಲ್ಲೂ ಸೃಜನಾತ್ಮಕ ಕೆಲಸ ಮಾಡಿದ್ದಾರೆ.  ಗಂಡ ಹೆಂಡಿರ ವಿರಸವನ್ನು ವಿಶ್ವ ಸಂಸ್ಥೆಯೂ ಬಗೆಹರಿಸಲಾರದು”, ವಾದಕ್ಕೆ ಪ್ರತಿವಾದವಿದೆಯೇ ಹೊರತು ತರ್ಕವೆಂಬುದು ಎಲ್ಲಿಯೂ ಇಲ್ಲ”, “ಬದುಕುವುದೇ ಒಂದು ಪವಾಡವಾಗಿರುವಾಗ ಉಂಡು ತೆಗಿದವನೇ ಪವಾಡ ಪುರುಷಪರಿಣಾಮಕಾರಿಯಾಗಿವೆ.

ಅವರ ಒಂದು ಪದ್ಯ ಹೀಗಿದೆ:
ಸೆಖೆಗೆ ಸೊರಗಿದ ಹಕ್ಕಿಗಳ
ಕ್ಷೀಣಸ್ವರದಿಂದ
ನರಳುತ್ತಿದ್ದಾನೆ
ಹಚ್ಚ ಹಸಿರುಟ್ಟು
ಬರುವುದಿನ್ನೆಂದು ವಾಸಂತಿ?

ಅಶ್ವಘೋಷನ ಬುದ್ಧಚರಿತೆ; ಮತ್ತು ಸೌನ್ದರನಂದದ ಅನುವಾದಗಳು ಬಸವರಾಜು ಅವರ ವಿಶಿಷ್ಟ ಕೃತಿಗಳು.  ಮೊದಲಿನಿಂದಲೂ ಬಸವರಾಜು ಅವರು ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯದ ಕೆಲಸ ಮಾಡಿದ್ದಾರೆ. 

ಒಬ್ಬ ಮನುಷ್ಯನ ಘನತೆಯನ್ನು ಪ್ರಶಸ್ತಿಯಿಂದಲೇ ಅಳೆಯಲು ಹೋಗಬಾರದುಎನ್ನುತ್ತಿದ್ದ ಎಲ್. ಬಸವರಾಜು ಅವರಿಗೆ  'ಪಂಪ ಪ್ರಶಸ್ತಿ', 'ಬಸವ ಪುರಸ್ಕಾರ' ಗಳೇ ಅಲ್ಲದೆ 1994ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು 2006ರ ವರ್ಷದ  'ಭಾಷಾ ಸಮ್ಮಾನ್', ನಾಡೋಜ ಪ್ರಶಸ್ತಿ ಮುಂತಾದ ಅನೇಕ  ಗೌರವಗಳು ಸಂದಿದ್ದವು.  2009ರ ವರ್ಷದಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವುದರ ಮೂಲಕ ನಾಡು ಅವರನ್ನು ಸಂಮಾನಿಸಿತು.

ಈಗಲೂ ಗಾಂಧೀಜಿ ಪ್ರಸ್ತುತರಾಗುತ್ತಾರೆ.  ಆ ಕಾಲದಲ್ಲಿ ಭಾರತವನ್ನು ಕಟ್ಟಲು ವಿದ್ಯಾವಂತರಿಗೆ ಹಳ್ಳಿಗಳಿಗೆ ಹೋಗಿ ಎಂದು ಕರೆಕೊಟ್ಟರು.  ಸೇವಾದಳವನ್ನು ಕಟ್ಟಿ, ಯುವಜನರನ್ನು ಅಲ್ಲಿ ಸಂಘಟಿಸಿದರು.  ಇವತ್ತು ನಿರುದ್ಯೋಗಿಗಳಾಗಿ ಕುಳಿತಿರುವ ಯುವಕರು ಇಂಥ ಸೇವೆಗೆ ಮುಂದಾಗಬೇಕು.  ಜಾಗತೀಕರಣದಿಂದ ಬರುತ್ತಿರುವ ಅನಿಷ್ಟಗಳನ್ನು ಮೀರಿಸಬೇಕು. ಇದು ಬಸವರಾಜು ಅವರ ಸಾಮಾಜಿಕ ಚಿಂತನೆಯಾಗಿದ್ದರೆ,  ಜನಪದ ಕವಿ ತನ್ನ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದಾಗಿನಿಂದ ಮಾನವಜನಾಂಗಕ್ಕೆ, ಅದರಲ್ಲೂ ಗ್ರಾಮೀಣರಿಗೆ ಮುಗ್ದಕಾವ್ಯ ಸಂಪರ್ಕ ತಪ್ಪಿಹೋಯಿತು ಎಂಬುದು ಸಾಂಸ್ಕೃತಿಕ ಅಳಲಾಗಿತ್ತು.

ಡಾ. ಎಲ್ ಬಸವರಾಜು ಅವರು ಜನವರಿ 29, 2012ರಂದು ಈ ಲೋಕವನ್ನಗಲಿದರು.  ಈ ಹಿರಿಯ ಚೇತನಕ್ಕೆ ನಮ್ಮ ನಮನಗಳು.

Tag: L. Basavaraju


ಕಾಮೆಂಟ್‌ಗಳಿಲ್ಲ: