ಗುರುವಾರ, ಅಕ್ಟೋಬರ್ 24, 2013

ಮಹಾನ್ ಗಾಯಕ ಮನ್ನಾಡೆ ಇನ್ನಿಲ್ಲ

ಮಹಾನ್ ಗಾಯಕ ಮನ್ನಾಡೆ ಇನ್ನಿಲ್ಲ

‘ಕುಹೂ ಕುಹೂ, ಕುಹೂ ಕುಹೂ ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ’ ಎಂಬುದು ಪ್ರಸಿದ್ಧ ಗಾಯಕರಾದ ಮನ್ನಾಡೆ ಅವರು ಹಾಡಿರುವ ಸುಮಧುರ ಕನ್ನಡ ಹಾಡು.  ಈ ಹಾಡನ್ನು ಕೇಳಿದಾಗಲೆಲ್ಲಾ ಈ ಹಾಡಿನ ಪ್ರಾರಂಭಿಕ ಸಾಲು ಈ ಹಾಡನ್ನು ಹಾಡಿದ ಮಧುರ ಧ್ವನಿಗೂ ಅನ್ವಯವಾದದ್ದು ಎಂದೆನಿಸುತ್ತಿರುತ್ತದೆ.  ಇಂಥಹ ಭಾವ ಪರವಶತೆಯನ್ನು ತಮ್ಮ ಸುದೀರ್ಘ ಸಂಗೀತ ನಾದಯಾತ್ರೆಯಲ್ಲಿ ತುಂಬಿದ್ದ ಮಹಾನ್ ಗಾಯಕ ಮನ್ನಾಡೆ ತಮ್ಮ ಜೀವನ ಯಾತ್ರೆಗೆ ಇಂದು ತಮ್ಮ 94ನೆಯ ವಯಸ್ಸಿನಲ್ಲಿ ತೆರೆ ಎಳೆದಿದ್ದಾರೆ.  

ಮನ್ನಾಡೆ ಎಂದು ಪ್ರಸಿದ್ಧರಾದ ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾದ ಪ್ರಬೋಧ ಚಂದ್ರ ದೇ ಅವರು ಜನಿಸಿದ್ದು ಮೇ 1, 1919ರಂದು. ಊರು ಕಲಕತ್ತೆ.  ತಂದೆ ಪೂರ್ಣ ಚಂದ್ರ.  ತಾಯಿ ಮಹಾಮಯಾ ದೇ.

ಒಂದು ರೀತಿಯಲ್ಲಿ ಭಾರತೀಯ ಸಂಗೀತ ಅದರಲ್ಲೂ ಚಿತ್ರಸಂಗೀತ ಅಷ್ಟೊಂದು ಭಿನ್ನತೆಗಳಿರುವ ಈ ದೇಶವನ್ನು ಅಪೂರ್ವರೀತಿಯಲ್ಲಿ ಏಕೀರ್ಭವಿಸಿರುವುದು  ಅಚ್ಚರಿ ಹುಟ್ಟಿಸುವ ಅಂಶ.  ಮಹಾನ್ ಗಾಯಕರು, ಉತ್ತಮ ಸಂಗೀತ ಇವೆಲ್ಲಾ ನಮಗೆ ನಮ್ಮ ದೇಶದ ಎಲ್ಲ ವಿಭಿನ್ನ ನೆಲೆ  ಎಲ್ಲೆಗಳನ್ನೂ ಮೀರಿ ಹತ್ತಿರವಾಗಿಸಿದೆ.  ಈ ನಿಟ್ಟಿನಲ್ಲಿ ನಾವು ಪುಟ್ಟವರಿದ್ದಾಗ ಆಗ್ಗಿಂದಾಗ್ಗೆ ರೇಡಿಯೋದಲ್ಲಿ ಕೇಳಿ ಮುದಗೊಳ್ಳುತ್ತಿದ್ದ  ಕುಹೂ ಕುಹೂ ಎನ್ನುತ ಹಾಡುವ ಚಿನ್ನದ ಕಂಠದ ಕೋಗಿಲೆಯೇ’, ‘ಜಯತೇ ಜಯತೇ ಸತ್ಯಮೇವ ಜಯತೇಮುಂತಾದ  ಮನ್ನಾಡೆ ಅವರ ಗೀತೆಗಳನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ.  ಈ ಹಾಡುಗಳು ನಮ್ಮ ಪುಟ್ಟ ಮನಸ್ಸುಗಳಿಗೆ ಅವು ಯಾವುದೋ ಹೊರಗಿನ ಧ್ವನಿ ಎಂದೆನಿಸಿದರೂ ಅಪ್ಯಾಯಮಾನವಾದ ಆಪ್ತತೆ ಹುಟ್ಟಿಸಿಬಿಟ್ಟಿತ್ತು.

ತಮ್ಮ ಚಿಕ್ಕಪ್ಪ ಕೃಷ್ಣ ಚಂದ್ರದೇ ಅವರಲ್ಲಿ ಸಂಗೀತವನ್ನು ಕಲಿತ ಮನ್ನಾಡೆಯವರು ಮುಂದೆ 1942ರಲ್ಲಿ ಅವರೊಂದಿಗೆ ಮುಂಬೈಗೆ ಬಂದರು.  ಪ್ರಾರಂಭದಲ್ಲಿ ಅವರು ಸಚಿನ್ ದೇವ್ ಬರ್ಮನರಿಗೆ ಸಹಾಯಕರಾಗಿ ದುಡಿದು ನಂತರದಲ್ಲಿ ಬಹುತೇಕ ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.    ಹೀಗೆ ಕಾರ್ಯ ನಿರ್ವಹಿಸುತ್ತಲೇ ಹಿಂದೂಸ್ಥಾನಿ ಸಂಗೀತವನ್ನು ಉಸ್ತಾದ್ ಅಮಾನ್ ಆಲಿ ಖಾನ್ ಮತ್ತು ಉಸ್ತಾದ್ ಅಬ್ದುಲ್ ರಹಮಾನ್ ಖಾನರಲ್ಲಿ ಶ್ರದ್ಧೆಯಿಂದ ಮುಂದುವರಿಸಿದರು. 

ಮನ್ನಾಡೆ ಅವರು ಮೊದಲು ಹಿನ್ನಲೆ ಗಾಯನ ನೀಡಿದ್ದು ತಮನ್ನಾಚಿತ್ರದಲ್ಲಿ ಆಗಿನ ಕಾಲದ ಪ್ರಸಿದ್ಧ ಹಿನ್ನಲೆ ಗಾಯಕಿಯಾದ ಸುರೈಯಾ ಅವರೊಂದಿಗೆ.  ಈ ಚಿತ್ರಕ್ಕೆ ಸಂಗೀತ ನೀಡಿದವರು  ಕೃಷ್ಣ ಚಂದ್ರದೇ ಅವರೇ.  ಈ ಹಾಡು ಪಡೆದ ಯಶಸ್ಸು ಅವರಿಗೆ ಸಚಿನ್ ದೇವ್ ಬರ್ಮನ್ ಅವರ ಸಂಗೀತ ನಿರ್ದೇಶನದಲ್ಲೂ ಅವಕಾಶ ತಂದು ಕೊಟ್ಟಿತು. ಮುಂದೆ ಅವರು ಬಂಗಾಳಿ, ಮರಾಠಿ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸಾವಿರಾರು  ಗೀತೆಗಳನ್ನು ಹಾಡಿದರು.  ಕನ್ನಡ ಮತ್ತು ಮಲಯಾಳದಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. 

ಮನ್ನಾಡೆ ಅವರು ಮಹಮ್ಮದ್ ರಫಿ ಅವರೊಂದಿಗೆ ಬರಸಾತ್ ಕಿ ರಾತ್ ಚಿತ್ರದ ಇಷ್ಕ್ ಇಷ್ಕ್’,  ಕಲ್ಪನಾ ಚಿತ್ರದ   ತೂ ಹೈ ಮೇರಾ ಪ್ರೇಮ್ ದೇವತಾ’, ‘ಪರ್ವರಿಶ್ಚಿತ್ರದ ಮಾಮಾ ಓ ಮಾಮಾಮುಂತಾದ ಅನೇಕ  ಗೀತೆಗಳನ್ನು ಹಾಡಿದರು.  ಲತಾ ಮಂಗೇಶ್ಕರ್ ಅವರೊಂದಿಗೆ ನೂರಾರು ಯುಗಳ ಗೀತೆಗಳನ್ನು ಹಾಡಿದರು.  ಇವುಗಳಲ್ಲಿ ಯೇ ರಾತ್ ಭೀಗಿ ಭೀಗಿ’, ‘ಪ್ಯಾರ್ ಹುವಾ ಇಕರಾರ್ ಹುವಾಮುಂತಾದವು ಪ್ರಸಿದ್ಧವಾಗಿವೆ.  ಇದೇ ರೀತಿ ಆಶಾ ಬೋಸ್ಲೆ ಅವರೊಂದಿಗೆ ಸಹಾ ಮನ್ನಾಡೆ ನೂರಾರು ಗೀತೆಗಳನ್ನು ಹಾಡಿದ್ದಾರೆ.  ಮನ್ನಾಡೆ ದೇಶದ ಹೆಸರಾಂತ ಶಾಸ್ತ್ರೀಯ ಗಾಯಕ ಭೀಮಸೇನ್ ಜೋಷಿಯವರೊಂದಿಗೆ ಹಾಡಿದ ಯುಗಳ ಗೀತೆ ‘ಕೇತಕಿ ಗುಲಾಬ್ ಜೂಹಿಯೂ ವಿಶಿಷ್ಟವಾದುದೇ. ಅಲ್ಲದೇ, ಕಿಶೋರ್ ಕುಮಾರ್ ಅವರೊಂದಿಗೂ ‘ಶೋಲೆಸಿನಿಮಾದಲ್ಲಿ ಹಾಡಿರುವ ‘ಯೇ ದೋಸ್ತಿ, ಹಮ್ ನಹಿ ತೋಡೆಂಗೆಹಾಗೂ ‘ಪಡೋಸನ್ಚಿತ್ರದ ‘ಏಕ್ ಚತುರ್ ನಾರ್ಅತ್ಯಂತ ಖುಷಿ ನೀಡುವಂಥವು. 

‘ಪೂಚೋ ನ ಕೈಸೆ ಮೈನೆ ರೇನ್ ಬಿತಾಯೆ’, ‘ಎ ಮೆರೆ ವತನ್, ಎ ಮೆರೆ ಬಿಚಡೆ ಚಮನ್’, ‘ಲಗಾ ಚುನಾರಿ ಮೇ ದಾಗ್’, ‘ಎ ಮೆರಿ ಜೊಹರಾಜಬಿ’, ‘ಎ ಮೆರೆ ಪ್ಯಾರೆ ವತನ್’, ‘ಆಜಾ ಸನಮ್ ಮಧುರ ಚಾಂದಿನಿ ಮೇ ಹಂ’, ‘ದಿಲ್ ಕಾ ಹಾಲ್ ನಾ ದಿಲ್ವಾಲೆ’, ‘ಯೇ ರಾತ್ ಭೀಗಿ ಭೀಗಿ’, ‘ಝನಕ್ ಝನಕ್ ತೆರಿ ಭಾಜೆ ಪೆಹಲಿಯಾ’, ‘ತೂ ಪ್ಯಾರ್ ಕಾ ಸಾಗರ್ ಹೈ’, ‘ಜಿಂದಗಿ ಕೈಸಿ ಹೈ ಪಹೆಲಿ’, ‘ಯಾರಿ ಹಿ ಇಮಾನ್ ಮೆರಾಇಂಥಹ ನೂರಾರು ಗೀತೆಗಳು ಮನ್ನಾಡೆ ಅವರ ಧ್ವನಿಯಲ್ಲಿ ಹರಿದುಬಂದಿವೆ. 

ಸಿನಿಮಾ ಸಂಗೀತವಲ್ಲದೆ ರಬೀಂದ್ರ ಸಂಗೀತ್ ಮತ್ತು ಭಕ್ತಿ ಸಂಗೀತಗಳಲ್ಲೂ ಮನ್ನಾಡೆ ಅವರು ಸಾವಿರಾರು ಗೀತೆಗಳನ್ನು ಹಾಡಿದ್ದಾರೆ.  ಮೇರಾ ನಾಮ್ ಜೋಕರ್, ಮೇರೇ ಹುಜೂರ್ ಮತ್ತು ಬಂಗಾಳದ ನಿಶಿ ಪದ್ಮಾಮುಂತಾದ ಚಿತ್ರಗಳು ಮನ್ನಾಡೆ ಅವರಿಗೆ ರಾಷ್ಟ್ರ ಮಟ್ಟದ ಹಿನ್ನಲೆ ಗಾಯಕ ಪ್ರಶಸ್ತಿಗಳನ್ನು ತಂದಿವೆ.  ಪದ್ಮಶ್ರೀ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಮನ್ನಾಡೆ ಅವರಿಗೆ ಸಂದಿವೆ.  ಫಿಲಂ ಫೇರ್ ಅಂತಹ ಪ್ರಶಸ್ತಿಗಳು ವಿವಿಧ ರಾಜ್ಯ ಪ್ರಶಸ್ತಿ ಗೌರವಗಳು ಇವುಗಳಂತೂ ಹೇರಳವಾಗಿ ಸಂದಿವೆ. 


ತಮ್ಮ 89ರ ವಯಸ್ಸಿನಲ್ಲೂ ಉಮರ್ಎಂಬ ಚಿತ್ರಕ್ಕೆ 2008ರ ವರ್ಷದಲ್ಲಿ ಮನ್ನಾಡೆ  ಹಿನ್ನಲೆಗಾಯನ ನೀಡಿದರು.  ನಮ್ಮ ಬೆಂಗಳೂರಲ್ಲಿ ನೆಲೆಸಿದ್ದ ಮನ್ನಾಡೆ ಅವರು ಕಳೆದ ಮೇ 1 ರಂದು   ತಮ್ಮ   94ರ ಹುಟ್ಟುಹಬ್ಬವನ್ನು ಆಚರಿಸಿದ್ದರು.   ಈ ಜಗತ್ತಿನಲ್ಲಿ ಆವಿರ್ಭವಿಸಿದ ಪ್ರತಿಯೊಂದು ಜೀವಕ್ಕೂ ಅಂತಿಮತೆ ಇದೆ.   ಅಂತಿಮತೆಯನ್ನು ಮೀರಿದ್ದು ಆ ಜೀವ ಈ ಜಾಗದಲ್ಲಿ  ಬಿಟ್ಟು ಹೋದ  ಸಾಧನೆಗಳು.  ಇಂತಹ ಶ್ರೀಮಂತಿಕೆನ್ನು  ಬಿಟ್ಟು ಹೋದ  ಮನ್ನಾಡೆ ಅವರ ನೆನಪು ಬಹುಕಾಲ ಉಳಿಯುವಂತದ್ದು.  ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.  ಅವರ ಆತ್ಮ ಚಿರಶಾಂತಿಯಲ್ಲಿರಲಿ.

Tag: Manna Dey

ಕಾಮೆಂಟ್‌ಗಳಿಲ್ಲ: