ಮಂಗಳವಾರ, ಅಕ್ಟೋಬರ್ 15, 2013

ಪಿ. ಎಸ್. ರಾಮಾನುಜಂ

ಪಿ. ಎಸ್. ರಾಮಾನುಜಂ

ಮಹಾನ್ ಕನ್ನಡ ಮತ್ತು ಸಂಸ್ಕೃತ ವಿದ್ವಾಂಸ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳೂ, ಪ್ರಸಿದ್ಧ ಬರಹಗಾರರೂ ಆದ ಡಾ. ಪಿ. ಎಸ್.  ರಾಮಾನುಜಂ ಅವರು ಅಕ್ಟೋಬರ್ 16, 1941ನೇ ಇಸವಿಯಲ್ಲಿ ಮೈಸೂರು ಜಿಲ್ಲೆಯ ಚಾಮರಾಜನಗರದ ಬಳಿಯಿರುವ ಗ್ರಾಮವೊಂದರಲ್ಲಿ ಜನಿಸಿದರು. 

ಪಿ. ಎಸ್. ರಾಮಾನುಜಂರವರು ಹಳ್ಳಿಯ ವಾತಾವರಣದಲ್ಲಿಯೇ ಬೆಳೆದು ಕನ್ನಡ ಮತ್ತು ಸಂಸ್ಕೃತವನ್ನು ಗುರುಕುಲದ ಪದ್ಧತಿಯಲ್ಲಿ ಅಧ್ಯಯನ ಮಾಡಿ ಪಾಂಡಿತ್ಯವನ್ನು ಗಳಿಸಿ, ವೃತ್ತಿಯಲ್ಲಿ ಅಖಿಲ ಭಾರತ ಪೋಲೀಸ್ ಸೇವೆಯನ್ನು ಆರಿಸಿಕೊಂಡವರು.  ವೃತ್ತಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಲೇ ಸೃಜನಶೀಲತೆಯನ್ನು ಬೆಳೆಸಿಕೊಂಡ ರಾಮಾನುಜಂ, ಸಮಾನಾಂತರವಾಗಿ ಸಾಹಿತ್ಯಕ ವ್ಯಕ್ತಿತ್ವವನ್ನೂ  ರೂಪಿಸಿಕೊಂಡರು.  ವೃತ್ತಿಯಲ್ಲಿ ಹಂತಹಂತವಾಗಿ ತುತ್ತತುದಿಯವರೆಗೆ ಮೇಲೇರಿದ್ದಲ್ಲದೆ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿ 25ಕ್ಕೂ ಹೆಚ್ಚು ಮಹತ್ವಪೂರ್ಣ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಕೂಡಾ ತಮ್ಮದೇ ಆದ ಸ್ಥಾನವನ್ನು ಇವರು ಗಳಿಸಿಕೊಂಡಿದ್ದಾರೆ.

ಹಳ್ಳಿಯಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದ ಪಿ. ಎಸ್. ರಾಮಾನುಜಂ ಅವರು ಚಾಮರಾಜನಗರದಲ್ಲಿ ಅಂದಿನ ವಿಜ್ಞಾನದ ವಿಷಯದಲ್ಲಿನ ಇಂಟರ್ ಮೀಡಿಯಟ್  ಮುಗಿಸಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಆನರ್ಸ್ ಮತ್ತು ಎಂ. ಎ. ಪದವಿಗಳಲ್ಲಿ ಪ್ರಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಚಿಕ್ಕಂದಿನಿಂದಲೂ ಸಂಸ್ಕೃತ, ಸಾಹಿತ್ಯ ಮತ್ತು ದರ್ಶನಗಳು ಹಾಗೂ ಹಳಗನ್ನಡದ ಸಾಹಿತ್ಯಗಳನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿಕೊಂಡು ಬಂದ ಡಾ. ಪಿ. ಎಸ್. ರಾಮಾನುಜಂ ಅವರು ಕಾಲೇಜಿನಲ್ಲಿ ಓದುತ್ತಿರುವಾಗಲೇ ಕನ್ನಡ ಪಂಡಿತ ಪರೀಕ್ಷೆಯಲ್ಲೂ ಪ್ರಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಯು.ಜಿ.ಸಿಯಲ್ಲಿ ಫೆಲೋಶಿಪ್  ಪಡೆದು ಮಾನಸಗಂಗೋತ್ರಿಯಲ್ಲಿ ವೈಶೇಷಿಕ ದರ್ಶನದ ಮೇಲೆ ಪಿ.ಎಚ್.ಡಿ ಗೆ ಅಧ್ಯಯನವನ್ನು ನಡೆಸಿದರು. ವೃತ್ತಿಗೆ ಸೇರಿದ ಮೇಲೆ ಪಿ.ಎಚ್.ಡಿ ಪದವಿಯನ್ನು ಗಳಿಸಿಕೊಂಡು ನಂತರ ಸತತವಾದ ಅಧ್ಯಯನದಿಂದ ವಿಶ್ವವಿದ್ಯಾಲಯದ ಅತ್ಯುನ್ನತ ಪದವಿಯಾದ ಡಿ.ಲಿಟ್., ಪದವಿಯನ್ನು ಕೂಡ ಗಳಿಸಿಕೊಂಡರು. 

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗಾಯನವನ್ನು ಹಿರಿಯ ವಿದ್ವಾಂಸರಾದ ಶ್ರೀ ಪುಟ್ಟಸ್ವಾಮಿಯವರ ಬಳಿ ಹಾಗೂ ಆಸ್ಥಾನ ವಿದ್ವಾನ್ ಶ್ರೀ ಶಿವರುದ್ರಪ್ಪನವರ ಬಳಿ ಪಿಟೀಲನ್ನು ಅನೇಕ ವರ್ಷಗಳ ಕಾಲ ಅಭ್ಯಾಸ ಮಾಡಿರುವ ರಾಮಾನುಜಂರವರು ಸಂಗೀತದಲ್ಲೂ ಪ್ರವೇಶವನ್ನು ಗಳಿಸಿಕೊಂಡವರು.  ಸಂಗೀತ ಶಾಸ್ತ್ರದ ಬಗ್ಗೆ ಇವರು ಒಬ್ಬ ಚಿಂತಕರಾಗಿ ಅನೇಕ ವಿಶಿಷ್ಟ ಲೇಖನಗಳನ್ನು ಸಂಗೀತ ಶಾಸ್ತ್ರ ಅಕಾಡೆಮಿಯ ಪತ್ರಿಕೆಗಳಲ್ಲಿಯೂ, ತಮ್ಮದೇ ಕೃತಿಗಳಲ್ಲಿಯೂ ಪ್ರಕಟಿಸಿದ್ದಾರೆ.

1966ನೇ ಇಸವಿಯಲ್ಲಿ ಐ.ಪಿ.ಎಸ್ ಪ್ರವೇಶಿಸಿದ ರಾಮಾನುಜಂ ಅವರು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.  ಇವರ ವಿದ್ಯಾರ್ಹತೆಗಳನ್ನು ನೋಡಿ ಸರ್ಕಾರವು ಇವರನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಂಡಿತು.  ಅಂತೆಯೇ ಇವರು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿರ್ದೇಶಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮತ್ತು ಆಯುಕ್ತರಾಗಿ, ಗೃಹ ಸಚಿವಾಲಯದ ಕಾರ್ಯದರ್ಶಿಯಾಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಪ್ರಪ್ರಥಮ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿದರು. ಮುಂದೆ ಅವರು ಪೋಲೀಸ್ ಇಲಾಖೆಯಲ್ಲಿ ಅಡಿಷನಲ್ ಡಿ.ಐ.ಜಿ ಯಾಗಿ ಕಾರ್ಯ ನಿರ್ವಹಿಸಿದರು.   ರಾಮಾನುಜಂ ಅವರ ಕಾರ್ಯದಕ್ಷತೆಗೆ ಮೆಚ್ಚಿ ಭಾರತ ಸರ್ಕಾರವು ಇವರಿಗೆ ಶ್ಲಾಘನೀಯ ಸೇವಾ ಪೋಲೀಸ್ ಪದಕ ಮತ್ತು ರಾಷ್ಟ್ರಪ್ರಶಸ್ತಿಯವರ ವಿಶಿಷ್ಟ ಸೇವಾಪದಕಗಳನ್ನು ಕೊಟ್ಟು ಗೌರವಿಸಿತು.


ಪತ್ರಿಕೆಗಳಲ್ಲಿ ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆಯುವುದನ್ನು ವಿದಾರ್ಥಿದೆಸೆಯಿಂದಲೇ ರೂಢಿಸಿಕೊಂಡು ಬಂದ ಇವರು ಕ್ರಮೇಣ ಕವನಗಳು, ನಾಟಕಗಳು, ಲಲಿತಪ್ರಬಂಧಗಳು, ವಿಮರ್ಶೆಯ ಪ್ರಬಂಧಗಳು, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ ಕೈಯಾಡಿಸಿ ವಿದ್ವತ್ಪೂರ್ಣವಾದ ಹಾಗೂ ಸೃಜನಶೀಲವಾದ ಕೃತಿಗಳನ್ನು ರಚಿಸುವುದರ ಮೂಲಕ ಸಾಹಿತ್ಯ ಲೋಕಕ್ಕೇ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆ.

ಮಿಣುಕು’,  ‘ಅಯನ’, ‘ಇವರು-ಈ ಜನರು’, ‘ಬೆಳಕು ಹರಿದಂತೆ‘, ‘ದುಕೂಲ’, ‘ರುಚಿರ’, ‘ಸಪ್ತಮ’, ‘ಕಾವೆರಿಯಿಂದ ಕಡಲವರೆಗೆ’. ‘ನಿರಂತರ-ಆಯ್ದ ಕವನಗಳ ಸಂಕಲನ’, ‘ರಸಾಲ’ (ಸಮಗ್ರ  ಕಾವ್ಯಗಳ ಸಂಕಲನ) ಇವು ಡಾ. ಪಿ. ಎಸ್. ರಾಮಾನುಜಂ ಅವರ ಕವನ ಸಂಕಲನಗಳು.

ಕಥಾಗುಚ್ಚ’ – ಇದು ಪೌರಾಣಿಕ ಕಥೆಗಳ ಹಾಗೂ ಐತಿಹ್ಯದ ಆಧಾರದ ಮೇಲೆ ರಚಿತವಾದ ರೋಚಕ ಕಥೆಗಳ ಸಂಕಲನ.

ಪ್ರೀತಿ ಪ್ರದರ್ಶನ ಮತ್ತು ಇತರ ಪ್ರಬಂಧಗಳು’, ‘ಪ್ರಬಂಧ ವಿಹಾರ’, ‘ಬೆಕ್ಕಿನ ಭಾಷೆ ಮತ್ತು ಇತರ ವಿಡಂಬನೆಗಳು’, ‘ಇಂಗಿತ (ಸಮಗ್ರ ಲಲಿತ ಪ್ರಬಂಧಗಳ ಸಂಕಲನ)’, ‘ನಕ್ಷತ್ರಿಕರ ಲೋಕದಲ್ಲಿ’ – ಇವು ಲಲಿತ ಪ್ರಬಂಧಗಳು.

ಅಂಕಣ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಕೊಡುಗೆ ನೀಡಿರುವ ಡಾ. ಪಿ. ಎಸ್. ರಾಮಾನುಜಂ ಅವರ ನೂರೊಂದು ನೆನಪುಗಳು’ – ಅಂಕಣ ರೂಪದಲ್ಲಿ ಬಂದ ನೂರೊಂದು ಲೇಖನಗಳ ಸಂಗ್ರಹ.  ಆತ್ಮ ಚರಿತ್ರೆಯ ಅಂಶಗಳನ್ನು ಹೊಂದಿರುವ ಈ ಸಂಕಲನ ಸ್ವಾನುಭಾವದಿಂದ ಕೂಡಿರುವ  ಸಾಂಸ್ಕೃತಿಕ ವಿಶ್ಲೇಷಣೆಯನ್ನು ಹೊಂದಿರುವಂತಹ ಭಾರತೀಯ ಮೌಲ್ಯಗಳ ವಿಶ್ವರೂಪವನ್ನು ತೋರಿಸುವ ವಿಶಿಷ್ಟವಾದ ಕೃತಿ.

ಮೂರು ಪ್ರಹಸನಗಳುಎಂಬುದು ರಾಮಾನುಜಂ ಅವರ ಮೂರು ನಾಟಕಗಳ ಸಂಕಲನ.  ಇವು ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಬಾರಿ ಬಿತ್ತರಗೊಂಡಿವೆ.

ರಾಮಾನುಜಂ ಅವರ ಸಂಶೋಧನೆಯ ಗ್ರಂಥಗಳೆಂದರೆ ‘ವ್ಯೋಮಶಿವನ ವೈಶೇಷಿಕ ದರ್ಶನ’ – ವೈಶೇಷಿಕ ದರ್ಶನದ ಒಂದು ವಿದ್ವತ್ಪೂರ್ಣ ಅಧ್ಯಯನ; ‘ವೇಣೀ ಸಂಹಾರ’  -  ಒಂದು ಅಧ್ಯಯನ, ‘ಕೊಡವರು’ – ಒಂದು ಸಾಮಾಜಿಕ ಸಾಂಸ್ಕೃತಿಕ ಅಧ್ಯಯನ.

ವಾಗರ್ಥ ವಿಸ್ಮಯಎಂಬುದು ರಾಮಾನುಜಂ ಅವರು ವಿಮರ್ಶೆ ಮತ್ತು ಚಿಂತನದ ಪ್ರಬಂಧಗಳ ಸಂಕಲನ.

ಕಿರಾತಾರ್ಜುನೀಯಂಎಂಬುದು ಭಾರವೀ ಕವಿಯ ಸಂಸೃತದ ಕಿರಾತಾರ್ಜುನೀಯಂ ಕೃತಿಯ ಸುಮಾರು 600 ಪುಟಗಳ ಬೃಹತ್ ಕನ್ನಡ ರೂಪಾಂತರ.

ಈ ಮುಖ್ಯವಾದ ಕೃತಿಗಳಲ್ಲದೆ ಇನ್ನೂ ಅನೇಕ  ಅನುವಾದಗಳು ಹಾಗೂ ಇಲಾಖೆಗಳ ಕೈಪಿಡಿಗಳು ಮುಂತಾದವು ಪಿ. ಎಸ್. ರಾಮಾನುಜಂ ಅವರ ವಿಸ್ತಾರದಲ್ಲಿ ಸೇರಿವೆ.

ಭಾರತೀಯ ಮೌಲ್ಯಗಳ ಹಿನ್ನಲೆಯಲ್ಲಿ ಚಿಂತಿಸುವ ಡಾ. ಪಿ. ಎಸ್. ರಾಮಾನುಜಂ ಅವರ ಸಾಹಿತ್ಯ ಪ್ರಜ್ಞೆ, ಸಾತ್ವಿಕವಾದ ಕೃತಿಗಳನ್ನು ರಚಿಸುತ್ತಾ ಬಂದಿದೆ.  ಸಂಸ್ಕೃತದಲ್ಲಿ ಜ್ಞಾನದ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಇವರ ರಚನೆಯಲ್ಲಿ ಭಾರತೀಯ ಅಂತಸ್ಸತ್ವವು ಅದರ ಆಳ ವಿಸ್ತಾರಗಳೊಡನೆ ಗೋಚರಿಸುತ್ತದೆ.  ಧ್ವನಿಯನ್ನೂ ಸಂಪೂರ್ಣವಾಗಿ ಬಳಸಿಕೊಂಡಿರುವುದರಿಂದ ರಾಮಾನುಜಂ ಅವರ ಕಾವ್ಯಗಳು ಶಬ್ಧಕ್ಕಿಂತ ಅರ್ಥದ ವ್ಯಾಪ್ತಿಯನ್ನು ಹೆಚ್ಚು ಹೊಂದಿರುವಂತಹವು.

ಜ್ಞಾನಪೀಠವು ಪ್ರತೀವರ್ಷವೂ ಕಾವ್ಯಕ್ಕಾಗಿ ಹೊರತರುವ ಸಂಪುಟಗಳಲ್ಲಿ,  ಡಾ. ಪಿ. ಎಸ್. ರಾಮಾನುಜಂ ಅವರ ಅನೇಕ ಕವನಗಳನ್ನು ಹಿಂದಿಯ ಅನುವಾದದೊಡನೆ ಪ್ರಕಟಪಡಿಸಿದೆ.  ಅವರ ಹಲವಾರು ಬರಹಗಳು ಇತರ ಭಾಷೆಗಳಿಗೆ ತರ್ಜುಮೆಗೊಂಡಿವೆ. ಅವರ ಹಾಸ್ಯ ಕವನಗಳ ವಾಚನದ ಧ್ವನಿ ಸುರುಳಿ ಕೂಡಾ ಪ್ರಸಿದ್ಧವಾಗಿವೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮುದ್ದಣ್ಣ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ಯಾಲಂಕಾರ ಪಶಸ್ತಿ, ಹಲವಾರು ವಿದ್ವತ್ಘೋಷ್ಟಿಗಳ ಅಧ್ಯಕ್ಷತೆ ಮುಂತಾದ ಹಲವಾರು ಪ್ರತಿಷ್ಠಿತ ಗೌರವಗಳು ಡಾ. ಪಿ. ಎಸ್. ರಾಮಾನುಜಂ ಅವರಿಗೆ ಸಂದಿವೆ.

ತಲಸ್ಪರ್ಶಿಯಾದ ಅಧ್ಯಯನ, ದಾರ್ಶನಿಕ ಪ್ರಜ್ಞೆ, ಪ್ರಾಚೀನ ಮೌಲ್ಯಗಳ ಅರಿವು ಮುಂತಾದವುಗಳು ಡಾ. ಪಿ. ಎಸ್. ರಾಮಾನುಜಂ ಅವರ ಸಾಹಿತ್ಯದ ಜೀವನಾಡಿಗಳು.  ಪು.ತಿ.ನ ಅವರು ಹೇಳಿರುವಂತೆ ಸ್ವಂತಿಕೆ, ಸ್ವೋಪಜ್ಞತೆ, ಹಾಗೂ ಪರಿವಾದರಾಹಿತ್ಯ - ಇವು ರಾಮಾನುಜಂ ಅವರ ಕಾವ್ಯದ ವಿಶಿಷ್ಟತೆಗಳು. ಭಾರತೀಯ ಮೌಲ್ಯಗಳ ಬಗ್ಗೆ ಬದ್ಧತೆಯನ್ನು ತೋರುವ ರಾಮಾನುಜಂ ಅವರ ಬರಹಗಳಲ್ಲಿ ಲಲಿತ ಪ್ರಬಂಧಗಳು ಸಹೃದಯರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿವೆ.  ಹಾಸ್ಯವನ್ನು ಮಾಧ್ಯಮವನ್ನಾಗಿ ಬಳಸಿಕೊಂಡು ಅರ್ಥಪುಷ್ಟಿಯನ್ನು ಪ್ರಕಟಿಸುವ ಇವರ ಲಲಿತ ಪ್ರಬಂಧಗಳು ಈ ಪ್ರಕಾರದ ಅತ್ಯುತ್ತಮ ಲಕ್ಷ್ಯಗಳಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ.  ಇವೆಲ್ಲ ರಚನೆಗಳಲ್ಲೂ ಇವರ ದಾರ್ಶನಿಕ ಪ್ರಜ್ಞೆಯು ಅಂತರ್ವಾಹಿನಿಯಾಗಿ ಹರಿಯುತ್ತಿದ್ದು ಇವು ಭಾರತೀಯ ಚಿಂತನದ ಪ್ರಾತಿನಿಧಿಕ ಸ್ಥಾನವನ್ನು ಹೊಂದಿರುವ ವಿಶಿಷ್ಟ ಕೃತಿಗಳಾಗಿ ಮೆರೆಯುತ್ತಿವೆ.

ಹೀಗೆ ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಸಾಧನೆ ಮಾಡಿ, ಆಡಳಿತದಲ್ಲೂ ದಕ್ಷ ಸಾಧನೆ ಮಾಡಿರುವ ಡಾ. ಪಿ. ಎಸ್. ರಾಮಾನುಜಂ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಶುಭ ಹಾರೈಸೋಣ.

Tag: Dr. P. S. Ramanujam

ಕಾಮೆಂಟ್‌ಗಳಿಲ್ಲ: