ಸೋಮವಾರ, ಅಕ್ಟೋಬರ್ 14, 2013

ವಿಜಯದಶಮಿ

ವಿಜಯದಶಮಿ

ಸತ್ಯಕ್ಕೇ ಜಯ.  ಒಳಿತಿಗೇ ಗೆಲುವು.  ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ.  ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎಂಬುದು ನಾವೆಲ್ಲರೂ ಅರಿತಿರುವ ಸಂಗತಿ. 

ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.  ಅಂದಿನ ದಿನಗಳಲ್ಲಿ ನಮ್ಮ ಮನೆಗಳಲ್ಲಿ ಹಲವು ದಿನಗಳು ರಾಮಾಯಣವನ್ನು ಓದಿ ವಿಜಯದಶಮಿಯಂದು ಶ್ರೀರಾಮ ಪಟ್ಟಾಬಿಷೇಕ ಕಥಾಭಾಗವನ್ನು ಇತರರೊಂದಿಗೆ ಮನನಮಾಡಿ ಮನೆ, ವಠಾರ, ಪ್ರವಚನ ಮಂದಿರಗಳಲ್ಲಿ ಶ್ರೀರಾಮ ಪಟ್ಟಾಭಿಷೇಕವನ್ನು ನೆರವೇರಿಸಿದ ಸಂಭ್ರವನ್ನು ಅನುಭಾವಿಸುವುದು ಸರ್ವೇ ಸಾಧಾರಣವಾಗಿತ್ತು. 

ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯ ದಶಮಿ ಎಂದು ಹೆಸರು ಬಂದಿತಂತೆ.

ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:
ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾಂತ' ಅಥವ 'ತತ್ವ ಸಿದ್ಧಾಂತ' ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎಂಬಲ್ಲಿ ಕ್ರಿ.ಶ. 1238ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯಂದೇ ಮಧ್ವ ಜಯಂತಿಯನ್ನು ಅವರ ಅನುಯಾಯಿಗಳು ಆಚರಿಸುತ್ತಾರೆ.

ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿಯೂ ಮುಂದುವರೆಯಿತು. ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ.

ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು  ನೋಡುವುದೆಂದರೆ ಪರಮ ಸಂತೋಷ.  ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ.  ನಾವು ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ.

ಎಲ್ಲರಿಗೂ ವಿಜಯದಶಮಿ ಹಬ್ಬ ಸುಖಸಂತಸ ತರಲಿ.  ಒಳಿತು ಕೆಡುಕಿನ ಹೋರಾಟ ಕೇವಲ ರಾಮರಾವಣರ ಹೋರಾಟಕ್ಕೆ ಸೀಮಿತವಲ್ಲ.  ಮಂಕುತಿಮ್ಮನ ಕಗ್ಗದಲ್ಲಿ ಪೂಜ್ಯ ಡಿ.ವಿ.ಜಿ ಅವರು  ಹೇಳುವಂತೆ ರಾವಣನ ದಶಶಿರವದೆಂ? ನರನು ಶತಶಿರನು”.  ಈ ಶತಶಿರದಲ್ಲಿ ರಹಸ್ಯಗಳು ಮಾತ್ರವಲ್ಲ ಎಲ್ಲ ರೀತಿಯ ಕೆಡುಕುಗಳೂ ಆಗಾಗ ಪುನರುದ್ಭವಿಸುತ್ತಿರುತ್ತವೆ.  ನಮ್ಮ ಬದುಕಿನಲ್ಲಿ ಈ ಕೆಡುಕಗಳ ವಿನಾಶದ, ಔನ್ನತ್ಯದ ವಿಜೃಂಭಣೆಯ ಉತ್ಸವ ಕೂಡಾ ನೆರವೇರಲಿ.  ಜೊತೆಗೆ ಹಲವು ರಾವಣರು, ಮಹಿಷಾಸುರರು ಈ ಲೋಕದಲ್ಲಿ ತಲೆ ಎತ್ತುತ್ತಲೇ ಇದ್ದಾರೆ.  ಇಂತಹ  ರಾವಣ ಮಹಿಷರ ವಿರುದ್ಧ ಜಾಗರೂಕವಾಗಿದ್ದು ಅಂತಹ ರಾಕ್ಷಸತನ ಬೇರು ಸಮೇತವಾಗಿ ನಿರ್ಮೂಲವಾಗಲು ಅಗತ್ಯವಿರುವ ನೈತಿಕ ಶಕ್ತಿ ಕೂಡಾ ಸಮಾಜದಲ್ಲಿ ವಿಜ್ರಂಭಿಸುತ್ತಿರಲಿ ಎಂದು ಆಶಿಸೋಣ.  ಎಲ್ಲರಿಗೂ ವಿಜಯವಾಗಲಿ.  ಶುಭವಾಗಲಿ.


Tag: Vijayadashami

ಕಾಮೆಂಟ್‌ಗಳಿಲ್ಲ: