ಗುರುವಾರ, ಅಕ್ಟೋಬರ್ 3, 2013

ಕೆ. ಸಿ. ಎನ್. ಗೌಡ

ಕೆ. ಸಿ. ಎನ್. ಗೌಡ

ಕನ್ನಡ ಚಿತ್ರರಂಗದಲ್ಲಿ ಕೆ. ಸಿ. ಎನ್. ಅಂದರೆ ಒಂದು ದೊಡ್ಡ ಶಕ್ತಿ.  ಆ ಶಕ್ತಿಯ ಹಿಂದಿದ್ದವರು ಹಿರಿಯ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಕೆ. ಸಿ. ಎನ್‌. ಗೌಡರು.  1928ರ ವರ್ಷದಲ್ಲಿ ಜನಿಸಿದ ಕೆ. ಸಿ. ಎನ್. ಗೌಡರು ಈ ಲೋಕವನ್ನಗಲಿದ ದಿನ ಅಕ್ಟೋಬರ್ 4, 2012.

‘ಬಂಗಾರದ ಮನುಷ್ಯ’, 'ಭಲೇ ಜೋಡಿ', 'ಶರಪಂಜರ', 'ಬಭ್ರುವಾಹನ', 'ಹುಲಿಯ ಹಾಲಿನ ಮೇವು' 'ದಾರಿ ತಪ್ಪಿದ ಮಗ' ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, 400ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ ಕೀರ್ತಿ ಕೆ. ಸಿ. ಎನ್‌. ಗೌಡರದ್ದು.

ಮೂಲತಃ ದೊಡ್ಡಬಳ್ಳಾಪುರದವರಾದ ಕೆ. ಸಿ. ನಂಜುಂಡೇಗೌಡರು ಕನ್ನಡ ಚಿತ್ರರಂಗದ ಸರ್ವತೋಮುಖ ಅಭಿವೃದ್ಧಿಯ ಸಕ್ರಿಯ ಪಾಲುದಾರರಾಗಿದ್ದವರು. ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರಗಳ ಪಟ್ಟಿಯಲ್ಲಿ ಕೆ. ಸಿ. ಎನ್‌. ಗೌಡರ ನಿರ್ಮಾಣದ ಚಿತ್ರಗಳು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತವೆ. ರೇಷ್ಮೆ ಉದ್ಯಮಿಯಾಗಿದ್ದುಕೊಂಡೇ ಚಿತ್ರರಂಗಕ್ಕೆ ಬಂದ ಕೆ. ಸಿ. ಎನ್‌. ಗೌಡರು, ರಾಜ್ ಕಮಲ್ ಆರ್ಟ್ಸ್,  ಕೆ. ಸಿ. ಎನ್‌. ಎಂಟರ್‌ಪ್ರೈಸಸ್‌, ಕೆ. ಸಿ. ಎನ್‌ ಮೂವೀಸ್‌ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಲ್ಲದೇ ಕನ್ನಡ ಸೇರಿದಂತೆ ವಿವಿಧ ಭಾಷಾ ಚಿತ್ರಗಳನ್ನು ವಿತರಣೆ ಮಾಡಿದ್ದರು.  ಬೆಂಗಳೂರಿನ ನವರಂಗ್‌, ಊರ್ವಶಿ ಹಾಗೂ ದೊಡ್ಡಬಳ್ಳಾಪುರದ ರಾಜ್‌ಕಮಲ್‌ ಚಿತ್ರಮಂದಿರಗಳನ್ನು ನಿರ್ಮಿಸುವುದರ  ಮೂಲಕ ನಿರ್ಮಾಣ, ವಿತರಣೆ ಜೊತೆಗೆ ಪ್ರದರ್ಶಕರ ವಲಯದಲ್ಲೂ  ಕೆ. ಸಿ. ಎನ್‌. ಗೌಡರು ಮಹತ್ವದ ಸಾಧನೆ ಮಾಡಿದ್ದರು.
ಹಳೆಯ ಯಶಸ್ವಿ ಚಿತ್ರಗಳಿಗೆ ಹೊಸ ಮೆರುಗು ನೀಡಿ ತೆರೆಕಾಣಿಸುವ ಮೂಲಕ ಸದಭಿರುಚಿಯ ಚಿತ್ರಗಳನ್ನು ಮತ್ತೆ ನೆನಪಿಸಬೇಕೆಂಬ ಹಂಬಲ ಹೊಂದಿದ್ದ ಕೆ. ಸಿ. ಎನ್. ಗೌಡರು 2008ರ ವರ್ಷದಲ್ಲಿ 'ಸತ್ಯ ಹರಿಶ್ಚಂದ್ರ' ಚಿತ್ರವನ್ನು ಡಿಟಿಎಸ್‌ ಕಲರ್‌ಸ್ಕೋಪ್‌ನಲ್ಲಿ ಮತ್ತೂಮ್ಮೆ ತೆರೆಗೆ ತಂದಿದ್ದರು.  ಇದೇ ರೀತಿಯಲ್ಲಿ ಇನ್ನೂ ಹಲವಾರು ಹಳೆಯ ಚಿತ್ರಗಳನ್ನು ಉನ್ನತ ತಂತ್ರಜ್ಞಾನದಲ್ಲಿ ಮೂಡಿಸುವ ಆಶಯ ಅವರಲ್ಲಿತ್ತು.

ಕನ್ನಡ ಚಿತ್ರರಂಗಕ್ಕೆ ಕೆ. ಸಿ. ಎನ್‌. ಗೌಡರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ದಾದಾ ಸಾಹೇಬ್‌ ಪ್ರತಿಷ್ಠಾನದಿಂದ  ನೀಡಲಾಗುವ ಸಾಧನಾ  ಪ್ರಶಸ್ತಿ, ಡಾ. ರಾಜ್‌ ಕುಮಾರ್‌ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು  ಅವರಿಗೆ ಸಂದಿದ್ದವು.

ಕೆ. ಸಿ. ಎನ್‌. ಗೌಡರ ಪುತ್ರರಾದ ಕೆ. ಸಿ. ಎನ್‌. ಚಂದ್ರಶೇಖರ್‌ ಹಾಗೂ ಕೆ. ಸಿ. ಎನ್‌. ಮೋಹನ್‌ ಕೂಡಾ ಸಿನಿಮಾ ನಿರ್ಮಾಣ, ವಿತರಣೆಯಲ್ಲಿ ತೊಡಗಿದ್ದಾರೆ.


ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: K. C. N. Gowda

ಕಾಮೆಂಟ್‌ಗಳಿಲ್ಲ: