ಮಂಗಳವಾರ, ಅಕ್ಟೋಬರ್ 8, 2013

ಮಿಲ್ಖಾ ಸಿಂಗ್

ಮಿಲ್ಖಾ  ಸಿಂಗ್

‘Flying Sikh’ ಎಂದು ಪ್ರಸಿದ್ಧರಾದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಭಾರತದ ಮೊಟ್ಟ ಮೊದಲ ಗಣನೀಯ ಪ್ರತಿಭೆಯಾದ ಮಿಲ್ಖಾ ಸಿಂಗ್ ಅವರು ಜನಿಸಿದ್ದು ಅಕ್ಟೋಬರ್ 8, 1935ರಂದು.   ಅವರು ಜನಿಸಿದ ಊರು ಲ್ಯಾಲ್ಪುರ.  ಭಾರತ ಇಬ್ಭಾಗವಾದ ಕಾಲದಲ್ಲಿ ಹನ್ನೆರಡರ  ವಯಸ್ಸಿನ ಬಾಲಕ ಮಿಲ್ಖಾ ಸಿಂಗ್ ತನ್ನ ಕಣ್ಣೆದುರಿಗೇ ತನ್ನ ತಂದೆ ತಾಯಿಯರ ಹತ್ಯೆಯನ್ನು ಕಾಣುವ ದೌರ್ಭಾಗ್ಯವಂತನಾಗಿದ್ದ.

ಅತ್ಯಂತ ಪ್ರತಿಭಾಶಾಲಿ ಅಥ್ಲೀಟ್ ಎನಿಸಿದ್ದ ಮಿಲ್ಖಾಸಿಂಗ್ 200 ಮೀಟರ್‌ ಹಾಗೂ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಸಾಧಿಸಿದ ಗೆಲುವು ಮಹತ್ವಪೂರ್ಣವಾದವು.

1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್‌ ಭಾರತ ತಂಡದ ಅಥ್ಲೀಟ್‌ ಆಗಿ ಸ್ಪರ್ಧಿಸಿದರು. ಇದರೊಂದಿಗೆ ಅವರು ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು. ಸಾಕಷ್ಟು ಅನುಭವವಿಲ್ಲದ ಮಿಲ್ಖಾ ಸಿಂಗ್‌  ಈ ಸ್ಪರ್ಧೆಯಿಂದ ದೊರೆತ ಅನುಭವವನ್ನು ಮುಂಬರುವ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಪೈಪೋಟಿ ನೀಡಲು ಬೇಕಾದ ಪೂರ್ವಸಿದ್ಧತೆಯನ್ನಾಗಿಸಿಕೊಂಡರು. 1958ರಲ್ಲಿ ಯುನೈಟೆಡ್‌ ಕಿಂಗ್ಡಮ್‌ನ ವೇಲ್ಸ್‌ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದು ಅದನ್ನು ಸ್ವೀಕರಿಸುವಾಗ, ಸಿಖ್ ಧರ್ಮದ ಪ್ರಕಾರ ವಸ್ತ್ರ ಆಚ್ಛಾದಿತ ಅವರ ತಲೆಟೋಪಿಯಿಂದಾಗಿ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಸಾಕಷ್ಟು ಗಮನ ಸೆಳೆದರು.

ಇದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ನಡೆಯಲಿದ್ದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಮಿಲ್ಖಾ ಸಿಂಗರಿಗೆ ಅಮಂತ್ರಣ  ಬಂದಿತ್ತಾದರೂ, ಭಾರತ ಇಬ್ಭಾಗವಾದ ಸಂದರ್ಭದಲ್ಲಿನ  ದಾರುಣ ಬಾಲ್ಯದ ನೆನಪುಗಳು ಮರುಕಳಿಸುತ್ತಿದ್ದ ಕಾರಣ, ಅವರು ಅಲ್ಲಿ ಭಾಗವಹಿಸಲು ನಿರಾಕರಿಸಿದರು. ಆದರೆ, ದೇಶದ ರಾಜತಾಂತ್ರಿಕ ಕಾರಣಗಳಿಂದಾಗಿ  ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಿಲ್ಖಾ ಸಿಂಗರನ್ನು ಒತ್ತಾಯಿಸಲಾಯಿತು. ಒತ್ತಾಯಕ್ಕೆ ಮಣಿದು  ಸ್ಪರ್ಧೆಯಲ್ಲಿನ ಓಟದಲ್ಲಿ ಪಾಲ್ಗೊಂಡ  ಮಿಲ್ಖಾ ಸಿಂಗ್‌ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ, ಬಹಳ ಸುಲಭವಾಗಿ ಜಯಗಳಿಸಿದರು. ಇಲ್ಲಿನ ಓಟ ಅವರನ್ನು  Flying Sikh’ ಎಂದು ಪ್ರಸಿದ್ಧಿ ಪಡಿಸಿತು.

ಒಬ್ಬ ಅಥ್ಲೀಟ್‌ ಆಗಿ ಮಿಲ್ಖಾ ಸಿಂಗ್‌ರ ಪಾಲಿಗೆ 1958ರಿಂದ 1960ರ ತನಕದ ಅವಧಿಯು ಸ್ವರ್ಣಯುಗ ಎನ್ನಬಹುದು. 1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮಿಲ್ಖಾ ಸಿಂಗ್‌, 200 ಮೀಟರ್‌ ಮತ್ತು 400 ಮೀಟರ್‌ ಓಟ ಸ್ಪರ್ಧೆಗಳಲ್ಲಿ ಕ್ರಮವಾಗಿ 21.6 ಸೆಕೆಂಡ್‌ಗಳು ಹಾಗೂ 47 ಸೆಕೆಂಡ್‌ಗಳಲ್ಲಿ ಓಡಿ, ಸ್ವರ್ಣ ಪದಕ ಗಳಿಸಿದರು. 1958ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ, ಮಿಲ್ಖಾ ಸಿಂಗ್ ತಮ್ಮ 400 ಮೀಟರ್ ಓಟದ ದಾಖಲೆಯನ್ನು ಉತ್ತಮಗೊಳಿಸಿದರು. 46.16 ಸೆಕೆಂಡ್‌ಗಳಲ್ಲಿ 400 ಮೀಟರ್‌ ಓಟ ಮುಗಿಸಿ ಪುನಃ ಸ್ವರ್ಣ ಪದಕ ಗಳಿಸಿದರು. ಇದರೊಂದಿಗೆ, ಮಿಲ್ಖಾ ಸಿಂಗ್ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ‌, ಸ್ವತಂತ್ರ ಭಾರತದ ಮೊಟ್ಟಮೊದಲ ಸ್ವರ್ಣ ಪದಕ ವಿಜೇತ ಎಂಬ ಕೀರ್ತಿ ಪಡೆದರು.

1960ರಲ್ಲಿ ರೋಮ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟವು ಮಿಲ್ಖಾ ಸಿಂಗ್‌ರ ಕ್ರೀಡಾಜೀವನದ ಪ್ರಮುಖ  ಘಟನೆಯಾಗಿ ಪರಿಣಮಿಸಿತು. ರೋಮ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಮಿಲ್ಖಾ 400 ಮೀಟರ್‌ ಓಟವನ್ನು 47.6 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, ಎರಡನೆಯ ಸ್ಥಾನ ಗಳಿಸಿದರು. ಎರಡನೆಯ ಸುತ್ತಿನಲ್ಲಿ ಅವರು ಪುನಃ ತಮ್ಮ ದಾಖಲೆಯನ್ನು ಉತ್ತಮಗೊಳಿಸಿ, 46.5 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೆಯ ಸ್ಥಾನ ಗಳಿಸಿದರು. ಈ ಬಾರಿ ಜರ್ಮನಿಯ ಕಾರ್ಲ್‌ ಕೌಫ್ಮನ್ ಮಿಲ್ಖಾಗಿಂತಲೂ ವೇಗವಾಗಿ ಓಡಿದ್ದರು. ‌ ಸೆಮಿಫೈನಲ್‌ ಸುತ್ತಿನಲ್ಲಿ ಮಿಲ್ಖಾ ಸಿಂಗ್‌ ಮತ್ತೊಮ್ಮೆ ಎರಡನೆಯ ಸ್ಥಾನ ಗಳಿಸಿದರು. ಈ ಸಲ ಅವರು ತಮ್ಮ ಓಟದ ಅವಧಿಯನ್ನು 45.9 ಸೆಕೆಂಡ್‌ಗಳಿಗೆ ಉತ್ತಮಗೊಳಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟಿಸ್‌ ಡೇವಿಸ್‌ ಮಾತ್ರ ಮಿಲ್ಖಾಗಿಂತಲೂ ವೇಗವಾಗಿದ್ದರು. ಅಂತಿಮ ಸುತ್ತಿನಲ್ಲಿ, ಮಿಲ್ಖಾ ಸಿಂಗ್‌ ಇತರೆ ಪ್ರತಿಸ್ಪರ್ಧಿಗಳಿಗಿಂತಲೂ ಶರವೇಗದಲ್ಲಿ ಓಡಿ, ಸುಮಾರು 250 ಮೀಟರ್ ದೂರದ ತನಕ ಅಗ್ರಸ್ಥಾನದಲ್ಲಿದ್ದರು. ಆಗ ಅವರು ತಮ್ಮ ವೇಗವನ್ನು ತಪ್ಪಾಗಿ ಲೆಕ್ಕಿಸಿ, ಓಡುವ ಗತಿಯನ್ನು ತುಸು ನಿಧಾನಿಸುವುದರ ಮೂಲಕ ತಮ್ಮ ಜೀವಾವಧಿಯ ಹಾಗೂ ಭಾರತದ ಅಥ್ಲೆಟಿಕ್ಸ್‌ ಇತಿಹಾಸದ ದೃಷ್ಟಿಯಿಂದ, ಅಪಾರ ತಪ್ಪೆಸಗಿದ್ದರು.  ಈ ಸ್ಪರ್ಧೆಯು ಅದೆಷ್ಟು ಜಟಿಲವಾಗಿತ್ತೆಂದರೆ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ಅಂತಿಮ ಸುತ್ತಿನ ಆರಂಭ ಹಂತದಲ್ಲಿ ಎಲ್ಲರಿಗಿಂತಲೂ ಮುಂದಿದ್ದ ಮಿಲ್ಖಾ ಸಿಂಗ್‌, ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟವನ್ನು  ಮುಗಿಸಿದರು. ವ್ಯತ್ಯಾಸವು ನಗಣ್ಯ ಎನ್ನುವಷ್ಟು ಕಡಿಮೆಯಿತ್ತು. ಮೊದಲ ಮೂರು ಸ್ಥಾನ ಪ್ರಕಟಿಸುವುದನ್ನು ವಿಳಂಬಿತಗೊಳಿಸಲಾಯಿತು. ಈ ಓಟವನ್ನು ಬಹಳಷ್ಟು ಬಾರಿ ವೀಡಿಯೊ ಚಿತ್ರಣವನ್ನು ಗಮನಿಸಿ ನಿರ್ಣಯಿಸಲಾಯಿತು. ಇದರಿಂದಾಗಿ, ಸ್ವರ್ಣಪದಕ ಗೆಲ್ಲಬಹುದೆಂಬ ನಿರೀಕ್ಷೆ ಹೊತ್ತಿದ್ದ ಮಿಲ್ಖಾ ಸಿಂಗ್‌ಗೆ ಕಂಚಿನ ಪದಕವು ಸೂಜಿನ ಮೊನಚಿನಷ್ಟು ಅಂತರದಲ್ಲಿ ಕೈತಪ್ಪಿತು.  ಭಾರತೀಯ ಒಲಿಂಪಿಕ್ಸ್‌ ಇತಿಹಾಸದಲ್ಲಿ ಅಥ್ಲೀಟ್‌ ಒಬ್ಬ ಪದಕವೊಂದರ ಅತಿಸನಿಹ ಬಂದ ಮೊದಲಿಗ  ಮಿಲ್ಖಾ ಸಿಂಗ್‌.  ಮುಂದೆ ಲಾಸ್‌ ಏಂಜೆಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪಿ. ಟಿ. ಉಷಾ ಮಿಲ್ಖಾ ಸಿಂಗ್‌ರಿಗಿಂತಲೂ ಉತ್ತಮ ಸಾಧನೆ ಮಾಡಿದರು. 400 ಮೀಟರ್‌ ಹರ್ಡ್‌ಲ್ಸ್‌ ಸ್ಪರ್ಧೆಯ ಕಂಚಿನ ಪದಕ ಕೇವಲ ಸೆಕೆಂಡಿಗೆ 1/100ರ ಅಂತರದಲ್ಲಿ ಉಷಾ ಕೈತಪ್ಪಿತು.

ನಿವೃತ್ತಿಯ ನಂತರದಲ್ಲಿ ಮಿಲ್ಖಾಸಿಂಗರು ಕ್ರೀಡಾವಲಯದಲ್ಲಿನ ಹಲವು ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  ಅವರಿಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳಂತಹ ಹಲವು ಗೌರವಗಳನ್ನು ನೀಡಲಾಗಿದೆ.  ಇಂದು ವೃತ್ತಿಪರ ಗಾಲ್ಫ್ನಲ್ಲಿ ಗಣನೀಯ ಪ್ರತಿಭೆ ಎನಿಸಿರುವ  ಜೀವ್‌ ಮಿಲ್ಖಾ ಸಿಂಗ್‌ಮಿಲ್ಖಾರ ಪುತ್ರ.

ಅವರ ಬಗ್ಗೆ ಎಂದೋ ಓದಿದ ಸರ್ದಾರ್ಜಿ ಜೋಕ್ ಹೇಳದೆ ನನ್ನ ತುಡಿತ ನಿಲ್ಲುವುದಿಲ್ಲ.  ಒಮ್ಮೆ ಮಿಲ್ಖಾ ಸಿಂಗರು ವಿದೇಶದಲ್ಲಿ ತಮ್ಮ ಅಭ್ಯಾಸ ಪೂರೈಸಿ ಕ್ರೀಡಾಂಗಣದ ಆಸನವೊಂದರಲ್ಲಿ ವಿರಮಿಸುತ್ತಿದ್ದರು.  ಅಲ್ಲಿಗೇ ಬಂದ ವಿದೇಶಿಯರೊಬ್ಬರು ಇವರತ್ತ ನಗೆ ಬೀರಿ ಕೇಳಿದರು.  Are you Resting?” .  ಮಿಲ್ಖಾ ಸಿಂಗರು  ಆ ಪ್ರಶ್ನೆಯನ್ನು  Are you Rest Singh?” ಎಂದು   ಅರ್ಥೈಸಿ, “No, I am Milkha Singhಅಂದರಂತೆ.

ಅಂದಹಾಗೆ, ಈ ವರ್ಷ ಮಿಲ್ಖಾಸಿಂಗ್ ಎಂದರೆ ಭಾರತೀಯರೆಲ್ಲರಿಗೂ ಪ್ರೀತಿಹುಟ್ಟಿಸುವಂತೆ ‘ಭಾಗ್ ಮಿಲ್ಖಾ ಭಾಗ್’ ಎಂಬ ಕಥಾನಕವನ್ನು  ಪ್ರಸಿದ್ಧ ನಿರ್ದೇಶಕ ರಾಮ್ ಪ್ರಕಾಶ್ ಮಿಶ್ರಾ ಅವರು ಫರ್ಹಾನ್ ಅಖ್ತರ್ ಅವರ ಸುಂದರ ಅಭಿನಯದಲ್ಲಿ ತೆರೆಗೆ ತಂದಿದ್ದಾರೆ. 


ಜೀವನದಲ್ಲಿ ಕಷ್ಟದ ಕ್ಷಣಗಳನ್ನು ಎದುರಿಸಿಯೂ ಕ್ರೀಡೆಯಲ್ಲಿ ಅಪಾರ ಸಾಧನೆ ಮಾಡಿದ ಮಿಲ್ಖಾಸಿಂಗ್ ಅವರು ಮುಂದೆ ಭಾರತದಲ್ಲಿ ಮೂಡಿಬಂದ ಅನೇಕ ಅಥ್ಲೀಟ್ಗಳಿಗೆ ಪ್ರೇರಕರಾದವರು.  ಭಾರತಕ್ಕೆ ಕ್ರೀಡೆ, ಸೇನೆ, ದುಡಿಮೆ ಮತ್ತು ಸಜ್ಜನಿಕೆಯ ವಿಚಾರಗಳಲ್ಲಿ ನಮಗೆ ಸಿಖ್ ಜನಾಂಗದವರು  ಎಂದೆಂದೂ ಆತ್ಮೀಯರಾದವರು.  ಈ ಜನಾಂಗದಲ್ಲಿ ಒಂದು ಹೆಮ್ಮೆಯ ಗರಿ ಎನಿಸಿರುವ ಮಿಲ್ಖಾ ಸಿಂಗರಿಗೆ ಹುಟ್ಟು ಹಬ್ಬದ ಆತ್ಮೀಯ ಶುಭ ಹಾರೈಕೆಗಳು.

Tag: Milkha Singh

ಕಾಮೆಂಟ್‌ಗಳಿಲ್ಲ: