ಗುರುವಾರ, ಅಕ್ಟೋಬರ್ 3, 2013

ಸೂಲಗಿತ್ತಿ ನರಸಮ್ಮ

ಮಹಾಮಾತೆ ‘ಸೂಲಗಿತ್ತಿ ನರಸಮ್ಮ’ನವರಿಗೆ ರಾಷ್ಟ್ರಪತಿ ಸನ್ಮಾನ

ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಆಧುನಿಕ ಕಾಲದ ಹೆರಿಗೆ ತಜ್ಞೆಯಂತೆ ಒಂದೂವರೆ ಸಾವಿರಕ್ಕೂ ಮಿಗಿಲಾಗಿ ಹೆರಿಗೆಗಳನ್ನು ಮಾಡಿಸಿದ ಅನಕ್ಷರಸ್ಥೆ, ಪಾವಗಡ ತಾಲೂಕು ಕೃಷ್ಣಾಪುರದ 93 ವರ್ಷದ 'ಸೂಲಗಿತ್ತಿ ನರಸಮ್ಮ' ಅವರಿಗೆ ಕೇಂದ್ರ ಸರಕಾರ ಶತಮಾನದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.  ಹೊಸದಿಲ್ಲಿಯಲ್ಲಿ ಅ.1ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನರಸಮ್ಮನವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ನರಸಮ್ಮ ಅವರು 'ಸೂಲಗಿತ್ತಿ ನರಸಮ್ಮ' ಎಂದೇ ಖ್ಯಾತನಾಮರು. ಕರ್ನಾಟಕವಾದರೂ ಸುತ್ತಲೂ ಆಂಧ್ರ ರಾಜ್ಯ. ಅವರ ಆಡುಭಾಷೆಯೂ ತೆಲುಗು. ವಯಸ್ಸಾದರೂ ಕನ್ನಡಕ ಹಾಕಲ್ಲ, ಕಿವಿ ಸ್ಪಷ್ಟವಾಗಿ ಕೇಳಿಸುತ್ತದೆ. ಮಾತೂ ಸ್ಪಷ್ಟವಿದೆ. ಲವಲವಿಕೆಯಿಂದಿದ್ದಾರೆ ಎಂಬುದೇ ವಿಶೇಷ. ಹೆರಿಗೆ ಮಾಡಿಸುತ್ತಿದ್ದ ಅವರ ಜೀವನಾನುಭವಗಳ ಕುರಿತು ಸಂದರ್ಶನ ಇಲ್ಲಿದೆ.

* ಹೆರಿಗೆ ಮಾಡಿಸಲು ಕಲಿತಿದ್ದು ಹೇಗೆ?

ಅಜ್ಜಿ ಮರಿಗೆಮ್ಮ ಹೆರಿಗೆ ಮಾಡಿಸುತ್ತಿದ್ದರು. ಅವರ ಜತೆ ಹೋಗುತ್ತಿದ್ದೆ. ಹೆರಿಗೆ ಮಾಡಿಸುವಾಗ ಬೇರೆ ಯಾರನ್ನೂ ಒಳಕ್ಕೆ ಬಿಡುತ್ತಿರಲಿಲ್ಲ. ನನ್ನನ್ನು ಜತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ನನಗೆ 16-17 ವರ್ಷ ಇರಬಹುದು. ಕನುಮಕ್ಕ ಎಂಬುವವರಿಗೆ ಹೆರಿಗೆ ನೋವು. ಅಜ್ಜಿ ಇರಲಿಲ್ಲ. ಮನೆಯಲ್ಲಿ ಯಾರೂ ಇರಲಿಲ್ಲ. ನಾನೇ ಹೆರಿಗೆ ಮಾಡಿಸಿದೆ. ಅದೇ ಮೊದಲು ಮಾಡಿಸಿದ ಹೆರಿಗೆ.

* ಎಷ್ಟು ವರ್ಷಗಳ ಕಾಲ ಹೆರಿಗೆ ಮಾಡಿಸಿದ್ದೀರಿ, ಕೊನೆಯ ಹೆರಿಗೆ ಮಾಡಿಸಿದ್ದು?

12 ವರ್ಷಕ್ಕೇ ಮದುವೆ ಆಯ್ತು. 16-17ನೇ ವಯಸ್ಸಿನಿಂದ ಹೆರಿಗೆ ಮಾಡಿಸುವುದು ಶುರು ಮಾಡ್ದೆ. ಐದು ವರ್ಷದ ಹಿಂದೆ ನನ್ನ ಸೊಸೆಗೆ ನಾನೇ ಹೆರಿಗೆ ಮಾಡಿಸಿದ್ದೇನೆ. ಅದೇ ಕೊನೆ. ನನಗೀಗ 93 ವರ್ಷ.

* ಹೆರಿಗೆ ಮಾಡಿಸಿದ್ದಕ್ಕೆ ಏನು ಕೊಡ್ತಿದ್ದರು?
ಹೆರಿಗೆ ಮಾಡಿಸಿದ್ದಕ್ಕೆ ರವಿಕೆ ಬಟ್ಟೆ, ಭತ್ತ, ರಾಗಿ ಇತ್ಯಾದಿ. ವರ್ಷದ ಫಸಲು ಬಂದಾಗ ಬೆಳೆಯ ರಾಶಿಯಲ್ಲಿ ಎಷ್ಟೋ ಮಂದಿ ಮೊದಲನೇ 'ಮೊರ'ನನಗೆ ಕೊಡುತ್ತಿದ್ದರು.

* ಹೆರಿಗೆ ಮಾಡಿಸಲು ಹೇಗೆ ಹೋಗ್ತಿದ್ರೀ?

ಆಗೆಲ್ಲ ನಡೆದುಕೊಂಡು ಹೋಗ್ತಿದ್ದೆ. ದೂರ ದೂರ ಹೋಗುವಾಗ ಎತ್ತಿನ ಗಾಡಿ ತರುತ್ತಿದ್ದರು.

* ಹೆಚ್ಚು ದೂರ ನಡೆದಿದ್ದು?

ಬುಗುಡೂರು (20 ಮೈಲು), ಬ್ಯಾಡನೂರುಗಳಿಗೆ ನಡೆದುಕೊಂಡು ಹೋಗಿ ಹೆರಿಗೆ ಮಾಡಿಸಿದ್ದೆ.

* ಒಂದು ದಿನಕ್ಕೆ ಅತಿ ಹೆಚ್ಚು ಅಂದರೆ ಎಷ್ಟು ಹೆರಿಗೆ ಮಾಡಿಸಿದ್ದೀರಿ?

ತಿಮ್ಮಪ್ಪನ ಹೆಂಡತಿ, ಸುಬ್ಬಪ್ಪನ ಹೆಂಡತಿ, ಕನುಮಪ್ಪನ ಹೆಂಡತಿ, ಮಗ್ಗಂ ರಂಗಪ್ಪನ ಹೆಂಡತಿ.... ಒಂದೇ ದಿನ 4 ಮಂದಿಗೆ ಹೆರಿಗೆ ಮಾಡಿಸಿದ್ದೇನೆ.

* ಸಲೀಸಾಗಿ ಹೆರಿಗೆ ಮಾಡಿಸ್ತಿದ್ದಿದ್ದು ಹೇಗೆ?

ಗಿಡಮೂಲಿಕೆಗಳಿದಾವೆ. ಬುಡುಬುಡಿಕೆ ಚಂದ್ರಪ್ಪನ ಹೆಂಡತಿಗೆ ಹೆರಿಗೆ ಮಾಡಿಸಿದ್ದೆ. ಬುಡುಬುಡಿಕೆಯವರು ಗಿಡಮೂಲಿಕೆ ಔಷಧ ಹೆಚ್ಚು ಬಳಸ್ತಿದ್ದರು. ಅವರಿಂದ ಗಿಡಮೂಲಿಕೆ ಔಷಧ ಮಾಡುವುದನ್ನು ತಿಳಿದುಕೊಂಡಿದ್ದೆ. ಕಷಾಯ ಮಾಡುವುದು, ಕಸ ಬೀಳಿಸುವುದು ಎಲ್ಲ ಮಾಡ್ತಿದ್ದೆ. ಹೆರಿಗೆಯಷ್ಟೇ ಅಲ್ಲ, ಕಣ್ಣಿಗೆ ಬಿದ್ದ ಕಸ ತೆಗೆಯುವುದು, ಗಂಟಲಿನ ಶೀತದ ಗಟ್ಟೆ ಹೋಗಲು, ಕಿರುನಾಲಿಗೆ ಬೆಳೆದರೆ ಎಲ್ಲಕ್ಕೂ ಔಷಧ ಮಾಡ್ತಿದ್ದೆ.

* ಎಷ್ಟು ದಿನ ಬಾಣಂತಿ, ಮಗು ನೋಡ್ಕೋತಿದ್ರಿ?

ಮಗು ಹುಟ್ಟಿ 9 ದಿನದವರೆಗೂ, ಅಂದರೆ 'ಪುರಡಿ' ಮಾಡೋವರೆಗೂ ನಾನೇ ಬಾಣಂತಿ, ಮಗು ನೋಡ್ಕೋತಿದ್ದೆ. ಶಿಶುವಿಗೆ ನಾನೇ ನೀರು ಹಾಕ್ತಿದ್ದೆ.

* ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೆರಿಗೆ ಮಾಡಿಸಿದ್ದೀರಾ?

ನಮ್ಮದು 4 ಹೆಣ್ಮಕ್ಕಳು. 8 ಗಂಡು ಮಕ್ಕಳು, ಮೊಮ್ಮಕ್ಕಳ ದೊಡ್ಡ ಸಂಸಾರ. ಮನೆಯಲ್ಲಿನ ಹೆಣ್ಣುಮಕ್ಕಳು, ಸೊಸೆಯಂದಿರಿಗೆಲ್ಲ ನಾನೇ ಹೆರಿಗೆ ಮಾಡಿಸಿದ್ದೇನೆ.

* ವಿಮಾನದಲ್ಲಿ ದಿಲ್ಲಿಗೆ ಹೋಗ್ತಿದ್ದೀರಿ, ವಿಮಾನ ನೋಡಿದ್ದೀರಾ?

ಆಕಾಶದಲ್ಲಿ ವಿಮಾನ ಹೋಗುವಾಗ ಮರೆಯಾಗುವವರೆಗೂ ನೋಡುತ್ತಿದ್ದೆ. ಮೊದಲ ಬಾರಿಗೆ 1972ರಲ್ಲಿ ನನ್ನ 3ನೇ ಮಗನ ಮದುವೆಗೆ ಬಸ್ ಹತ್ತಿದ್ದೆ. ಈಗ ವಿಮಾನ ಹತ್ತುವ ಯೋಗ ಬಂದಿದೆ.

* ಹೆರಿಗೆ ಮಾಡಿಸುವ ಕೆಲಸದಲ್ಲಿ ತೃಪ್ತಿ ಕಂಡಿದ್ದೀರಾ?

ದೇವರಿಗೆ ಇಷ್ಟವಾದ ಕೆಲಸ ಮಾಡಿದೆ. ದೇವರು ಒಳ್ಳೆಯದು ಮಾಡ್ತಾನೆ ಎಂದು ಭಾವಿಸುತ್ತಿದ್ದೆ. ಎಲ್ಲೂ ಜೀವ ಹಾನಿ ಆಗದಂತೆ ಹೆರಿಗೆ ಮಾಡಿಸಿದ್ದೀನಿ ಎನ್ನುವುದು ತೃಪ್ತಿ ತಂದಿದೆ.

* ಪ್ರಶಸ್ತಿ ಬಂದಿದ್ದಕ್ಕೆ ಏನನ್ನಿಸುತ್ತಿದೆ?

ಸಂತೋಷ ಆಗ್ತಿದೆ.

* ಜನರಿಗೆ ನಿಮ್ಮ ಕಿವಿಮಾತು?

ಮಿತವಾದ ಅಹಾರ ತಿನ್ನಿರಿ. ಗರ್ಭಿಣಿಯರು ಕೈಲಾದ ಕೆಲಸ ಮಾಡಿ ಲವಲವಿಕೆಯಿಂದ ಇರಿ.

ನಿರೂಪಣೆ: ವಿನಯ ದಾಸನಹುಡಿಲು, ತುಮಕೂರು.  ಕೃಪೆ: ವಿಜಯಕರ್ನಾಟಕ

ಚಿತ್ರಕೃಪೆ: ಪ್ರಜಾವಾಣಿ

Tag: Soolagitti Narasamma

ಕಾಮೆಂಟ್‌ಗಳಿಲ್ಲ: