ಬುಧವಾರ, ಅಕ್ಟೋಬರ್ 30, 2013

ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು

ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು

ಸಂಸ್ಕೃತ, ಕನ್ನಡ, ತೆಲುಗು ಭಾಷಾಪಂಡಿತ ಸುಬ್ರಮಣ್ಯ ಶಾಸ್ತ್ರಿಗಳ ಪುತ್ರರಾದ ಶಿವಶಂಕರ ಶಾಸ್ತ್ರಿಗಳು 1864ರ ವರ್ಷದಲ್ಲಿ ಜನಿಸಿದರು.  ತಮ್ಮ ತಂದೆಯವರಿಂದಲೇ ಶಿಕ್ಷಣ ಪಡೆದು ಪಾಂಡಿತ್ಯಗಳಿಸಿಕೊಂಡ ಶಿವಶಂಕರ ಶಾಸ್ತ್ರಿಗಳು ಕನ್ನಡ ಪಂಡಿತರಾಗಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಹಾಗೂ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಶಾಸ್ತ್ರಿಗಳು ಗಳಿಸಿದ್ದ ಪಾಂಡಿತ್ಯವನ್ನು ಗೌರವಿಸಿ ಅಂದಿನ ಭಾರತ ಸರ್ಕಾರವು ಅವರಿಗೆ ‘ಮಹಾಮಹೋಪಾಧ್ಯಾಯ’ ಬಿರುದನ್ನು ನೀಡಿ ಸಂಮಾನಿಸಿತು.  ಮೈಸೂರು ಮಹಾರಾಜರು 1938ರ ವರ್ಷದಲ್ಲಿ ‘ವಿದ್ಯಾನಿಧಿ’ ಬಿರುದನ್ನು ನೀಡಿ ಸನ್ಮಾನಿಸಿದರು.

ಶಾಸ್ತ್ರಿಗಳು ಆಚಾರ ಸಂಪನ್ನರು, ಶಾಸ್ತ್ರಜ್ಞರು, ಸುಗುಣರು, ಸನ್ಮಾರ್ಗಿಗಳು, ಸದ್ವಿವೇಕಿಗಳು ಎಂದು ಪ್ರಾಜ್ಞರಿಂದ ಶ್ಲಾಘಿಸಲ್ಪಡುತ್ತಿದ್ದರು.  ಕನ್ನಡದ ಸರ್ವತೋಮುಖ ಪ್ರಗತಿಗಾಗಿ ಶಾಸ್ತ್ರಿಗಳು ಬೋಧಿಸಿದ ಸದುದ್ದೇಶ ಪಂಚಕಗಳೆಂದರೆ

೧. ಕನ್ನಡದಲ್ಲಿ ವ್ಯವಹಾರ ಹೆಚ್ಚಿದಂತೆ ಕೊರತೆಯಾಗಿ ತೋರುವ ಪಾರಭಾಷಿಕ ಶಬ್ದಗಳ ರಚನೆಯಾಗಬೇಕು,
೨. ಪ್ರಾದೇಶಿಕ ಭಾಷಾ ಭೇದಗಳನ್ನು ನಿವಾರಿಸಿ ಭಾಷೆಯಲ್ಲಿ ಐಕ್ಯವನ್ನುಂಟು ಮಾಡಬೇಕು,
೩. ಹೊಸಗನ್ನಡಕ್ಕೆ ಸರಿಯಾದ ಒಂದು ವ್ಯಾಕರಣ ಹುಟ್ಟಬೇಕು,
೪. ಕನ್ನಡನಾಡಿನಲ್ಲೆಲ್ಲಾ ಸಮಾನ ಪಠ್ಯ ಪ್ರಸಂಗಗಳಾಗಬೇಕು,
೫. ಕನ್ನಡತನದ ಪ್ರಚಾರವಾಗಬೇಕು.

ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳ ಪ್ರಮುಖ ಕೃತಿಗಳೆಂದರೆ: ಕರ್ನಾಟಕ ನಳೋಪಾಖ್ಯಾನ, ಅಭಿನವ ಕಾದಂಬರಿ, ಕರ್ಣಾಟಕ ನರಕಾಸುರ ವಿಜಯವ್ಯಾಯೋಗಂ, ಶ್ರೀ ಶಂಕರಕಥಾಮೃತಂ, ಪ್ರಶ್ನೋತ್ತರ ಮಾಲಿಕೆ, ಶ್ರೀ ಕಾವೇರಿ ಮಹಾತ್ಮೆ, ಮಿತ್ರಭೂಮಿ ವಂದನಾ, ಕರ್ಣಾಟಕ ಘೋಷಣೆ ಮುಂತಾದವು. 

ಕನ್ನಡ ನಾಡು ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳಿಗೆ 1923ರ ವರ್ಷದಲ್ಲಿ ಬಿಜಾಪುರದಲ್ಲಿ ನಡೆದ 9 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವುದರ ಮೂಲಕ ತನ್ನ ಗೌರವವನ್ನು ಅರ್ಪಿಸಿತು.  ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು “ಎ.ಬಿ.ಸಿ.ಡಿ ವೇದಾಧ್ಯಯನಕ್ಕಿಂತಲೂ ಮೊದಲೇ ನಮ್ಮ ಮಕ್ಕಳ್ಗೆ, ನಮ್ಮಲ್ಲಿ ನೀತಿಯುಂಟು, ಧರ್ಮವುಂಟು, ತತ್ವವಿಚಾರವುಂಟು, ಭಾಷೆಯ ಸೊಬಗುಂಟು, ವಿಚಾರ ವಿವೇಕ ರೀತಿಯುಂಟು, ಎಲ್ಲವನ್ನೂ ನಮ್ಮ ಭಾಷೆಯಿಂದ ಕಲಿಯುವುದೇ ಲೇಸು, ಇತ್ಯಾದಿ ವಿಷಯಗಳನ್ನು, ಜೊತೆಗೆ ಸೌಜನ್ಯವನ್ನು  ಅಭ್ಯಾಸಗೊಳಿಸುತ್ತ ಬರಬೇಕು.   ಈ ಕಾಲದ ವ್ಯವಹಾರಿಕ ರಕ್ಷಕವಾಗಿರುವ ಪರಭಾಷಾಭ್ಯಾಸಕ್ಕೆ ಬಿಡುವುದು ನಮಗೆ ಶ್ರೇಯೋನಿದಾನವಾಗಿರುವುದು” ಎಂದು ನುಡಿದರು.

ಈ ಮಹಾನ್ ಕನ್ನಡ ಶ್ರೇಯೋಭಿಲಾಷಿ ವಿದ್ವಾಂಸರು 1942ರ ವರ್ಷದಲ್ಲಿ ಈ ಲೋಕವನ್ನಗಲಿದರು.


ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಾದ ಎಸ್. ವಿ. ಶ್ರೀನಿವಾಸರಾವ್ ಅವರಿಂದ ರಚಿತವಾಗಿರುವ  ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ

Tag: Siddhanti Shivashankara Shastri

ಕಾಮೆಂಟ್‌ಗಳಿಲ್ಲ: