ಬುಧವಾರ, ಅಕ್ಟೋಬರ್ 23, 2013

ಭದ್ರಗಿರಿ ಅಚ್ಯುತದಾಸರು

ಭದ್ರಗಿರಿ ಅಚ್ಯುತದಾಸರು 

ಮಹಾನ್ ಹಿರಿಯ ಹರಿಕಥಾ ವಿದ್ವಾಂಸರಾದ  ಭದ್ರಗಿರಿ ಅಚ್ಯುತದಾಸರು ಕೆಲಕಾಲದ ಅನಾರೋಗ್ಯದ  ನಂತರ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 

ಅಚ್ಯುತದಾಸರು ಉಡುಪಿ ಜಿಲ್ಲೆಯ ಭದ್ರಗಿರಿಯಲ್ಲಿ 1932ರ ವರ್ಷದಲ್ಲಿ ಜನಿಸಿದರು.  ಇವರ ಪೂರ್ವಜರು ಯಕ್ಷಗಾನ ಮತ್ತು ಕಥಾ ಕೀರ್ತನ ಕಲೆಯಲ್ಲಿ ಪರಿಣಿತರಾಗಿದ್ದರು.  ತಂದೆ ವೆಂಕಟರಮಣ ಪೈಗಳು.  ತಾಯಿ ರುಕ್ಮಿಣಿಯಮ್ಮನವರು.  ಇವರ ಕಿರಿಯ ಸಹೋದರರಾದ ದಿವಂಗತ ಭದ್ರಗಿರಿ ಕೇಶವದಾಸರು ವಿಶ್ವದಾದ್ಯಂತ ಶಿಷ್ಯವೃಂದ ಹೊಂದಿದ್ದು ಹರಿಕಥೆಯಲ್ಲಿ ಮಹಾನ್ ಹೆಸರಾಗಿದ್ದು ಭಾರತದ ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪಸರಿಸಿದ್ದರು.    

ಭದ್ರಗಿರಿಯ ಅಧಿದೇವತೆಯಾದ ಶ್ರೀ ವೀರ ವಿಠಲನೇ ಅಚ್ಯುತದಾಸರ ಗುರು. ಅವನ ಸನ್ನಿಧಿಯಲ್ಲಿ ಹಾಡಿ - ಪಾಡಿ, ಕುಣಿದು ನರ್ತಿಸುತ್ತಾ ಗ್ರಾಮದ ಜನರ ಮುಂದೆ ಭಜನಾದಿಗಳನ್ನು ಮಾಡುತ್ತಾ ಕೀರ್ತನ ಕಲೆಯನ್ನು ರೂಢಿಸಿಕೊಂಡ ಸ್ವಾಧ್ಯಾಯಿಯವರು. ಇದಕ್ಕೊಂದು ರೂಪ ಕೊಟ್ಟು ಸಂಗೀತ-ಸಾಹಿತ್ಯಗಳನ್ನೊದಗಿಸಿ ದಾಸದೀಕ್ಷೆ ನೀಡಿದವರು ಕಾಶೀಮಠ ಸಂಸ್ಥಾನದ ಶ್ರೀ ಶ್ರೀ ಸುಧೀಂದ್ರ ತೀರ್ಥರು.  1953ರಲ್ಲಿ ಇವರಿಗೆ ಈ ದೀಕ್ಷೆ ದೊರೆಯಿತು.

1951ರ ವರ್ಷದ  ಮಹಾಶಿವರಾತ್ರಿಯ ದಿನದಂದು ಹರಿಕಥಾ ದಾಸರೊಬ್ಬರ ಗೈರುಹಾಜರಿಯಲ್ಲಿ 19 ವರ್ಷದ ತರುಣ ಅಚ್ಯುತರು  ಪ್ರಪ್ರಥಮವಾಗಿ ಯಾವ ಪೂರ್ವಸಿದ್ಧತೆಯೂ  ಇಲ್ಲದೆ ಕಥೆ ಮಾಡಿ ಅಲ್ಲಿನ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾದರು.  ಅಲ್ಲಿಂದ ಅವರು ಹಿಂದಿರುಗಿ ನೋಡಿದವರೇ ಅಲ್ಲ. ಕೀರ್ತಿಯ ಸೋಪಾನವನ್ನೇರುತ್ತಲೇ ಹೋದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ಬಾರಿ ಯಾತ್ರೆ ಮಾಡಿ ತಮ್ಮ ಕೀರ್ತನ ಸೌರಭವನ್ನು ಉಣಬಡಿಸಿದ್ದರು. ಇದಲ್ಲದೆ ತಮ್ಮ ಗುರುಗಳಾದ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಂಕಿತದೊಂದಿಗೆ ಮೂಲ ನಾರಾಯಣಎಂಬ ಅಂಕಿತ ಹೊಂದಿ ಸಹಸ್ರಾರು ಕೀರ್ತನೆಗಳನ್ನೂ ರಚಿಸಿದರು. ಹರಿಕಥಾ ಪೂರ್ವರಂಗ, ಗೀತಾರ್ಥ ಚಿಂತನೆ, ಗುರು ಚರಿತ್ರೆ (ದತ್ತ ಮಹಿಮೆ), ಶ್ರೀನಿವಾಸ ಕಲ್ಯಾಣ ಮುಂತಾಗಿ ೨೫ ಕ್ಕೂ ಹೆಚ್ಚು ಗ್ರಂಥ ರಚನೆ ಮಾಡಿದ್ದರು. ಅಲ್ಲದೆ  ಕೆಲವು ವರ್ಷಗಳ ಹಿಂದೆ   ಹರಿಕಥಾಮೃತ ಸಿಂಧುಎಂಬ ಆರು ಸಂಪುಟಗಳ ಬೃಹತ್ ಗ್ರಂಥ ರಚನೆಯನ್ನು ಮಾಡಿದ್ದರು.  ಕೀರ್ತನ ಕಲಾಭ್ಯಾಸಿಗಳಿಗೆ ಇದೊಂದು ವಿಶ್ವಕೋಶದಂತಿದ್ದು ಮಾದರಿಯಾಗಿದೆ. ಆಕಾಶವಾಣಿ ದೂರದರ್ಶನ ಕೇಂದ್ರಗಳಿಂದಲೂ ಅಚ್ಯುತದಾಸರ ಅನೇಕ  ಕಾರ್ಯಕ್ರಮಗಳು ಪ್ರಸಾರವಾಗಿವೆ.  ಆಧ್ಯಾತ್ಮ ಸಾಧಕರಾದ ಅಚ್ಯುತದಾಸರು ಹಲವಾರು ಭಾರೀ ಹಿಮಾಲಯದಲ್ಲೂ ಪರ್ಯಟನೆ ನಡೆಸಿದವರು.


ಅಚ್ಯುತದಾಸರು ಬೆಂಗಳೂರಿನ ನೆಲಮಂಗಲದ ಬಳಿ, ವಿಜಯವಿಠ್ಠಲ ದೇಗುಲ, ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ ಕೀರ್ತನ ಮಹಾ ವಿದ್ಯಾಲಯ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಮುಂತಾದ ಸಂಸ್ಥೆಗಳ ಸ್ಥಾಪನೆಗೆ ತಮ್ಮ ಸಹೋದರ ಕೇಶವದಾಸರ ಜೊತೆಗೆ ಹೆಗಲುಕೊಟ್ಟು ದುಡಿದಿದ್ದರು. ಈ ಎಲ್ಲಾ ಸಂಸ್ಥೆಗಳ ಗೌರವಾಧ್ಯಕ್ಷರೂ ಆಗಿದ್ದರು.

ಅಚ್ಯುತದಾಸರು ಕನ್ನಡ, ಮರಾಠಿ, ತುಳು, ಕೊಂಕಣಿ, ಹಿಂದಿ ಭಾಷೆಗಳಲ್ಲಿ ಸಮಾನಾತ್ಮಕ ಪ್ರಭುತ್ವ ಹೊಂದಿ ಈ ಎಲ್ಲಾ ಭಾಷೆಗಳಲ್ಲೂ ಕೀರ್ತನ ಮಾಡುವ ಸಾಮರ್ಥ ಹೊಂದಿದ್ದ  ಅಪೂರ್ವ ಕಲಾವಿದರಾಗಿದ್ದರು. ಭಾರತ ಜ್ಯೋತಿ ಪ್ರಕಾಶನಎಂಬ ಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ಅನೇಕ ಧಾರ್ಮಿಕ ಗ್ರಂಥಗಳನ್ನೂ  ಪ್ರಕಟಿಸಿದ್ದರು. ದಾಸವಾಣಿಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಅನೇಕ ಧ್ವನಿ ಮುದ್ರಿಕಾ ಸಂಸ್ತೆಗಳು ಪ್ರಮುಖವಾಗಿ ಮಾಸ್ಟರ್ ರೆಕಾರ್ಡಿಂಗ್ ಕಂಪೆನಿಯ ಸಂಗೀತಾ ಕ್ಯಾಸೆಟ್‌ಗಳ ಮೂಲಕ ಇವರು ಮಾಡಿರುವ ಅನೇಕ ಹರಿಕಥಾ ಪ್ರಸಂಗಗಳು ಧ್ವನಿ ಸುರುಳಿಗಳಾಗಿ ಪ್ರಸಿದ್ಧಿಗೊಂಡಿವೆ.

ಭದ್ರಗಿರಿ ಅಚ್ಯುತದಾಸರಿಗೆ ಅನೇಕ ಪುರಸ್ಕಾರಗಳು ಸಂದಿದ್ದವು.  ಕೀರ್ತನಾಚಾರ್ಯ’ ’ಕೀರ್ತನಾಗ್ರೇಸರ’, ’ಕೀರ್ತನ ಕೇಸರಿ’. ಮುಂತಾದ ಬಿರುದುಗಳೊಂದಿಗೆ ಇವರನ್ನು  ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದವು. ಅಖಿಲ ಕರ್ನಾಟಕ ಕೀರ್ತನಕಾರರ ಎರಡನೇ ಸಮ್ಮೇಳನದ ಅಧ್ಯಕ್ಷ ಪದವಿ, ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವತ್ ಸಭೆಯಲ್ಲಿನ  ಸನ್ಮಾನಗಳೇ ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕ – ಪುರಂದರ ಗೌರವ,  ನಾಡೋಜಪ್ರಶಸ್ತಿ ಮುಂತಾಗಿ ಅನೇಕ ಪ್ರಶಸ್ತಿ ಗಳಿಸಿರುವ ದಾಸರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 1989-90ನೇ ಸಾಲಿನ ಕರ್ನಾಟಕ ಕಲಾ ತಿಲಕಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಲ್ಲದೆ ಇವರ ಕುರಿತಾದ ಸಾಕ್ಷ್ಯಾಚಿತ್ರವನ್ನೂ ಹೊರತಂದಿತ್ತು.

ಭದ್ರಗಿರಿ ಅಚ್ಯುತದಾಸರ ನಿಧನದಿಂದ ಸಾಂಸ್ಕೃತಿಕ ಲೋಕದಲ್ಲಿನ ಹರಿಕಥಾ ವಿದ್ವತ್ತಿನ ಕಲೆ ತನ್ನ ಮಹಾನ್ ರಾಯಭಾರಿಯನ್ನು ಕಳೆದುಕೊಂಡಿದೆ.  ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನಗಳು.


Tag: Bhadragiri Achyutadas, Bhadragiri Achyutdas

1 ಕಾಮೆಂಟ್‌:

Unknown ಹೇಳಿದರು...

evara harikathegalu namma maneyali eve.. keluthirutheve.. avarige sraddhanjaigalu