ಶನಿವಾರ, ಅಕ್ಟೋಬರ್ 5, 2013

ಮೈಸೂರು ಎಂ. ಮಂಜುನಾಥ್

ಮೈಸೂರು ಎಂ. ಮಂಜುನಾಥ್

ಅತ್ಯಂತ ಕಿರಿಯವಯಸ್ಸಿನಲ್ಲೇ ಪಿಟೀಲು ವಾದಕರಾಗಿ ಅಂತರರಾಷ್ಟ್ರೀಯ ಪ್ರಖ್ಯಾತಿ ಗಳಿಸಿರುವ ಮೈಸೂರು ಸಹೋದರದ್ವಯರಲ್ಲಿ ಒಬ್ಬರಾದ ಎಂ. ಮಂಜುನಾಥ್ ಅಕ್ಟೋಬರ್ 5, 1969ರ ವರ್ಷದಲ್ಲಿ ಜನಿಸಿದರು.  ಈ ಸಹೋದರರಲ್ಲಿ ಮತ್ತೊಬ್ಬರು ಎಂ. ನಾಗರಾಜ್.  ಈ ಸುಪುತ್ರರ ತಂದೆ ಪಿಟೀಲು ವಾದನದಲ್ಲಿ ಅಗ್ರಗಣ್ಯರಾದ ಪ್ರೊ ಎಸ್. ಮಹಾದೇವಪ್ಪನವರು.  ತಾಯಿ ಕಮಲಮ್ಮನವರು. ಈ ತಂದೆ ಮಕ್ಕಳ ಹೆಸರಿನ ಜೊತೆಗೆ ಸಂಗೀತಕ್ಷೇತ್ರದಲ್ಲಿ ಮಹಾನ್ ಸ್ಥಳವೆನಿಸಿರುವ ಮೈಸೂರು ಜೊತೆಗೂಡಿದ್ದು ಈ ತ್ರಿಮೂರ್ತಿಗಳ ಸಾಧನೆ ಈ ಸ್ಥಳಕ್ಕೆ  ಮತ್ತಷ್ಟು ಕೀರ್ತಿಯನ್ನು ಸೇರ್ಪಡೆಗೊಳಿಸಿದೆ.

ತಂದೆ ಪ್ರೊ. ಎಸ್ ಮಹಾದೇವಪ್ಪ ಮತ್ತು ಅಣ್ಣ ಎಂ. ನಾಗರಾಜ್‌ ಅವರಿಂದ ಸಂಗೀತದ ಪ್ರಥಮ ಶಿಕ್ಷಣ ಪಡೆದ ಮಂಜುನಾಥ್ ತಮ್ಮ ಎಂಟನೆಯ ವಯಸ್ಸಿನಲ್ಲೇ ಸಂಗೀತ ಕಚೇರಿ ನಡೆಸಿ ಸಂಗೀತ ವಿದ್ವಾಂಸರು ಮತ್ತು ಸಂಗೀತ ಪ್ರೇಮಿಗಳ ಮನಗೆದ್ದ ಅದ್ಭುತ ಬಾಲ ಪ್ರತಿಭೆ. ಮೈಸೂರು ವಿಶ್ವವಿದ್ಯಾಲಯದಿಂದ ನಾಲ್ಕು ಚಿನ್ನದ ಪದಕಗಳೊಡನೆ ಸಂಗೀತದಲ್ಲಿ  ಸ್ನಾತಕೋತ್ತರ ಪದವಿ ಪಡೆದ ಮಂಜುನಾಥ್ ಶಾಸ್ತ್ರೀಯ ಸಂಗೀತದಲ್ಲಿ ಪಿಟೀಲಿನ ಪಾತ್ರಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಗೌರವವನ್ನೂ ಗಳಿಸಿದ್ದಾರೆ.  ಅತ್ಯಂತ ಕಿರಿಯವಯಸ್ಸಿನಲ್ಲೇಸಂಗೀತಲೋಕದಲ್ಲಿ ದರ್ಜೆ ಕಲಾವಿದರೆಂದು ಪರಿಗಣಿಸಲ್ಪಟ್ಟ ಕಲಾವಿದರಲ್ಲಿ ಮಂಜುನಾಥರೂ ಒಬ್ಬರೆನಿಸಿದ್ದಾರೆ.   ಮಂಜುನಾಥರು ಕಲಾವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ  ಸೇವೆ ಸಲ್ಲಿಸುತ್ತಿದ್ದಾರೆ.

ಮಂಜುನಾಥರು ತಮ್ಮ ಅಣ್ಣ ಮೈಸೂರು ನಾಗರಾಜರೊಡನೆ ದ್ವಂದ್ವ ಪಿಟೀಲು ವಾದನದಲ್ಲಿ ವಿಶ್ವಪ್ರಖ್ಯಾತಿ ಪಡೆದಿದ್ದಾರೆ.  ಈ ಮೈಸೂರು ಸಹೋದರರ ಸಂಗೀತ ಸಂಗಮದ ಮಾಧುರ್ಯವನ್ನು ಸವಿಯುವುದೇ ಸೌಭಾಗ್ಯಎಂಬ ಮಾತು ಸಂಗೀತರಸಿಕರ ಒಕ್ಕೊರಲ ಅಭಿಪ್ರಾಯವಾಗಿ ನಿತ್ಯ ಕೇಳಿಬರುತ್ತಿರುತ್ತದೆ.  ಜೊತೆಗೆ ಮಂಜುನಾಥರು ರಾಷ್ಟ್ರಮಟ್ಟದ ಖ್ಯಾತಿಯ ಸಂಗೀತಗಾರರಾದ ವಿ. ಜಿ. ಜೋಗ್‌, ಪಂ. ವಿಶ್ವಮೋಹನ ಭಟ್‌, ಡಾ. ಎಂ. ಬಾಲಮುರಳಿ ಕೃಷ್ಣ, ತೇಜೇಂದ್ರ ನಾರಾಯಣ ಮಜುಮದಾರ್‌, ಕೋನು ಮಜುಮದಾರ್‌ ಮುಂತಾದ ಅನೇಕರಿಗೆ  ಪಿಟೀಲು ವಾದನದ ಸಹಕಾರವನ್ನೂ ನೀಡಿದ್ದಾರೆ.  ಇವೆಲ್ಲದರ ಜೊತೆಗೆ ಪ್ರತಿಷ್ಠಿತ ಹಿಂದೂಸ್ಥಾನಿ ಸಂಗೀತ ಕಲಾವಿದರು ಹಾಗೂ ವಿಶ್ವದ ವಿವಿಧ ಪ್ರಖ್ಯಾತ ಸಂಗೀತಗಾರರೊಡನೆ ಜುಗಲ್ಬಂಧಿ, ಸಂಗೀತ ಸಮಾಗಮಗಳ ರಸಧಾರೆಯಲ್ಲೂ ಭಾಗಿಯಾಗುತ್ತಿದ್ದಾರೆ. ಈ ಸಂಗೀತ ಸಹಯೋಗದಲ್ಲಿ  ನೇಡ್ ಮೆಕಾಗೊವಾನ್, ಪ್ರಿಯೋ, ಮಾರ್ಕ್ ವುಡ್, ಫ್ಯಾಬ್ರಿಜಿಯೋ ಕಸೋಲ್, ಜೈ ಉತ್ತಲ್, ಜೋ ಕ್ರೆವನ್, ಫ್ರೆಡ್ ಹ್ಯಾಮಿಲ್ಟನ್, ಪಂಡಿತ್ ವಿಶ್ವಮೋಹನ್ ಭಟ್, ಟಾಡ್ ಹಾಬಿ, ಜುಲಿಯನ್ನೋ ಮೊಡೆರಲ್ಲಿರೋನು ಮಜುಂದಾರ್ ಮುಂತಾದ ಪ್ರಖ್ಯಾತನಾಮರ ಜೊತೆಗೆ ಹಾಗೂ  ಪಾಶ್ಚಾತ್ಯ ಆರ್ಕೆಸ್ಟ್ರಾಗಳೆನಿಸಿರುವ  ಅಕಾಮೂನ್ಡ, ಸ್ಪೆನಿಫಿಕ್ಸ್, ಐಕ್ಟಸ್ ಮುಂತಾದ ತಂಡಗಳ ಸಹಯೋಗವೂ ಸೇರಿವೆ.     ಕಳೆದ 2012ರ ವರ್ಷದಲ್ಲಿ ಸ್ಯಾಂಡಿಗೋ ಎಂಬಲ್ಲಿ ನಡೆದ ನಾಗರಾಜ್ ಮತ್ತು ಮಂಜುನಾಥ್ ಸಹೋದರರ ಸಂಗೀತ ಕಚೇರಿಯಲ್ಲಿ ಉಪಸ್ಥಿತರಿದ್ದ ಭಾರತರತ್ನ ರವಿಶಂಕರ್ ಅವರು ಈ ಸಹೋದರರ ಸಂಗೀತಕ್ಕೆ ಮನಸೋತು ಭಾರತೀಯ ಸಂಗೀತ ಲೋಕದ ರಾಜಕುಮಾರರಿವರುಎಂದು ಮೆಚ್ಚುಗೆಯ ಶ್ಲಾಘನೆ ವ್ಯಕ್ತಪಡಿಸಿದರು.

ಅಮೆರಿಕಾದ ಓರೆಗಾನ್‌, ಇಂಗ್ಲೆಂಡಿನ ಸಾಂಸ್ಕೃತಿಕ ಉತ್ಸವ, ಸಿಡ್ನಿಯ ಒಪೇರಾ ಹೌಸ್‌, ಮೆಲ್ಬೋರನ್, ಕೆನಡಾ, ಬೆಲ್ಜಿಯಂ, ಸ್ವಿಟ್ಜರ್ ಲ್ಯಾಂಡ್, ಇಟಲಿ, ಜಪಾನ್, ನ್ಯೂಜಿಲೆಂಡ್ಅಮೆರಿಕಾದ ಅಂತಾರಾಷ್ಟ್ರೀಯ ಪಿಟೀಲು ವಾದಕರ ಸಮ್ಮೇಳನ, ಕೌಲಾಲಂಪುರ್‌, ಸಿಂಗಪೂರ್, ಹಾಂಕಾಂಗ್, ಮಲೇಷಿಯಾ, ಮಧ್ಯಪ್ರಾಚ್ಯ ದೇಶಗಳು, ಫಿಲಿಫೈನ್ಸ್ನಮಿಬಿಯಾ ಅಧ್ಯಕ್ಷರ ಮುಂದೆ ವಿಶೇಷ ಕಾರ್ಯಕ್ರಮ. ಪ್ಯಾರಿಸ್‌, ಅಮೆರಿಕಾದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾತ್ಯಕ್ಷಿಕೆ, ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಬೋಧನೆಕಚೇರಿ, ಕಾರ್ಯಕ್ರಮಗಳು ಹೀಗೆ ನಮ್ಮ ಮೈಸೂರಿನ ಮಂಜುನಾಥರು ನಿರಂತರವಾಗಿ ವಿಶ್ವದಾದ್ಯಂತ ಸಂಚರಿಸುತ್ತಿರುತ್ತಾರೆ.  ಹಾಗೆಂದ ಮಾತ್ರಕ್ಕೆ ಅವರು ನಮ್ಮ ಪರಿಸರದಲ್ಲಿ ಅಲಭ್ಯರೇನೂ ಅಲ್ಲ.  ನಮ್ಮ ಪರಿಸರದಲ್ಲೂ ತಮ್ಮ ಸಂಗೀತ ಪ್ರೀತಿ ಹಾಗೂ ಸಂಗೀತಪ್ರಿಯರ ಗೌರವದ ಮೇಲಿಂದ ಯಾವುದೇ ಆತ್ಮೀಯ ಪರಿಸರದಲ್ಲೂ ಸಾಮಾನ್ಯರಂತೆ ಬಂದು ತಮ್ಮ ಅಪರಿಮಿತ ಕಲಾ ಪ್ರೌಢಿಮೆಯನ್ನು ಶ್ರದ್ಧಾಭಕ್ತಿಗಳಿಂದ ಸಂಗೀತ ರಸಿಕರಿಗೆ ಯಥೇಚ್ಛವಾಗಿ ಉಣಬಡಿಸುತ್ತಿರುತ್ತಾರೆ.

ಮ್ಯೂಸಿಕ್‌ ಅಕಾಡೆಮಿಯಿಂದ ಅತ್ಯುತ್ತಮ ಪಿಟೀಲು ವಾದಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಗೌರವ, ಅಮೆರಿಕದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಶಸ್ತಿ ಮುಂತಾದ ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಗೌರವಗಳು ಮಂಜುನಾಥರನ್ನು ನಿರಂತರವಾಗಿ ಅರಸಿ ಬರುತ್ತಿವೆ.  ಮುಂದೆ ಇನ್ನೂ ಹಲವಾರು ಪ್ರತಿಷ್ಠಿತ ಗೌರವಗಳು ಇವರಿಗೆ ಸಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಅವರ ಅಭಿಮಾನಿಗಳ ವಿಶ್ವಾಸವಾಗಿದೆ. ಇಷ್ಟೆಲ್ಲಾ ಸಾಧಿಸಿದ್ದರೂ ಅತ್ಯಂತ ಸಾಮಾನ್ಯನಂತೆ ನಮ್ಮೆಲ್ಲರ ಆತ್ಮೀಯ ಗೆಳೆಯನಾಗಿರುವ  ಸವಿಹೃದಯದ ಶ್ರೀಮಂತಿಕೆ ಮಂಜುನಾಥರದ್ದು. 


ಈ ಯುವ ಸಂಗೀತ ಸಾಧಕ, ನಮ್ಮ  ಭಾರತೀಯ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿರುವ ಮೈಸೂರು ಎಂ. ಮಂಜುನಾಥ್ ಅವರಿಗೆ ಅವರ ಜನ್ಮದಿನದ ಸಂದರ್ಭದಲ್ಲಿ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ. 

Tag: Mysore Manjunath 

  

ಕಾಮೆಂಟ್‌ಗಳಿಲ್ಲ: