ಬುಧವಾರ, ನವೆಂಬರ್ 6, 2013

ಸರ್ ಸಿ. ವಿ. ರಾಮನ್

ಸಿ. ವಿ. ರಾಮನ್

ಮಹಾನ್ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ   ಸರ್ ಸಿ ವಿ ರಾಮನ್ ಅವರ ವಿಸ್ತೃತ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು.  ಈ ಅಪ್ರತಿಮ ವೈಜ್ಞಾನಿಕ ಋಷಿವರ್ಯರು  ನವೆಂಬರ್ 7, 1888ರ ವರ್ಷದಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ತಂದೆ ಚಂದ್ರಶೇಖರ ಅಯ್ಯರ್ ಅವರು ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.  ತಾಯಿ ಪಾರ್ವತಿ ಅಮ್ಮಾಳ್ ಅವರು.  ಈ ದಂಪತಿಗಳ ಎಂಟು ಮಂದಿ ಮಕ್ಕಳಲ್ಲಿ ರಾಮನ್ ಎರಡನೆಯವರು.  ಮೊದಲನೆಯವರು ಮತ್ತೊಬ್ಬ ನೊಬೆಲ್ ಪ್ರಶಸ್ತಿ ವಿಜೇತರಾದ ಖಗೋಳ ವಿಜ್ಞಾನಿ ಚಂದ್ರಶೇಖರ್ ಸುಬ್ರಹ್ಮಣ್ಯನ್ ಆವರ ತಂದೆಯವರಾದ  ಚಂದ್ರಶೇಖರ್ ಅವರು. 

ಚಿಕ್ಕವಯಸ್ಸಿನಲ್ಲೇ ಅಸಾಧಾರಾಣ ಪ್ರತಿಭಾವಂತರಾಗಿದ್ದ ರಾಮನ್ ಅವರನ್ನು ಶಾಲೆಯಲ್ಲಿ ಮೀರಿಸುವವರೇ ಇರಲಿಲ್ಲ.  1900ರ ವರ್ಷದಲ್ಲಿ ಅವರು ಮೆಟ್ರಿಕ್ಯುಲೇಷನ್ ಮುಗಿಸಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.  ರಾಮನ್ ತಮ್ಮ ಹದಿನೆಂಟನೆಯ ವಯಸ್ಸಿನ ವೇಳೆಗೆ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಗಿಸುವ ವೇಳೆಗೆ ನಾಲ್ಕು ಭಾಷೆಗಳಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ್ದರು.  ಗ್ರೀಕ್ ಪುರಾಣಗಳು, ಮಹಾಭಾರತ, ರಾಮಾಯಣ, ಆಧುನಿಕ ಭಾರತಯುರೋಪಿನ ಇತಿಹಾಸ, ತರ್ಕಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ಹಣಕಾಸಿನ ಗ್ರಂಥಗಳನ್ನು ಅಧ್ಯಯನ ಮಾಡಿ ಮುಗಿಸಿದ್ದರು.  ವಿಜ್ಞಾನದ ಹಲವಾರು ಗ್ರಂಥಗಳನ್ನು ಓದಿ ಅರಗಿಸಿಕೊಂಡಿದ್ದರು.  ಯುಕ್ಲಿಡ್ಡನ ಜ್ಯಾಮಿತಿ ಮತ್ತು ಸಂಗೀತದ ಕುರಿತಂತೆ ಹೆಲ್ಮ್ ಹೊಲ್ತ್ಜ್ ಅವರ ಪುಸ್ತಕ ಅವರ ಮೇಲೆ ಅತ್ಯಂತ ಪ್ರಭಾವ ಬೀರಿತ್ತು.  ಅವರು ಬಿ. ಎ. ಓದುತ್ತಿರುವಾಗಲೇ  ಅವರ  ಎರಡು ಮಹತ್ವದ ವೈಜ್ಞಾನಿಕ ಲೇಖನಗಳು ರಾಯಲ್ ಸೊಸೈಟಿಯ ಫಿಲಸಾಫಿಕಲ್ ಮ್ಯಾಗಜೈನಿನಲ್ಲಿ ಪ್ರಕಟಗೊಂಡಿದ್ದವು.    ಇವು ಅವರ ಭವಿಷ್ಯತ್ತಿನ ಸಂಶೋಧನೆಯ ಹಾದಿಯ ಸೂಚನೆಗಳಾಗಿದ್ದವು. ಇವರ ಮತ್ತೊಂದು ಮಹತ್ವದ ಲೇಖನ ನೇಚರ್ಎಂಬ ಪತ್ರಿಕೆಯಲ್ಲಿ ಪ್ರಕಟವಾದವು. 

ಬಿ. ಎ, ಎಂ. ಎ  ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ರಾಮನ್ ಭೌತಶಾಸ್ತ್ರದಲ್ಲಿ ಉನ್ನತ ಅಧ್ಯಯನ ನಡೆಸಲು ಇಂಗ್ಲೆಂಡಿಗೆ ಹೋಗಲು ಬಯಸಿದರಾದರೂ ದೈಹಿಕ ಕಾರಣಗಳಿಂದ ಅವರ ಅರ್ಜಿ ತಿರಸ್ಕೃತಗೊಂಡಿತು.  ತಂದೆಯವರ ಒತ್ತಾಯದಿಂದ ಅವರು ಐ.ಸಿ.ಎಸ್ ಪರೀಕ್ಷೆ ಬರೆದು ಎರಡನೆಯ ಸ್ಥಾನ ಗಳಿಸಿದರು. ಹೀಗೆ ಅವರಿಗೆ ಕಲ್ಕತ್ತಾದ ಹಣಕಾಸು ಇಲಾಖೆಯಲ್ಲಿ ಕೆಲಸ ದೊರಕಿತು.  ಆದರೆ ಅವರಿಗೆ ಮನವಿದ್ದದ್ದು ಬೌತಶಾಸ್ತ್ರದಲ್ಲಿ.  ಸಂಜೆ  ವೇಳೆಗಳಲ್ಲಿ ಇಂಡಿಯನ್ ಕಲ್ಟಿವೆಶನ್ ಆಫ್ ಸೈನ್ಸ್ ಎಂಬ ಸಂಸ್ಥೆಯ ಚಿಕ್ಕ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡಿ ಲೇಖನಗಳನ್ನು ಪ್ರಕಟಪಡಿಸುತ್ತಿದ್ದರು. ಇವರ ಅಸಾಧಾರಣ ಪ್ರತಿಭೆ ಮತ್ತು ಆಸಕ್ತಿಯನ್ನು ಕಂಡ ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಅಶುತೋಶ್ ಮುಖರ್ಜಿ ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ಧೆಗೆ ಆಹ್ವಾನಿಸಿದರು.  ಇದು ಭಾರತೀಯ ಮತ್ತು ವಿಶ್ವವಿಜ್ಞಾನಕ್ಕೆ ಒಂದು ಹೊಸ ತಿರುವನ್ನು ತಂದಿತು.   

1921ರ ವರ್ಷದ ಸೆಪ್ಟೆಂಬರ್ ಮಾಸದಲ್ಲಿ ಇಂಗ್ಲೆಂಡಿನಲ್ಲಿ ಒಂದು ವೈಜ್ಞಾನಿಕ ಸಮಾವೇಶದಿಂದ ಭಾರತಕ್ಕೆ ಹಿಂದಿರುಗುವ ಸಮಯದಲ್ಲಿ, ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ ಉಂಟಾಯಿತು.  ಆಕಾಶವೂ ನೀಲಿ, ಸಮುದ್ರವೂ ನೀಲಿ.  ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಇಲ್ಲ ಇದಕ್ಕೆ ಇನ್ನೇನಾದರೂ  ಕಾರಣ ಇರಬಹುದೇ ಎಂದು ತೀವ್ರವಾಗಿ ಚಿಂತಿಸಿದ ಅವರಿಗೆ ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ  ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ ಎಂದು ದೃಢಪಟ್ಟಿತು.   ಆ ಕ್ಷಣದಿಂದಲೇ ತಮ್ಮ ತೀವ್ರವಾದ ಸಂಶೋಧನೆಗಳನ್ನು ನಡೆಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ಫೆಬ್ರುವರಿ 28, 1928ರಂದು  ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು.  ರಾಮನ್ ಪರಿಣಾಮಎಂದು ವಿಶ್ವಪ್ರಸಿದ್ಧವಾದ  ಈ ಸಂಶೋಧನೆಗಾಗಿ ರಾಮನ್ ಅವರಿಗೆ 1930ರ ವರ್ಷದಲ್ಲಿ  ನೋಬಲ್ ಪಾರಿತೋಷಕ ಸಂದಿತು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ರಾಮನ್ ಅವರ ಈ ಸಂಶೋಧನೆ ಪ್ರಕಟಗೊಂಡ ದಿನವಾದ ಫೆಬ್ರುವರಿ 28 ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಸಿ. ವಿ. ರಾಮನ್ನರು ಸುಮಾರು ಹದಿನೇಳು ವರ್ಷಗಳ ಕಾಲ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದು ನಂತರ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಆ ಸಂಸ್ಥೆಗೆ ಹೊಸ ಹಾದಿ ತೋರಿದರು.  ಮುಂದೆ ಯಾವುದೋ ಕ್ಷುಲ್ಲಕ ವಿಚಾರಕ್ಕಾಗಿ ಅವರು ರಾಜೀನಾಮೆ ನೀಡುವ ಪ್ರಸಂಗ ಏರ್ಪಟ್ಟಿತು.  ಅವರಿಗೆ ತಮ್ಮದೇ ಆದ ಸುಸಜ್ಜಿತ ವಿಜ್ಞಾನಮಂದಿರವನ್ನು ನಿರ್ಮಿಸುವ ಕನಸಿತ್ತು.  ಇದೇ 1948ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನ್ಮತಳೆದ ರಾಮನ್ ರಿಸರ್ಜ್ ಇನ್ಸ್ಟಿಟ್ಯೂಟ್.  ಇಂದು ಈ ಸಂಸ್ಥೆ ವಿಶ್ವಪ್ರಸಿದ್ಧಿ ಪಡೆದಿದೆ.
  
ತಮ್ಮ ಬಾಳ ಕೊನೆಯ ವರ್ಷಗಳಲ್ಲೂ ರಾಮನ್ ಅಧ್ಯಾಪನ, ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದರು.  ಹವಳ ಮತ್ತು ಸ್ಪಟಿಕಗಳಲ್ಲಿ ಬೆಳಕಿನ ಚದರಿಕೆಯ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು.  ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಒಲವು ಹೊಂದಿದ್ದ ರಾಮನ್ ಅವರು ಸಂಗೀತ ವಾದ್ಯಗಳಲ್ಲಿ ಅಂಥಹ ಸುಮಧುರ ಸ್ವರ ಹೇಗೆ ಬರುತ್ತದೆ ಎನ್ನುವ ಬಗ್ಗೆ ವಿದ್ವತ್ಪೂರ್ಣ ಸಂಶೋಧನಾ ಲೇಖನ ಬರೆದಿದ್ದರು.  ದೃಷ್ಟಿಯ ಬಗ್ಗೆ ಸಂಶೋಧನೆ ಕೈಗೊಂಡಿದ್ದರು.  1954ರ ವರ್ಷದಲ್ಲಿ  ಭಾರತ ಸರ್ಕಾರವು ಸಿ. ವಿ. ರಾಮನ್ ಅವರಿಗೆ ಭಾರತರತ್ನ ಗೌರವವನ್ನು ಅರ್ಪಿಸಿತು.  ಶಿಸ್ತಿನ ಪ್ರತಿರೂಪವೇ ಆಗಿದ್ದ ರಾಮನ್ ಅವರು ಭಾರತೀಯ ವಿಜ್ಞಾನರಂಗವನ್ನು ಇನ್ನಿಲ್ಲದಂತೆ ಬೆಳಗಿ ನವೆಂಬರ್ 21, 1970ರಂದು ಈ ಲೋಕವನ್ನಗಲಿದರು.  


Tag: Sir C. V. Raman

ಕಾಮೆಂಟ್‌ಗಳಿಲ್ಲ: