ಬುಧವಾರ, ನವೆಂಬರ್ 13, 2013

ಆರ್. ಪಿ. ಹೂಗಾರ

ಆರ್. ಪಿ. ಹೂಗಾರ

ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಪ್ರೊ. ಆರ. ಪಿ. ಹೂಗಾರ ಅವರು ಗ್ವಾಲಿಯರ್ ಘರಾಣೆಯ ಮಹಾನ್ ಗಾಯಕರು. ಹೂಗಾರ ಮಾಸ್ತರ ಎಂದೇ ನಾದಲೋಕದಲ್ಲಿ ಪರಿಚಿತರಾಗಿದ್ದ ಪ್ರೊ. ರಾಚಪ್ಪ ಪರಪ್ಪ ಹೂಗಾರರು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಮಾರ್ಚ್ 6, 1922ರ ವರ್ಷದಲ್ಲಿ ಜನಿಸಿದರು.  ತಂದೆ ಪರಪ್ಪನವರು ಮತ್ತು ತಾಯಿ ಗಿರಿಯಮ್ಮನವರು. 

ಇಟಗಿಯ ಹೂಗಾರ ಮನೆತನ ಸಂಗೀತ ಹಾಗೂ ಸಂಸ್ಕೃತಿಗೆ ಹೆಸರಾದುದು.  ರಾಚಪ್ಪನವರ ತಾತ ಪರಪ್ಪನವರ ತಂದೆ ರುದ್ರಪ್ಪನವರು ಉತ್ತಮ ಸಂಗೀತಗಾರರಾಗಿದ್ದರು.  ಸಿತಾರ್ ವಾದನದಲ್ಲಿ ಅವರಿಗೆ ವಿಶೇಷ ಪಾಂಡಿತ್ಯವಿತ್ತು.  ರಾಚಪ್ಪನವರ ತಂದೆ    ಪರಪ್ಪನವರಂತೂ ಆ ಭಾಗದ ನಾಮಾಂಕಿತ ಸಂಗೀತ ಕಲಾವಿದರು.  ಗಾಯನ ಕಲೆಯ ಜೊತೆಗೆ ಪಿಟೀಲು, ಸಾರಂಗಿ, ಮದ್ದಳೆ ಮತ್ತು ಸಿತಾರ ನುಡಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು.  ಕುದುರೆಯ ಮೇಲೆ ಕುಳಿತುಕೊಂಡು ಒಂದು ಹೆಗಲಿಗೆ ಪಿಟೀಲು, ಇನ್ನೊಂದು ಹೆಗಲಿಗೆ ಸಾರಂಗಿ ವಾದ್ಯಗಳನ್ನು ಹಾಕಿಕೊಂಡು ಹಳ್ಳಿಯಿಂದ ಹಳ್ಳಿಗೆ ಸಂಗೀತ ಕಾರ್ಯಕ್ರಮಕ್ಕೆ ಹೊರಡುತ್ತಿದ್ದ ಇವರನ್ನು ಕಂಡ ಜನ ಬಂದೂಕುಧಾರಿ ಢಕಾಯಿತನೆಂದು ಹೆದರಿಕೊಳ್ಳುತ್ತಿದ್ದುದೂ ಇತ್ತು.  ಅವರೊಬ್ಬ ಉತ್ತಮ ಸಂಗೀತ ಕಲಾವಿದರೆಂಬುದು ಗೊತ್ತಾದ ಮೇಲೆ ಜನ ಅಚ್ಚರಿಪಡುತ್ತಿದ್ದರು.  ಕಳೆದ ಶತಮಾನದ ಹೆಸರಾಂತ ಸಾಹಿತಿ ಡಾ. ಸಿದ್ಧಯ್ಯ ಪುರಾಣಿಕರ ತಂದೆ ದ್ಯಾಂಪುರದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನಡೆಸುತ್ತಿದ್ದ  ಪುರಾಣ ಕೀರ್ತನಕ್ಕೆ ಪರಪ್ಪನವರ ಸಂಗೀತ ಸಾಥಿ ಹೇಳಿ ಮಾಡಿಸಿದಂತಹ ಜೋಡಿ ಎಂದು ಪ್ರಖ್ಯಾತಿ ಪಡೆದಿತ್ತು.  ಕಲ್ಲಿನಾಥ ಶಾಸ್ತ್ರಿಗಳ ಪುರಾಣ ಇದ್ದಲ್ಲೆಲ್ಲಾ ಪರಪ್ಪನವರ ಸಂಗೀತ ಅವಶ್ಯವಾಗಿ ಜೊತೆಗೂಡಿರುತ್ತಿತ್ತು.

ರಾಚಪ್ಪನವರಿಗೆ ಸಂಗೀತದಲ್ಲಿ ಅವರ ತಂದೆಯವರಾದ ಪರಪ್ಪನವರೇ  ಪ್ರಥಮ ಗುರು.  ರಾಚಪ್ಪನವರ ಬದುಕಿಗೆ ಬೆಳಕನ್ನಿತ್ತವರು ಹಾಲಕೇರಿಯ ಶ್ರೀ. ನಿ. ಪ್ರ. ಲಿಂ. ಅನ್ನದಾನೇಶ್ವರ ಮಹಾಸ್ವಾಮಿಗಳು.  ಪರಪ್ಪನವರು ಹಾಗೂ ಅನ್ನದಾನೇಶ್ವರ ಮಹಾಸ್ವಾಮಿಗಳೂ ಬಾಲ್ಯದ ಗೆಳೆಯರು ಮತ್ತು  ಸಹಪಾಠಿಗಳು.  ಹೀಗಾಗಿ ಇವರ ಮನೆತನದ ಮೇಲೆ ಸ್ವಾಮಿಗಳಿಗೆ ತುಂಬು ಪ್ರೀತಿ, ವಿಶ್ವಾಸ.  ಒಂದು ರೀತಿಯಲ್ಲಿ ಸ್ವಾಮಿಗಳ ಆಶೀರ್ವಾದ ಪರಪ್ಪನವರ ಕುಟುಂಬಕ್ಕೊಂದು ವರದಾನ.

ಇಟಗಿಯಲ್ಲಿ ಕನ್ನಡ ನಾಲ್ಕನೇ ತರಗತಿ ಮುಗಿಸಿದ ರಾಚಪ್ಪನವರು ಮಾಧ್ಯಮಿಕ ಶಿಕ್ಷಣಕ್ಕಾಗಿ ನರಗುಂದದ ಎ. ವಿ. ಸ್ಕೂಲಿಗೆ ಬಂದರು.  ಶಾಲೆಯ ಅಭ್ಯಾಸದೊಂದಿಗೆ ಸಂಗೀತ ಕಲೆಯ ವಿಕಾಸಕ್ಕೆ ವಿಶೇಷ ವೇಳೆ ಕಳೆದರು.  ನರಗುಂದದ ಪಂಡಿತ ನಾರಾಯಣಾಚಾರ್ಯ ದಂಡಾಪೂರ ಹೆಸರಾಂತ ಗಾಯಕರೆನಿಸಿದ್ದರು.  ಅವರು ಗ್ವಾಲಿಯರ್ ಘರಾಣೆಯ ಪಂಡಿತ್ ಬಾಲಕೃಷ್ಣ ಬುವಾ ಇಚಲ ಕರಂಜೀಕರ ಅವರ ಶಿಷ್ಯರು.  ನಾರಾಯಣಾಚಾರ್ಯರು ಸಂಸ್ಕೃತ ವಾಜ್ಮಯದಲ್ಲೂ ಮಹಾನ್ ಪಂಡಿತರಾಗಿದ್ದರು.  ರಾಚಪ್ಪನವರು ನಾರಾಯಣಾಚಾರ್ಯ ದಂಡಾಪೂರ ಅವರಲ್ಲಿ ಸಂಗೀತ ಕಲಿಕೆಗೆ ಪ್ರಾರಂಭಿಸಿ, ಗುರುಗಳ ನೆಚ್ಚಿನ ಶಿಷ್ಯರಾಗಿ ಸಂಗೀತ ಸಾಧನೆಯಲ್ಲಿ ತೊಡಗಿದರು.

ರಾಚಪ್ಪನವರು ನರಗುಂದದ ಶಾಲಾ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಶಾಲೆಯ ಜುಬಿಲಿ ಉತ್ಸವ ಏರ್ಪಾಡಾಗಿತ್ತು.  ಆ ಉತ್ಸವದ ನಿಮಿತ್ತ ಅಲೌಕಿಕ ರಾಜನಿಷ್ಠಾ ಎಂಬ ನಾಟಕ ಅಭಿನಯಿಸಲ್ಪಟ್ಟಿತು.  ಆ ನಾಟಕದಲಿ ಬಸ್ವಾರ್ಯನ ಪಾತ್ರದಲ್ಲಿ ರಾಚಪ್ಪನವರ ಪ್ರಬುದ್ಧ ಅಭಿನಯ ಮತ್ತು ಸುಮಧುರ ಕಂಠದ ಹಾಡುಗಾರಿಕೆ ಕೇಳಿದ ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಂಬೈ ಕರ್ನಾಟಕದ ಅಂದಿನ ಶಿಕ್ಷಣ ಸಚಿವ ಆರ್. ಸಿದ್ದಪ್ಪ ಕಂಬಳಿಯವರು ರಾಚಪ್ಪನವರನ್ನು ಕರ್ನಾಟಕದ ಕಿನ್ನರರೆಂದು ಉದ್ಘರಿಸಿ ಹರಸಿದರು. 

ಹೈಸ್ಕೂಲ್ ಶಿಕ್ಷಣಕ್ಕಾಗಿ ಗದುಗಿಗೆ ಆಗಮಿಸಿದ ರಾಚಪ್ಪನವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರು.  ಮುಂದೆ ಅವರು ಸಂಗೀತ ವಿದ್ಯೆಯಲ್ಲಿ ಹೆಚ್ಚಿನ ಸಾಧನೆ ಮಾಡಿ ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಮತ್ತು ವಿಜಾಪುರದ ಕರ್ನಾಟಕ ಪ್ರದೇಶ ಸಂಗೀತ ಸೇವಾ ಸಮಿತಿಯ ಕೆಂದ್ರದ ಸಂಗೀತ ಅಲಂಕಾರ ಪದವಿ ಪಡೆದುಕೊಂಡರು.

ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿ ಪ್ರಬುದ್ಧತೆ ಪಡೆದುಕೊಂಡ ಪ್ರೊ. ಆರ್. ಪಿ. ಹೂಗಾರ ಅವರು ವಿಜಾಪೂರಕ್ಕೆ ಬಂದು ಅಲ್ಲಿ ಕೆಲವೊಂದು ಮನೆಗಳಲ್ಲಿ ಸಂಗೀತ ಪಾಠ ಹೇಳಲು ಪ್ರಾರಂಭಿಸಿ  ಮುಂದೆ ಅಲ್ಲಿನ  ಶಾಲೆಯೊಂದರಲ್ಲಿ ಸಂಗೀತ ಶಿಕ್ಷಕರಾಗಿ ತಮ್ಮ ವೃತ್ತಿಗೆ ನಾಂದಿ ಹಾಡಿದರು.  ಅಲ್ಲಿ ಕೆಲವು ದಿನ ಸಂಗೀತ ಶಿಕ್ಷಕರಾಗಿ ಕೆಲಸಮಾಡಿ ಮುಂದೆ 1953ರಲ್ಲಿ ಧಾರವಾಡಕ್ಕೆ ಬಂದರು.  ಅಂದು ಅ. ಕೆ. ಗರ್ಲ್ಸ್ ಸ್ಕೂಲ್ ಆಗಿದ್ದ ಇಂದಿನ ಕರ್ನಾಟಕ ಯುನಿವರ್ಸಿಟಿ ಪಬ್ಲಿಕ್ ಸ್ಕೂಲಿನಲ್ಲಿ ಪೂರ್ಣಾವಧಿ ಸಂಗೀತ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು.  1964ರಿಂದ 1975ರವರೆಗೆ ಅಲ್ಲಿ ಸಂಗೀತ ಶಿಕ್ಷಕರಾಗಿ ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ 1982ರವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.  ಆರ್. ಪಿ. ಹೂಗಾರರ ಕಾರ್ಯದಕ್ಷತೆ ಮತ್ತು ಸಂಗೀತ ಕ್ಷೇತ್ರದಲ್ಲಿನ  ಕೊಡುಗೆಗಳನ್ನು ಪರಿಗಣಿಸಿದ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಸ್ನಾತಕೋತ್ತರ ವಿಭಾಗದ ಗೌರವ ಪ್ರಾಧ್ಯಾಪಕ ಹುದ್ಧೆ ನೀಡಿತು.  ಹೂಗಾರರು 1982ರಿಂದ 1985ರ ವರೆಗೆ ಮೂರುವರ್ಷ ಅಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

1950ರಲ್ಲಿ ಧಾರವಾಡದಲ್ಲಿ ಆಕಾಶವಾಣಿ ಕೆಂದ್ರ ಸ್ಥಾಪನೆಗೊಂಡಂದಿನಿಂದಲೂ ಪ್ರೊ. ಆರ್. ಪಿ. ಹೂಗಾರರ ಹಾಡುಗಾರಿಕೆ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು.  ಖ್ಯಾತ ಗಾಯಕ ಪಂಡಿತ ಗುರುರಾಜ ದೇಶಪಾಂಡೆಯವರೊಂದಿಗೆ ಇವರು ಆಕಾಶವಾಣಿಯ ಧ್ವನಿಪರೀಕ್ಷಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದರು.  ಕೆಲವು ರೂಪಕಗಳಿಗೆ ಸಂಗೀತ ಸಂಯೋಜಿಸಿದರು.  ಆಕಾಶವಾಣಿಯಲ್ಲಿ ಸಂಗೀತ ಪಾಠವನ್ನೂ ನಡೆಸಿಕೊಟ್ಟರು.

ಪ್ರೊ. ಆರ್. ಪಿ. ಹೂಗಾರರು ಅನೇಕ ಜನ ಶಿಷ್ಯರನ್ನು ತಯಾರು ಮಾಡಿದ್ದಾರೆ.  ಅಂತಹವರಲ್ಲಿ ಗೀತ ಜಾವಡೇಕರ, ಜಯಶ್ರೀ ರಂಗನಾಥ, ಪ್ರೊ. ಭಾರತಿ ಮೇಸ್ತಾ, ಪ್ರೊ. ಸಿದ್ಧರಾಮಯ್ಯ ಮಠಪತಿ ಹಾಗೂ ಪುತ್ರ  ಡಾ. ವೀರಣ್ಣ ಹೂಗಾರ ಪ್ರಮುಖರಾಗಿದ್ದಾರೆ.    

ಅಪಾರ ಸಾಧಕರಾಗಿದ್ದರೂ ಎಲೆಮರೆಯ ಕಾಯಿಯಂತಿದ್ದು ಸರಳ ಸಜ್ಜನಿಕೆಗೆ ಹೆಸರಾಗಿದ್ದ ಪ್ರೊ. ಆರ್. ಪಿ. ಹೂಗಾರರು  ನವೆಂಬರ್ 14, 1990ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಅವರ ನೆನಪಿಗಾಗಿ ಪ್ರತೀವರ್ಷ ಅವರ ಅಭಿಮಾನಿ ಬಳಗದಿಂದ  ನವೆಂಬರ್ ಮಾಸದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಸಂಗೀತ ಸಾಧಕರನ್ನು ಗೌರವಿಸುವ ಶ್ಲಾಘನೀಯ ಕಾರ್ಯ ನೆರವೇರುತ್ತಾ ಬಂದಿದೆ.  ಈ ಮಹಾನ್ ಚೇತನಕ್ಕೆ ನಮ್ಮ ಅನಂತ ನಮನಗಳು.

Tag: R. P. Hugar

ಕಾಮೆಂಟ್‌ಗಳಿಲ್ಲ: