ಭಾನುವಾರ, ನವೆಂಬರ್ 17, 2013

‘ಭಾರತರತ್ನ’ರಾದ ನಮ್ಮ ವಿಜ್ಞಾನರತ್ನ ಪ್ರೊ. ಸಿ.ಎನ್.ಆರ್. ರಾವ್

ಪ್ರೊ. ಸಿ.ಎನ್.ಆರ್. ರಾವ್

"ನನಗೆ ಅಂತರರಾಷ್ಟ್ರೀಯ ಮಟ್ಟದ ಅನೇಕ ಉತ್ಕೃಷ್ಟವಾದ ಪ್ರಶಸ್ತಿಗಳು ಲಭಿಸಿವೆ. ಆದರೆ ಭಾರತರತ್ನವನ್ನು ನೀಡಿದ್ದು ನನ್ನ ರಾಷ್ಟ್ರ. ತಾಯ್ನಾಡಿನ  ಗೌರವ ಹೆಚ್ಚು ಪ್ರಿಯವಾದುದು ಹಾಗೂ ಮೌಲ್ಯಯುತವಾದುದು" ಎಂದು 80ರ ಚಿರಯುವಕ, ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌. ರಾವ್‌ ವಿನಮ್ರವಾಗಿ ನುಡಿದಿದ್ದಾರೆ.

"ಇದು ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕ ಗೌರವ. ನಾನು ಯಾವತ್ತೂ ಹಣ ಸಂಪಾದನೆ ಮಾಡಬೇಕು ಎಂದು ಬಯಸಿದವನಲ್ಲ. ವಿಜ್ಞಾನಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವನು. ಕಳೆದ 60 ವರ್ಷಗಳಿಂದ ವಿಜ್ಞಾನ ಕ್ಷೇತ್ರದಲ್ಲಿ  ದುಡಿದಿದ್ದೇನೆ. ಸಂಶೋಧನಾ ಚಟುವಟಿಕೆ ನಡೆಸುವ ವೇಳೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳ ಪಾತ್ರ ಅಪಾರವಾದುದು" ಎಂದಿದ್ದಾರೆ..

"ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌. ಸಿ.ವಿ. ರಾಮನ್‌ ಅವರು. ನನಗಾಗ 11 ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ. ಸಿ.ವಿ. ರಾಮನ್‌ ಭಾರತರತ್ನ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸಾಲಿನಲ್ಲಿ ಸೇರ್ಪಡೆಯಾಗುತ್ತಿರುವುದರಿಂದ ಸಂತೋಷ ಇಮ್ಮಡಿ ಯಾಗಿದೆ. ಆದರೆ, ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವರೊಬ್ಬ ಮಹಾನ್‌ ವಿಜ್ಞಾನಿ"  ಎಂದು  ಪ್ರೊ. ರಾವ್  ಅಭಿಪ್ರಾಯಪಟ್ಟಿದ್ದಾರೆ.

"ಭಾರತದ ಭವಿಷ್ಯ ಯುವಜನರ ಕೈಯಲ್ಲಿ ಇದೆ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಯುವ ಜನರ ಸಂಖ್ಯೆ ಜಾಸ್ತಿ ಇದೆ. ಯುವಜನರು ಕಠಿಣ ಪರಿಶ್ರಮಿಗಳಾಗಬೇಕು. ಈ ಭಾರತರತ್ನ ಅವರಿಗೆ ಸ್ಫೂರ್ತಿ ಯಾಗಬೇಕು" ಎಂದು ಆಶಿಸಿದ್ದಾರೆ.

"ಭಾರತರತ್ನ ಗೌರವಕ್ಕೆ ಪಾತ್ರರಾದ ಸಚಿನ್‌ ತೆಂಡೂಲ್ಕರ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ವಿಜ್ಞಾನ ಹಾಗೂ ಕ್ರಿಕೆಟ್‌ ನಡುವೆ ಹೋಲಿಕೆ ಮಾಡುವುದು ಬೇಡ" ಎಂದು ಅವರು ವಿನಂತಿಸಿದ್ದಾರೆ.

ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಯ ಮಗನಾದ ಚಿಂತಾಮಣಿ ಪ್ರೊ. ನಾಗೇಶ ರಾಮಚಂದ್ರರಾವ್‌ ಅವರು, 1934ರ ಜೂನ್‌ 30ರಂದು ಬೆಂಗಳೂರಿನಲ್ಲಿ ಜನಿಸಿದರು. 1951ರಲ್ಲಿ  ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದ ಅವರಿಗೆ ಉತ್ತಮ ಸಂಬಳದ ನೌಕರಿ ಸಿಗುವುದು ಕಷ್ಟವಾಗಿರಲಿಲ್ಲ.

ಆದರೆ ಜ್ಞಾನದಾಹಿಯಾಗಿದ್ದ ರಾವ್‌ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ವಿಜ್ಞಾನ ಮಂದಿರದಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನಲ್ಲಿ)  ಡಿಪ್ಲೋಮಾ ಮಾಡುವ ಉದ್ದೇಶ ಹೊಂದಿದ್ದ ಅವರಿಗೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿಗೆ ಪ್ರವೇಶ ಲಭಿಸಿದ್ದರಿಂದ ಅವರ ವಿಜ್ಞಾನ ಕಲಿಕೆ ಯಾತ್ರೆ ತಡೆಯಿಲ್ಲದೆ ಸಾಗಿತು. 1958ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದ ಅವರು  1959ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ  ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ 1963ರಲ್ಲಿ ಕಾನ್ಪುರದ ಐಐಟಿಗೆ ಸೇರಿದರು.

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು  ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂಇಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌  ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪುತ್ರಿ ಸುಚಿತ್ರಾ ರಾವ್‌ ಅವರ ಪತಿ ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.

ವಿಜ್ಞಾನವೇ ನನ್ನ ಉಸಿರು. ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರಪಟ್ಟಕ್ಕೆ ಏರಬೇಕು. ಚೀನಾ, ದಕ್ಷಿಣ ಕೋರಿಯಾದಂತಹ ರಾಷ್ಟ್ರಗಳಿಗಿಂತ ಮಂಚೂಣಿಯಲ್ಲಿ ನಮ್ಮ ದೇಶ ಕಾಣಿಸಿಕೊಳ್ಳಬೇಕುಎನ್ನುತ್ತಾರೆ ಪ್ರೊ.ಸಿ.ಎನ್‌. ಆರ್‌.ರಾವ್.

ಈ ಮಹಾನ್ ಸಾಧಕರೂ ನಮ್ಮ ಕನ್ನಡಿಗರೂ ಆದ ಪ್ರೊ. ಸಿ. ಎನ್. ಆರ್. ರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ.  ಈ ಮಹಾನ್ ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆಯ ಹೆಮ್ಮೆಯ ಪುತ್ರರಿಗೆ ಗೌರವಯುತ ಅಭಿನಂದನೆ ಮತ್ತು ಅಭಿವಂದನೆ.


ಮಾಹಿತಿ ಕೃಪೆ: ಪ್ರಜಾವಾಣಿ

Tag: Prof. C. N. R. Rao

ಕಾಮೆಂಟ್‌ಗಳಿಲ್ಲ: