ಭಾನುವಾರ, ನವೆಂಬರ್ 3, 2013

ದೀಪಾವಳಿಯಲ್ಲಿ ಮಹಾಲಕ್ಷ್ಮಿ


ದೀಪಾವಳಿಯಲ್ಲಿ ಮಹಾಲಕ್ಷ್ಮಿ

ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿಪೂಜೆಯ ಮಹತ್ವದ ಬಗ್ಗೆ ಒಮ್ಮೆ ವಿದ್ವಾಂಸರ ಬಳಿ ಕೇಳಿದಾಗ ಅವರೆಂದರು, ಲಕ್ಮಿ ಕ್ಷೀರಸಾಗರದಿಂದ ಉದ್ಭವಿಸಿದ ದಿನವಿದು ಎಂದು.  ಹಾಗಾಗಿ ಕ್ಷೀರಸಾಗರದಲ್ಲಿ ಲಕ್ಷ್ಮಿ ಉದಿಸಿದ ಕಥಾನಕದ ನೆನಪಾಯಿತು.

ಸಮುದ್ರಮಥನದ ಸಂದರ್ಭದಲ್ಲಿ ಕಾಮಧೇನು ಹುಟ್ಟಿಬಂತು.  ಉಚ್ಚೈಶ್ರವಸ್ಸು ಎಂಬ ಶ್ರೇಷ್ಠ ಕುದುರೆ ಹುಟ್ಟಿಬಂತು.  ಐರಾವತವೆಂಬ ಆನೆ ಬಂತು.  ಹಿಮವತ್ಪರ್ವತದಂತೆ ಬೆಳ್ಳಗೆ ಬೆಳಗುತ್ತಿದ್ದ ನಾಲ್ಕು ದಂತಗಳ ಆ ಆನೆಯ ಹಿಂದೆಯೇ ಎಂಟು ದಿಗ್ಗಜಗಳೂ ಅವುಗಳ ರಾಣಿಯರೂ ಉದಿಸಿಬಂದರು.   ಕಮಲದಂತೆ ಕೆಂಪಾದ ಕೌಸ್ತುಬರತ್ನ ಹುಟ್ಟಿತು.  ಶ್ರೀಹರಿಯು ಆ ರತ್ನವನ್ನು ತೆಗೆದುಕೊಂಡು ತನ್ನ ಎದೆಯಲ್ಲಿ ಧರಿಸಿದನು.  ಆ ಮೇಲೆ ಕೇಳಿದವರಿಗೆ ಕೇಳಿದುದನ್ನು ಕೊಡುವ ಪಾರಿಜಾತವೇ ಮೊದಲಾದ ಕಲ್ಪವೃಕ್ಷಗಳೂ, ಲೋಕವನ್ನೇ ಮರುಳುಗೊಳಿಸುವ ಮೋಹಕ ರೂಪಿನ ಅಪ್ಸರೆಯರೂ ಹುಟ್ಟಿದರು.  ಅವರ ಹಿಂದೆಯೇ ಮಹಾಲಕ್ಷ್ಮಿ ಮೂಡಿ ಬಂದಳು. 

ಮಿಂಚಿನ ಬಳ್ಳಿಯಂತೆ ದಶದಿಕ್ಕುಗಳನ್ನೂ ಬೆಳಗುತ್ತಾ ಹೊರಬಂದ ಲಕ್ಷ್ಮಿಯ ರೂಪ ಲಾವಣ್ಯವನ್ನು ಬಣ್ಣಿಸಲು ಮಾತಿಗೆ ಶಕ್ತಿ ಸಾಲದು.  ಆಕೆಯ ಬಣ್ಣ, ರೂಪ, ಯೌವನಗಳನ್ನು ಕಂಡು, ದೇವದಾನವರೆಲ್ಲರೂ ಮೈಮರೆತು, ಮರುಳಾಗಿ ನನಗೆ-ತನಗೆಎಂದು ತಹತಹಪಟ್ಟರು.  ದೇವೆಂದ್ರನು ಆಕೆ ಕುಳಿತುಕೊಳ್ಳಲೆಂದು ಒಂದು ಸಿಂಹಾಸನವನ್ನು ತಂದುಹಾಕಿದನು.  ದೇವತೆಗಳೂ ಋಷಿಗಳೂ ಆಕೆಗೆ ಕಾಣಿಕೆಯನ್ನು ತಂದಿತ್ತರು.  ಬ್ರಹ್ಮನು ಆಕೆಗೆ ಒಂದು ಲೀಲಾಕಮಲವನ್ನು ಕೊಟ್ಟನು.  ಸರಸ್ವತಿ ಮುತ್ತಿನ ಹಾರವನ್ನು ಸಮರ್ಪಿಸಿದಳು.  ಬಂಗಾರದ ಬಳ್ಳಿಯಂತಿದ್ದ ಲಕ್ಷ್ಮೀದೇವಿಯು ತನಗೊಪ್ಪಿಸಿದ ಮರ್ಯಾದೆಗಳನ್ನೆಲ್ಲಾ ಸ್ವೀಕರಿಸುತ್ತಾ ಮುಗುಳ್ನಗೆಯೊಡನೆ ಬೆರೆತ ಮಧುರವಾದ ನೋಟದಿಂದ ಒಮ್ಮೆ ಎಲ್ಲರನ್ನೂ ನೋಡಿದಳು.  ಅನಂತರ ಶ್ರೀಹರಿಯ ಕೊರಳಲ್ಲಿ ಕಮಲದ ಹಾರವನ್ನು ಹಾಕಿ, ಆತನ ಹೃದಯದಲ್ಲಿ ನೆಲೆಸಿದಳು.  ಆ ಶುಭಮುಹೂರ್ತದಲ್ಲಿ ಹೂಮಳೆಗರೆಯಿತು.  ಗಂಧರ್ವರು ಗಾನಮಾಡಿದರು.  ಅಪ್ಸರೆಯರು ನರ್ತಿಸಿದರು.  ಲೋಕವೆಲ್ಲ ಆನಂದದಿಂದ ತುಂಬಿ ನಲಿಯಿತು. 

ಲಕ್ಷ್ಮಿದೇವಿಯು ಹುಟ್ಟಿದೊಡನೆಯೇ ಸಮುದ್ರವನ್ನು ಕಡೆಯುವ ಕೆಲಸ ನಿಂತು ಹೋಗಿತ್ತಂತೆ.  ಆಕೆಯ ಸ್ವಯಂವರ ನೆರವೇರುತ್ತಲೇ ಆ ಕೆಲಸ ಮುಂದುವರೆಯಿತು.


(ಕೃಪೆ: ತ.ಸು. ಶಾಮರಾಯರ ವಚನಭಾಗವತ’)

ಕಾಮೆಂಟ್‌ಗಳಿಲ್ಲ: