ಶನಿವಾರ, ನವೆಂಬರ್ 23, 2013

ಅರುಂಧತಿ ರಾಯ್


ಅರುಂಧತಿ ರಾಯ್

ಅರುಂಧತಿ ರಾಯ್ ಅವರು ೧೯೬೧ರ ನವೆಂಬರ್ ೨೪ರಂದು ಜನಿಸಿದರು.  ಪ್ರಖ್ಯಾತ ಕಾದಂಬರಿಗಾರ್ತಿ, ಹಲವಾರು ಆಂದೋಲನಗಳ ನಾಯಕಿ ಹಾಗೂ ವಿಶ್ವ ಪ್ರಜೆ ಎಂದು ಅವರ ಪ್ರಸಿದ್ಧಿ ಹಬ್ಬಿದೆ. ಅಂತೆಯೇ ಇತ್ತೀಚಿನ ದಿನಗಳಲ್ಲಿನ ಅವರ ವಿವಾದಾತ್ಮಕ ನಿಲುವುಗಳು ಕೂಡ ಜನರ ಹುಬ್ಬೇರಿಸುವಂತೆ ಮಾಡಿವೆ.  ೧೯೯೭ರ ವರ್ಷದಲ್ಲಿ ಅವರ ಕಾದಂಬರಿ ‘The God of Small Things’ ಪುಸ್ತಕಕ್ಕೆ ವಿಶ್ವ ಪ್ರಸಿದ್ಧ ಬೂಕರ್ ಬಹುಮಾನಲಭಿಸಿತು.

ರಾಯ್ ಅವರು ಮೇಘಾಲಯದ ಶಿಲ್ಲಾಂಗ್ ನಲ್ಲಿ ಕೇರಳ ಮೂಲದ ಸಿರಿಯನ್ ಕ್ರೈಸ್ತ ಮತಾನುಯಾಯಿ ತಾಯಿ ಮತ್ತು ಟೀ ಪ್ಲಾಂಟರ್ ಆದ ಬೆಂಗಾಳಿ ಹಿಂದೂ ಮತೀಯ ತಂದೆಗೆ ಜನಿಸಿದರು.  ತನ್ನ ಬಾಲ್ಯದ ದಿನಗಳನ್ನು ಕೇರಳದಲ್ಲಿ ಕಳೆದ ಅರುಂಧತಿ ಅವರು ಕಾರ್ಪಸ್ ಕ್ರಿಸ್ತಿಯಲ್ಲಿ ಓದಿದರು.  ತಮ್ಮ ಹದಿನಾರನೇ ವಯಸ್ಸಿನಲ್ಲಿ ತಮ್ಮ ಕೇರಳದ ಮನೆ ಬಿಟ್ಟು ಹೊರಟ ಅವರು ನಿರ್ಗತಿಕ ಮಾದರಿಯ ಜೀವನವನ್ನು ಅನುಸರಿಸುವ ಎದೆಗಾರಿಕೆ ತೋರಿ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ತಗಡಿನ ಚಾವಣಿಯಲ್ಲಿ ಖಾಲಿ ಬಾಟಲುಗಳನ್ನು ಮಾರಿ ಜೀವನ ನಡೆಸಲು ಆರಂಭಿಸಿದರು.  ನಂತರದಲ್ಲಿ Delhi School of Architectureನಲ್ಲಿ ವಿನ್ಯಾಸ ಶಾಸ್ತ್ರವನ್ನು ಓದಿದರು.  ಅದೇ ಶಾಲೆಯಲ್ಲಿ ಆಕೆ ತನ್ನ ಮೊದಲ ಪತಿ ಗೆರಾರ್ಡ್ ಡಾ ಕುನ್ಹಾ ಅವರನ್ನು ಭೇಟಿಯಾಗಿದ್ದು.

‘The God of Small Things’ ಕಾದಂಬರಿಗೆ ಬೂಕರ್ ಪ್ರಶಸ್ತಿಪಡೆದು ವಿಶ್ವ ಖ್ಯಾತರಾದರೂ ಆಕೆ ಮುಂದೆ ಯಾವುದೇ ಕಾದಂಬರಿ ಬರೆಯಲು ಹೋಗಲಿಲ್ಲ.  ಆನಂತರದಲ್ಲಿ ಅವರು ರಾಜಕೀಯ ನಿಲುವುಗಳ ಬಗ್ಗೆ ಹೆಚ್ಚು ಬರೆಯಲು ಪ್ರಾರಂಭಿಸಿದರು.  ನರ್ಮದಾ ಬಚಾವ್ಆಂದೋಲನ, ಭಾರತ ಸರ್ಕಾರದ ಪರಮಾಣು ಶಸ್ತ್ರಗಳಿಗೆವಿರೋಧ, ‘ಎನ್ರಾನ್ಸಂಸ್ಥೆಯ ಭ್ರಷ್ಟ ನೀತಿಗಳಿಗೆ ವಿರೋಧ  ಮುಂತಾದ ಪ್ರಮುಖ ಚಟುವಟಿಕೆಗಳಲ್ಲಿ ಅವರು ಹೆಚ್ಚಿನ ಆಸಕ್ತಿ ತಳೆದರು.  ನವೀನ ರೀತಿಯ ಸಾಮ್ರಾಜ್ಯಶಾಹಿ ವ್ಯವಸ್ಥೆಗಳನ್ನು ಹುಟ್ಟುಹಾಕುತ್ತಿರುವ ಗ್ಲೋಬಲೈಸೇಷನ್ ಎಂಬ ಗುಮ್ಮನ ಬಗ್ಗೆ ಅವರು ತೀವ್ರ ವಿರೋಧಿ ನಿಲುವು ತಳೆದಿದ್ದಾರೆ.

ಪೋಕ್ರಾನ್ ಪರಮಾಣುಸ್ಪೋಟದ ಭಾರತ ಸರ್ಕಾರದ ನಿಲುವನ್ನು ವಿವೇಕಶೂನ್ಯತೆಯ ಪರಮಾವಧಿ’ (The End of Imagination) ಎಂದು ಅರುಂಧತಿ ರಾಯ್ ಅವರು ಅಂದಿನ ದಿನದಲ್ಲಿ ಟೀಕಿಸಿದ್ದರು.  ತಮ್ಮ ಕೃತಿ ‘The Cost of Living’ನಲ್ಲಿ ದೊಡ್ಡ ದೊಡ್ಡ ಅಣೆಕಟ್ಟುಗಳು, ವಿದ್ಯುತ್ ಸ್ಥಾವರಗಳ ನೆಪದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರಕೃತಿ ನಾಶ ಮತ್ತು ಜನಜೀವನಕ್ಕೆ ಒದಗಿರುವ ಸಂಚಕಾರಗಳ ಬಗ್ಗೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ೨೦೦೪ ವರ್ಷದಲ್ಲಿ ಅವರಿಗೆ ಸಿಡ್ನಿ ಶಾಂತಿ ಪುರಸ್ಕಾರ’  ಲಭಿಸಿತು.  ಸಾಮಾಜಿಕ ಹಿತಾಸಕ್ತಿಗಳ ನಿಲುವು ಮತ್ತು ಅಹಿಂಸಾತ್ಮಕ ಪ್ರತಿಪಾದಕರೆಂದು ಆ ಪ್ರಶಸ್ತಿ ಪ್ರತಿಷ್ಟಾನ ಅವರನ್ನು ಕೊಂಡಾಡಿದೆ.  ಈ ಹಿಂದೆ ೨೦೦೨ರ ವರ್ಷದಲ್ಲಿ ಅವರಿಗೆ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತಿಪಾದಕರೆಂದು ಲನ್ನಾನ್ ಪ್ರತಿಷ್ಠಾನದ ಪ್ರಶಸ್ತಿ ಸಹಾ ಲಭಿಸಿತ್ತು.  ೨೦೦೫ನೆ ವರ್ಷದಲ್ಲಿ ಅರುಂಧತಿ ರಾಯ್ ಅವರು ಇರಾಕ್ ಕುರಿತಾದ ವಿಶ್ವ ಟ್ರಿಬ್ಯುನಲ್ನಲ್ಲಿ ಭಾಗವಹಿಸಿದ್ದರು. 

೨೦೦೬ನೆಯ ವರ್ಷದಲ್ಲಿ ‘The Algebra of Infinite Justice’ ಎಂಬ ಅವರ ಕೃತಿಗೆ ಭಾರತದ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿತು.  ಆದರೆ ಅವರು ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ  ಅದನ್ನು ಸ್ವೀಕರಿಸಲು ನಿರಾಕರಿಸಿದರು.

ಭಾರತದ ಇತ್ತೀಚಿನ ದಶಕಗಳ ಗಂಭೀರ ಸವಾಲುಗಳಾದ ನಕ್ಸಲರಪರವಾಗಿನ ಅರುಂಧತಿ ರಾಯ ಅವರ ನಿಲುವುಗಳು ಭಾರತೀಯ ಮನಗಳನ್ನು ಗಲಿಬಿಲಿಗೆ ತಂದಿಟ್ಟಿವೆ.  ಅದಕ್ಕೂ ಮಿಗಿಲಾದ ಕಾಶ್ಮೀರಎಂದೂ ಭಾರತದ ಭಾಗವಾಗೇ ಇರಲಿಲ್ಲ ಎಂಬ ಅವರ ಮಾತು ಮತ್ತು ಕಾಶ್ಮೀರ ಪ್ರತ್ಯೇಕತಾ ವಾದಕ್ಕೆಅವರು  ಘೋಷಿಸಿರುವ ಬೆಂಬಲ, ಕೇವಲ ಅರುಂಧತಿ ಅವರ ಬಗ್ಗೆ ಅಲ್ಲದೆ ನಾವು ಎತ್ತ ಸಾಗುತ್ತಿದ್ದೇವೆಎಂಬ ಬಗ್ಗೆ ಭಾರತೀಯ ಸಾಮಾನ್ಯ ಮನಗಳಿಗೆ ದಿಗ್ಭ್ರಾಂತಿ ಹುಟ್ಟಿಸಿಬಿಟ್ಟಿದೆ.


ಕಾಮೆಂಟ್‌ಗಳಿಲ್ಲ: