ಬುಧವಾರ, ನವೆಂಬರ್ 13, 2013

ಅಜ್ಞಾತನೊಬ್ಬನ ಆತ್ಮಚರಿತ್ರೆಇತ್ತೀಚಿನ ದಿನಗಳಲ್ಲಿ ಅಪಾರವಾಗಿ ಕೇಳಿಬಂದ  ಕೃಷ್ಣಮೂರ್ತಿ ಹನೂರು ಅವರ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕಾದಂಬರಿಯನ್ನು ಕಳೆದರಡು ದಿನಗಳಲ್ಲಿ ಓದಿದೆ.

ಮಾನವನ ಚರಿತ್ರೆಯಲ್ಲಿ ನಾವು ಕನಸುವ ಶ್ರೇಷ್ಟತೆಯೆಂಬುದು ಅಜ್ಞಾತವಾಗಿದ್ದರೂ, ನಾವು ಮಾಡುತ್ತಿರುವುದೆಲ್ಲಾ ಮತ್ತೊಬ್ಬರ ಕಣ್ಣಿಗೆ ಅಜ್ಞಾತವಾಗಿರುತ್ತದೆ ಎಂದುಕೊಂಡು ಎಸಗುವ ಕೃತ್ಯಗಳೆಲ್ಲಾ  ನಿರಂತರವಾಗಿ ಕೆಸರಿನ ಹಾದಿಯೇ ಹಿಡಿದು, ಆ ಕೆಸರಿನಲ್ಲಿ ಎಂದೋ ಒಂದು ದಿನ ನಾವೇ ಹೂತುಹೋದಾಗ, ಅದು ನೀಡುವ ತಿವಿತವಿದೆಯೆಲ್ಲ ಅದರಿಂದ ತಪ್ಪಿಸಿಕೊಳ್ಳುವುದು ಆಸಾಧ್ಯ.  ಒಂದು ರೀತಿಯಲ್ಲಿ ಅದು ನಾವು ಮಾಡಿದ್ದನ್ನು ಮನನ ಮಾಡಿಕೊಂಡು ನಾವು ತಪ್ಪಿದ್ದೆಲ್ಲಿ ಎಂಬುದನ್ನು ತೋರಿಸಿಕೊಡುವುದರ ಜೊತೆಗೆ, ನಾವು ಏನನ್ನು ತುಂಬಿಕೊಂಡು ಸಿರಿವಂತಿಕೆಯಿಂದ ಬದುಕಬೇಕೆಂದು ಕನಸಿದ್ದೆವೋ ಅದು ಮೂರ್ಖತನದ್ದು, ಸಿರಿವಂತಿಕೆ ಇದ್ದದ್ದು ನಾವು ಏನೂ ಅಲ್ಲವೆಂದು ಕಡೆಗಣಿಸಿದ್ದ ಸಾಧಾರಣತೆಯಲ್ಲಿ ಎಂಬುದನ್ನು ಮನಗಾಣಿಸಿಕೊಡುತ್ತಿರುವ ವೇಳೆಯಲ್ಲೇ, ಅದಕ್ಕೆ ಕೈಚಾಚುವ ಮನ ಮೂಡುತ್ತಿರುವಾಗ ಆ ಕೈಯೇ ನಿಃಶ್ಯಕ್ತಗೊಂಡಿರುತ್ತದೆ. 

ಸತ್ಯವೆಂಬುದು ಸಾರ್ವಕಾಲಿಕವಾದರೂ ಮನುಷ್ಯ ಅದಕ್ಕೆ ಅಂಟಿಕೊಳ್ಳುವುದು ಅಪರೂಪ.  ಎಂದೋ ಯಾರೋ ಆ ಹಾದಿಯಲ್ಲಿ ನಡೆದಿದ್ದು ಹೌದಾದರೂ, ಆ ಹಾದಿಯಲ್ಲಿ ಎಂದೂ ನಡೆಯದ ಮಾನವ,  ಅದನ್ನು ತನ್ನದು ಎಂದು ಹೇಳಿಕೊಳ್ಳುವ ಪ್ರತಿಷ್ಟೆಗೆ ಸಿಲುಕಹೋಗಿ ಮತ್ತೊಂದು ಅಸತ್ಯದ ದೊಡ್ಡ ಮಹಲನ್ನು ಸೃಷ್ಟಿಸಿರುತ್ತಾನೆ.  ಇಂಥಹ ಸ್ಥಾವರಗಳು ಅನಾದಿಕಾಲದಿಂದಲೂ ಮೂಡಿಬರುತ್ತಿದ್ದು, ನಾವು ಬದಲಾಗುತ್ತಿರುವ ಪ್ರಪಂಚದಲ್ಲಿದ್ದೇವೆ ಎಂದು ಭ್ರಮೆ ಹಿಡಿದಿದ್ದ ನಮಗೆ ಎಂದೋ ಇವೆಲ್ಲಾ ಇಲ್ಲವಾಗಬಹುದೇನೋ ಎಂಬ ಅನಿಸಿಕೆ ಬಹಳಷ್ಟು ವೇಳೆ ಮೂಡಿದ್ದಿದು ನಿಜ.  ಆದರೆ ಚರಿತ್ರೆಯ ಪುಟಗಳನ್ನು ತುಂಬುವುದಕ್ಕೋಸ್ಕರವೇ ಸ್ಥಾವರಗಳೂ, ಅದಕ್ಕೆ ವಿವಿಧ ಹೆಸರಿನ ಅಧಿಪತಿಗಳು, ಹಿಂಬಾಲಕರುಗಳು ಮುಂತಾದ ವ್ಯವಸ್ಥೆಗಳು ಮಾತ್ರ ನಿರಂತರ  ಏಳುತ್ತಲೇ ಇವೆ. 

ಇವೆಲ್ಲವುಗಳ ಆಳದಲ್ಲಿ ಈ ವ್ಯವಸ್ಥೆಗಳು ನಡೆಸಿರುವ ಲೂಟಿ, ಅಮಾಯಕರ ಹಿಂಸೆ, ಮೆರೆದಿರುವ ಹಿಂಸೆ – ಅಹಂಕಾರ - ನಂಬಿಕೆ ದ್ರೋಹ, ಪ್ರಕೃತಿ ನಾಶ ಇವುಗಳೆಲ್ಲ ಏನನ್ನು ಹೇಳುತ್ತಿವೆ, ಈ ಅಮಾಯಕ ಜೀವಿಗಳಿಗೇಕೆ ಇಷ್ಟೊಂದು ಹಿಂಸೆ ಎಂಬ ಪ್ರಶ್ನೆ ಕಾಡುತ್ತದೆ.   ಪ್ರಪಂಚದಲ್ಲಿ ಒಂದುಕಡೆ ದುಃಖನಿರ್ಮಾಣಕಾರಕ ಅಧಿಕಾರಿಶಾಹಿ ವ್ಯವಸ್ಥೆಯಾದರೆ ಮತ್ತೊಂದು ಕಡೆ  ದುಃಖಾನುಭವವನ್ನೇ ಬದುಕು ಮಾಡಿಕೊಂಡು ವಿಧೇಯತೆಯ ಸೋಗು ಹಾಕಿಕೊಂಡು  ಕ್ಷಣಿಕ ಸುಖ ಯಾವಾಗಲಾದರೂ ಸಿಕ್ಕೀತೇನೋ ಎಂಬ ಭ್ರಮೆಯಲ್ಲಿ ಬದುಕುವ ಊಳಿಗ ಸಮಾಜ ಈ ಎರಡೂ ಒಂದಕ್ಕೊಂದು ಪೂರಕವೆಂಬಂತೆ ಚರಿತ್ರೆಯನ್ನು ರಕ್ತದೋಕುಳಿಯಲ್ಲಿ ತೇಲಿಸತೊಡಗುತ್ತಾ ತಾನೂ ಅದರ ನೆರಳಿನಲ್ಲೇ ಬದುಕುತ್ತಿರುವ ಭಯದಲ್ಲಿ ಒಂದು ದಿನ ಅದರೊಳಗೇ ಕುಸಿಯುತ್ತಲೇ ಸಾಗಿವೆ.   ಇವೆಲ್ಲವುಗಳನ್ನು ಮೀರಿದ್ದು ಮತ್ತೊಂದು ಯಾವುದೋ ಈ ಬದುಕಿನ ಪ್ರವಹಿನಿಯಲ್ಲಿ ಸಾಕ್ಷಿ ಎಂಬಂತೆ, ಹೊರಗಿರುವ ಯಾವುದನ್ನೂ ತನ್ನದೆಂದು ಭಾವಿಸದೆ, ಎಲ್ಲವನ್ನೂ ತನ್ನದಾಗಿಸಿಕೊಂಡಿರುವ ಅನಂತವಾಹಿನಿಯಾಗಿ ಹರಿಯುತ್ತಲೇ ಇದ್ದು, ಅದನ್ನು ಕಾಣುವ ಕಣ್ಣಿದ್ದವರಿಗೆ ಮಾತ್ರ ಅಷ್ಟಷ್ಟು ತೋರಿ ಸಾಗುತ್ತಲೇ ಇದೆ.  ಜೊತೆಗೆ ಅದರ ಕಿರುರೂಪವಾಗಿ ಕಲೆ, ಕಥಾನಕ ರೂಪಗಳ ಹಲವು ಮಿಂಚುಗಳಂತೆ ಜನಪದದಲ್ಲಿ ಬೆರೆತುಕೊಂಡಿದೆ.  ಅದು ಚರಿತ್ರೆಯ ಭಾಗವಂತೂ ಅಲ್ಲ!  ಚರಿತ್ರೆ ಎಂಬುದು ನಮಗೆ ಬೇಕಿದ್ದಂತೆ ಒಂದನ್ನು ವೈಭವೀಕರಿಸಿ ಮತ್ತೊಂದನ್ನು ತುಚ್ಛವಾಗಿರಿಸಿಕೊಂಡು ನಮ್ಮದೊಂದು ಹೊಸ ಸುಳ್ಳನ್ನು ಚರಿತ್ರೆಯಾಗಿ ಪ್ರತಿಷ್ಠಾಪಿಸುವ ಹುಂಬ ಹಂಬಲ.  ಸತ್ಯಕ್ಕೆ ಅದರ ಅವಶ್ಯಕತೆಯಿಲ್ಲ.   

ಮೇಲೆ ಹೇಳಿದ್ದೆಲ್ಲಾ ಕೃಷ್ಣಮೂರ್ತಿ ಹನೂರರ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕೃತಿಯನ್ನು ಓದಿದ ಅನುಭವವನ್ನು ಪುಟಕ್ಕಿಳಿಸುತ್ತಿರುವಾಗ ಮೂಡಿದ ಲಹರಿಗಳು.  ಒಂದು ಕೃತಿಯನ್ನು ಓದುವಾಗ ಅದು ನಮ್ಮಲ್ಲಿ  ಮೂಡಿಸುವ  ಲಹರಿಯಷ್ಟೇ ನಮಗೆ ದಕ್ಕುವ ಆಪ್ತತೆ.  ಈ ಲಹರಿಯಲ್ಲಿದ್ದ ನನ್ನ  ಈ  ಪುಸ್ತಕದ ಓದು ನನಗೆ ಆಪ್ತತೆ ಹುಟ್ಟಿಸಿತು. 

ಆದರೆ ಈ  ಮೇಲ್ಕಂಡ ಮಾತುಗಳೆಲ್ಲ ಕೃತಿಯ ಬಗ್ಗೆ ಏನೇನೂ ಹೇಳದಿರುವ ಸಾಧ್ಯತೆ ಇಲ್ಲದಿಲ್ಲ.  ಈ ನಿಟ್ಟಿನಲ್ಲಿ ಪುಸ್ತಕದ ಹಿಂಬದಿಯಲ್ಲಿ ಗಿರೀಶ ಕಾರ್ನಾಡರು ಬರೆದಿರುವ ಈ ಮಾತುಗಳು ಓದುಗರಿಗೆ ಉಪಯುಕ್ತವಾದೀತು - “ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತಾಗಿದೆ.  ಇದು ಇತಿಹಾಸವೋ, ದಂತಕತೆಯೋ, ಜಾನಪದ ಆಖ್ಯಾಯಿಕೆಯೋ, ಕಾವ್ಯಮಯ ಕಥನವೋ ಎಂದು ವರ್ಗೀಕರಿಸಲು ಯತ್ನಿಸುವುದು ಅದರ ಶ್ರೀಮಂತ ಕ್ರಿಯಾಪರಿಸರಕ್ಕೇ ಅನ್ಯಾಯ ಬಗೆದಂತೆ.  ಟೀಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕಥಾನಕ ಈ ಎಲ್ಲ ಪ್ರಕಾರಗಳನ್ನು ಬಳಸುತ್ತ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಜಾರುತ್ತ, ದೇಶಕಾಲಗಳ ಸೀಮೆ ದಾಟುತ್ತ, ಹಿಮ್ಮೆಟ್ಟುತ್ತ ಹೋಗುತ್ತದೆ.  ಕೃಷ್ಣಮೂರ್ತಿ ಹನೂರರ ಬರವಣಿಗೆಯ ಅದ್ಭುತ ಚಿತ್ರಕ ಶಕ್ತಿ ಈ ಎಲ್ಲ ಬೇರೆ ಬೇರೆ ಲೋಕಗಳ ವಾಸ್ತವ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಪುನಃಸೃಷ್ಟಿಸುತ್ತದೆ.  ಅದರ ಜೊತೆಗೇ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತುಮುಲಗಳ ನೈಜತೆ ಕೂಡ ಒಮ್ಮೆ ಓದಲಾರಂಭಿಸಿದರೆ ಕೊನೆಯ ಪುಟದವರೆಗೂ ಕೆಳಗಿಡಲಾಗದಂತೆ ವಾಚಕನನ್ನು ತನ್ನ ಸೆಳವಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ.  ಹನೂರರ ವಿದ್ವತ್ತೆ, ಕಲ್ಪನಾ ಶಕ್ತಿ, ಇವೆರಡನ್ನೂ ತಳಕು ಹಾಕಿರುವ ಸ್ವೋಪಜ್ಞತೆ ಬೆರಗುಗೊಳಿಸುವಂಥವು.”1 ಕಾಮೆಂಟ್‌:

shnkarsv ಹೇಳಿದರು...

Where can I download this book?(like e-book downloading by paying online).I would like to buy not only this book butalso other author books.kindly guide me)