ಗುರುವಾರ, ನವೆಂಬರ್ 7, 2013

ಚಿರಂಜೀವಿ ಸಿಂಗ್ಅಧಿಕಾರಿಗಳು ಹೇಗಿರಬೇಕೆಂದು ತೋರಿಸಿಕೊಟ್ಟ ಚಿರಂಜೀವಿ ಸಿಂಗ್-ಎಸ್. ಸುರೇಶ್ ಕುಮಾರ್

ಇದು ಸುಮಾರು 35 ವರ್ಷಗಳ ಹಿಂದಿನ ಘಟನೆ. ಅವರು ನಮ್ಮ ರಾಜ್ಯ ಕಂಡ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಅಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿತ್ತು. ಹಿಂದಿನ ದಿನ ಆ ಮುಖ್ಯಮಂತ್ರಿಗಳು ನಮ್ಮ ರಾಷ್ಟ್ರದ ಪ್ರಖರ ಹೋರಾಟಗಾರರೆಂದೇ ಪ್ರಸಿದ್ದಿ ಪಡೆದಿದ್ದ ಅಂದಿನ ಕೇಂದ್ರ ಮಂತ್ರಿಯೊಬ್ಬರ ಕುರಿತು ಒಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು. ಅದು ಅಂದಿನ ಎಲ್ಲಾ ಪತ್ರಿಕೆಗಳಲ್ಲಿ ಅದರಲ್ಲಿಯೂ  ಪ್ರಮುಖವಾಗಿ ದೆಹಲಿಯ ಪತ್ರಿಕೆಗಳಲ್ಲಿ ಪ್ರಕಟವಾಗಿ ದೆಹಲಿ ನಾಯಕರೂ ಅದಕ್ಕೆ ಅತ್ಯಂತ ತೀವ್ರವಾದ ಪ್ರತಿಕ್ರಿಯೆಯನ್ನು ನೀಡಿಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಮುಖ್ಯಮಂತ್ರಿಗಳ ಸ್ಪಷ್ಟೀಕರಣ ಬಯಸಿದರು. ಆಗ ತಮ್ಮ ಹಿಂದಿನ ದಿವಸದ ಹೇಳಿಕೆ ತಪ್ಪಾಗಿ ಗ್ರಹಿಸಲ್ಪಟ್ಟಿದೆ ಎಂದು ಸ್ಪಷ್ಟೀಕರಣ ನೀಡಲು ಮುಖ್ಯಮಂತ್ರಿಗಳು ಆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಾರ್ತಾ ಇಲಾಖೆಯ ನಿರ್ದೇಶಕರಿಗೆ ಸೂಚನೆ ಇತ್ತರು. ಆಗ ಆ ಅಧಿಕಾರಿ ಎದ್ದು ನಿಂತು ತನ್ನ ಎಂದಿನ ಮೆಲುಧ್ವನಿಯಲ್ಲಿಯೇ, ಆದರೆ ಸ್ಪಷ್ಟವಾಗಿ "ನಾನು ಆ ರೀತಿ ಸ್ಪಷ್ಟೀಕರಣ ಕೊಡಲು ಸಾಧ್ಯವಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆಯೇ ಹೇಳಿಕೆ ನೀಡಿದಾಗ ನಾನು ಅಲ್ಲಿಯೇ ಉಪಸ್ಥಿತನಿದ್ದೆ" ಎಂದು ತಿಳಿಸಿದರು. ಎಲ್ಲಾ ಪತ್ರಕರ್ತರು ಆ ಅಧಿಕಾರಿಯ ಸತ್ಯಸಂಧತೆ, ನಿಷ್ಠುರತೆಯನ್ನು ಕಂಡು ನಿಬ್ಬೆರಗಾದರು. ತಕ್ಷಣವೇ ಸಾವರಿಸಿಕೊಂಡ ಮುಖ್ಯಮಂತ್ರಿಗಳು "ಹೋಗಲಿ ಬಿಡಿ, ನಾನೇ ಸ್ಪಷ್ಟೀಕರಣ ಕೊಡುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ" ಎಂದು ವಿವಾದಕ್ಕೆ ತೆರೆ ಎಳೆದರು!

ಇಂದು ಆ ರೀತಿಯ ಅಧಿಕಾರಿಯನ್ನು ಸಹಿಸಿ ಒಪ್ಪಿಕೊಳ್ಳುವಂತಹ ಮುಖ್ಯಮಂತ್ರಿಗಳನ್ನು ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಅಂದ ಹಾಗೆ ದೇವರಾಜ ಅರಸುರವರೇ ಆ ಮುಖ್ಯಮಂತ್ರಿಗಳು ಮತ್ತು ಆ ಅಧಿಕಾರಿ, 1971 ರಲ್ಲಿ ಸೇವೆಗೆ ಸೇರಿದ ಚಿರಂಜೀವಿಸಿಂಗ್. ಕರ್ನಾಟಕ ರಾಜ್ಯ ಅನೇಕ ಉತ್ತಮ ಹಾಗೂ ಅತ್ಯುತ್ತಮ ಅಧಿಕಾರಿಗಳನ್ನು ಕಂಡಿದೆ. ಅಧಿಕಾರಿಗಳು ಎಂದ ತಕ್ಷಣ ಮನಸ್ಸಿಗೆ ಬರುವುದು ಭ್ರಷ್ಟತನ, ಅಪ್ರಾಮಾಣಿಕತೆ, ಅಹಂಕಾರ, ಸಂವೇದನಾ ರಹಿತ ನಡವಳಿಕೆ, ಜನರನ್ನು ಕಂಡರೆ ತಿರಸ್ಕಾರ, ತಮ್ಮ ಕೆಲಸದ ಬಗ್ಗೆ ಉಡಾಫೆತನ, ಎದುರಿಗೆ ಕುಳಿತವನ ಸಂಕಷ್ಟವನ್ನು ಕೇಳುವಷ್ಟು ಇಲ್ಲದ ವ್ಯವಧಾನ, ಇತ್ಯಾದಿ. ರಾಜಕಾರಣಿಗಳನ್ನು ಹೊರತು ಪಡಿಸಿದರೆ ಜನರು ಸಂಶಯದಿಂದ ಹಾಗೂ ಅವಿಶ್ವಾಸದಿಂದ ಕಾಣುವುದು ಅಧಿಕಾರಿ ವರ್ಗವನ್ನು. ಈ ಗುಣಗಳಿಗೆಲ್ಲ ಸಂಪೂರ್ಣ ವ್ಯತಿರಿಕ್ತವಾಗಿರುವ ಅಧಿಕಾರಿಗಳು ಹಿಂದೆಯೂ ಇದ್ದರು ಹಾಗೂ ಈಗಲೂ ಇದ್ದಾರೆ ಎಂದು ಯಾರಾದರೂ ಹೇಳಿದರೆ ಬಹುತೇಕ ಮಂದಿ ಆ ರೀತಿ ಹೇಳಿದವನನ್ನೇ ವಿಚಿತ್ರವಾಗಿ ನೋಡುವ ಸಾಧ್ಯತೆ ಹೆಚ್ಚು.

ನಮ್ಮ ರಾಜ್ಯದ ಯಾವುದೇ ಅಧಿಕಾರಿಯನ್ನು ಚಿರಂಜೀವಿ ಸಿಂಗ್‌ರ ಬಗ್ಗೆ ವಿಚಾರಿಸಿದರೆ ಅವರಿಂದ ಬರುವುದು ಗೌರವ ಹಾಗೂ ಮೆಚ್ಚುಗೆಯ ಮಾತುಗಳೇ. ತಮ್ಮ ಜನಪರ ಗುಣಕ್ಕೆ ಪ್ರಸಿದ್ಧರಾಗಿರುವ ಇನ್ನೋರ್ವ ಹಿರಿಯ ಅಧಿಕಾರಿಯೊಬ್ಬರಂತೂ  ಚಿರಂಜೀವಿಸಿಂಗ್‌ರನ್ನು "ಅಧಿಕಾರಿ ವರ್ಗದಲ್ಲಿಯೇ ಓರ್ವ ಸಂತ" ಎಂದು ಬಣ್ಣಿಸಿದ್ದೂ ಉಂಟು. ಚಿರಂಜೀವಿ ಸಿಂಗ್ ಅವರು ನೋಡಲಿಕ್ಕೂ ಸಂತನ ರೀತಿಯಲ್ಲಿಯೇ ಇದ್ದಾರೆ. ಅವರ ನೀಳವಾದ ಗಡ್ಡ, ಸದಾ ಮಂದಹಾಸದಿಂದ ತುಂಬಿರುವ ವದನ ಹಾಗೂ ಜೇನಿನಂತ ಮನಸ್ಸಿನಿಂದ ಹೊರಹೊಮ್ಮುವ ಸವಿಯಾದ ಮಾತುಗಳು. ದೂರದ ಪಂಜಾಬಿನಿಂದ ಬಂದರೂ ಕರ್ನಾಟಕವನ್ನು, ಕನ್ನಡವನ್ನು, ನಾಡಿನ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಕನ್ನಡದಲ್ಲಿ ಅತ್ಯುತ್ತಮವಾಗಿ ಮಾತನಾಡಿ ಬಹಳ ಅಚ್ಚುಕಟ್ಟಾಗಿ ಬರೆಯುವ ಸಾಮರ್ಥ್ಯ ಬೆಳೆಸಿಕೊಂಡಿರುವ ಚಿರಂಜೀವಿಸಿಂಗ್ ನಾಡು ಕಂಡ ಅತ್ಯಂತ ನಿಸ್ಪೃಹಿ, ತುಂಬು ಅಂತಃಕರಣದಿಂದ ಕೂಡಿದ ಅಧಿಕಾರಿ. ಅವರು ಕನ್ನಡವನ್ನು ಎಷ್ಟರಮಟ್ಟಿಗೆ ತಮ್ಮ ಭಾಷೆ ಮಾಡಿಕೊಂಡಿದ್ದಾರೆಂದರೆ ಒಮ್ಮೆ ಅವರ ಹುಟ್ಟು ರಾಜ್ಯವಾದ ಪಂಜಾಬಿನಿಂದ ಬಂದ ಅಧಿಕಾರಿ ಕಚೇರಿಯ ವ್ಯವಹಾರ ಸಂಬಂಧ ಸರ್ಕಾರಿ ಪತ್ರವೊಂದನ್ನು ಪಂಜಾಬಿ ಭಾಷೆಯಲ್ಲೇ ಬರೆದಿದ್ದರು. ಇದಕ್ಕೆ ಚಿರಂಜೀವಿಸಿಂಗ್  ಕನ್ನಡದಲ್ಲಿಯೇ ಉತ್ತರ ಕಳುಹಿಸಿ ಅವರಿಗೆ ಮೌನವಾಗಿ ಸರಿಯಾದ ಪಾಠ ಕಲಿಸಿದ್ದರು!

"ನನ್ನ ಬಗ್ಗೆ ಯಾವುದೇ ಲೇಖನ, ಪುಸ್ತಕ ದಯವಿಟ್ಟು ಬೇಡ. ಏನೋ ಒಳ್ಳೆಯ ವಿದ್ಯಾಭ್ಯಾಸ ದೊರಕಿತು ಐ.ಎ.ಎಸ್ ತೇರ್ಗಡೆಯಾದೆ. ನನ್ನ ತಂದೆ-ತಾಯಿ ಪುಣ್ಯದಿಂದ ನನಗೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿದೆ" ಎಂದು ಅತ್ಯಂತ ವಿನಮ್ರವಾಗಿ ಹೇಳುತ್ತಾರವರು. ಇಂದಿಗೂ ಅವರು ಜಿಲ್ಲಾಧಿಕಾರಿಯಾಗಿ 30-35 ವರ್ಷಗಳ ಹಿಂದೆ ಕಾರ್ಯ ಮಾಡಿದ ಜಿಲ್ಲೆಗಳಲ್ಲಿ ಹಿರಿಯರನೇಕರು ಅವರನ್ನು ಗೌರವ, ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. ಅವರ ವಿಶ್ವಾಸಾರ್ಹತೆ ಬಗ್ಗೆ ಸಂಪೂರ್ಣ ಅರಿವಿದ್ದ ಮುಖ್ಯ ಮಂತ್ರಿಗಳೊಬ್ಬರು "ನಮ್ಮ ರಾಜ್ಯದಲ್ಲಿರುವ ನಕ್ಸಲೀಯರು ಯಾರನ್ನಾದರೂ ನಂಬಿ ಬದಲಾವಣೆ ಆಗಬಹುದಾದರೆ ಅದು ಕೇವಲ ಚಿರಂಜೀವಿ ಸಿಂಗ್ ಅವರೊಬ್ಬರಿಂದ ಮಾತ್ರ ಸಾಧ್ಯ"ಎಂದು ಹೇಳಿದ್ದರು.

ಅವರು ವಾರ್ತಾ ಇಲಾಖೆ ನಿರ್ದೇಶಕರಾಗಿದ್ದಾಗ ನಡೆದ ಕೆಲವು ಘಟನೆಗಳು ಅವರ ಈ ಎಲ್ಲಾ ಪರಿಪೂರ್ಣ ಗುಣಗಳಿಗೆ ಕನ್ನಡಿ ಹಿಡಿಯುತ್ತದೆ. ದೆಹಲಿಯಲ್ಲೊಂದು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ. ನಾಡಿನ ಖ್ಯಾತ ಕಲಾವಿದೆ ಶ್ರೀಮತಿ ಗಂಗೂಬಾಯಿ ಹಾನಗಲ್‌ರ ಗಾಯನ. ಕೇಂದ್ರದಲ್ಲಿ ಸಚಿವರಾಗಿದ್ದ ಕರ್ನಾಟಕದವರೇ ಆದ ಒಬ್ಬ ಅಧಿಕಾರಸ್ಥ ರಾಜಕಾರಣಿ ಮುಖ್ಯ ಅತಿಥಿಯಾಗಿ ಕುಳಿತಿದ್ದರು. ಕಾರ್ಯಕ್ರಮ ಪ್ರಾರಂಭವಾಗಿ ಹದಿನೈದು ಇಪ್ಪತ್ತು ನಿಮಿಷಗಳಾಗಿರಬಹುದು. ಗಾಯನ ಉತ್ತುಂಗದ ಸ್ಥಿತಿ ತಲುಪುತ್ತಿರುವಾಗಲೇ ಸಚಿವರು ಯಾವುದೋ ಕಾರಣಕ್ಕೆ ಅಲ್ಲಿಂದ ತೆರಳಲು ಸಿದ್ದರಾದರು. ತಕ್ಷಣ ಅಲ್ಲಿದ್ದ ವಾರ್ತಾಧಿಕಾರಿ ಗಂಗೂಬಾಯಿ ಹಾನಗಲ್‌ರ ಕಿವಿಯಲ್ಲಿ ಸಚಿವರನ್ನು ಈಗ ಬೀಳ್ಕೊಡುವುದಾಗಿಯೂ ನಂತರ ಗಾಯನ ಮುಂದುವರೆಸಬಹುದೆಂದು ತಿಳಿಸಿದರು. ಸನ್ಮಾನದ ಕಾರ್ಯಕ್ರಮದ ನಂತರ ಸಚಿವರು ಅಲ್ಲಿಂದ ನಿರ್ಗಮಿಸಿದರು. ಆದರೆ ಇದರಿಂದ ಏಕಾಗ್ರತೆಯಿಂದ ಕೂಡಿದ ತಮ್ಮ ಗಾಯನಕ್ಕೆ ಭಂಗ ಉಂಟಾಯಿತು ಎಂದು ಗಂಗೂಬಾಯಿ ಹಾನಗಲ್ ಕಾರ್ಯಕ್ರಮ ಅಲ್ಲಿಗೇ ನಿಲ್ಲಿಸಿ ವೇದಿಕೆಯಿಂದ ಹೊರ ನಡೆದರು. ಈ ವಿಚಾರ ತಿಳಿದು ತೀವ್ರವಾಗಿ ಮನನೊಂದ ಚಿರಂಜೀವಿ ಸಿಂಗ್ ನೇರವಾಗಿ ಧಾರವಾಡಕ್ಕೆ ಹೋಗಿ ಗಂಗೂಬಾಯಿ ಹಾನಗಲ್‌ರ ಕಾಲುಮುಟ್ಟಿ ವಾರ್ತಾ ಇಲಾಖೆಯ ಪರವಾಗಿ ಅವರ ಕ್ಷಮೆ ಕೋರಿದರು!
ಬೆಂಗಳೂರಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ. ಆಗಿನ್ನೂ ಪ್ರಶಸ್ತಿ ಕೊಡುವ ಪದ್ಧತಿ ಪ್ರಾರಂಭವಾಗಿರಲಿಲ್ಲ. ಆ ಕಾರ್ಯಕ್ರಮದಲ್ಲಿ ಪ್ರಸಿದ್ಧ ವೈಣಿಕ ದೊರೆಸ್ವಾಮಿ ಐಯ್ಯಂಗಾರ್‌ರ ವೀಣಾವಾದನ. ಅತಿಥಿಗಳಾಗಿ ಅಂದಿನ ಉಪರಾಷ್ಟ್ರಪತಿ ಬಿ. ಡಿ. ಜತ್ತಿ ಹಾಗೂ ಅಂದಿನ ಆಹಾರ ಸಚಿವೆ ಇವಾವಾಸ್ ಬಂದಿದ್ದರು. ಅವರಿಗಾಗಿ ಸಿಂಹಾಸನದಂತಹ ಕುರ್ಚಿಗಳನ್ನು ಯಥಾಪ್ರಕಾರ ಹಾಕಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಮುನ್ನ ಸ್ಥಳಕ್ಕೆ ಬಂದ ಚಿರಂಜೀವಿ ಸಿಂಗ್ ಆ ವ್ಯವಸ್ಥೆಯನ್ನು ನೋಡಿ ಅಸಮಾಧಾನಗೊಂಡರು. ಖ್ಯಾತ ಕಲಾವಿದರೊಬ್ಬರು ಜಮಖಾನದ ಮೇಲೆ ಕುಳಿತು ವೀಣೆ ನುಡಿಸುವಾಗ ಅದನ್ನು ಆಸ್ವಾದಿಸಲು ಸಿಂಹಾಸನ ಅಗತ್ಯವಿಲ್ಲ ಎಂದು ಅವುಗಳನ್ನು ತೆಗೆಸಿ ಆ ಜಾಗದಲ್ಲಿ ಹಾಸಿಗೆ ದಿಂಬನ್ನು ಇರಿಸಿ ಕಾರ್ಯಕ್ರಮ ನಡೆಯುವಂತೆ ಮಾಡಿದರು. ಉಪರಾಷ್ಟ್ರಪತಿಗಳು ಕಾರ್ಯಕ್ರಮವನ್ನು ಯಾವುದೇ ರೀತಿಯ ಅಸಮಾಧಾನವಿಲ್ಲದೆ ಸಂತೋಷದಿಂದಲೇ ಅಸ್ವಾದಿಸಿದರು.

ಕಲೆ, ಸಂಸ್ಕೃತಿ ಹಾಗೂ ನಾಡಿನ ಹಿತ ಕುರಿತು ಸದಾ ಕಾಳಜಿ ಇದ್ದ ಸಿಂಗ್ 1984 ರಲ್ಲಿ ದೇಶದಲ್ಲಿ ಉಂಟಾದ ಘಟನಾವಳಿಗಳಿಂದ ಮನನೊಂದು ತಮ್ಮ ಸಿಖ್ ಧರ್ಮಕ್ಕೆ ಮತ್ತು ಸಿಖ್ ಜನಾಂಗದ ಭಾವನೆಗಳಿಗೆ  ಆದ ತೀವ್ರವಾದ ಆಘಾತದ ವಿರುದ್ಧ ಪ್ರತಿಭಟಿಸಿ ನಡೆದ ಮೌನ ಮೆರವಣೆಗೆಯಲ್ಲಿ ಭಾಗವಹಿಸಿ ದೆಹಲಿ ದೊರೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಮುಖ್ಯಮಂತ್ರಿಗಳಾಗಿದ್ದ ಮತ್ತು ಚಿರಂಜೀವಿ ಸಿಂಗ್‌ರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದ ರಾಮಕೃಷ್ಣ ಹೆಗಡೆಯವರು ಅವರ ಪರ ನಿಂತದ್ದು ಇತಿಹಾಸ.

ವಾರ್ತಾ ಇಲಾಖೆಯ ರಾಜು ಎಂಬ ಚಾಲಕ ಸೇವೆಯಲ್ಲಿದ್ದಾಗಲೇ ತೀರಿಕೊಂಡಾಗ ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ಕರೆದೊಯ್ಯುವಾಗ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಗೌರವ ತೋರಿಸಿದ್ದು ಮತ್ತು ತಮ್ಮ ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ತೀರಿಕೊಂಡಾಗ ಅವರ ಮನೆಗೆ ಹೋಗಿ ಸಾಂತ್ವನ ನೀಡುತ್ತಿದ್ದದ್ದು ಮತ್ತು ಸಾಧ್ಯವಾದಷ್ಟು ಅಂತಿಮ ಕ್ರಿಯೆಯಲ್ಲಿ ಭಾಗವಹಿಸುತ್ತಿದ್ದುದು ಸಿಂಗ್‌ರ ಮಾನವೀಯ ಗುಣಗಳನ್ನು ಎತ್ತಿ ತೋರಿಸುತ್ತದೆ.

ಪ್ಯಾರಿಸ್‌ನಲ್ಲಿರುವ ಯುನೆಸ್ಕೊ ಸಂಸ್ಥೆಗೆ ಮೂರು ವರ್ಷಗಳ ಕಾಲ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ಚಿರಂಜೀವಿಸಿಂಗ್ ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಅಗಾಧ ಪರಿಜ್ಞಾನ ಉಳ್ಳವರು. ಅಕ್ಕಮಹಾದೇವಿ ವಚನಗಳನ್ನು ಪಂಚಾಬಿ ಭಾಷೆಗೆ ತರ್ಜುಮೆ ಮಾಡಿರುವ ಅವರನ್ನು ಕನ್ನಡದ ಖ್ಯಾತ ಸಾಹಿತಿ ಹಾಗು ವಿಮರ್ಶಕ ಡಾ. ಸುಮತೀಂದ್ರ ನಾಡಿಗರು "ಕನ್ನಡದ ಕಿಟ್ಟಲ್‌" ಎಂದು ಕರೆದಿದ್ದಾರೆ.

ಇಂದು ಅವರ ಆರೋಗ್ಯ ಸರಿ ಇಲ್ಲದಿದ್ದರೂ ಎಂದಿಗೂ ಅದರ ಬಗ್ಗೆ ಯಾರೊಂದಿಗೂ ಚರ್ಚಿಸದೆ ಯಾವ ಕಾರ್ಯಕ್ರಮವನ್ನೂ ಉಡಾಫೆ ಮಾಡದೇ ಸದಾ ಎಂದಿನ ತಮ್ಮ ಮಂದಹಾಸದಿಂದ ಪೂರ್ಣ ಸಿದ್ಧತೆ ನಡೆಸಿ ತಯಾರಾಗುತ್ತಾರೆ. ಇಂದಿಗೂ ಓಡಾಟಕ್ಕೆ ಸ್ವಂತ ಕಾರು ಇಲ್ಲದ, ಮೊಬೈಲ್ ಉಪಯೋಗಿಸದ ಚಿರಂಜೀವಿಸಿಂಗ್ ಕರ್ನಾಟಕದ ಜೀವಂತ ಸಂಸ್ಥೆಗಳಲ್ಲಿ ಒಬ್ಬರು ಎಂಬುದು ನಮ್ಮ ನಾಡಿನ ಹೆಮ್ಮೆ. ತಂದೆ ತೀರಿಕೊಂಡಾಗ ಅವರ ಅಂತಿಮ ಕ್ರಿಯೆಯನ್ನು ಮಂಡ್ಯದಲ್ಲಿ ಜರುಗಿಸಿ ಆ ಚಿತಾಭಸ್ಮವನ್ನು ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಿ ತಂದೆಯ  ಮತ್ತು ನಾಡಿನ ಪವಿತ್ರ ನದಿ ಕಾವೇರಿ ಕುರಿತು ತಮ್ಮ ಗೌರವ ತೋರಿಸಿದವರು ಚಿರಂಜೀವಿಸಿಂಗ್. ಮೈಸೂರಿನ ಆಡಳಿತಗಾರರ ತರಬೇತಿ ಸಂಸ್ಥೆಯ ಪ್ರಮುಖರಾಗಿ ನಮ್ಮ ನಾಡಿನ ಹಲವು ಉದಯೋನ್ಮುಖ ಅಧಿಕಾರಿಗಳಿಗೆ ಮಾರ್ಗದರ್ಶನ ಕೊಟ್ಟು ಕೈ ಹಿಡಿದು ಬೆಳೆಸಿದ ಅವರು  ನಾಡು ಕಂಡ ಅತ್ಯಂತ ಅಪರೂಪದ ಅಧಿಕಾರಿಗಳಲ್ಲಿ ಒಬ್ಬರು. ಆಲೋಚನೆಗಳನ್ನು ಸ್ವಚ್ಚವಾಗಿಟ್ಟುಕೊಂಡು ಆಡಳಿತದಲ್ಲಿ ಬೆಳಕು ಹಚ್ಚುವ ಕಾರ್ಯ ಮಾಡಿದವರು. ಅಧಿಕಾರಿಗಳು ಹೇಗಿರಬಾರದು ಎಂಬುದಕ್ಕೆ ಹಲವಾರು ಉದಹಾರಣೆಗಳು ಇರುವಂತೆಯೇ ಅಧಿಕಾರಿಗಳು ಹೇಗಿರಬೇಕು ಎಂಬುದಕ್ಕೂ ಇರುವ ಕೆಲವೇ ಕೆಲವು ಉದಾಹರಣೆಗಳಲ್ಲಿ ಚಿರಂಜೀವಿಸಿಂಗ್ ಪ್ರಮುಖರು.

ನಾಡಿಗೆ ಹೆಮ್ಮೆ ತರುವ, ಆಡಳಿತಕ್ಕೆ ಶಕ್ತಿ ಕೊಟ್ಟಿರುವ, ರಾಜ್ಯದ ಜನತೆಯಲ್ಲಿ ಬೆರೆತು ಅವರ ಕಷ್ಟ ಸುಖಗಳು ತನ್ನ ಸುಖ ಎಂದೆಣಿಸಿ ಸದಾ ತನ್ನಿಂದ ಯಾವ ರೀತಿ ಒಳ್ಳೆಯ ಕೆಲಸಗಳಾಗಬಹುದು ಎಂದು ಸದಾ ಚಿಂತಿಸಿ ಅದರಂತೆಯೇ ನಡೆದು ಕೊಂಡಿರುವ ಇಂತಹ ಪರಿಣಾಮಕಾರಿಯಾದ ನೂರಾರು ಜನ ಅಧಿಕಾರಿಗಳು ಬಂದು ಹೋಗಿದ್ದಾರೆ ಮತ್ತು ಈಗಲೂ ಇದ್ದಾರೆ. ನಾವು ದಿವಾನರಾಗಿದ್ದ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಮುಂತಾದ ಮಹನಿಯರ ಬಗ್ಗೆ ತಿಳಿದಿದ್ದೇವೆ. ಅದೇ ಹಾದಿಯಲ್ಲಿ ಸಾಗುತ್ತಿರುವ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ ಎಂದು ತಿಳಿದಾಗ ಆಡಳಿತದಲ್ಲಿ ನಮ್ಮ ನಂಬಿಕೆ ಹೆಚ್ಚಾಗುತ್ತದೆ.

ಕೃಪೆ: ಕನ್ನಡ ಪ್ರಭ

Tag: Chiranjeevi Singh

ಕಾಮೆಂಟ್‌ಗಳಿಲ್ಲ: